ಧಾರವಾಡ,ಜು.16- ವೈದ್ಯೋನಾರಾಯಣ ಹರಿ ಎನ್ನುತ್ತಾರೆ. ಆದರೆ ಇಲ್ಲೊಬ್ಬರು ವೈದ್ಯೆ ಈ ಮಾತಿಗೆ ತದ್ವಿರುದ್ಧವಾಗಿ ನಡೆದುಕೊಂಡಿರುವ ಘಟನೆಯೊಂದು ವಿದ್ಯಾಕಾಶಿ, ಪ್ರಜ್ಞಾವಂತರ ನಗರ ಎಂದೇ ಕರೆಯಲ್ಪಡುವ ಧಾರವಾಡದಲ್ಲಿ ನಡೆದಿರುವುದು ವಿಷಾದಕರ. ನಗರದ ಬಾರಾಕೊಟ್ರಿಯ ಲ್ಲಿರುವ ರಂಕಾ ಸ್ಟೆಲೊ ಎಂಬ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದುಕೊಂಡು ಚಿರಾಯು ಆಸ್ಪತ್ರೆಯಲ್ಲಿ ಅರವಳಿಕೆ ತಜ್ಞರಾಗಿ ಕೆಲಸ ಮಾಡುತ್ತಿದ್ದ ಡಾ.ಕಿರಣ್ ಹೊನ್ನಣ್ಣವರ (45) ಎಂಬುವವರ ಭೀಕರ ಕೊಲೆ ನಡೆದಿದೆ. ಅಲ್ಲದೇ ಕಿರಣ್ ಅವರ ಪುತ್ರ ನಿಹಿತ್ ಎಂಬ ಎಂಟು ವರ್ಷದ ಬಾಲಕನ ಮೇಲೂ ಭೀಕರ ಚಾಕು ದಾಳಿ ನಡೆದು ಆ ಬಾಲಕ ಇದೀಗ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ.
ಈ ಎಲ್ಲಾ ಘಟನೆಗಳ ಹಿಂದೆ ಯಾವುದೇ ರೌಡಿಗಳಿಲ್ಲ, ಯಾವುದೇ ಮಾಫಿಯಾ ಇಲ್ಲ ಬದಲಿಗೆ ಈ ಕೃತ್ಯ ಎಸಗಿದ್ದು ಸ್ವತಃ ಡಾ.ಕಿರಣ್ ಅವರ ಪತ್ನಿ ವೈದ್ಯೆಪ್ರಿಯಾಂಕಾ ಎಂಬುವುದು ಮೇಲ್ನೋಟಕ್ಕೆ ಕಂಡು ಬಂದಿದೆ.ಕಳೆದ 10-12 ವರ್ಷಗಳಿಂದ ಡಾ.ಕಿರಣ್ ಹೊನ್ನಣ್ಣವರ ಅವರು ತಮ ಪತ್ನಿ ಪ್ರಿಯಾಂಕಾ ಹಾಗೂ ಪುತ್ರ ನಿಹಿತ್ ಜೊತೆ ನಗರದ ರಂಕಾ ಸ್ಟೆಲೊ ಅಪಾರ್ಟ್‌ಮೆಂಟ್‌ನ ಮನೆಯೊಂದರಲ್ಲಿ ವಾಸವಾಗಿದ್ದರು. ಡಾ.ಕಿರಣ್ ಅವರು ಚಿರಾಯು ಆಸ್ಪತ್ರೆಯಲ್ಲಿ ಅರವಳಿಕೆ ತಜ್ಞರಾಗಿ ಕೆಲಸ ನಿರ್ವಹಿಸಿದರೆ, ಪತ್ನಿ ಪ್ರಿಯಾಂಕಾ ಕೂಡ ವೈದ್ಯೆ.
ಪುತ್ರ ನಿಹಿತ್ ತುಸು ಬುದ್ಧಿಮಾಂದ್ಯನಾಗಿದ್ದು, ದಂಪತಿ ಮಧ್ಯೆ ಅದ್ಯಾವ ಬಿರುಕು ಇತ್ತೋ ಗೊತ್ತಿಲ್ಲ. ಸ್ವತಃ ಪತ್ನಿಯೇ ತನ್ನ ಪತಿಯ ಉಸಿರು ನಿಲ್ಲಿಸಿದ್ದಾಳೆ. ಅಲ್ಲದೇ ತಾನು ಹೆತ್ತ ಕರುಳು ಎಂಬುದನ್ನೂ ನೋಡದೇ ತನ್ನ ಮಗುವಿನ ಮೇಲೆ ರೌದ್ರಾವತಾರ ತೋರಿದ್ದಾಳೆ. ಕೌಟುಂಬಿಕ ಕಲಹವೋ ಏನೋ, ವೈದ್ಯ ದಂಪತಿ ಮಧ್ಯೆ ಮೊನ್ನೆ ರಾತ್ರಿ ಜಗಳ ನಡೆದಿದೆ. ಅಂದು ರಾತ್ರಿ ಪತಿ ಮಲಗಿದ ವೇಳೆ ಅವರ ಮೇಲೆ ಪತ್ನಿ ಪ್ರಿಯಾಂಕಾ ಚಾಕುವಿನಿಂದ ದಾಳಿ ನಡೆಸಿದ್ದಲ್ಲದೇ, ತನ್ನ ಮಗನ ಮೇಲೂ ಚಾಕು ದಾಳಿ ನಡೆಸಿದ ಪಾಪಿ ತಾಯಿ, ತನ್ನ ಪತಿಯನ್ನು ಕೊಲೆ ಮಾಡಿ ಅದೇ ಶವದ ಪಕ್ಕವೇ ರಾತ್ರಿಯಿಡೀ ಕುಳಿತಿದ್ದಾಳೆ.
ಡಾ.ಕಿರಣ್ ಅವರಿಗೆ ಯಾರೇ ೇನ್ ಮಾಡಿದರೂ ಅವರು ರ್ಟೆ್ ಮಾಡುತ್ತಿದ್ದಾರೆ ಎಂಬ ಸಬೂಬು ನೀಡಿದ್ದಾಳೆ. ತನ್ನ ಮಗ ರಕ್ತದ ಮಡುವಿನಲ್ಲಿ ಬಿದ್ದು ಉಸಿರೆಳೆಯುತ್ತಿದ್ದರೂ ನೋಡದ ತಾಯಿ, ಬೆಡ್ ಮೇಲೆ ಕುಳಿತು ಮೊಬೈಲ್ ನೋಡುತ್ತಿದ್ದಾಳೆ. ಇಷ್ಟಕ್ಕೂ ನಡೆದ ಘಟನೆಯಾದರೂ ಏನು, ಹೇಗೆಲ್ಲ ಈ ಪಾಪಿ ಪತ್ನಿ ಕಥೆ ಕಟ್ಟಿದ್ದಳು ಎಂಬುದನ್ನು ಸ್ವತಃ ಪೊಲೀಸ್ ಆಯುಕ್ತರೇ ಹೇಳುತ್ತಾರೆ.
ನಿನ್ನೆ ಮಧ್ಯಾಹ್ನದವರೆಗೂ ಡಾ.ಕಿರಣ್ ಅವರ ಸಂಬಂಧಿಕರು ಕರೆ ಮಾಡಿದರೂ ಆಕೆ ಕರೆ ಸ್ವೀಕರಿಸಿರಲಿಲ್ಲ. ಸಂಶಯಗೊಂಡು ಅವರ ಸಂಬಂಧಿಕರು ನಗರಕ್ಕೆ ಬಂದು ಮನೆಯ ಕದ ತಟ್ಟಿದರೂ ಆಕೆ ಕದ ತೆರೆದಿರಲಿಲ್ಲ. ಈ ವಿಷಯವನ್ನು ಪೊಲೀಸರ ಗಮನಕ್ಕೆ ತಂದಾಗ ಪೊಲೀಸರು ಸ್ಥಳಕ್ಕೆ ಬಂದು ಬಾಗಿಲು ತೆರೆದು ನೋಡಿದಾಗ ಅಲ್ಲಿ ಕೊಲೆ ನಡೆದಿರುವುದು ಗೊತ್ತಾಗಿದೆ. ಸ್ವತಃ ಪೊಲೀಸ್ ಆಯುಕ್ತ ಶಶಿಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಡಾ.ಕಿರಣ್ ರಕ್ತದ ಮಡುವಿನಲ್ಲಿ ಬಿದ್ದಿದ್ದರೆ, ಬಾಲಕ ನಿಹಿತ್ ತುಸು ಉಸಿರಾಡುತ್ತಿದ್ದ ಎಂಬ ಕಾರಣಕ್ಕೆ ಪೊಲೀಸ್ ಆಯುಕ್ತರೇ ಆ ಮಗುವನ್ನು ಎತ್ತಿಕೊಂಡು ತಕ್ಷಣ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಎಲ್ಲರೂ ಮನೆಯೊಳಗೆ ಹೋದಾಗ ಪ್ರಿಯಾಂಕಾ ಮಾತ್ರ ಹುಚ್ಚಿಯಂತೆ ಬೆಡ್ ಮೇಲೆ ಕುಳಿತಿದ್ದಳು. ಅಲ್ಲದೇ ಬೆಡ್ ಮೇಲೆ ಇಂಜಕ್ಷನ್ ಹಾಗೂ ವಿವಿಧ ಔಷಧಿಗಳು ಕೂಡ ಪತ್ತೆಯಾಗಿವೆ.
ಮಾವ ಕಣ್ಣೀರು: ಕಿರಣ್ ಕರೆ ಸ್ವೀಕರಿಸಲಿಲ್ಲ ಎಂಬ ಕಾರಣಕ್ಕೆ ನಾವೇ ಸ್ಥಳಕ್ಕೆ ಬಂದು ನೋಡಿದಾಗ ಈ ಕೊಲೆ ನಡೆದಿರುವುದು ಗೊತ್ತಾಗಿದೆ ಎಂದು ಕಿರಣ್ ಅವರ ಮಾವ ರಾಜು ಕಣ್ಣೀರು ಹಾಕಿದರು. ಒಟ್ಟಾರೆ ಕೌಟುಂಬಿಕ ಕಲಹವೋ ಅಥವಾ ಇನ್ಯಾವೋ ಕಾರಣವೋ ಗೊತ್ತಿಲ್ಲ. ಪತಿಯ ಪಾಲಿಗೆ ಪತ್ನಿಯೇ ರಾಕ್ಷಸಿಯಾಗಿದ್ದು ಒಂದೆಡೆಯಾದರೆ , ಮಗನ ಜೀವಕ್ಕೆ ತಾಯಿಯೇ ಕುತ್ತು ತಂದಿರುವುದು ವಿಪರ್ಯಾಸ. ಸದ್ಯ ಉಪನಗರ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಪೊಲೀಸ್ ಆಯುಕ್ತರ ಸಮಯ ಪ್ರಜ್ಞೆ : ಬದುಕುಳಿದ ಬಾಲಕ
ಧಾರವಾಡ,ಜು.16- ತನ್ನ ತಾಯಿಯ ಕೈಯಿಂದಲೇ ಚಾಕು ಇರಿತಕ್ಕೊಳಗಾಗಿ ಸಾವು ಬದುಕಿನ ನಡುವೆ ನರಳಾಡುತ್ತಿದ್ದ ಬಾಲಕನ ಜೀವ ಉಳಿಸಲು ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಾವೇ ಆ ಬಾಲಕನನ್ನು ಎತ್ತುಕೊಂಡು ಹೋಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿರುವ ದೃಶ್ಯ ಎಂತಹವರ ಮನ ಕಲಕುವಂತಿತ್ತು.
ಇಲ್ಲಿನ ಬಾರಾ ಕೊಟ್ರಿಯಲ್ಲಿರುವ ರಂಕಾ ಸ್ಟೆಲೊ ಅಪಾರ್ಟ್‌ಮೆಂಟ್‌ನಲ್ಲಿ ನಡೆದ ಡಾ.ಕಿರಣ್ ಹೊನ್ನಣ್ಣವರ ಅವರ ಹತ್ಯೆ ಸ್ಥಳಕ್ಕೆ ಬಂದಿದ್ದ ಆಯುಕ್ತರು ಅಲ್ಲಿನ ಸ್ಥಿತಿಯನ್ನು ಕಂಡು ಮರುಗಿದರು.
ಡಾ.ಕಿರಣ್ ಅವರ ಪುತ್ರ ನಿಹಿತ್ ಎಂಬ ಬಾಲಕ ಜೀವ ಉಳಿಸಲು ಖದ್ದು ಆಯುಕ್ತರೇ ಬಾಲಕನನ್ನು ಎತ್ತಿಕೊಂಡು ಮನೆಯಿಂದ ಹೊರಬಂದ ದೃಶ್ಯ ಎಂತಹವರ ಕಣ್ಣಲ್ಲೂ ನೀರು ತರಿಸುವಂತಿತ್ತು.
ಪೊಲೀಸ್ ಆಯುಕ್ತರ ಈ ಕೆಲಸಕ್ಕೆ ಸಾರ್ವಜನಿಕ ವಲಯದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
