Homeರಾಜ್ಯಬಂಟ್ವಾಳ ಬಸ್ ನಿಲ್ದಾಣದಲ್ಲಿ ಮಚ್ಚಿನಿಂದ ಕೊಚ್ಚಿ ಯುವತಿಯ ಭೀಕರ ಹತ್ಯೆ

ಬಂಟ್ವಾಳ ಬಸ್ ನಿಲ್ದಾಣದಲ್ಲಿ ಮಚ್ಚಿನಿಂದ ಕೊಚ್ಚಿ ಯುವತಿಯ ಭೀಕರ ಹತ್ಯೆ

Man hacks 20-year-old woman to death in broad daylight in B.C. Road

ಮಂಗಳೂರು, ಜು.16: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಗುರುವಾರ ಸಂಜೆ ನಡೆದ ಭೀಕರ ಘಟನೆಯೊಂದು ಜಿಲ್ಲೆಯನ್ನೇ ಬೆಚ್ಚಿಬೀಳಿಸಿದೆ. ಸಾರ್ವಜನಿಕರ ಎದುರೇ ಯುವತಿಗೆ ಮಚ್ಚಿನಿಂದ ಹಲ್ಲೆ ನಡೆಸಿದ ಪರಿಣಾಮ ಆಕೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಮೃತ ಯುವತಿಯನ್ನು ಕಕ್ಕೆಪದವು ನಿವಾಸಿ ಲಾವಣ್ಯ (23) ಎಂದು ಗುರುತಿಸಲಾಗಿದೆ. ಅವರು ಕಲ್ಲಡ್ಕದ ಖಾಸಗಿ ಚಿಕಿತ್ಸಾಲಯದಲ್ಲಿ ಶುಶ್ರೂಷಕಿಯಾಗಿ (ನರ್ಸ್) ಕೆಲಸ ಮಾಡುತ್ತಿದ್ದು, ಕೆಲಸ ಮುಗಿಸಿ ಮನೆಗೆ ತೆರಳಲು ಬಿ.ಸಿ.ರೋಡ್ ಬಸ್ ನಿಲ್ದಾಣದಲ್ಲಿ ಬಸ್ ಹತ್ತಿದ್ದರು.

ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ ಯುವಕ ಯುವತಿಯ ದೂರದ ಸಂಬಂಧಿಯಾಗಿದ್ದು, ಏಕಪಕ್ಷೀಯ ಪ್ರೀತಿಯ ಹಿನ್ನೆಲೆಯಲ್ಲಿ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ಆರೋಪಿ ಬಸ್‌ಗೆ ಏರಿ ಬ್ಯಾಗಿನಿಂದ ಮಚ್ಚು ಹೊರತೆಗೆದಾಗ, ಲಾವಣ್ಯ ಬಸ್‌ನಿಂದ ಇಳಿದು ಓಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ಆದರೆ ಆರೋಪಿ ಅವರನ್ನು ಬೆನ್ನಟ್ಟಿ ಬಸ್ ನಿಲ್ದಾಣದಲ್ಲೇ ಕುತ್ತಿಗೆಯ ಹಿಂಭಾಗಕ್ಕೆ ಮಾರಕವಾಗಿ ಹಲ್ಲೆ ನಡೆಸಿದ್ದಾನೆ.

ಗಂಭೀರವಾಗಿ ಗಾಯಗೊಂಡಿದ್ದ ಲಾವಣ್ಯರನ್ನು ಸ್ಥಳದಲ್ಲಿದ್ದ ಸಾರ್ವಜನಿಕರು ತಕ್ಷಣವೇ ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಘಟನೆಯ ಬಳಿಕ ಆರೋಪಿ ಸ್ಥಳದಿಂದ ಪರಾರಿಯಾಗಿದ್ದು, ಬಂಟ್ವಾಳ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಯನ್ನು ಬಂಧಿಸಲು ವಿಶೇಷ ತಂಡ ರಚಿಸಿ ವ್ಯಾಪಕ ಶೋಧ ಕಾರ್ಯ ನಡೆಸಲಾಗುತ್ತಿದೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಘಟನೆಯ ನಿಖರ ಕಾರಣ ಹಾಗೂ ಎಲ್ಲ ಆಯಾಮಗಳಲ್ಲಿ ತನಿಖೆ ಮುಂದುವರೆಸಿದ್ದಾರೆ. ಬಸ್ ನಿಲ್ದಾಣದಂತಹ ಸಾರ್ವಜನಿಕ ಸ್ಥಳದಲ್ಲಿ ನಡೆದ ಈ ಭೀಕರ ಕೃತ್ಯ ಸ್ಥಳೀಯರಲ್ಲಿ ಆತಂಕ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ.

RELATED ARTICLES

Latest News