ಬೆಂಗಳೂರು,ಮೇ 28- ರಾಜ್ಯದಲ್ಲಿ ಬರ್ತ್ ಡೇ, ಮದುವೆ ಹಾಗೂ ಗೃಹಪ್ರವೇಶದಂತಹ ಶುಭ ಕಾರ್ಯಕ್ರಮಗಳ ಸಂದರ್ಭದಲ್ಲಿ ಮನೆ ಅಥವಾ ಖಾಸಗಿ ಜಾಗಗಳಲ್ಲಿ ಹೌಸ್ ಪಾರ್ಟಿ ಆಯೋಜಿಸುವವರಿಗೆ ಕರ್ನಾಟಕ ಸರ್ಕಾರ ಭಾರಿ ಆಘಾತ ನೀಡಿದೆ.
ಮದ್ಯದ ಪರ್ಮಿಟ್ ಶುಲ್ಕವನ್ನು ದುಪ್ಪಟ್ಟು ಮಾಡಲಾಗಿದೆ. ಖಾಸಗಿ ಪಾರ್ಟಿಗಳಲ್ಲಿ ಅತಿಥಿಗಳಿಗೆ ಮದ್ಯ ಸರಬರಾಜು ಮಾಡಲು ಅಬಕಾರಿ ಇಲಾಖೆಯಿಂದ ಪಡೆಯಬೇಕಾದ ತಾತ್ಕಾಲಿಕ ಮದ್ಯದ ಪರ್ಮಿಟ್ (ಸಿಎಲ್ 5 ಲೈಸೆನ್್ಸ) ಶುಲ್ಕವನ್ನು ಸರ್ಕಾರ ಅಧಿಕೃತವಾಗಿ ದುಪ್ಪಟ್ಟುಗೊಳಿಸಿದೆ.ಇತ್ತೀಚಿನ ಆರ್ಥಿಕ ಇಲಾಖೆಯ ಹೊಸ ನಿಯಮಗಳ ಅನ್ವಯ ವಾಣಿಜ್ಯೇತರ ಮತ್ತು ವಾಣಿಜ್ಯ ಕಾರ್ಯಕ್ರಮಗಳೆರಡರ ಮದ್ಯದ ಪರವಾನಗಿ ದರಗಳನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ. ಇಲ್ಲಿಯವರೆಗೆ ಹೌಸ್ ಪಾರ್ಟಿಗಳಿಗೆ ಪ್ರತಿದಿನಕ್ಕೆ 11,500 ರೂಪಾಯಿ ಇದ್ದ ಸಾಮಾನ್ಯ ಪರ್ಮಿಟ್ ಶುಲ್ಕವನ್ನು ಈಗ 20,000 ರೂಪಾಯಿಗೆ ಏರಿಕೆ ಮಾಡಲಾಗಿದೆ.
ಈ ನಿಗದಿತ ದರದಲ್ಲಿ ಅನುಮತಿ ಪಡೆಯಲು ಪಾರ್ಟಿ ನಡೆಯುವ ಕನಿಷ್ಠ 7 ದಿನಗಳ ಮುಂಚಿತವಾಗಿಯೇ ಅರ್ಜಿ ಸಲ್ಲಿಸಬೇಕಾಗುತ್ತದೆ. ಒಂದು ವೇಳೆ ಕಾರ್ಯಕ್ರಮಕ್ಕೆ ಕೇವಲ 24 ಗಂಟೆ ಮುಂಚಿತವಾಗಿ ತುರ್ತಾಗಿ ಅನುಮತಿ ಬೇಕಾದಲ್ಲಿ ಸಾರ್ವಜನಿಕರು ತತ್ಕಾಲ್ ಯೋಜನೆಯಡಿ ಪ್ರತಿದಿನಕ್ಕೆ ಬರೋಬ್ಬರಿ 40,000 ರೂಪಾಯಿ ಪಾವತಿಸಬೇಕಾಗುತ್ತದೆ ಎಂದು ಅಬಕಾರಿ ಇಲಾಖೆ ತಿಳಿಸಿದೆ.
ಕೇವಲ ಕೌಟುಂಬಿಕ ಕಾರ್ಯಕ್ರಮಗಳಷ್ಟೇ ಅಲ್ಲದೆ ಸಂಗೀತ ಕಚೇರಿಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಕಾರ್ಪೊರೇಟ್ ಈವೆಂಟ್ಗಳು ಮತ್ತು ಹೊಸ ವರ್ಷದ ಆಚರಣೆಗಳಂತಹ ವಾಣಿಜ್ಯ ಪಾರ್ಟಿಗಳಿಗೂ ಶುಲ್ಕವನ್ನು ಲಕ್ಷಗಳಲ್ಲಿ ನಿಗದಿಪಡಿಸಲಾಗಿದೆ ಇಂತಹ ಕಮರ್ಷಿಯಲ್ ಪಾರ್ಟಿಗಳಿಗೆ ಪ್ರತಿದಿನದ ಪರವಾನಗಿ ಶುಲ್ಕವನ್ನು 75,000 ರೂಪಾಯಿಗೆ ಹೆಚ್ಚಿಸಲಾಗಿದ್ದು, ತುರ್ತು ಅನುಮತಿಗಾಗಿ ತತ್ಕಾಲ್ ವ್ಯವಸ್ಥೆಯಡಿ ದಿನಕ್ಕೆ 1.5 ಲಕ್ಷ ರೂಪಾಯಿ ಶುಲ್ಕ ನಿಗದಿ ಮಾಡಲಾಗಿದೆ.
ಸಾರ್ವಜನಿಕ ಸ್ಥಳಗಳಲ್ಲಿ ನಡೆಯುವ ವಾಣಿಜ್ಯೇತರ ಕಾರ್ಯಕ್ರಮಗಳಿಗೂ ಇನ್ನು ಮುಂದೆ ಈ ನಿಯಮ ಅನ್ವಯವಾಗಲಿದೆ. ಆದರೆ ಮನೆಯಲ್ಲಿ ಸಣ್ಣ ಪ್ರಮಾಣದ ಪಾರ್ಟಿ ಹಮಿಕೊಳ್ಳುವ ಸಾಮಾನ್ಯ ಜನರಿಗೆ ಅಬಕಾರಿ ಇಲಾಖೆ ಒಂದು ಸಣ್ಣ ವಿನಾಯಿತಿ ನೀಡಿದೆ. ಖಾಸಗಿ ಪಾರ್ಟಿಗಳಲ್ಲಿ 9 ಲೀಟರ್ವರೆಗಿನ ಭಾರತೀಯ ತಯಾರಿಕೆಯ ವಿದೇಶಿ ಮದ್ಯ ಹಾಗೂ 18 ಲೀಟರ್ವರೆಗೆ ಬಿಯರ್ ಅಥವಾ ವೈನ್ ಬಳಸಲು ಯಾವುದೇ ರೀತಿಯ ಅಬಕಾರಿ ಪರವಾನಗಿ ಪಡೆಯುವ ಅಗತ್ಯವಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಆದರೆ ನಿಗದಿಪಡಿಸಿದ ಈ ಮಿತಿಗಿಂತ ಒಂದು ಲೀಟರ್ ಮದ್ಯ ಹೆಚ್ಚಾದರೂ ಕಡ್ಡಾಯವಾಗಿ ಸಿಎಲ್-5 ಲೈಸೆನ್್ಸ ಪಡೆಯಲೇಬೇಕಾಗುತ್ತದೆ. ರಾಜ್ಯ ಸರ್ಕಾರದ ಆದಾಯ ಸಂಗ್ರಹಣೆಯನ್ನು ಹೆಚ್ಚಿಸುವ ಉದ್ದೇಶದಿಂದ ಈ ದರ ಪರಿಷ್ಕರಣೆ ಮಾಡಲಾಗಿದ್ದು, ವೀಕೆಂಡ್ ಪಾರ್ಟಿ ಮೂಡ್ನಲ್ಲಿದ್ದ ರಾಜಧಾನಿ ಮಂದಿಗೆ ಸರ್ಕಾರದ ಈ ಹೊಸ ಆದೇಶ ಭಾರಿ ನಿರಾಸೆ ಮೂಡಿಸಿದೆ.
ವಾಣಿಜ್ಯ ಕಾರ್ಯಕ್ರಮಗಳಿಗೆ ಲಕ್ಷಗಳಲ್ಲಿ ಶುಲ್ಕ :
ಸಂಗೀತ ಕಚೇರಿಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಪ್ರದರ್ಶನಗಳು, ಕಾಪೆರ್ರೇಟ್ ಈವೆಂಟ್ಗಳು ಮತ್ತು ಹೊಸ ವರ್ಷದ ಆಚರಣೆಗಳಂತಹ ವಾಣಿಜ್ಯ ಪಾರ್ಟಿಗಳಿಗೆ ಶುಲ್ಕವನ್ನು ಭಾರಿ ಪ್ರಮಾಣದಲ್ಲಿ ಏರಿಸಲಾಗಿದ್ದು, ಪ್ರತಿದಿನಕ್ಕೆ 75,000 ರೂ. ನಿಗದಿಪಡಿಸಲಾಗಿದೆ. ತುರ್ತು ಅನುಮತಿಗಾಗಿ ಪ್ರತಿದಿನಕ್ಕೆ 1.5 ಲಕ್ಷ ರೂ. ದಂಡ ತೆರಬೇಕಾಗುತ್ತದೆ.
9 ಲೀಟರ್ವರೆಗಿನ ಮದ್ಯಕ್ಕೆ ಲೈಸೆನ್ಸ್ ಬೇಡ :
ಆದರೆ, ಈ ಮಿತಿ ದಾಟಿದರೆ ಕಡ್ಡಾಯವಾಗಿ ಎಐ-5 ಲೈಸೆನ್್ಸ ಪಡೆಯಲೇಬೇಕು.ರಾಜ್ಯ ಸರ್ಕಾರದ ಆದಾಯ ಸಂಗ್ರಹಣೆಯನ್ನು ಹೆಚ್ಚಿಸುವ ಉದ್ದೇಶದಿಂದ ಈ ದರ ಪರಿಷ್ಕರಣೆ ಮಾಡಲಾಗಿದೆ ಎಂದು ಹೇಳಲಾಗುತ್ತಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ನಡೆಯುವ ವಾಣಿಜ್ಯೇತರ ಕಾರ್ಯಕ್ರಮಗಳಿಗೂ ಇನ್ಮುಂದೆ ಕಡ್ಡಾಯವಾಗಿ ಅಐ-5 ಲೈಸೆನ್ಸ್ ಪಡೆಯಬೇಕಾಗುತ್ತದೆ ಎಂದು ಅಬಕಾರಿ ಆಯುಕ್ತ ವೆಂಕಟೇಶ್ ಕುಮಾರ್ ತಿಳಿಸಿದ್ದಾರೆ. ಒಟ್ಟಿನಲ್ಲಿ ವೀಕೆಂಡ್ ಪಾರ್ಟಿ ಮೂಡ್ನಲ್ಲಿದ್ದ ಸಿಲಿಕಾನ್ ಸಿಟಿ ಮಂದಿಗೆ ಸರ್ಕಾರದ ಈ ಹೊಸ ಆದೇಶ ಭಾರಿ ಶಾಕ್ ನೀಡಿದೆ.
