ಬೆಂಗಳೂರು, ಡಿ.6- ಬಿಜೆಪಿ ಜೊತೆ ಸೇರಿ ಚುನಾವಣೆ ನಡೆಸಿದ ಮೇಲೆ ಹೆಚ್.ಡಿ.ಕುಮಾರಸ್ವಾಮಿ ಅವರು ಮನುವಾದಿಗಳಾಗಿ ಬದಲಾಗಿದ್ದಾರೆ ಎಂದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು.
ಸಮಾಜ ಕಲ್ಯಾಣ ಇಲಾಖೆ ವತಿಯಿಂದ ವಿಧಾನಸೌಧದ ಪೂರ್ವ ದಿಕ್ಕಿನಲ್ಲಿರುವ ಸಂವಿಧಾನ ಶಿಲ್ಪಿ ಭಾರತ ರತ್ನ ಮಹಾ ಮಾನವತಾವಾದಿ ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ರವರ 69 ನೇ ಮಹಾ ಪರಿನಿರ್ವಾಣ ದಿನದ ಅಂಗವಾಗಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಭಗವದ್ಗೀತೆಯನ್ನು ಪಠ್ಯಕ್ಕೆ ಸೇರಿಸಬೇಕೆಂದು ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿಯವರು, ಕೇಂದ್ರ ಶಿಕ್ಷಣ ಸಚಿವರಿಗೆ ಪತ್ರ ಬರೆದಿರುವ ಬಗ್ಗೆ ಪ್ರತಿಕ್ರಿಯಿಸಿದರು. ಕುಮಾರಸ್ವಾಮಿ ಅವರು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡ ನಂತರ ಮನುವಾದಿಗಳಾಗಿದ್ದಾರೆ ಎಂದು ಲೇವಡಿ ಮಾಡಿದರು.
ಅಂಬೇಡ್ಕರ್ ಮಹಾನ್ ವ್ಯಕ್ತಿ ಹಾಗೂ ದೇಶ ಕಂಡ ಒಬ್ಬ ಅಪರೂಪದ ನಾಯಕ. ದಲಿತರಿಗೆ ಮಾತ್ರವಲ್ಲದೆ ಎಲ್ಲಾ ಶೋಷಿತರಿಗೆ ಗೌರವ ತಂದುಕೊಡಲು ಪ್ರಯತ್ನಿಸಿದರು. ದೇಶದಲ್ಲಿ ಸಾಮಾಜಿಕ ನ್ಯಾಯ ಸಿಗದವರ ಪರವಾಗಿ ಹೋರಾಟ ಮಾಡಿದವರು ಎಂದು ಕೊಂಡಾಡಿದರು.
ಬಾಬಾ ಸಾಹೇಬ್ ಅಂಬೇಡ್ಕರ್ ಅವರು ದೇಶದ ಸಂವಿಧಾನ ಶಿಲ್ಪಿ. ಅವರು ದೇಶಕ್ಕೆ ಎಂಥ ಸಂವಿಧಾನದ ಅಗತ್ಯವಿದೆ ಎಂದು ಚಿಂತಿಸಿ , ಇತರೆ ದೇಶಗಳ ಸಂವಿಧಾನವನ್ನು ಅಭ್ಯಾಸ ಮಾಡಿ ದೇಶಕ್ಕೆ ಅಗತ್ಯವಿರುವ ಸಂವಿಧಾನವನ್ನು ಕೊಟ್ಟಿದ್ದಾರೆ ಎಂದರು.
ನಮ ಸಾಮಾಜಿಕ ವ್ಯವಸ್ಥೆಯು ಬದಲಾಗಬೇಕು, ಎಲ್ಲರಿಗೂ ಸಮಾನ ಅವಕಾಶಗಳು ದೊರಕಬೇಕು ಹಾಗೂ ಸಾಮಾಜಿಕ ನ್ಯಾಯ ಸ್ಥಾಪನೆಯಾಗಬೇಕು ಎಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಸ್ಪಷ್ಟವಾಗಿ ತಿಳಿಸಿದ್ದಾರೆ. ನಮ ಸರ್ಕಾರ ಶಾಲಾ ಕಾಲೇಜು ಮಕ್ಕಳಿಗೆ ಇದರ ಅರಿವು ಮೂಡಿಸಲು ಸಂವಿಧಾನ ಪೀಠಿಕೆಯನ್ನು ಬೋಧಿಸಲಾಗುತ್ತಿದೆ ಎಂದು ಹೇಳಿದರು.
ಸಂವಿಧಾನ ಪ್ರತಿಯೊಬ್ಬರಿಗೂ ಹಕ್ಕು ಮತ್ತು ಬಾಧ್ಯತೆಗಳನ್ನು ನೀಡಿದೆ. ಸಂವಿಧಾನದ ಧ್ಯೇಯೋದ್ದೇಶಗಳು ಎಲ್ಲರಿಗೂ ಅರ್ಥವಾಗಬೇಕು ಎಂಬ ಕಾರಣದಿಂದ ಸರ್ಕಾರ ಇದನ್ನು ಜಾರಿ ಮಾಡಿದೆ ಎಂದರು.
ಹಿಂದೂ ಧರ್ಮದಲ್ಲಿರುವ ಸಾಮಾಜಿಕ ವ್ಯವಸ್ಥೆಗೆ ರೋಸಿ ಹೋಗಿದ್ದರು. ಪರಿನಿರ್ವಾಣದ ದಿನದಂದು ನಾವು ಅಂಬೇಡ್ಕರ್ ಅವರನ್ನು ಸರಿಸುವ ಕೆಲಸವನ್ನು ಮಾಡಿದ್ದೇವೆ ಎಂದು ಹೇಳಿದರು.
ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಅವರ ಕೊನೆಯ ದಿನಗಳಲ್ಲಿ ಬೌದ್ಧ ಧರ್ಮವನ್ನು ಸ್ವೀಕರಿಸಿದರು. ಹುಟ್ಟುವಾಗ ಹಿಂದೂವಾಗಿದ್ದೆ, ಸಾಯುವಾಗ ಹಿಂದೂವಾಗಿ ಸಾಯಲಾರೆ. ಹಿಂದೂ ಧರ್ಮದ ಸುಧಾರಣೆಗೆ ಸಾಕಷ್ಟು ಪ್ರಯತ್ನಪಟ್ಟೆ, ಅದು ಸಾಧ್ಯವಾಗದ ಹಿನ್ನೆಲೆಯಲ್ಲಿ ಬೌದ್ಧ ಧರ್ಮ ಸ್ವೀಕರಿಸಿದ್ದೇನೆ ಎಂದು ಹೇಳಿದ್ದರು. ಹಿಂದೂ ಧರ್ಮದಲ್ಲಿರುವ ಸಾಮಾಜಿಕ ವ್ಯವಸ್ಥೆಗೆ ರೋಸಿಹೋಗಿ ಹೀಗೆ ಮಾಡಿದರು ಎಂದರು.
