ಬೆಂಗಳೂರು,ಡಿ.6-ಕಾರವಾರದ ಜಿಲ್ಲಾ ಕಾರಾಗೃಹದ ಇಬ್ಬರು ರೌಡಿಗಳು ಇಂದು ಬೆಳಗ್ಗೆ ಜೈಲ್ ಅಧೀಕ್ಷಕರು ಸೇರಿದಂತೆ ನಾಲ್ವರು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಹಲ್ಲೆಗೊಳಗಾದ ಜೈಲ್ ಅಧಿಕಾರಿ ಹಾಗೂ ಸಿಬ್ಬಂದಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇತ್ತೀಚೆಗೆ ಕಾರಾಗೃಹಗಳಲ್ಲಿ ಖೈದಿಗಳು ಹಾಗೂ ವಿಚಾರಣಾಧಿ ಖೈದಿಗಳು ಐಷಾರಾಮಿ ಜೀವನ ನಡೆಸುತ್ತಿದ್ದಾರೆಂಬ ಆರೋಪಗಳು ಕೇಳಿ ಬಂದಿತ್ತು.
ಈ ಹಿನ್ನೆಲೆಯಲ್ಲಿ ಗೃಹ ಸಚಿವರು ಜೈಲಿನೊಳಗೆ ಯಾವುದೇ ನಿಷೇಧಿತ ವಸ್ತುಗಳು ಹೋಗದಂತೆ ತಡೆಯಬೇಕೆಂದು ಅಧಿಕಾರಿಗಳಿಗೆ ಆದೇಶಿಸಿದರು.ಇಂದು ಬೆಳಗ್ಗೆ 10.30 ರ ಸುಮಾರಿನಲ್ಲಿ ಕಾರಾಗೃಹದೊಳಗೆ ಇಬ್ಬರು ರೌಡಿಗಳು ರೊಚ್ಚಿಗೆದ್ದು ಜೈಲ್ ಅಧೀಕ್ಷರು ಸೇರಿದಂತೆ ನಾಲ್ವರ ಮೇಲೆ ಹಲ್ಲೆ ನಡೆಸಿದ್ದಾರೆ.
ಸುದ್ದಿ ತಿಳಿದು ಕಾರವಾರ ಪೊಲೀಸರು ಕಾರಾಗೃಹಕ್ಕೆ ಭೇಟಿ ನೀಡಿ ಪರಿಶೀಲಿಸಿ ಜೈಲು ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದಾರೆ. ಯಾವ ಕಾರಣಕ್ಕಾಗಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆದಿದೆ ಎಂಬುವುದರ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ರೌಡಿಗಳು ಜೈಲಿನ ಗ್ಲಾಸುಗಳನ್ನು ಒಡೆದು ದಾಂಧಲೆ ಮಾಡಿದ್ದಾರೆಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ದಾಂಧಲೆ ಮಾಡಿರುವ ರೌಡಿಗಳ ವಿರುದ್ಧ 12ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಮಂಗಳೂರು ಜೈಲಿನಿಂದ ಇವರುಗಳನ್ನು ಇತ್ತೀಚೆಗೆ ಈ ಜೈಲಿಗೆ ಸ್ಥಳಾಂತರ ಮಾಡಲಾಗಿತ್ತು ಎಂದು ಗೊತ್ತಾಗಿದೆ.
