Monday, November 25, 2024
Homeರಾಜ್ಯಲೋಕಸಭೆ ಚುನಾವಣೆಯಲ್ಲಿ`ಕೈ' ಅಭ್ಯರ್ಥಿಗಳು ಸೋತರೆ ಸಚಿವರ ತಲೆದಂಡ!

ಲೋಕಸಭೆ ಚುನಾವಣೆಯಲ್ಲಿ`ಕೈ’ ಅಭ್ಯರ್ಥಿಗಳು ಸೋತರೆ ಸಚಿವರ ತಲೆದಂಡ!

ಬೆಂಗಳೂರು,ಜ.12- ಲೋಕಸಭೆ ಚುನಾವಣೆಯಲ್ಲಿ ಗೆಲ್ಲುವ ಸಾಧ್ಯತೆಗಳಿರುವ ಕಡೆ ಕಾಂಗ್ರೆಸ್ ಅಭ್ಯರ್ಥಿಗಳು ಸೋಲು ಕಂಡರೆ ಅದಕ್ಕೆ ಚುನಾವಣಾ ಸಂಯೋಜಕರಾಗಿರುವ ಸಚಿವರುಗಳ ತಲೆದಂಡ ಮಾಡುವುದಾಗಿ ಹೈಕಮಾಂಡ್ ಎಚ್ಚರಿಕೆ ನೀಡಿದೆ. ಲೋಕಸಭೆ ಚುನಾವಣೆ ಹಿನ್ನೆಲೆ ಯಲ್ಲಿ ನಿನ್ನೆ ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಚುನಾವಣಾ ವೀಕ್ಷ ಕರ ಸಭೆ ನಡೆಯಿತು.

ಅದರಲ್ಲಿ ಕರ್ನಾಟಕ, ತಮಿಳುನಾಡು, ತೆಲಂಗಾಣ, ಕೇರಳ, ಲಕ್ಷದ್ವೀಪ, ಪುದುಚೆರಿ, ಒಡಿಸ್ಸಾ, ಆಂಧ್ರಪ್ರದೇಶ, ಅಂಡಮಾನ್-ನಿಕೋಬಾರ್ ಸೇರಿದಂತೆ ವಿವಿಧ ಪ್ರದೇಶಗಳ ಚುನಾವಣಾ ವೀಕ್ಷಕರೊಂದಿಗೆ ಚರ್ಚೆ ನಡೆಸಲಾಯಿತು. ಪ್ರತಿಯೊಂದು ಲೋಕಸಭಾ ಕ್ಷೇತ್ರಕ್ಕೂ ನೇಮಿಸಲಾಗಿರುವ ಚುನಾವಣಾ ವೀಕ್ಷಕರನ್ನು ಚುನಾವಣಾ ಸಂಯೋಜಕರು ಮತ್ತು ವಾರ್ ರೂಂಗಳನ್ನು ಸಂಪರ್ಕ ಕೇಂದ್ರಗಳೆಂದು ಮರು ನಾಮಕರಣ ಮಾಡಲಾಗಿದೆ. ಜವಾಬ್ದಾರಿಗಳು ಈ ಮೊದಲೇ ನಿರ್ಧರಿಸಿದಂತೆ ಮುಂದುವರೆಯಲಿದ್ದು, ಹೆಸರು ಮಾತ್ರ ಬದಲಾವಣೆಯಾಗಲಿದೆ ಎಂದು ತಿಳಿಸಲಾಗಿದೆ.

ಸಂಪರ್ಕ ಕೇಂದ್ರಗಳು ಚುನಾವಣಾ ಸಂಯೋಜಕರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರಬೇಕು. ಸಂಯೋಜಕರಿಗೂ ಯಾವುದೇ ರೀತಿಯ ಗೊಂದಲಗಳಾದರೆ ಸಂಪರ್ಕ ಕೇಂದ್ರಗಳ ಮೂಲಕ ಪಕ್ಷದಿಂದ ಸ್ಪಷ್ಟನೆಗಳನ್ನು ಪಡೆದುಕೊಳ್ಳಬೇಕು ಎಂದು ಸೂಚಿಸಲಾಗಿದೆ. ಬೂತ್ ಕಮಿಟಿಗಳ ರಚನೆ, ಪಂಚಾಯಿತಿ ಸಮಿತಿಗಳ ಬಗ್ಗೆ ಸ್ಪಷ್ಟ ನಿರ್ದೇಶನ ನೀಡಲಾಗಿದ್ದು, ಯಾವ ರೀತಿಯ ಪ್ರಚಾರ ತಂತ್ರಗಳನ್ನು ಅನುಸರಿಸಬೇಕು, ಅಭ್ಯರ್ಥಿಗಳ ಘೋಷಣೆಯ ಬಳಿಕ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಹೈಕಮಾಂಡ್ ಸೂಚನೆ ನೀಡಿದೆ.

ರಾಷ್ಟ್ರೀಯ ಮಟ್ಟದಲ್ಲಿ ಚುನಾವಣಾ ಸಂಪರ್ಕ ಕೇಂದ್ರಕ್ಕೆ ನಿವೃತ್ತ ಐಎಎಸ್ ಅಧಿಕಾರಿ ಶಶಿಕಾಂತ್ ಸೇಂಥಿಲ್ ಸಂಯೋಜಕರಾಗಿದ್ದಾರೆ. ವಿವಿಧ ರಾಜ್ಯಗಳ ಚುನಾವಣಾ ಸಂಯೋಜಕರೊಂದಿಗಿನ ಸಮಾಲೋಚನೆ ಬಳಿಕ ರಾಜ್ಯಸರ್ಕಾರದ ದೂರುಗಳು ಆಗಿರುವ ಚುನಾವಣಾ ಸಮಿತಿ ಸಂಯೋಜಕರೊಂದಿಗೆ ಕಾಂಗ್ರೆಸ್ ಹೈಕಮಾಂಡ್ ನಾಯಕರು ಪ್ರತ್ಯೇಕವಾಗಿ 15 ನಿಮಿಷಗಳ ಕಾಲ ಚರ್ಚೆ ನಡೆಸಿದ್ದಾರೆ.

ಬಿಜೆಪಿಯ ನಾಯಕರು ಸಾಲುಸಾಲಾಗಿ ಕುಮಾರಸ್ವಾಮಿ ಅವರನ್ನ ಭೇಟಿ ಮಾಡುತ್ತಿರೋದೇಕೆ..?

ರಾಜ್ಯ ಸಚಿವರಿಂದ ಹೈಕಮಾಂಡ್ ಏನನ್ನು ನಿರೀಕ್ಷಿಸುತ್ತದೆ ಎಂಬ ಮಾಹಿತಿಯನ್ನು ಸ್ಪಷ್ಟವಾಗಿ ತಿಳಿಸಿದ್ದಾರೆ. ಕೇವಲ ಕರ್ನಾಟಕಕ್ಕಷ್ಟೇ ಅಲ್ಲ ದಕ್ಷಿಣ ಭಾರತದ ರಾಜ್ಯಗಳಲ್ಲಿನ ಲೋಕಸಭಾ ಕ್ಷೇತ್ರಗಳ ಹೊಣೆಗಾರಿಕೆಯನ್ನೂ ರಾಜ್ಯಸಭಾ ಸಚಿವರಿಗೆ ನೀಡಲಾಗಿದೆ. ಕಳೆದ ಬಾರಿ ಒಂದು ಲೋಕಸಭಾ ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್ ಗೆಲುವು ಕಂಡಿದೆ. ಈ ಬಾರಿ 28 ಕ್ಕೆ 28ನ್ನೂ ಗೆಲ್ಲಬೇಕು. ಇದಕ್ಕೂ ಮೊದಲು 22 ಕ್ಷೇತ್ರಗಳನ್ನು ಕಾಂಗ್ರೆಸ್ ಗೆದ್ದಿರುವ ಉದಾಹರಣೆಗಳಿವೆ ಎಂದು ಹೈಕಮಾಂಡ್ ತಿಳಿಸಿದೆ.

ಪ್ರತಿಯೊಬ್ಬ ಸಚಿವರೂ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಗೆಲ್ಲುವ ಸಾಧ್ಯತೆಗಳಿರುವ ಕಡೆ ಕಾಂಗ್ರೆಸ್ ಅಭ್ಯರ್ಥಿ ಸೋಲು ಕಂಡರೆ ಅದಕ್ಕೆ ಚುನಾವಣಾ ಉಸ್ತುವಾರಿ ಯಾದ ಸಂಯೋಜಕರನ್ನೇ ನೇರ ಹೊಣೆ ಮಾಡಲಾಗುವುದು. ಸಚಿವ ಸಂಪುಟದಿಂದ ಕೈಬಿಡುವುದೂ ಸೇರಿದಂತೆ ತಲೆದಂಡದ ಕ್ರಮಗಳು ಅನಿವಾರ್ಯವಾಗಲಿದೆ ಎಂಬ ಸಂದೇಶವನ್ನು ಹೈಕಮಾಂಡ್ ನಾಯಕರು ನೀಡಿದ್ದಾರೆ.

ಹೀಗಾಗಿ ಲೋಕಸಭೆ ಚುನಾವಣೆ ರಾಜ್ಯದ ಸಚಿವರ ಪಾಲಿಗೆ ಅಧಿಕಾರದ ಅಳಿವು-ಉಳಿವಿನ ಪ್ರಶ್ನೆಯಾಗಲಿದೆ.
ಚುನಾವಣಾ ಅಭ್ಯರ್ಥಿಗಳ ಕುರಿತಂತೆಯೂ ನಿನ್ನೆಯ ಸಭೆಯಲ್ಲಿ ಚರ್ಚೆ ನಡೆದಿದೆ. ಶೀಘ್ರವೇ ಅಭ್ಯರ್ಥಿಗಳನ್ನು ಘೋಷಣೆ ಮಾಡುವಂತೆ ಸಚಿವರ ನಿಯೋಗ ಒತ್ತಾಯಿಸಿದೆ. ಇದಕ್ಕೆ ಸಹಮತಿಸಿರುವ ಹೈಕಮಾಂಡ್ ನಾಯಕರು ಮೂರ್ನಾಲ್ಕು ದಿನಗಳಲ್ಲೇ ರಾಜ್ಯ ಪ್ರದೇಶ ಕಾಂಗ್ರೆಸ್‍ನ ಚುನಾವಣಾ ಸಮಿತಿಯ ಸಭೆ ನಡೆಸಲಾಗುವುದಾಗಿ ಭರವಸೆ ನೀಡಿದ್ದಾರೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿರುವ ಕರ್ನಾಟಕ ಕಾಂಗ್ರೆಸ್‍ನ ಉಸ್ತುವಾರಿ ನಾಯಕ ರಣದೀಪ್ ಸಿಂಗ್ ಸುರ್ಜೇವಾಲ ರಾಜ್ಯಕ್ಕೆ ಆಗಮಿಸಿದ್ದು, ಚುನಾವಣಾ ಸಮಿತಿ ಸಭೆ ನಡೆಸಲಿದ್ದಾರೆ. ಅಲ್ಲಿ ಸಂಭವನೀಯ ಅಭ್ಯರ್ಥಿಗಳ ಬಗ್ಗೆ ಚರ್ಚೆ ನಡೆಸಿ ಅಂತಿಮಗೊಳಿಸಲಾಗುವುದು. ಸಂಭವನೀಯರ ಪಟ್ಟಿಯನ್ನು ಎಐಸಿಸಿ ಚುನಾವಣಾ ಸಮಿತಿಗೆ ರವಾನಿಸಲಾಗುವುದು. ಅಲ್ಲಿ ಚರ್ಚೆಗಳು ನಡೆದು ಶೀಘ್ರವೇ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದಾಗಿ ಹೈಕಮಾಂಡ್ ಭರವಸೆ ನೀಡಿದೆ ಎಂದು ಮೂಲಗಳು ತಿಳಿಸಿವೆ.

ಅಭ್ಯರ್ಥಿಗಳ ಆಯ್ಕೆಯನ್ನು ಪಕ್ಷದ ಹೈಕಮಾಂಡ್‍ಗೆ ಬಿಡುವಂತೆ ರಾಜ್ಯನಾಯಕರಿಗೆ ಸೂಚನೆ ನೀಡಲಾಗಿದೆ. ಸಚಿವರ ಸ್ಪರ್ಧೆಯ ಬಗ್ಗೆ ನಿನ್ನೆಯ ಸಭೆಯಲ್ಲಿ ಯಾವುದೇ ಚರ್ಚೆಗಳಾಗಿಲ್ಲ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

RELATED ARTICLES

Latest News