Sunday, October 13, 2024
Homeರಾಜಕೀಯ | Politicsಬಿಜೆಪಿಯ ನಾಯಕರು ಸಾಲುಸಾಲಾಗಿ ಕುಮಾರಸ್ವಾಮಿ ಅವರನ್ನ ಭೇಟಿ ಮಾಡುತ್ತಿರೋದೇಕೆ..?

ಬಿಜೆಪಿಯ ನಾಯಕರು ಸಾಲುಸಾಲಾಗಿ ಕುಮಾರಸ್ವಾಮಿ ಅವರನ್ನ ಭೇಟಿ ಮಾಡುತ್ತಿರೋದೇಕೆ..?

ಬೆಂಗಳೂರು,ಡಿ.12- ಜೆಡಿಎಸ್ ರಾಜ್ಯಾಧ್ಯಕ್ಷ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಬಿಜೆಪಿಯ ಸಂಸದರು, ಮಾಜಿ ಸಚಿವರು ಒಬ್ಬರಾದ ಮೇಲೆ ಒಬ್ಬರಂತೆ ಭೇಟಿ ಮಾಡಿ ಸಮಾಲೋಚನೆ ನಡೆಸುತ್ತಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆಯ ಟಿಕೆಟ್ ಆಕಾಂಕ್ಷಿಗಳು ಹಾಗೂ ಬಿಜೆಪಿಯ ಅಸಮಾಧಾನಿತರು ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಪ್ರಸ್ತುತ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.

ಎನ್‍ಡಿಎ ಮೈತ್ರಿಕೂಟದ ಜೊತೆ ಜೆಡಿಎಸ್ ಹೊಂದಾಣಿಕೆ ಮೈತ್ರಿ ಮಾಡಿಕೊಂಡ ಬೆನ್ನಲ್ಲೇ ಬಿಜೆಪಿಯ ನಾಯಕರು ಕುಮಾರಸ್ವಾಮಿ ಅವರನ್ನು ಭೇಟಿ ಮಾಡುತ್ತಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ. ಮೈಸೂರು ಸಂಸದ ಪ್ರತಾಪ್ ಸಿಂಹ ಅವರು ಬಿಡದಿ ಬಳಿ ಇರುವ ಕುಮಾರಸ್ವಾಮಿ ಅವರ ತೋಟದ ಮನೆಯಲ್ಲಿ ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಲೋಕಸಭೆ ಚುನಾವಣೆಯ ಸ್ಪರ್ಧಾ ಆಕಾಂಕ್ಷಿಯೂ ಆಗಿರುವ ಪ್ರತಾಪ್ ಸಿಂಹ, ಕ್ಷೇತ್ರ ಹಂಚಿಕೆ, ಅಭ್ಯರ್ಥಿ ಆಯ್ಕೆ ಹಾಗೂ ಪ್ರಸ್ತುತ ರಾಜಕೀಯ ಬೆಳವಣಿಗೆಗಳ ಬಗ್ಗೆ ಕುಮಾರಸ್ವಾಮಿ ಅವರೊಂದಿಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಹಾಸನ ಜಿಲ್ಲೆ ಬೇಲೂರು ತಾಲೂಕಿನಲ್ಲಿ ಮರ ಕಡಿದ ಪ್ರಕರಣದಲ್ಲಿ ವಿಕ್ರಮ್ ಸಿಂಹ ಅವರ ವಿರುದ್ಧ ಸರ್ಕಾರ ಕೈಗೊಂಡ ಕ್ರಮವನ್ನು ಟೀಕಿಸಿದ್ದರಲ್ಲದೆ ಪ್ರತಾಪ್ ಸಿಂಹ ಅವರ ಸಹೋದರ ವಿಕ್ರಮ್ ಸಿಂಹ ಪರವಾಗಿ ಕುಮಾರಸ್ವಾಮಿ ಮಾತನಾಡಿದ್ದರು.

ರಾಮಮಂದಿರ ಉದ್ಘಾಟನೆಗೆ ಯೋಗಿ ಬಿಟ್ಟರೆ ಬೇರೆ ಯಾವ ಸಿಎಂಗೂ ಇಲ್ಲ ಆಹ್ವಾನ

ಈ ಹಿನ್ನಲೆಯಲ್ಲಿ ಕುಮಾರಸ್ವಾಮಿ ಹಾಗೂ ಪ್ರತಾಪ್ ಸಿಂಹ ಅವರ ಭೇಟಿಯಾಗಿರಬಹುದು ಎಂದು ಹೇಳಲಾಗಿದೆ.
ಇಂದು ಬೆಳಗ್ಗೆ ಮಾಜಿ ಸಚಿವರಾದ ಹರತಾಳ್ ಹಾಲಪ್ಪ, ಡಿ.ಎನ್.ಜೀವರಾಜ್ ಅವರು ಕೂಡ ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈಗಾಗಲೇ ಮಾಜಿ ಸಚಿವ ಸಿ.ಟಿ.ರವಿ ಅವರು ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಲೋಕಸಭೆ ಚುನಾವಣೆಯ ಕ್ಷೇತ್ರ ಹಂಚಿಕೆ ಹಾಗೂ ಅಭ್ಯರ್ಥಿ ಆಯ್ಕೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಸಮಾಲೋಚನೆ ನಡೆಸಿದ್ದರು.

ಇದಕ್ಕೂ ಮುನ್ನ ಬಿಜೆಪಿಯಲ್ಲಿ ಅಸಮಾಧಾನಗೊಂಡಿರುವ ಮಾಜಿ ಸಚಿವ ವಿ.ಸೋಮಣ್ಣ ಅವರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಪದ್ಮನಾಭನಗರ ನಿವಾಸದಲ್ಲಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ರಾಜಕೀಯ ವಿಚಾರಗಳ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ. ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಂಡ ಬೆನ್ನಲ್ಲೇ ಬಿಜೆಪಿಯ ಮುಖಂಡರು ಕುಮಾರಸ್ವಾಮಿ ಅವರನ್ನು ಭೇಟಿ ಮಾಡುತ್ತಿರುವುದು ತೀವ್ರ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.

ಪುನೀತ್‍ ರಾಜ್‍ಕುಮಾರ್ ಪುತ್ಥಳಿಗೆ ಅವಮಾನ, ಅಭಿಮಾನಿಗಳ ಆಕ್ರೋಶ

ಲೋಕಸಭೆ ಚುನಾವಣೆಗೆ ಸಂಬಂಸಿದಂತೆ ಕ್ಷೇತ್ರ ಹಂಚಿಕೆ, ಅಭ್ಯರ್ಥಿಗಳ ಆಯ್ಕೆ ಇನ್ನು ಉಭಯ ಪಕ್ಷಗಳ ನಡುವೆ ಅಂತಿಮಗೊಂಡಿಲ್ಲ. ಹೀಗಾಗಿ ಸ್ಪರ್ಧೆಯ ಆಕಾಂಕ್ಷಿಗಳು, ಅಸಮಾಧಾನಿತರು ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡು ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

RELATED ARTICLES

Latest News