ನವದೆಹಲಿ, ಮೇ 31-ವೇಗವಾಗಿ ಬದಲಾಗುತ್ತಿರುವ ಪ್ರಾದೇಶಿಕ ಸಾಗರ ಭದ್ರತಾ ಪರಿಸ್ಥಿತಿಯ ನಡುವೆಯೇ ಅಡಿರಲ್ ಕೃಷ್ಣ ಸ್ವಾಮಿನಾಥನ್ ಅವರು ಇಂದು ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದರು.ಅವರು ನಿವೃತ್ತರಾದ ಅಡಿರಲ್ ದಿನೇಶ್ ಕುಮಾರ್ ತ್ರಿಪಾಠಿ ಅವರ ಉತ್ತರಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ಇದಕ್ಕೂ ಮೊದಲು ಸ್ವಾಮಿನಾಥನ್ ಅವರು ಪಶ್ಚಿಮ ನೌಕಾ ಕಮಾಂಡ್‌ನ ಫ್ಲಾಗ್ ಆಫೀಸರ್ ಕಮಾಂಡಿಂಗ್- ಇನ್-ಚೀಫ್ ಆಗಿ ಸೇವೆ ಸಲ್ಲಿಸುತ್ತಿದ್ದರು.ಅಧಿಕಾರ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಾದೇಶಿಕ ಭದ್ರತಾ ಪರಿಸ್ಥಿತಿ ಸವಾಲಿನ, ಸಂಕೀರ್ಣ ಹಾಗೂ ಅನಿಶ್ಚಿತವಾಗಿದೆ ಎಂದು ಹೇಳಿ, ನೌಕಾಪಡೆಯ ಗರಿಷ್ಠ ಕಾರ್ಯಾಚರಣಾ ಸನ್ನದ್ಧತೆಯನ್ನು ಕಾಪಾಡುವುದು ತಮ್ಮ ಅತ್ಯುನ್ನತ ಆದ್ಯತೆಯಾಗಿರುತ್ತದೆ ಎಂದು ಸ್ಪಷ್ಟಪಡಿಸಿದರು.
ಭಾರತೀಯ ನೌಕಾಪಡೆಯು ರಾಷ್ಟ್ರೀಯ ಹಿತಾಸಕ್ತಿಗಳನ್ನು ರಕ್ಷಿಸಲು ಸದಾ ಜಾಗರೂಕವಾಗಿದೆ. ಸವಾಲಿನ, ಸಂಕೀರ್ಣ ಮತ್ತು ಅನಿರೀಕ್ಷಿತ ಭದ್ರತಾ ವಾತಾವರಣದಲ್ಲಿ ನಾವು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ಅವರು ಹೇಳಿದರು.
ರಾಷ್ಟ್ರೀಯ ಭದ್ರತೆ ಹಾಗೂ ದೇಶದ ಆರ್ಥಿಕ ಹಿತಾಸಕ್ತಿಗಳನ್ನು ರಕ್ಷಿಸಲು ನೌಕಾಪಡೆಯು ಅತ್ಯುನ್ನತ ಕಾರ್ಯಾಚರಣಾ ಸನ್ನದ್ಧತೆ ಮತ್ತು ಯುದ್ಧ ಸಾಮರ್ಥ್ಯವನ್ನು ಕಾಪಾಡಿಕೊಳ್ಳುವಂತೆ ನೋಡಿಕೊಳ್ಳುವುದು ನನ್ನ ಮೊದಲ ಆದ್ಯತೆಯಾಗಿರುತ್ತದೆ,ೞೞ ಎಂದು ಅವರು ತಿಳಿಸಿದರು.
ಭಾರತೀಯ ನೌಕಾಪಡೆಯು ಈಗಾಗಲೇ ಸಾಮರ್ಥ್ಯ ವೃದ್ಧಿ ಮತ್ತು ಆಧುನೀಕರಣದ ದಾರಿಯಲ್ಲಿ ದೃಢವಾಗಿ ಸಾಗುತ್ತಿದೆ ಎಂದು ಅಡ್ಮಿರಲ್ ಸ್ವಾಮಿನಾಥನ್ ಹೇಳಿದರು.
ನೌಕಾಪಡೆಯ ಬೆಳವಣಿಗೆಯ ವೇಗವನ್ನು ಮುಂದುವರಿಸುವುದು, ಪ್ರಗತಿಯಲ್ಲಿರುವ ಎಲ್ಲ ಯೋಜನೆಗಳನ್ನು ಬಲಪಡಿಸುವುದು ಹಾಗೂ ಅಗತ್ಯವಿದ್ದಲ್ಲಿ ಅವುಗಳನ್ನು ವಿಸ್ತರಿಸುವುದು ನನ್ನ ಪ್ರಯತ್ನವಾಗಿರುತ್ತದೆ. ಜೊತೆಗೆ ಹೊಸ ಮತ್ತು ಉದಯೋನುಖ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಕಾರ್ಯಾಚರಣಾ ಸಾಮರ್ಥ್ಯವನ್ನು ಮತ್ತಷ್ಟು ತೀಕ್ಷ್ಣಗೊಳಿಸಲಾಗುವುದು ಎಂದು ಹೇಳಿದರು.
ರಾಷ್ಟ್ರೀಯ ಭದ್ರತೆ, ಅಭಿವೃದ್ಧಿ ಮತ್ತು ಆರ್ಥಿಕ ಸಮೃದ್ಧಿಗೆ ನೌಕಾಪಡೆಯು ಇನ್ನಷ್ಟು ಪರಿಣಾಮಕಾರಿಯಾಗಿ ಸೇವೆ ಸಲ್ಲಿಸುವಂತೆ ಮಾಡಲು ತಮ್ಮ ಜೀವನದ ಪ್ರತಿದಿನವನ್ನು ಸಮರ್ಪಿಸುವುದಾಗಿ ಅವರು ಹೇಳಿದರು.ಈ ವೇಳೆ ತಮ ಪೂರ್ವಾಧಿಕಾರಿ ಅಡ್ಮಿರಲ್ ದಿನೇಶ್ ಕುಮಾರ್ ತ್ರಿಪಾಠಿ ಅವರನ್ನು ವಿಶ್ವದ ಅತ್ಯುತ್ತಮ ಸೇನಾ ವೃತ್ತಿಪರರಲ್ಲಿ ಒಬ್ಬರು ಎಂದು ಪ್ರಶಂಸಿಸಿದರು.
ವಿಶಿಷ್ಟ ಸೇವಾ ಹಾದಿ
ಅಡಿರಲ್ ಕೃಷ್ಣ ಸ್ವಾಮಿನಾಥನ್ ಅವರು 1987ರ ಜುಲೈ 1ರಂದು ಭಾರತೀಯ ನೌಕಾಪಡೆಗೆ ಸೇರ್ಪಡೆಯಾಗಿದ್ದು, ಸಂವಹನ ಮತ್ತು ಎಲೆಕ್ಟ್ರಾನಿಕ್ ಯುದ್ಧತಂತ್ರ ವಿಭಾಗದಲ್ಲಿ ಪರಿಣತಿ ಹೊಂದಿದ್ದಾರೆ.
ಅವರು ಎನ್‌ಡಿಎ ,ಯುನೈಟೆಡ್ ಕಿಂಗ್‌ಡಮ್‌ನ ಜಾಯಿಂಟ್ ಸರ್ವಿಸಸ್ ಕಮಾಂಡ್ ಅಂಡ್ ಸ್ಟಾಫ್ ಕಾಲೇಜು, ಕರಂಜಾದ ನೇವಲ್ ವಾರ್‌ರ್ಫೇ ಕಾಲೇಜು ಹಾಗೂ ಅಮೆರಿಕದ ಯುಎಸ್ ನೇವಲ್ ವಾರ್ ಕಾಲೇಜ್,ಸಂಸ್ಥೆಗಳ ಹಳೆಯ ವಿದ್ಯಾರ್ಥಿಯಾಗಿದ್ದಾರೆ.ಅವರಿಗೆ ಪರಮ ವಿಶಿಷ್ಟ ಸೇವಾ ಪದಕ, ಅತಿ ವಿಶಿಷ್ಟ ಸೇವಾ ಪದಕ ಮತ್ತು ವಿಶಿಷ್ಟ ಸೇವಾ ಪದಕ ಸೇರಿದಂತೆ ಹಲವು ಪ್ರತಿಷ್ಠಿತ ಗೌರವಗಳು ಲಭಿಸಿವೆ.
