Homeರಾಜಕೀಯಉಪಮುಖ್ಯಮಂತ್ರಿ ಹುದ್ದೆ ಕುರಿತು ಯಾವುದೇ ಪ್ರಸ್ತಾವನೆ ಬಂದಿಲ್ಲ : ಮಲ್ಲಿಕಾರ್ಜುನ ಖರ್ಗೆ

ಉಪಮುಖ್ಯಮಂತ್ರಿ ಹುದ್ದೆ ಕುರಿತು ಯಾವುದೇ ಪ್ರಸ್ತಾವನೆ ಬಂದಿಲ್ಲ : ಮಲ್ಲಿಕಾರ್ಜುನ ಖರ್ಗೆ

No proposal for the post of Deputy Chief Minister : Mallikarjun Kharge

ಕಲಬುರಗಿ, ಮೇ 31- ಉಪಮುಖ್ಯಮಂತ್ರಿ ಹುದ್ದೆ ಕುರಿತು ಯಾವುದೇ ಪ್ರಸ್ತಾವನೆ ಈವರೆಗೂ ಬಂದಿಲ್ಲ ಎಂದು ಸ್ಪಷ್ಟಪಡಿಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎರಡು ಹಂತದಲ್ಲಿ ಸಚಿವ ಸಂಪುಟ ರಚನೆಯಾಗಲಿದೆ ಎಂದು ತಿಳಿಸಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪ ಮುಖ್ಯಮಂತ್ರಿ ಹುದ್ದೆಗಳ ಕುರಿತು ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡಿದ್ದಾರೆ.

ಹೊಸ ಸರ್ಕಾರ ಮತ್ತು ಸಂಪುಟ ರಚನೆ, ನಿಗಮ ಮಂಡಳಿಗಳ ನೇಮಕಾತಿ, ವಿಧಾನ ಪರಿಷತ್‌ ಹಾಗೂ ರಾಜ್ಯಸಭೆ ಸದಸ್ಯರ ಆಯ್ಕೆಗಾಗಿ ನಡೆಯುವ ಚುನಾವಣೆಗೆ ಅಭ್ಯರ್ಥಿಗಳ ನಿಯೋಜನೆ ಸೇರಿದಂತೆ ಎಲ್ಲಾ ವಿಚಾರಗಳು ದೆಹಲಿಯಲ್ಲಿ ನಡೆದಿರುವ ಮ್ಯಾರಥಾನ್‌ ಸಭೆಯಲ್ಲಿ ಇತ್ಯರ್ಥವಾಗಿದೆ.

ಅದರಂತೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ನಿನ್ನೆ ನಡೆದ ಶಾಸಕಾಂಗ ಸಭೆಯಲ್ಲಿ ಡಿ.ಕೆ.ಶಿವಕುಮಾರ್‌ ನೂತನ ನಾಯಕರಾಗಿ ಆಯ್ಕೆಯಾಗಿದ್ದಾರೆ. ಡಿ.ಕೆ.ಶಿವಕುಮಾರ್‌ ಅವರೊಂದಿಗೆ ಸುಮಾರು 9 ಜನ ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಹೇಳಲಾಗಿತ್ತು.

ಈ ಬಗ್ಗೆ ಇಂದು ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಖರ್ಗೆ ಅವರು ಕೆಲ ವಿಷಯಗಳನ್ನು ಸ್ಪಷ್ಟಪಡಿಸಿದ್ದಾರೆ. ಮುಖ್ಯಮಂತ್ರಿಯವರು ತಮೊಟ್ಟಿಗೆ ಎಷ್ಟು ಜನ ಪ್ರಮಾಣ ವಚನ ಸ್ವೀಕರಿಸುತ್ತಾರೆ ಎಂಬ ಪ್ರಸ್ತಾವನೆಯನ್ನು ಇನ್ನೂ ಹೈಕಮಾಂಡ್‌ಗೆ ಸಲ್ಲಿಸಿಲ್ಲ. ಹಾಗೆಯೇ ಉಪ ಮುಖ್ಯಮಂತ್ರಿ ಹುದ್ದೆಗಳ ಬಗ್ಗೆಯೂ ಪ್ರಸ್ತಾವನೆ ಇಲ್ಲ ಎಂದು ಹೇಳಿದ್ದಾರೆ.

ಸಚಿವ ಸಂಪುಟ ಎರಡು ಹಂತದಲ್ಲಿ ರಚನೆಯಾಗಲಿದೆ. ಮುಖ್ಯಮಂತ್ರಿಯವರ ಜೊತೆಗೆ 8 ಅಥವಾ 10 ಮಂದಿ ಒಳಗೊಂಡಂತೆ ಎಷ್ಟು ಜನ ಪ್ರಮಾಣ ವಚನ ಸ್ವೀಕರಿಸುತ್ತಾರೋ ಗೊತ್ತಿಲ್ಲ. ಸದ್ಯಕ್ಕೆ ಒಂದು ಹಂತದಲ್ಲಿ ಸಂಪುಟ ರಚನೆಯಾಗಲಿದೆ. ಬಳಿಕ 15 ದಿನ ಅಥವಾ ಒಂದು ತಿಂಗಳೊಳಗಾಗಿ, ಎರಡನೇ ಹಂತದಲ್ಲಿ ಸಂಪುಟ ರಚನೆಯಾಗಬೇಕೇಂದು ಎಂದು ಚರ್ಚೆಯಾಗಿದೆ. ಆದರೆ, ಮುಖ್ಯಮಂತ್ರಿಯವರು ಯಾವ ರೀತಿ ನಿರ್ಧಾರ ಮಾಡುತ್ತಾರೆ ಗೊತ್ತಿಲ್ಲ ಎಂದಿದ್ದಾರೆ.

ಮೊದಲು ಮುಖ್ಯಮಂತ್ರಿ ಅವರು ಪ್ರಮಾಣವಚನ ಸ್ವೀಕರಿಸಲಿ. ಜೂನ್‌ 3ರ ಬಳಿಕ ಹೈಕಮಾಂಡ್‌ ಸಭೆ ನಡೆಸಿ, ಎಷ್ಟು ಮಂದಿ ಶಾಸಕರನ್ನು ಸಚಿವರನ್ನಾಗಿ ಮಾಡಬೇಕು, ಎಷ್ಟು ಉಪ ಮುಖ್ಯಮಂತ್ರಿ ಹುದ್ದೆಗಳನ್ನು ಸೃಷ್ಟಿಸಬೇಕು, ಪ್ರಮುಖವಾದ ನಿಗಮಮಂಡಳಿಗಳಿಗೆ ಇದರ ಜೊತೆಯಲ್ಲೇ ಅಧ್ಯಕ್ಷರನ್ನು ನೇಮಿಸಬೇಕೇ? ಎಂಬೆಲ್ಲಾ ವಿಚಾರಗಳು ಚರ್ಚೆಯಾಗಿದೆ ಎಂದಿದ್ದಾರೆ.

ಸಂಪುಟ ಗೊಂದಲ:
ಸಚಿವ ಸಂಪುಟ ರಚನೆಗೆ ಸಂಬಂಧಪಟ್ಟಂತೆ ತೀವ್ರ ಪೈಪೋಟಿ ಕಂಡು ಬರುತ್ತಿದೆ. ಪ್ರಾದೇಶಿಕ ಆದ್ಯತೆ, ಜಾತಿ ಸಮೀಕರಣ, ಬಣಗಳ ಹೊಂದಾಣಿಕೆ, ಪಕ್ಷ ನಿಷ್ಠೆ ಎಲ್ಲವನ್ನೂ ಸರಿದೂಗಿಸಿ ಸಂಪುಟ ಪುನರ್‌ರಚನೆ ಮಾಡುವುದು ಸವಾಲಿನ ಕೆಲಸವಾಗಿದೆ.

ಮುಖ್ಯಮಂತ್ರಿಯಾಗಲಿರುವ ಡಿ.ಕೆ.ಶಿವಕುಮಾರ್‌ ಅವರು ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮುಂದಿನ ಎರಡು ವರ್ಷದಲ್ಲಿ ಪಕ್ಷ ಸಂಘಟನೆ ಹಾಗೂ ಉತ್ತಮ ಆಡಳಿತ ನೀಡುವ ಸಮರ್ಥ ಕ್ರಿಯಾಶೀಲರನ್ನು ಆಯ್ದುಕೊಳ್ಳುತ್ತಿದ್ದಾರೆ. ಆದರೆ ಸಾಮಾಜಿಕ ನ್ಯಾಯ ಮತ್ತು ಬಣ ರಾಜಕೀಯಗಳ ತಾಕಲಾಟದಲ್ಲಿ ಸಾಕಷ್ಟು ಗೊಂದಲಗಳಾಗಿವೆ.

ನಿರ್ಗಮಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತರ ಬಣದಲ್ಲಿ ಗುರುತಿಸಿಕೊಂಡಿರುವವರಿಗೆ ಸಚಿವ ಸ್ಥಾನ ನೀಡುವ ವಿಚಾರವಾಗಿ ಅಪಸ್ವರಗಳು ಕೇಳಿ ಬರುತ್ತಿವೆ. ಆಪ್ತರನ್ನು ಕೈ ಬಿಟ್ಟಿದ್ದೇ ಆದರೆ ಸಿದ್ದರಾಮಯ್ಯ ಅಸಮಾಧಾನಗೊಳ್ಳಬಹುದು. ಅದು ಸರ್ಕಾರದ ಮೇಲೆ ಪರಿಣಾಮ ಉಂಟುಮಾಡಬಹುದು ಎಂಬ ಆತಂಕ ಕಾಂಗ್ರೆಸ್‌‍ನಲ್ಲಿದೆ. ಈ ನಿಟ್ಟಿನಲ್ಲಿ ಅಳೆದು-ತೂಗಿ ನಿರ್ಧಾರ ತೆಗೆದುಕೊಳ್ಳಲಾಗುತ್ತಿದೆ.

ನಾಲ್ಕು ಉಪ ಮುಖ್ಯಮಂತ್ರಿಗಳು:
ದೆಹಲಿಯಲ್ಲಿ ನಡೆದ ಸಭೆಯಲ್ಲಿ ನಾಲ್ವರಿಗೆ ಉಪ ಮುಖ್ಯಮಂತ್ರಿ ಹುದ್ದೆ ನೀಡಬೇಕೆಂದು ಚರ್ಚೆಯಾಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ ಅವರ ಪುತ್ರರಾಗಿರುವ ಮಾಜಿ ಸಚಿವ ಪ್ರಿಯಾಂಕ್‌ ಖರ್ಗೆ ಅವರನ್ನು ಉಪ ಮುಖ್ಯಮಂತ್ರಿ ಮಾಡುವ ಬಗ್ಗೆ ಡಿ.ಕೆ.ಶಿವಕುಮಾರ್‌ ಆಸಕ್ತಿ ವಹಿಸಿದ್ದಾರೆ.

ಮುಖ್ಯಮಂತ್ರಿ ಹುದ್ದೆ ಮೇಲೆ ಕಣ್ಣಿಟ್ಟಿದ್ದ ಡಾ.ಜಿ.ಪರಮೇಶ್ವರ್‌ ಅವರಿಗೆ ಉಪ ಮುಖ್ಯಮಂತ್ರಿ ಹುದ್ದೆ ತಪ್ಪುವ ಆತಂಕ ಎದುರಾಗಿದೆ. ಇದರಿಂದಾಗಿ ಅಸಮಾಧಾನಗಳು ಒಳಗೊಳಗೆ ಕುದಿಯುತ್ತಿವೆ. ನಾಲ್ವರನ್ನು ಉಪ ಮುಖ್ಯಮಂತ್ರಿ ಮಾಡಿದರೆ, ತಾವು ಸಚಿವ ಸ್ಥಾನಕ್ಕೆ ಸೀಮಿತವಾಗುವುದಾಗಿ ಪರಮೇಶ್ವರ್‌ ಹೇಳಿದ್ದಾರೆ ಎನ್ನಲಾಗಿದೆ.

ಸಿದ್ದರಾಮಯ್ಯ ಅವರ ಪುತ್ರ ಡಾ. ಯತೀಂದ್ರ ಉಪ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಇದರಿಂದ ತಾವು ಸ್ವಾರ್ಥ ರಾಜಕಾರಣಿ ಎಂಬ ಆಕ್ಷೇಪ ಎದುರಿಸಬೇಕಾಗುತ್ತದೆ ಎಂದು ಸಿದ್ದರಾಮಯ್ಯ ನಿರಾಕರಿಸಿದ್ದಾರೆ ಎನ್ನಲಾಗುತ್ತದೆ.
ತಮ ಪುತ್ರನ ಬದಲಾಗಿ ಭೈರತಿ ಸುರೇಶ್‌ ಅಥವಾ ರಾಘವೇಂದ್ರ ಹಿಟ್ನಾಳ್‌ ಅವರನ್ನು ಉಪ ಮುಖ್ಯಮಂತ್ರಿ ಮಾಡುವಂತೆ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ ಎನ್ನಲಾಗುತ್ತಿದೆ.

ಅಲ್ಪಸಂಖ್ಯಾತರ ಕೋಟಾದಲ್ಲಿ ತನ್ವೀರ್‌ ಸೇಠ್‌, ಯು.ಟಿ.ಖಾದರ್‌, ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಮಾಜಿ ಸಚಿವ ಜಮೀರ್‌ ಅಹಮದ್‌ ಖಾನ್‌ ಅವರಿಗೆ ಸಿದ್ದರಾಮಯ್ಯ ಅವರ ಕೃಪಾಕಟಾಕ್ಷ ಇರುವುದರಿಂದ ಉಪ ಮುಖ್ಯಮಂತ್ರಿಯಾಗಬಹುದೆಂಬ ಚರ್ಚೆಗಳಿವೆ. ಲಿಂಗಾಯತ ಸಮುದಾಯದಿಂದ ಎಂ.ಬಿ.ಪಾಟೀಲ್‌, ಈಶ್ವರ್‌ ಖಂಡ್ರೆ ಲಾಬಿ ನಡೆಸಿದರೆ, ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೊಡಿ ಇಲ್ಲವಾದರೆ ಉಪ ಮುಖ್ಯಮಂತ್ರಿ ಸ್ಥಾನ ಬೇಕು ಎಂದು ಪರಿಶಿಷ್ಟ ಪಂಗಡದ ಸತೀಶ್‌ ಜಾರಕಿಹೊಳಿ ಪಟ್ಟು ಹಿಡಿದಿದ್ದಾರೆ.

RELATED ARTICLES

Latest News