ಬೆಂಗಳೂರು,ಅ.2- ಕಳೆದ ನಾಲ್ಕು ತಿಂಗಳಲ್ಲಿ ರಾಜ್ಯಾದ್ಯಂತ ನಾಲ್ಕು ಸಾವಿರ ಎಕರೆ ಅರಣ್ಯ ಪ್ರದೇಶವನ್ನು ಹೆಚ್ಚಿಸಲಾಗಿದೆ ಎಂದು ಅರಣ್ಯ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ. 69ನೇ ವನ್ಯಜೀವಿ ಸಪ್ತಾಹದ ಅಂಗವಾಗಿ ನಡೆದ ನಡಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಕಾರ್ಯಕ್ರಮದಲ್ಲಿ ಮಾತ ನಾಡಿದ ಅವರು, ಜಾಗತಿಕವಾಗಿ ಪರಿಸರ ಜೀವವೈವಿಧ್ಯದಲ್ಲಿ ಸಂಕಷ್ಟದ ಪರಿಸ್ಥಿತಿ ಇದೆ. ಜಗತ್ತು ಹವಾಮಾನ ವೈಪರೀತ್ಯ, ಜಾಗತಿಕ ತಾಪಮಾನ ಏರಿಕೆಯಿಂದ ನಾನಾ ವಿಧದ ಸಮಸ್ಯೆಯನ್ನು ಎದುರಿಸುತ್ತಿದೆ. ಇದಕ್ಕೆ ಇರುವ ಏಕೈಕ ಪರಿಹಾರವೆಂದರೆ ಹಸಿರು ಹೊದಿಕೆಯನ್ನು ಹೆಚ್ಚಿಸುವುದಾಗಿದೆ ಎಂದರು.
ತಾವು ಅರಣ್ಯ ಸಚಿವರಾದ ಬಳಿಕ 5 ಕೋಟಿ ಸಸಿ ನೆಟ್ಟು ಪೋಷಿಸುವ ಸಂಕಲ್ಪ ಮಾಡಿದ್ದು, ಈವರೆಗೆ 4.75 ಲಕ್ಷ ಸಸಿ ನೆಡಲಾಗಿದೆ. ಇದರಲ್ಲಿ ಎಷ್ಟು ಬದುಕಿ ಉಳಿಯುತ್ತದೆ ಎಂದು ತಿಳಿಯಲು ಜಿಯೋ ಟ್ಯಾಗ್ ಮಾಡಲಾಗಿದೆ ಮತ್ತು ಮೂರನೇ ವ್ಯಕ್ತಿ (ಥರ್ಡ್ ಪಾರ್ಟಿ) ಆಡಿಟ್ ಮಾಡಿಸಲಾಗುತ್ತಿದೆ ಎಂದು ಹೇಳಿದರು.
ಇದರ ಜೊತೆಗೆ ರಾಜ್ಯದ 5 ನಗರಗಳನ್ನು ಏಕ ಬಳಕೆ ಪ್ಲಾಸ್ಟಿಕ್ ಮುಕ್ತ ಮಾಡಲು ಸಂಕಲ್ಪ ಮಾಡಿದ್ದು, ಮೈಸೂರು, ಬೀದರ್, ಗುಲ್ಬರ್ಗಾ, ಧರ್ಮಸ್ಥಳ ಮತ್ತು ತುಮಕೂರು ನಗರವನ್ನು ಏಕ ಬಳಕೆ ಪ್ಲಾಸ್ಟಿಕ್ ಮುಕ್ತ ಎಂದು ಘೋಷಿಸಲಾಗಿದೆ. ಪ್ರಜ್ಞಾವಂತರಾದ ನೀವೆಲ್ಲರೂ ಪ್ಲಾಸ್ಟಿಕ್ ಅದರಲ್ಲೂ ಏಕ ಬಳಕೆ ಪ್ಲಾಸ್ಟಿಕ್ ಬಳಕೆ ನಿಲ್ಲಿಸಬೇಕು. ಜಾಗೃತಿ ಮೂಡಿಸಬೇಕು ಎಂದು ಮನವಿ ಮಾಡಿದರು.
ರಾಜ್ಯಾದ್ಯಂತ ಒತ್ತುವಾರಿಯಾಗಿದ್ದ 2 ಸಾವಿರ ಎಕರೆ ಅರಣ್ಯ ಭೂಮಿಯ ಒತ್ತುವರಿಯನ್ನು ತೆರವು ಮಾಡಲಾಗಿದೆ. ಜೊತೆಗೆ 4 ಸಾವಿರ ಎಕರೆ ಸರ್ಕಾರಿ ಭೂಮಿಯನ್ನು ಅರಣ್ಯ ಎಂದು ಘೋಷಿಸಲಾಗಿದೆ ಎಂದು ಹೇಳಿದರು.
ಭೂಮಿ ಸಾಫ್ಟ್ ವೇರ್ ಮಾದರಿಯಲ್ಲಿ ಗ್ರಾ.ಪಂಗಳ ಅಸ್ತಿ ಸಂರಕ್ಷಣೆಗೆ ಕ್ರಮ : ಡಿಸಿಎಂ
ಇಷ್ಟು ದಿನ ರಾಸಾಯನಿಕ ಬಣ್ಣ ಲೇಪಿತ ಪಿಓಪಿ ಗಣಪತಿ ಮೂರ್ತಿಗಳನ್ನು ವಿಸರ್ಜಿಸಿ ಜಲ ಮೂಲ ನಾಶ ಮಾಡದಂತೆ ಸುತ್ತೋಲೆ ಹೊರಡಿಸಿ ಮನವಿ ಮಾಡಲಾಗುತ್ತಿತ್ತು. ಈಗ ಈ ಸಂಬಂಧ ಸರ್ಕಾರಿ ಆದೇಶ ಹೊರಡಿಸಲಾಗಿದೆ ಎಂದು ತಿಳಿಸಿದರು.
ಅರಣ್ಯ ವ್ಯಾಪ್ತಿ ಕ್ಷೀಣಿಸಿದರೆ, ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಾಗುತ್ತಿದೆ. ಇತ್ತೀಚೆಗೆ ಹಲವಾರು ಆನೆಗಳ ದಾಳಿಯಿಂದ ಮೃತಪಟ್ಟಿದ್ದಾರೆ. ಹೀಗಾಗಿ ರೈಲ್ವೆ ಬ್ಯಾರಿಕೇಡ್ ನಿರ್ಮಿಸಲಾಗುತ್ತಿದೆ. ರಾಜ್ಯದಲ್ಲಿ 312 ಕಿ.ಮೀಟರ್ ರೈಲ್ವೆ ಬ್ಯಾರಿಕೇಡ್ ನಿರ್ಮಿಸಲಾಗಿದ್ದು, ಇನ್ನೂ 300 ಕಿ.ಮೀ. ರೈಲ್ವೆ ಬ್ಯಾರಿಕೇಡ್ ಅಳವಡಿಸಿದರೆ ಆನೆ ನಾಡಿಗೆ ಬಾರದಂತೆ ತಡೆಯಬಹುದು ಎಂದರು.
ವನ್ಯಜೀವಿಯಾಗಿರಲಿ, ಕೀಟವೇ ಆಗಿರಲಿ, ಪಕ್ಷಿಯೇ ಆಗಿರಲಿ ಅಥವಾ ಸಸ್ಯ ಸಂಕುಲವೇ ಆಗಿರಲಿ ಎಲ್ಲ ಜೀವಿ, ಸಸ್ಯಗಳಿಗೂ ಬದುಕುವ ಹಕ್ಕಿದೆ. ಆದರೆ ಇಂದು ಹಲವು ವನ್ಯ ಜೀವಿಗಳು ಅಳಿವಿನ ಅಂಚಿನಲ್ಲಿವೆ. ಕೆಲವು ನಶಿಸಿಹೋಗಿವೆ. ಹೀಗಾಗಿ ಜನರಲ್ಲಿ ಅರಣ್ಯದ ಬಗ್ಗೆ ವನ್ಯ ಜೀವಿಗಳ ಬಗ್ಗೆ ಜಾಗೃತಿ ಮೂಡಿಸಲು ವನ್ಯಜೀವಿ ಸಪ್ತಾಹ ವನ್ನು ಆಚರಿಸಲಾಗುತ್ತದೆ ಎಂದರು.
ಗೃಹ ಸಚಿವ ಪರಮೇಶ್ವರ್ ವಿರುದ್ಧ ಈಶ್ವರಪ್ಪ ಹಿಗ್ಗಾಮುಗ್ಗಾ ವಾಗ್ದಾಳಿ
ವನ್ಯಜೀವಿ ಸಂರಕ್ಷಣೆ ಬಗ್ಗೆ ಅರಿವು ಮೂಡಿಸಲು ಅರಣ್ಯ ಇಲಾಖೆ ಉತ್ತಮ ಕಾರ್ಯ ಮಾಡುತ್ತಿದೆ. ಶಾಲಾ ಮಕ್ಕಳಿಗೆ ಬಾಲ್ಯದಿಂದಲೇ ಅರಣ್ಯದ ಬಗ್ಗೆ ಅರಿವು ಮೂಡಿಸಿದರೆ ಅವರು ದೊಡ್ಡವರಾದ ಬಳಿಕವೂ ಪ್ರಕೃತಿ, ಪರಿಸರ ಕಾಪಾಡುತ್ತಾರೆ. ಅದಕ್ಕೆ ಕೇವಲ ಪಠ್ಯದಲ್ಲಿ ವಿಷಯ ಇದ್ದರೆ ಸಾಲದು, ಅವರಿಗೆ ಸಾಕ್ಷಾತ್ ಅರಣ್ಯ ದರ್ಶನ ಮಾಡಿಸಿದಾಗ ಹೆಚ್ಚಿನ ಅರಿವು ಮೂಡುತ್ತದೆ. ಅದಕ್ಕಾಗಿಯೇ ನಮ್ಮ ಇಲಾಖೆ ಚಿಣ್ಣರ ವನ ದರ್ಶನ ಎಂಬ ಕಾರ್ಯಕ್ರಮವನ್ನೇ ಹಮ್ಮಿಕೊಂಡಿದೆ ಎಂದರು.
ಈ ಕಾರ್ಯಕ್ರಮದ ಅಡಿಯಲ್ಲಿ ಮಕ್ಕಳಿಗೆ ಉಪಯುಕ್ತವಾದ ಪರಿಸರ, ಅರಣ್ಯ, ವನ್ಯಜೀವಿಗಳ ಪುಸ್ತಕ ನೀಡಲಾಗುತ್ತದೆ. ಅರಣ್ಯಪ್ರದೇಶಕ್ಕೆ ಕರೆದುಕೊಂಡು ಹೋಗಿ ತೋರಿಸಲಾಗುತ್ತದೆ. ಈ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.