ಬೆಂಗಳೂರು,ಜ.13- ಹಾವೇರಿ ಜಿಲ್ಲೆ ಹಾನಗಲ್‍ನ ಖಾಸಗಿ ಹೋಟೆಲ್‍ನಲ್ಲಿ ಯುವತಿಯೊಬ್ಬಳ ಮೇಲೆ ನಡೆಸಿರುವ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಪೋಕ್ಸೋ ಕಾಯ್ದೆಯಡಿ ದೂರು ದಾಖಲಿಸಿ ವಿಶೇಷ ಪೊಲೀಸ್ ತಂಡ(ಎಸ್‍ಐಟಿ) ವಹಿಸಬೇಕೆಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಪ್ರಕರಣ ನಡೆದು ಮೂರು ದಿನಗಳಾದರೂ ಆರೋಪಿಗಳ ವಿರುದ್ಧ ಪೊಲೀಸರು ಏಕೆ ಎಫ್‍ಐಆರ್ ದಾಖಲಿಸಿಲ್ಲ. ಸ್ವತಃ ಯುವತಿಯೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ಹೇಳಿದ್ದರೂ ಅವರ ವಿರುದ್ಧ ಕ್ರಮ ಏಕೆ ಜರುಗಿಸಿಲ್ಲ ಎಂದು ಪ್ರಶ್ನೆ ಮಾಡಿದರು. ಆರೋಪಿಗಳು ಅಲ್ಪಸಂಖ್ಯಾತರು ಎಂಬ ಕಾರಣಕ್ಕಾಗಿ ಅವರ ವಿರುದ್ಧ ದೂರು ದಾಖಲಿಸಲು ಸರ್ಕಾರ ಹಿಂದೇಟು ಹಾಕುತ್ತಿದೆ. ಮೊದಲು ಪೊಲೀಸರು ಸಾಮೂಹಿಕ ಅತ್ಯಾಚಾರ ನಡೆದಿಲ್ಲ ಎಂದು ಪ್ರಕರಣಕ್ಕೆ ತಿಪ್ಪೆ ಸಾರಿಸುವ ಕೆಲಸ ಮಾಡಲು ಮುಂದಾಗಿದ್ದರು.
ಈಗ ಸಂತ್ರಸ್ತೆ ಮಹಿಳೆಯೇ ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿದೆ ಎಂದು ವಿಡಿಯೋ ಕಾಲ್ ಮಾಡಿ ಹೇಳಲಾಗಿದೆ. ಪ್ರಕರಣವನ್ನು ಸರಿಯಾಗಿ ನಿರ್ವಹಿಸದ ಪೊಲೀಸರನ್ನು ಅಮಾನತುಪಡಿಸಬೇಕು. ನಿಷ್ಪಾಕ್ಷಪಾತ ತನಿಖೆಯಾಗಬೇಕೆಂದರೆ ಎಸ್‍ಐಟಿಗೆ ವಹಿಸುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ. ನಾವು ಏನು ಮಾಡಿದರೂ ನಡೆಯುತ್ತದೆ ಎಂಬ ಅಹಂನಲ್ಲಿ ಯುವಕರು ಈ ಕೃತ್ಯವನ್ನು ಎಸಗಿದ್ದಾರೆ. ಕೆಲವು ವರ್ಗಗಳು ನಮ್ಮನ್ನು ಯಾರು ಮುಟ್ಟುವ ಧೈರ್ಯ ಮಾಡುವುದಿಲ್ಲ ಎಂಬ ಭ್ರಮೆಯಲ್ಲಿದ್ದಾರೆ. ಪೊಲೀಸರ ವೈಫಲ್ಯ ಇದರಲ್ಲಿ ಎದ್ದು ಕಾಣುತ್ತಿದೆ ಎಂದು ಬೊಮ್ಮಾಯಿ ವಾಗ್ದಾಳಿ ನಡೆಸಿದರು.
ಒಂದು ವೇಳೆ ಇದೇ ಕೃತ್ಯವನ್ನು ಬೇರೆ ಸಮುದಾಯದವರು ಮಾಡಿದ್ದರೆ ದೂರು ದಾಖಲಾಗುವ ಮುನ್ನವೇ ಅವರನ್ನು ಬಂಧಿಸಿ ಹೊರಗೆ ಹಾಕುತ್ತಿದ್ದೀರಿ. ಅಲ್ಪಸಂಖ್ಯಾತ ಸಮುದಾಯದ ರಕ್ಷಕರು ಎಂದು ಹೇಳಿಕೊಳ್ಳುವ ಕಾಂಗ್ರೆಸ್‍ನವರು ಈಗ ಅದೇ ಸಮುದಾಯದ ಆರೋಪಿಗಳನ್ನು ರಕ್ಷಣೆ ಮಾಡಲು ಹೊರಟಿರುವುದು ದುರ್ದೈವವೇ ಸರಿ ಎಂದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಯಾರಿಗು ಕೂಡ ರಕ್ಷಣೆ ಇಲ್ಲದಂತಾಗಿದೆ. ಪೊಲೀಸ್ ಠಾಣೆಗಳು ಕಲೆಕ್ಷನ್ ಅಡ್ಡಗಳಾಗಿವೆ. ಕೆಲವರು ದುಡ್ಡು ಕೊಟ್ಟು ಪೋಸ್ಟಿಂಗ್ ಮಾಡಿಕೊಂಡಿದ್ದಾರೆ. ಪ್ರತಿ ಪೊಲೀಸ್ ಠಾಣೆಯಲ್ಲಿ ತಿಂಗಳಿಗೆ ಇಂತಿಷ್ಟು ಕೊಡಬೇಕೆಂದು ಇನ್‍ಸ್ಪೆಕ್ಟರ್ ಸೇರಿದಂತೆ ಹಿರಿಯ ಅಧಿಕಾರಿಗಳ ಮೇಲೆ ಒತ್ತಡ ಹಾಕುತ್ತಿದ್ದಾರೆ. ಹೀಗಾದರೆ ಪೊಲೀಸರು ಕರ್ತವ್ಯ ನಿರ್ವಹಿಸುವುದು ಹೇಗೆ ಪ್ರಶ್ನಿಸಿದರು.
ಶೀಘ್ರದಲ್ಲೇ ಇಂಡಿ ಮೈತ್ರಿಕೂಟ ಪತನವಾಗಲಿದೆ : ದಿಲೀಪ್ ಘೋಷ್
ಹಾನಗಲ್ ಜೊತೆಗೆ ಕೋಲಾರದ ಮೇಲೂ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರವಾಗಿದೆ. ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಕರ್ನಾಟಕ ಜಂಗಲ್ ರಾಜ್ಯವಾಗಿದೆ ಎಂದು ವಾಗ್ದಾಳಿ ನಡೆಸಿದರು. ಒಂದು ವೇಳೆ ಸರ್ಕಾರ ಎಸ್‍ಐಟಿ ತನಿಖೆ ವಹಿಸದಿದ್ದರೆ ನಾವು ಬೀದಿಗಿಳಿದು ಹೋರಾಟ ಮಾಡುತ್ತೇವೆ. ಸದ್ಯದಲ್ಲೇ ಸಂತ್ರಸ್ತ ಮಹಿಳೆಯನ್ನು ನಮ್ಮ ಪಕ್ಷದ ನಿಯೋಗ ಭೇಟಿ ಮಾಡಲಿದೆ ಎಂದು ತಿಳಿಸಿದರು.
ಈ ಪ್ರಕರಣವನ್ನು ಸರ್ಕಾರ ಮುಚ್ಚಿ ಹಾಕಲು ಮುಂದಾಗಿತ್ತು. ಯಾವಾಗ ಸಂತ್ರಸ್ತ ಮಹಿಳೆ ಮ್ಯಾಜಿಸ್ಟ್ರೇಟ್ ಮುಂದೆ ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ಹೇಳಿಕೆ ದಾಖಲಿಸಿದರೋ ಕೊನೆಗೆ ವಿಧಿ ಇಲ್ಲದೆ ಆರೋಪಿಗಳನ್ನು ಬಂಧಿಸಿದ್ದಾರೆ. ಇದೇನ ನಿಮ್ಮ ಆಡಳಿತ ಎಂದು ಬೊಮ್ಮಾಯಿ ತರಾಟೆಗೆ ತೆಗೆದುಕೊಂಡರು.
ಕಾಂಗ್ರೆಸ್ ನಾಯಕರಿಗೆ ರಾಜ್ಯದ ಕಾನೂನಿನ ಮೇಲೆ ನಂಬಿಕೆ ಇಲ್ಲ. ಡಿಜೆಹಳ್ಳಿ ಕೆಜೆಹಳ್ಳಿ ಪ್ರಕರಣ ದಲ್ಲಿ ಆರೋಪಿಗಳ ಬಗ್ಗೆ ವಿಚಾರಣೆ ನಡೆಯುತ್ತಿದೆ. ಆದರೆ, ಡಿಸಿಎಂ ಅವರನ್ನು ಅಮಾಯಕರು ಎಂದು ಹೇಳುತ್ತಾರೆ. ಪೊಲೀಸರ ಕ್ರಮ ಸರಿ ಇದೆ ಎಂದು ಅವರೇ ಒಪ್ಪಿಕೊಂಡಿದ್ದಾರೆ. ಒಂದು ಕಡೆ ಓಲೈಕೆ ರಾಜಕಾರಣ ಮಾಡುತ್ತಾರೆ.
ಜಾತ್ಯಾತೀತತೆ ಎಂದರೆ ಎಲ್ಲ ಧರ್ಮ, ಜಾತಿಯವರನ್ನು ಒಟ್ಟಾಗಿ ಕರೆದುಕೊಂಡು ಹೋಗುವುದು. ಈ ಪ್ರಕರಣದಲ್ಲಿ ಎಸ್ ಐಟಿ ಮಾಡಿ ಪೊಲಿಸರಿಗೆ ಮುಕ್ತ ಅವಕಾಶ ಕೊಡಬೇಕು. ಆಗ ನ್ಯಾಯ ದೊರೆಯುತ್ತದೆ.ಸರ್ಕಾರ ಎಸ್ ಐಟಿ ಮಾಡದಿದ್ದರೆ ನಾವು ಕಾನೂನು ಹೋರಾಟ ಮಾಡುತ್ತೇವೆ. ನಮ್ಮ ಪಕ್ಷದ ಮಹಿಳಾ ನಿಯೋಗ ಭೇಟಿ ನೀಡಲಿದೆ. ಎಸ್ ಐಟಿ ರಚನೆ ಮಾಡದಿದ್ದರೆ ನ್ಯಾಯಾಂಗ ಮಾರ್ಗದರ್ಶನದಲ್ಲಿ ಪ್ರಕರಣ ಮಾನಿಟರ್ ಮಾಡಲಿ ಎಂದು ಬಯಸುತ್ತೇವೆ.
ರಾಜ್ಯಕ್ಕೆ ಅನ್ಯಾಯವಾಗಲು ಸಿದ್ದರಾಮಯ್ಯ ಅವರ ಸರ್ಕಾರವೇ ಕಾರಣ. 14ನೇ ಹಣಕಾಸು ಆಯೋಗದ ಸಂದರ್ಭದಲ್ಲಿ ಸಿದ್ದರಾಮಯ್ಯ ಕೇಂದ್ರಕ್ಕೆ ರಾಜ್ಯದವಸ್ತು ಸ್ಥಿತಿ ಸರಿಯಾಗಿ ಮಾಹಿತಿ ನೀಡದ ಕಾರಣ ನಮಗೆ ಕಡಿಮೆ ಅನುದಾನ ಬಂದಿದೆ. 14 ನೇ ಹಣಕಾಸು ಆಯೋಗದಲ್ಲಿ ಸುಮಾರು 2300 ಕೋಟಿ ಬಾಕಿ ಇತ್ತು ಅದರಲ್ಲಿ 1100 ಕೋಟಿ ರೂ ಬಿಡುಗಡೆಯಾಗಿದೆ. ಉಳಿದ ಹಣವನ್ನು ಅಂತಿಮ ಕಂತಾಗಿ ಕೇಂದ್ರ ಸರ್ಕಾರ ಎಲ್ಲವನ್ನು ಪರಿಶೀಲನೆ ಮಾಡಿ ಬಿಡುಗಡೆ ಮಾಡಬಹುದು.
ಅಮೆರಿಕದಲ್ಲೂ ರಾಮಮಂದಿರ ಉದ್ಘಾಟನೆ ಸಡಗರ
ಸಿದ್ದರಾಮಯ್ಯ ಅವರಿಗೆ ಸಲಹೆಗಾರರು ಬಹಳಜನ ಇದ್ದಾರೆ. ಹೀಗಾಗಿ ರಾಮ ಮಂದಿರ ವಿಚಾರದಲ್ಲಿ ಅವರು ದಿನಕ್ಕೊಂದು ಹೇಳಿಕೆ ನೀಡಿದ್ದಾರೆ. ಒಂದು ದಿನ ನಾನೇ ರಾಮ ಅಂತಾರೆ ಮತ್ತೊಂದು ರಾಮ ಮಂದಿರ ಉದ್ಘಾಟನೆಗೆ ಹೋಗುವುದಿಲ್ಲ ಎನ್ನುತ್ತಾರೆ. ಅದರಿಂದ ರಾಜಕೀಯವಾಗಿ ಕಷ್ಟವಾಗಲಿದೆ ಎಂದು ಇನ್ನೊಬ್ಬ ಸಲಹೆಗಾರರು ಹೇಳಿದಾಗ ಅಯೋದ್ಯೆಗೆ ಹೋಗುವುದಾಗಿ ಹೇಳುತ್ತಾರೆ ಎಂದು ಇದೇ ವೇಳೆ ಅವರು ಟೀಕಿಸಿದರು.