Homeರಾಜ್ಯಸಚಿವ ಸ್ಥಾನ ಅಥವಾ ಡಿಸಿಎಂ ಹುದ್ದೆಗೆ ಪೈಪೋಟಿ ಮಾಡುತ್ತಿಲ್ಲ, ಅವಕಾಶ ಸಿಕ್ಕರೆ ಕೆಲಸ ಮಾಡುತ್ತೇನೆ :...

ಸಚಿವ ಸ್ಥಾನ ಅಥವಾ ಡಿಸಿಎಂ ಹುದ್ದೆಗೆ ಪೈಪೋಟಿ ಮಾಡುತ್ತಿಲ್ಲ, ಅವಕಾಶ ಸಿಕ್ಕರೆ ಕೆಲಸ ಮಾಡುತ್ತೇನೆ : ಯು.ಟಿ.ಖಾದರ್‌

I am not competing for the ministerial post or DCM post

ಬೆಂಗಳೂರು, ಜೂ. 2- ಸಚಿವ ಸ್ಥಾನ ಅಥವಾ ಉಪ ಮುಖ್ಯಮಂತ್ರಿ ಹುದ್ದೆಗಾಗಿ ತಾವು ಯಾರ ಜೊತೆಯಲ್ಲೂ ಪೈಪೋಟಿ ಮಾಡುತ್ತಿಲ್ಲ. ಅವಕಾಶ ಸಿಕ್ಕರೆ ಕೆಲಸ ಮಾಡುತ್ತೇನೆ. ಇಲ್ಲವಾದರೆ ಇರುವ ಜವಾಬ್ದಾರಿಯನ್ನೇ ಸಮರ್ಥವಾಗಿ ನಿಭಾಯಿಸುವುದಾಗಿ ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್‌ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾವೀಗ ವಿಧಾನಸಭೆಯ ಅಧ್ಯಕ್ಷರಾಗಿದ್ದು, ರಾಜಕೀಯವಾಗಿ ಮಾತನಾಡುವಂತಿಲ್ಲ ಎಂದು ಪದೇಪದೇ ಪುನರುಚ್ಚರಿಸಿದರು.
ತಮಗೆ ಉಪ ಮುಖ್ಯಮಂತ್ರಿ ಹುದ್ದೆ ನೀಡುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಕಳೆದ ಬಾರಿ ಸಂಪುಟ ಪುನರ್‌ರಚನೆಯ ವೇಳೆಯಲ್ಲೂ ಇದೇ ರೀತಿ ಚರ್ಚೆಯಾಗಿತ್ತು ಎಂದಿದ್ದಾರೆ.

ಜಮೀರ್‌ ಅಹಮದ್‌ ಖಾನ್‌ ಅವರ ಆಡಿಯೋ ವೈರಲ್‌ ಆಗಿದ್ದರಿಂದ ತಮ ಹಾದಿ ಸುಗಮವಾಗಿದೆ ಎಂಬುದು ಸರಿಯಲ್ಲ. ನಾವ್ಯಾರೂ ಅಧಿಕಾರಕ್ಕಾಗಿ ಪೈಪೋಟಿ ಮಾಡುತ್ತಿಲ್ಲ. ನಾವೆಲ್ಲರೂ ಪರಸ್ಪರ ಸೌಹಾರ್ಧತೆಯಿಂದ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದರು.ದೆಹಲಿಯಲ್ಲಿ ಲೋಕಸಭಾಧ್ಯಕ್ಷರ ಕಚೇರಿಯಲ್ಲಿ ಕಾರ್ಯಕ್ರಮ ಇತ್ತು. ಅದರಲ್ಲಿ ಭಾಗವಹಿಸಲು ತಾವು ಭೇಟಿ ನೀಡಿದ್ದಾಗಿ ಸ್ಪಷ್ಟಪಡಿಸಿದರು. ಈ ವೇಳೆ ತಾವು ಎಐಸಿಸಿ ಕಚೇರಿಗೆ ಭೇಟಿ ನೀಡಿಲ್ಲ, ಆ ರೀತಿ ಹೋಗಲು ಅವಕಾಶವೂ ಇಲ್ಲ ಎಂದು ಹೇಳಿದ್ದಾರೆ.

ಸಚಿವ ಸ್ಥಾನ ಸಿಕ್ಕರೆ ಪ್ರಮಾಣವಚನ ಸ್ವೀಕರಿಸುತ್ತೇನೆ. ಇಲ್ಲವಾದರೆ ವಿಧಾನಸಭಾಧ್ಯಕ್ಷರಾಗಿ ಮೇಲೆ ಕುಳಿತು ಹೊಸ ಮುಖ್ಯಮಂತ್ರಿಯವರಿಗೆ ಮತ್ತು ಸಚಿವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಯಾವುದೂ ಇಲ್ಲ ಎಂದಾದರೆ ಶಾಸಕನಾಗಿ ವಿಧಾನಸಭೆಯ ಸಭಾಂಗಣದಲ್ಲಿರ್ತುತೇನೆ. ಜನ ಬೇಡವೆಂದರೆ ಮಾಜಿಯಾಗಿ ಯಾವ ಕೆಲಸ ಮಾಡಬಹುದೋ ಅದನ್ನು ನಿಭಾಯಿಸುತ್ತೇನೆ ಎಂದು ತಿಳಿಸಿದರು.

ಸಚಿವನಾದರೆ ಯಾವುದೇ ಖಾತೆ ಕೊಟ್ಟರೂ ನಿಭಾಯಿಸುತ್ತೇನೆ. ಎಲ್ಲಾ ಖಾತೆಗಳು ಉತ್ತಮವಾಗಿವೆ. ಜನ ಸಮಾನ್ಯರಿಗೆ ಸೇವೆ ಸಲ್ಲಿಸಲು ಅವಕಾಶಗಳಿವೆ. ತಾವು ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವುದಾದರೆ, ವಿಧಾನ ಸಭಾಧ್ಯಕ್ಷ ಸ್ಥಾನಕ್ಕೆ, ಉಪಾಧ್ಯಕ್ಷ ರುದ್ರಪ್ಪ ಲಮಾಣಿಯವರಿಗೆ ರಾಜೀನಾಮೆ ಕೊಡಬೇಕಾಗುತ್ತದೆ ಎಂದು ಹೇಳಿದರು.

ವಿಧಾನಸಭೆಯಲ್ಲಿ ಆಡಳಿತಾತಕವಾಗಿ ಸಾಕಷ್ಟು ಸುಧಾರಣೆ ತಂದಿದ್ದೇವೆ. ಈವರೆಗೂ ಶಾಸಕರು ಸದನದ ಹೊರಗೆ ಪುಸ್ತಕ್ಕೆ ಹಾಜರಾತಿ ಹಾಕಿ, ವಿಧಾನಸಭೆಯ ಸಭಾಂಗಣಕ್ಕೆ ಬರುತ್ತಿದ್ದರು. ಈ ವ್ಯವಸ್ಥೆಯಲ್ಲಿ ಬದಲಾವಣೆ ತರಲಾಗಿದ್ದು, ಇನ್ನೂ ಮುಂದೆ ಸದಸ್ಯರು ವಿಧಾನ ಸಭೆಯ ಸಭಾಂಗಣದ ಒಳಗೆ ತಮ ಕುರ್ಚಿಯಲ್ಲಿ ಕುಳಿತು ಮೊಬೈಲ್‌ ಅಥವಾ ಐ-ಪ್ಯಾಡ್‌ ಮೂಲಕ ಖುದ್ದು ಹಾಜರಾತಿ ಹಾಕುವ ವ್ಯವಸ್ಥೆ ಜಾರಿಗೆ ತರುತ್ತಿದ್ದೇವೆ ಎಂದರು.

ಈ ಮೊದಲು ವಿಧಾನಸಭೆಯ ಸಭಾಂಗಣದ ಒಳಗೆ ಮೊಬೈಲ್‌ ಬಳಕೆಗೆ ನಿರ್ಬಂಧವಿತ್ತು. ಡಿಜಿಟಲೀಕರಣದತ್ತ ಹೆಜ್ಜೆ ಹಾಕುತ್ತಿರುವ ನಾವು ಮೊಬೈಲ್‌ ಬಳಕೆಯನ್ನು ನಿರ್ಬಂಧಿಸುವುದು ಸರಿಯಲ್ಲ. ಹೀಗಾಗಿ ಸಭಾಂಗಣದ ಒಳಗೆ ಮೊಬೈಲ್‌ಗೆ ಅವಕಾಶ ನೀಡಲಾಗುತ್ತದೆ ಎಂದು ತಿಳಿಸಿದರು.

ಶಾಸಕರಿಗೆ ಪ್ರತ್ಯೇಕವಾದ ಮೊಬೈಲ್‌ ನೀಡಲು ಚಿಂತನೆ ನಡೆದಿದೆ. ಅದನ್ನು ಬಳಕೆ ಮಾಡಲು ತರಬೇತಿ ನೀಡಲಾಗುವುದು. ಪುಸ್ತಕದ ಮಾದರಿಯಲ್ಲಿ ಪ್ರಶ್ನೋತ್ತರ, ಬಜೆಟ್‌ ಸೇರಿದಂತೆ ಎಲ್ಲಾ ದಾಖಲಾತಿಗಳನ್ನು ಮೊಬೈಲ್‌ನಲ್ಲೇ ಒದಗಿಸಲಾಗುತ್ತದೆ. ಇನ್ನೂ ಮುಂದೆ ಪ್ರಶ್ನೋತ್ತರಕ್ಕೆ ಸೂಚನೆಗಳನ್ನು ಭೌತಿಕವಾಗಿ ಸ್ವೀಕರಿಸುವ ಬದಲಾಗಿ ಡಿಜಿಟಲ್‌ ಮಾದರಿಯಲ್ಲಿ ಇ-ಮೇಲ್‌ ಮೂಲಕವೂ ಕಳುಹಿಸಲು ಅವಕಾಶ ಕಲ್ಪಿಸುವುದಾಗಿ ಹೇಳಿದರು.ಭಾಷಣಗಳನ್ನು ತ್ವರಿತಗತಿಯಲ್ಲಿ ಬಯಸಿದ ಭಾಷೆಗೆ ತರ್ಜುಮೆ ಮಾಡುವ ವ್ಯವಸ್ಥೆಯನ್ನು ಅಳವಡಿಸುತ್ತಿರುವುದಾಗಿ ಹೇಳಿದರು.

RELATED ARTICLES

Latest News