ಬೆಂಗಳೂರು, ಜೂ. 3- ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವುದಾಗಿ ಹೇಳಿರುವ ನಿಯೋಜಿತ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ತಮೊಂದಿಗೆ 13 ಜನ ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಡಾಲರ್ಸ್ ಕಾಲೋನಿಯಲ್ಲಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ನಿವಾಸಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿರಿಯ ನಾಯಕರು ರಾಜ್ಯಕ್ಕಾಗಿ ದುಡಿದಿದ್ದಾರೆ, ಮಾರ್ಗದರ್ಶನ ಮಾಡಿದ್ದಾರೆ. ತಮದೇ ಆದ ಕೊಡುಗೆ ನೀಡಿದ್ದಾರೆ. ಎಲ್ಲರ ಜೊತೆಗೂಡಿ ರಾಜ್ಯದ ಅಭಿವೃದ್ಧಿಗೆ ತಾವು ಕೆಲಸ ಮಾಡುವುದಾಗಿ ತಿಳಿಸಿದ್ದಾರೆ.
ತಮೊಂದಿಗೆ ಇನ್ನೂ 13 ಜನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಇದೇವೇಳೆ ಸ್ಪಷ್ಟಪಡಿಸಿದರು. ನಂತರ ದೇವೇಗೌಡರ ಮನೆ ಬಳಿ ಮಾತನಾಡಿದ ಡಿ.ಕೆ.ಶಿವಕುಮಾರ್, ಮಾಜಿ ಪ್ರಧಾನಿ ದೇವೇಗೌಡರು, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯಕ್ಕೆ ಅಪಾರ ಸೇವೆ ಸಲ್ಲಿಸಿದ್ದಾರೆ. ಹಾಗೆಯೇ ಉಳಿದ ಮಾಜಿ ಮುಖ್ಯಮಂತ್ರಿಗಳೂ ಸಾಕಷ್ಟು ಕೆಲಸ ಮಾಡಿದ್ದಾರೆ. ಅವರನ್ನು ಭೇಟಿ ಮಾಡಿ ಚರ್ಚೆ ಮಾಡುತ್ತೇನೆ ಎಂದರು.
ರಾಜ್ಯದ ಹಿತಕ್ಕೆ ಹಿರಿಯರ ಮಾರ್ಗದರ್ಶನ ಅಗತ್ಯ. ಮುಖ್ಯಮಂತ್ರಿಗಳಾಗಿ ಅವರು ಕರ್ನಾಟಕದ ಘನತೆ, ಗೌರವ ಕಾಪಾಡಿರುವುದನ್ನು ಮರೆಯಲಾಗುವುದಿಲ್ಲ. ಸರ್ಕಾರ ನಿರಂತರ. ಇಲ್ಲಿ ಪಕ್ಷ ರಾಜಕೀಯವನ್ನು ಪಕ್ಕಕ್ಕಿಟ್ಟು ಮಾನವೀಯತೆಯಿಂದ ನಾವು ಕೆಲಸ ಮಾಡಬೇಕಿದೆ ಎಂದರು. ಹಿರಿಯರ ಅನುಭವ ದೊಡ್ಡ ಶಕ್ತಿ. ಮುಂದಿನ ದಿನಗಳಲ್ಲೂ ನಾನು ದೇವೇಗೌಡರು ಹಾಗೂ ಹಿರಿಯರನ್ನು ಭೇಟಿ ಮಾಡಿ ಮತ್ತೆ ಮಾರ್ಗದರ್ಶನ ಪಡೆಯುತ್ತೇನೆ ಎಂದರು.
ಭೇಟಿಯ ಸಂದರ್ಭದಲ್ಲಿ ದೇವೇಗೌಡರು ನನ್ನ ತಾಳೆಯನ್ನು ಮೆಚ್ಚಿಕೊಂಡಿದ್ದಾರೆ. ನೀವು ರಾಜ್ಯಕ್ಕೆ ಒಳ್ಳೆಯದು ಮಾಡುತ್ತೀರಾ ಎಂಬ ನಂಬಿಕೆಯಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು. ಇಂದು ಬೆಳಗ್ಗೆ ಕಾಂಗ್ರೆಸ್ ವರಿಷ್ಠ ನಾಯಕಿ ಸೋನಿಯಾ ಗಾಂಧಿಯವರು ತಮಗೆ ಕರೆ ಮಾಡಿ, ಶುಭ ಹಾರೈಸಿದ್ದಾರೆ. ನನ್ನ ಮೇಲೆ ಅವರಿಗೆ ಅಪಾರ ನಂಬಿಕೆ ಇದೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುವಂತೆ ಸೂಚಿಸಿದ್ದಾರೆ ಎಂದರು.
ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಅಪಾರ ಸಂಖ್ಯೆಯಲ್ಲಿ ಪ್ರೀತಿಯಿಂದ ಜನ ಬಂದಿದ್ದಾರೆ. ನಾನು ಯಾರನ್ನೂ ಆಹ್ವಾನಿಸಿರಲಿಲ್ಲ. ಲೋಕಭವನದಲ್ಲಿ ಸ್ಥಳಾವಕಾಶ ಕೊರತೆ ಇದೆ ಎಂದು ತಿಳಿಸಿದರು.
