ಬೆಂಗಳೂರು, ಜು.21- ಫುಟ್ಪಾತ್ ಕಾರ್ಯಾಚರಣೆ ವೇಳೆ ಜಿಬಿಎ ಅಧಿಕಾರಿಗಳು ಹಾಗೂ ಸಿಬ್ಬಂದಿ ಮೇಲೆ ಸ್ಥಳೀಯರು ಏಕಾಏಕಿ ದಾಳಿ ಮಾಡಿ ಹಿಗ್ಗಾಮುಗ್ಗ ಥಳಿಸಿರುವ ಘಟನೆ ಶಿವಾಜಿನಗರದಲ್ಲಿ ನಡೆದಿದೆ.ಇಂದು ಬೆಳಿಗ್ಗೆ ಫುಟ್ಪಾತ್ ತೆರವು ಕಾರ್ಯಾಚರಣೆಗೆ ತೆರಳಿದ್ದ ಸಿಬ್ಬಂದಿಗಳನ್ನು ಅಟ್ಟಾಡಿಸಿ ಹಲ್ಲೆ ನಡೆಸಲಾಗಿದೆ.ಘಟನೆಯಲ್ಲಿ ಜಿಬಿಎ ಎಂಜಿನಿಯರ್ಗಳಾದ ಗೌತಮ್, ಮಾಧವರಾವ್, ರುಚಿತಾ ಎಂಬ ಅಧಿಕಾರಿಗಳು ಗಾಯಗೊಂಡಿದ್ದಾರೆ.
ಫುಟ್ಪಾತ್ ಆಕ್ರಮಿಸಿಕೊಂಡಿದ್ದಕ್ಕೆ ಮೊದಲು ಅಂಗಡಿ ಮಾಲೀಕರುಗಳಿಗೆ ತಿಳಿಹೇಳಲಾಯಿತು. ನಂತರ ಅಲ್ಲಿದ್ದ ಬೋರ್ಡ್ಗಳು ಸೇರಿದಂತೆ ಕೆಲವು ವಸ್ತುಗಳನ್ನು ತೆರವುಗೊಳಿಸುವಾಗ
ಏಕಾಏಕಿ ಅಲ್ಲಿಗೆ ಬಂದ ಹತ್ತಕ್ಕೂ ಹೆಚ್ಚು ಮಂದಿ ಸಿಬ್ಬಂದಿಗಳ ಮೇಲೆ ಏಕಾಏಕಿ ಗೂಂಡಾಗಿರಿ ನಡೆಸಿದ್ದಾರೆ.
ಅಧಿಕಾರಿಗಳು ಅಲ್ಲಿಂದ ತೆರಳುತ್ತಿದ್ದರೂ ಅವರನ್ನು ಹಿಂಬಾಲಿಸಿ ಕುರ್ಚಿ, ಹೆಲೆಟ್ ಸೇರಿದಂತೆ ಹಲವು ವಸ್ತುಗಳಿಂದ ಹಿಗ್ಗಾಮುಗ್ಗ ಥಳಿಸಲಾಗಿದೆ. ಇದನ್ನು ಕಂಡ ಸಾರ್ವಜನಿಕರು ಬೆಚ್ಚಿಬಿದ್ದಿದ್ದು, ಈ ಗೂಂಡಾಗಳು ಎಲ್ಲಿಂದ ಬಂದಿದ್ದರು ಮತ್ತು ಕೂದಲೆಳೆ ಅಂತರದಲ್ಲಿ ಪೊಲೀಸ್ ಠಾಣೆ ಇದ್ದರೂ ಯಾವ ಸಿಬ್ಬಂದಿಯೂ ಭದ್ರತೆಗೆ ಬಾರದಿರುವುದು ಅಚ್ಚರಿ ಮೂಡಿಸಿದೆ.
ಗಾಯಗೊಂಡಿರುವ ಅಧಿಕಾರಿಗಳು ಅಲ್ಲಿಂದ ತೆರಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಮಹಿಳಾ ಅಧಿಕಾರಿಯೆಂದೂ ಲೆಕ್ಕಿಸದೆ ಅವರ ಮುಖಕ್ಕೆ ಪೆಪ್ಪರ್ ಸೆ್ಪ್ರೖಯನ್ನು ಸಿಂಪಡಿಸಿ ಅಮಾನೀಯವಾಗಿ ವರ್ತಿಸಲಾಗಿದೆ.ಹಾಡಹಗಲೇ ಇಂತಹ ಘಟನೆ ನಡೆದಿದ್ದು, ಸಾರ್ವಜನಿಕ ವಲಯದಲ್ಲಿ ಬೆಂಗಳೂರು ನಗರದ ಸುರಕ್ಷತೆ ಬಗ್ಗೆ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ.
