Homeರಾಜ್ಯಪೊಲೀಸ್‌‍ ಇಲಾಖೆಗೆ ಮೇಜರ್‌ ಸರ್ಜರಿ ಮಾಡತ್ತಾರಾ ಸಿಎಂ ಡಿಕೆಶಿ..?

ಪೊಲೀಸ್‌‍ ಇಲಾಖೆಗೆ ಮೇಜರ್‌ ಸರ್ಜರಿ ಮಾಡತ್ತಾರಾ ಸಿಎಂ ಡಿಕೆಶಿ..?

major surgery on the police department

ಬೆಂಗಳೂರು, ಜೂ.3- ನೂತನ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್‌ ಅಧಿಕಾರ ಸ್ವೀಕರಿಸುತ್ತಿದ್ದಂತೆ ಆಡಳಿತ ವರ್ಗಕ್ಕೆ ಹೊಸ ರೂಪ ನೀಡಲು ಮುಂದಾಗಿದ್ದು, ಪ್ರಮುಖವಾಗಿ ಗೃಹ ಇಲಾಖೆಗೆ ಮೇಜರ್‌ ಸರ್ಜರಿ ನಡೆಸಲು ತೀರ್ಮಾನಿಸಿದ್ದಾರೆ.

ಬಹುಮುಖ್ಯವಾಗಿ ಬೆಂಗಳೂರು ನಗರ ಪೊಲೀಸ್‌‍ ಕಮಿಷನರ್‌, ಗುಪ್ತಚರ ವಿಭಾಗ, ಕಾನೂನು ಮತ್ತು ಸುವ್ಯವಸ್ಥೆ, ಸಿಐಡಿ, ಆಂತರಿಕ ಭದ್ರತಾ ವಿಭಾಗ ಸೇರಿದಂತೆ ಆಯಾಕಟ್ಟಿನ ಹುದ್ದೆಗಳಲ್ಲಿರುವ ಪ್ರಮುಖರನ್ನು ವರ್ಗಾವಣೆ ಮಾಡುವ ಸಾಧ್ಯತೆಯಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಉಂಟಾಗಿದ್ದ ಕಾಲ್ತುಳಿತದ ಪ್ರಕರಣದಲ್ಲಿ ತಲೆದಂಡವಾಗಿದ್ದ ಬಿ.ದಯಾನಂದ ಅವರ ಸ್ಥಾನಕ್ಕೆ ಆಕಸಿಕವಾಗಿ ಮುಂಬಡ್ತಿ ಎನ್ನುವಂತೆ ಬೆಂಗಳೂರು ನಗರ ಆಯುಕ್ತರಾಗಿ ಆಯ್ಕೆಯಾಗಿದ್ದ ಸೀಮಂತ್‌ ಕುಮಾರ್‌ ಸಿಂಗ್‌ ಅವರನ್ನು ವರ್ಗಾವಣೆ ಮಾಡುವ ಸಂಭವವೂ ಇದೆ.

ಒಂದು ವೇಳೆ ಸೀಮಂತ್‌ ಕುಮಾರ್‌ ಸಿಂಗ್‌ ವರ್ಗಾವಣೆಯಾದರೆ ಅವರು ತೆರವಾಗಲಿರುವ ಈ ಸ್ಥಾನಕ್ಕೆ ಹಿರಿಯ ಪೊಲೀಸ್‌‍ ಅಧಿಕಾರಿ ಶರತ್‌ಚಂದ್ರ ಅವರು ನೇಮಕವಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

ಡಿ.ಕೆ.ಶಿವಕುಮಾರ್‌ ಜೊತೆ ಉತ್ತಮ ಸಂಬಂಧ ಇಟ್ಟುಕೊಂಡಿರುವುದು ಹಾಗೂ ಇಲಾಖೆಯಲ್ಲಿ ಯಾವುದೇ ರೀತಿಯ ವಿವಾದವನ್ನೂ ಮಾಡಿಕೊಳ್ಳದಿ ರುವುದು ಶರತ್‌ಚಂದ್ರ ಅವರಿಗೆ ಆಯುಕ್ತರ ಹುದ್ದೆ ಲಭಿಸುವ ಸಾಧ್ಯತೆ ಇದೆ.

ಗೃಹ ಇಲಾಖೆಯಲ್ಲಿ ಅತ್ಯಂತ ಪ್ರಮುಖ ಹುದ್ದೆ ಎನಿಸಿದ ಗುಪ್ತಚರ ವಿಭಾಗದ ಮುಖ್ಯಸ್ಥರನ್ನು ಸಹ ವರ್ಗಾವಣೆ ಮಾಡುವ ಚಿಂತನೆ ಡಿ.ಕೆ.ಶಿವಕುಮಾರ್‌ರವರ ಮುಂದಿದೆ ಎನ್ನಲಾಗುತ್ತಿದೆ.
ಹಾಲಿ ಗುಪ್ತಚರ ವಿಭಾಗದ ಮುಖ್ಯಸ್ಥ ಲಾಬುರಾಮ್‌ ಅವರನ್ನು ವರ್ಗಾವಣೆ ಮಾಡಿ ಈ ಸ್ಥಾನಕ್ಕೆ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಹಿತೇಂದ್ರ ಅವರನ್ನು ನೇಮಕ ಮಾಡಲು ಒಲವು ತೋರಿದ್ದಾರೆ.

ರಾಜ್ಯದ ಪ್ರತಿಯೊಂದು ಮಾಹಿತಿಗಳನ್ನು ಕಲೆ ಹಾಕಿ ಆಯಾ ದಿನದ ಬೆಳವಣಿಗೆಗಳನ್ನು ಮುಖ್ಯಮಂತ್ರಿಗಳಿಗೆ ನೀಡುವ ಹೊಣೆಗಾರಿಗೆ ಗುಪ್ತಚರ ವಿಭಾಗದ ಮುಖ್ಯಸ್ಥರಿಗೆ ಇರುತ್ತದೆ. ಸಾಮಾನ್ಯವಾಗಿ ಮುಖ್ಯಮಂತ್ರಿಗಳ ಜೊತೆ ಯಾರು ನಿಕಟ ಸಂಪರ್ಕ ಹೊಂದಿರುತ್ತಾರೋ ಅಂತವರನ್ನು ಮಾತ್ರ ಈ ಹುದ್ದೆಗೆ ನೇಮಕ ಮಾಡುವುದು ಒಂದು ರೀತಿಯ ಅಲಿಖಿತ ಸಂಪ್ರದಾಯವಾಗಿದೆ.

ಹಾಗೊಂದು ವೇಳೆ ಲಾಬುರಾಮ್‌ ಅವರನ್ನು ವರ್ಗಾವಣೆ ಮಾಡಿದರೆ ಹಿರಿಯ ಐಪಿಎಸ್‌‍ ಅಧಿಕಾರಿ ಹಿತೇಂದ್ರ ಅವರನ್ನು ಗುಪ್ತಚರ ವಿಭಾಗದ ಮುಖ್ಯಸ್ಥರಾಗುವುದು ಖಚಿತ ಎನ್ನಲಾಗುತ್ತಿದೆ.
ಇದೇ ರೀತಿ ಆಂತರಿಕ ಭದ್ರತಾ ವಿಭಾಗ, ಸಿಐಡಿ, ಕೆಎಸ್‌‍ಆರ್‌ಪಿ, ಎಡಿಜಿಪಿ ಸೇರಿದಂತೆ ಹಲವು ವಿಭಾಗಗಳ ಮುಖ್ಯಸ್ಥರನ್ನು ವರ್ಗಾವಣೆ ಮಾಡಲಾಗುತ್ತದೆ ಎಂಬ ಮಾತು ಕೇಳಿಬರುತ್ತಿದೆ.

RELATED ARTICLES

Latest News