ಬೆಂಗಳೂರು,ಜ.15- ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಪ್ರತಿಪಕ್ಷಗಳಿಗೆ ತಕ್ಕ ಪ್ರತ್ಯುತ್ತರ ನೀಡಲು ಮತ್ತು ಕಾಂಗ್ರೆಸ್ ನಾಯಕತ್ವವನ್ನು ಸಮರ್ಥಿಸಿಕೊಳ್ಳಲು ಒಗ್ಗಟ್ಟು ಪ್ರದರ್ಶಿಸುವಂತೆ ಹೈಕಮಾಂಡ್ ರಾಜ್ಯ ನಾಯಕರಿಗೆ ತಾಕೀತು ಮಾಡಿದೆ. ಕಾಂಗ್ರೆಸ್‍ನಲ್ಲಿ ಹಲವು ಬಣಗಳು ತೆರೆಮರೆಯಲ್ಲಿ ಸಕ್ರಿಯವಾಗಿವೆ.
ಹೀಗಾಗಿ ರಾಜಕೀಯ ವಿಚಾರಗಳು ಬಂದಾಗ ಒಂದೊಂದು ಬಣವೂ ಒಂದೊಂದು ರೀತಿಯ ನಿಲುವುಗಳನ್ನು ಪ್ರದರ್ಶಿಸುತ್ತವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಿಪಕ್ಷಗಳು ವಾಗ್ದಾಳಿ ನಡೆಸಿದರೆ ಉಳಿದ ಬಣಗಳ ನಾಯಕರು ತಮಗೂ ಅದಕ್ಕೂ ಸಂಬಂಧವಿಲ್ಲ ಎಂಬಂತೆ ಮೌನಕ್ಕೆ ಶರಣಾಗಿದ್ದಾರೆ.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಟೀಕೆಗಳು ಕೇಳಿಬಂದಾಗ ಸಿದ್ದರಾಮಯ್ಯ ಅವರ ಬಣದ ನಾಯಕರು ಪ್ರತಿರೋಧ ವ್ಯಕ್ತಪಡಿಸುವುದಿಲ್ಲ. ಕೆಲವೊಮ್ಮೆ ಎಐಸಿಸಿ ನಾಯಕರ ಕುರಿತಂತೆಯೂ ಕಟು ಟೀಕೆಗಳು ಕಂಡುಬಂದಾಗ ಅದಕ್ಕೆ ವಿರೋಧ ವ್ಯಕ್ತಪಡಿಸುವ ರಾಜಕೀಯ ಏಕತೆ ಕಾಂಗ್ರೆಸ್‍ನಲ್ಲಿ ಕಂಡುಬರುವುದಿಲ್ಲ. ಇದು ಒಳಪಂಗಡಗಳ ಅಂತರವನ್ನು ಹೆಚ್ಚಿಸುತ್ತಲೇ ಬಂದಿದೆ. ಲೋಕಸಭಾ ಚುನಾವಣೆಯಲ್ಲೂ ಇದೇ ರೀತಿ ಮುಂದುವರೆದರೆ ರಾಜಕೀಯವಾಗಿ ಹಿನ್ನಡೆಯಾಗಬಹುದು ಎಂಬ ಆತಂಕ ಪಕ್ಷದ ನಾಯಕರನ್ನು ಕಾಡುತ್ತಿದೆ. ಹೀಗಾಗಿ ಒಗ್ಗಟ್ಟು ಪ್ರದರ್ಶನ ಮಾಡುವಂತೆ ಹೈ ಕಮಾಂಡ್ ನಾಯಕರು ಸೂಚನೆ ನೀಡಿದ್ದಾರೆ.
ಟರ್ಕಿಯಲ್ಲಿ ಇಸ್ರೇಲ್ ಫುಟ್ಬಾಲ್ ಆಟಗಾರನ ಬಂಧನ
ಇತ್ತೀಚೆಗೆ ಸಂಸದ ಅನಂತಕುಮಾರ್ ಹೆಗಡೆ ಅವರು ಸಿದ್ದರಾಮಯ್ಯ ಅವರ ಬಗ್ಗೆ ಏಕವಚನ ಹಾಗೂ ಅವಹೇಳನಕಾರಿಯಾಗಿ ಟೀಕೆ ಮಾಡಿದ್ದರು. ಇದಕ್ಕೆ ಕಾಂಗ್ರೆಸ್‍ನ ಬಹಳಷ್ಟು ಸಚಿವರು ಮೃದು ಧೋರಣೆಯಲ್ಲೇ ಪ್ರತಿಕ್ರಿಯಿಸಿ ಜಾರಿಕೊಂಡಿದ್ದಾರೆ. ಶಿವರಾಜ್ ತಂಗಡಗಿ ಮಾತ್ರ ಕಟು ಶಬ್ಧಗಳಲ್ಲಿ ಪ್ರತಿಕ್ರಿಯಿಸಿದ್ದಾರೆ. ಶಾಸಕರ ಪೈಕಿ ಪ್ರದೀಪ್ ಈಶ್ವರ್‍ರನ್ನು ಹೊರತುಪಡಿಸಿದರೆ ಉಳಿದವರ್ಯಾರೂ ಸಿದ್ದರಾಮಯ್ಯ ಪರವಾಗಿ ಧ್ವನಿಯೆತ್ತಿದ್ದು ಕಂಡುಬಂದಿಲ್ಲ. ಹೀಗಾಗಿ ಹೈಕಮಾಂಡ್ ನೇರ ಎಚ್ಚರಿಕೆ ಸಂದೇಶ ರವಾನಿಸಿದ್ದು, ಬಿಜೆಪಿಯ ಟೀಕೆಗಳು, ಆರೋಪಗಳಿಗೆ ಪ್ರತಿಕ್ರಿಯಿಸುವಾಗ ಕಾಂಗ್ರೆಸ್‍ನ ಒಳಜಗಳವನ್ನು ಬದಿಗಿರಿಸುವಂತೆ ಸೂಚನೆ ನೀಡಿದೆ.
ಚುನಾವಣೆ ಸಂದರ್ಭದಲ್ಲೂ ಜನರಲ್ಲಿ ಕಂಡುಬರುವ ಗೊಂದಲಗಳನ್ನು ನಿವಾರಿಸುವುದು ಬಹಳ ಮುಖ್ಯ. ಈ ನಿಟ್ಟಿನಲ್ಲಿ ಬಿಜೆಪಿ ಸೃಷ್ಟಿಸುವ ಸುಳ್ಳುಗಳಿಗೆ ತಕ್ಷಣ ಪ್ರತಿಕ್ರಿಯಿಸಬೇಕು. ಅದರಲ್ಲೂ ಅಪಪ್ರಚಾರಗಳನ್ನು ವ್ಯಾಪಕಗೊಳ್ಳಲು ಬಿಡಬಾರದು ಎಂದು ಹೈಕಮಾಂಡ್ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ.