Saturday, April 27, 2024
Homeಬೆಂಗಳೂರುಪ್ರತ್ಯೇಕ ಅಪಘಾತ : ಬೆಂಗಳೂರಿನಲ್ಲಿ ಟೆಕ್ಕಿ ಸೇರಿ ನಾಲ್ವರು ಸಾವು

ಪ್ರತ್ಯೇಕ ಅಪಘಾತ : ಬೆಂಗಳೂರಿನಲ್ಲಿ ಟೆಕ್ಕಿ ಸೇರಿ ನಾಲ್ವರು ಸಾವು

ಟೀ ಕುಡಿಯಲು ಹೋಗುತ್ತಿದ್ದ ಯುವಕನಿಗೆ ಬೈಕ್ ಡಿಕ್ಕಿ:ಸ್ಥಳದಲ್ಲೇ ಸಾವು
ಬೆಂಗಳೂರು, ಜ.15- ಟೀ ಕುಡಿಯಲು ಸ್ನೇಹಿತರೊಂದಿಗೆ ನಡೆದುಕೊಂಡು ಹೋಗುತ್ತಿದ್ದ ಯುವಕನಿಗೆ ಹಿಂದಿನಿಂದ ಬಂದ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ದೇವನಹಳ್ಳಿ ಸಂಚಾರಿ ಠಾಣೆ ಪೊಲೀಸ್ ಠಾಣೆ ವ್ಯಾಪ್ತಿಯ ಬೆಂಗಳೂರು- ಬಳ್ಳಾರಿ ಮುಖ್ಯರಸ್ತೆಯ ಸಣ್ಣ ಅಮ್ಮಾನಿಕೆರೆ ಬಳಿ ರಾತ್ರಿ ನಡೆದಿದೆ. ಕಟ್ಟಡ ನಿರ್ಮಾಣ ಕಾರ್ಮಿಕ ನಾಗೇಶ್ (20) ಮೃತ ದುರ್ದೈವಿ.

ಇವರು ಮೂಲತಃ ಮಹಾರಾಷ್ಟ್ರದ ನಾಂದೇಡ್ ತಾಲ್ಲೂಕಿನವರು. ಪ್ರಸ್ತುತ ಅವರು ಉಪ್ಪಾರಹಳ್ಳಿ ಗ್ರಾಮದ ಥೀಮ್ ಅಂಬಿಯೆನ್ಸ್ ಪ್ರಾಜೆಕ್ಟ್ ಪ್ರೈವೆಟ್ ಲಿಮಿಟೆಡ್‍ನ ನಿರ್ಮಾಣ ಕಟ್ಟಡ ಬಳಿ ವಾಸವಾಗಿದ್ದರು. ಕಳೆದ ರಾತ್ರಿ 9.15ರ ಸಂದರ್ಭದಲ್ಲಿ ಇಬ್ಬರು ಸ್ನೇಹಿತರೊಂದಿಗೆ ಕಂಪನಿ ಪಕ್ಕದಲ್ಲಿರುವ ಅಂಗಡಿಗೆ ನಾಗೇಶ್ ಟೀ ಕುಡಿಯಲು ಹೋಗುತ್ತಿದ್ದನು. ಸಣ್ಣ ಅಮ್ಮಾನಿಕೆರೆ ರಸ್ತೆಯ ಬದಿಯಲ್ಲಿ ಹೋಗುವಾಗ ಬೆಂಗಳೂನಿಂದ ದೇವನಹಳ್ಳಿ ಕಡೆಗೆ ಅತಿ ವೇಗ ಮತ್ತು ಅಜಾಗರೂಕತೆಯಿಂದ ಬಂದ ದ್ವಿಚಕ್ರ ವಾಹನವೊಂದು ಅವರಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ.

ಪರಿಣಾಮ ರಸ್ತೆಗೆ ಕುಸಿದು ಬಿದ್ದ ಅವರ ಕೈಕಾಲುಗಳಿಗೆ ಗಾಯವಾಗಿದ್ದು, ನಂತರ ಸ್ನೇಹಿತರು ಆ್ಯಂಬುಲೆನ್ಸ್‍ಗೆ ಕರೆ ಮಾಡಿ ಅದು ಬರುವಷ್ಟರಲ್ಲಿ ನಾಗೇಶ್ ಕೊನೆಯುಸಿರೆಳೆದಿದ್ದಾನೆ. ಅಪಘಾತವೆಸಗಿ ಪರಾರಿಯಾಗಿರುವ ದ್ವಿಚಕ್ರ ವಾಹನ ಸವಾರನ ಪತ್ತೆಗೆ ದೇವನಹಳ್ಳಿ ಸಂಚಾರಿ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ. ಈ ಬಗ್ಗೆ ಬಾಲಾಜಿ ಎಂಬುವವರು ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ದೇವನಹಳ್ಳಿ ಸಂಚಾರಿ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ನಿಯಂತ್ರಣ ತಪ್ಪಿದ ಬೈಕ್ ಯುವಕ ಸಾವು
ಬೆಂಗಳೂರು, ಜ.15- ಸ್ನೇಹಿತರ ಜೊತೆ ಪಾರ್ಟಿ ಮುಗಿಸಿ ಬೈಕ್‍ನಲ್ಲಿ ಮನೆಗೆ ಹೋಗುತ್ತಿದ್ದಾಗ ನಿಯಂತ್ರಣ ತಪ್ಪಿ ಉರುಳಿ ಬಿದ್ದ ಪರಿಣಾಮ ಖಾಸಗಿ ಕಂಪನಿಯ ಉದ್ಯೋಗಿ ಮೃತಪಟ್ಟಿರುವ ಘಟನೆ ಇಂದು ಮುಂಜಾನೆ ಹುಳಿಮಾವು ಸಂಚಾರಿ ಪೊಲೀಸ್ ವ್ಯಾಪ್ತಿಯಲ್ಲಿ ನಡೆದಿದೆ. ಮೂಲತಃ ಅಸ್ಸಾಂನ ಉಮಾಂಗ್‍ಬೋರಾ (22) ಮೃತಪಟ್ಟ ದುರ್ದೈವಿ. ಇವರು ಖಾಸಗಿ ಕಂಪನಿ ಉದ್ಯೋಗಿಯಾಗಿದ್ದು, ಬೆಳ್ಳಂದೂರಿನಲ್ಲಿ ವಾಸವಾಗಿದ್ದರು.

ನಿನ್ನೆ ರಾತ್ರಿ ಸ್ನೇಹಿತರ ಜೊತೆ ಪಾರ್ಟಿ ಮಾಡಿ ಇಂದು ಮುಂಜಾನೆ 1.30ರ ಸಮಯದಲ್ಲಿ ಮನೆಗೆ ಬೇಗೂರು- ಎಲೆಕ್ಟ್ರಾನಿಕ್ ಸಿಟಿ ರಸ್ತೆಯ ಕ್ಲಾಸಿಕ್ ಅಪಾರ್ಟ್‍ಮೆಂಟ್ ಮುಂಭಾಗ ಬರುತ್ತಿದ್ದಾಗ ಬೈಕ್ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದೆ. ತೀವ್ರ ಗಾಯಗೊಂಡ ಅವರು ಆಸ್ಪತ್ರೆಯ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆಂದು ಪೊಲೀಸರು ಈ ಸಂಜೆಗೆ ತಿಳಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಹುಳಿಮಾವು ಸಂಚಾರಿ ಠಾಣೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಸ್ವಯಂ ಅಪಘಾತಕ್ಕೆ ಟೆಕ್ಕಿ ಬಲಿ..
ಬೆಂಗಳೂರು,ಜ.15- ಅತಿ ವೇಗವಾಗಿ ಕಾರು ಚಾಲನೆ ಮಾಡಿಕೊಂಡು ಬರುತ್ತಿದ್ದ ಸಾಫ್ಟ್‍ವೇರ್ ಎಂಜಿನಿಯರ್ ಒಬ್ಬರು ಸ್ವಯಂ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಬಾಣಸವಾಡಿ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ಮುಂಜಾನೆ ನಡೆದಿದೆ. ಅಪಘಾತದಲ್ಲಿ ಮೃತಪಟ್ಟಿರುವ ಸಾಫ್ಟ್‍ವೇರ್ ಎಂಜಿನಿಯರ್‍ನನ್ನು ಮೇಲ್ವಿನ್ ಜೋಸ್ವಾ(25) ಎಂದು ಗುರುತಿಸಲಾಗಿದೆ. ಹೊರಮಾವಿನ ಅಗರ ನಿವಾಸಿಯಾಗಿದ್ದ ಜೋಸ್ವಾ ಅವರು ನಿನ್ನೆ ಹೆಣ್ಣೂರಿನಲ್ಲಿ ನಡೆಯುತ್ತಿದ್ದ ನಿಶ್ಚಿತಾರ್ಥ ಮುಗಿಸಿಕೊಂಡು ತನ್ನ ಸ್ನೇಹಿತೆ ಜತೆ ಕಾರಿನಲ್ಲಿ ಮನೆಗೆ ವಾಪಸ್ಸಾಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ.

ಬೆಳಗಿನ ಜಾವ ಎರಡು ಗಂಟೆ ಸುಮಾರಿಗೆ ಜೋಸ್ವಾ ಅವರು ಕಾರನ್ನು ಅತಿ ವೇಗವಾಗಿ ಚಲಾಯಿಸಿಕೊಂಡು ಬರುತ್ತಿದ್ದರು. ಕಾರು ಸಿಎಂಆರ್ ಮುಖ್ಯರಸ್ತೆಯ ಜೋಡಿಯಾಕ್ ಬಿಲ್ಡಿಂಗ್ ಎದುರು ಬರುತ್ತಿದ್ದಂತೆ ನಿಯಂತ್ರಣ ಕಳೆದುಕೊಂಡು ಮೊದಲು ರಸ್ತೆ ಬದಿ ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆಯಿತು ನಂತರ ಮರಕ್ಕೆ ಹಾಗೂ ಕೊನೆಗೆ ಮನೆಯೊಂದರ ಗೇಟಿಗೆ ಅಪ್ಪಳಿಸಿತು.

ಫೆಬ್ರವರಿ ತಿಂಗಳಿನಲ್ಲೇ ಬಜೆಟ್ ಮಂಡನೆ : CM ಸಿದ್ದರಾಮಯ್ಯ

ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಜೋಸ್ವಾ ಅವರು ಕಾರಿನಲ್ಲಿದ್ದ ಆತನ ಸ್ನೇಹಿತೆ ಸ್ಥಳೀಯರ ಸಹಕಾರದೊಂದಿಗೆ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಇಂದು ಬೆಳಗಿನ ಜಾವ 4 ಗಂಟೆಗೆ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಬಾಣಸವಾಡಿ ಸಂಚಾರಿ ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.

ಬೈಕ್‍ಗೆ ಆಟೋ ಡಿಕ್ಕಿ ತಂದೆ ಸಾವು, ಮಕ್ಕಳು ಪಾರು
ಬೆಂಗಳೂರು, ಜ.15- ಮಕ್ಕಳನ್ನು ಬೈಕ್‍ನಲ್ಲಿ ಹೋಟೆಲ್‍ಗೆ ಕರೆದೊಯ್ಯುತ್ತಿದ್ದಾಗ ಆಟೋ ರಿಕ್ಷಾ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಪೀಣ್ಯ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯ ಹೆಗ್ಗನಹಳ್ಳಿ ಕ್ರಾಸ್ ಬಳಿಯ ಪುಡ್‍ಲ್ಯಾಂಡ್ ಹೈಪರ್ ಮಾರ್ಕೆಟ್ ಬಳಿ ನಡೆದಿದೆ.

ಮಾರುತಿ ನಗರ ಮಹಾದೇಶ್ವರ ನಗರ ಮುಖ್ಯರಸ್ತೆಯ ನಿವಾಸಿ ಚಂದ್ರಶೇಖರ್ (48) ಮೃತ ಪಟ್ಟ ದುರ್ದೈವಿ.
ಚಂದ್ರಶೇಖರ್ ಅವರು ಬೈಕ್‍ನಲ್ಲಿ ತಮ್ಮ ಮಕ್ಕಳಾದ ಲೋಹಿತ್ ಮತ್ತು ಗ್ರೀಷ್ಮಾ ಅವರನ್ನು ನಿನ್ನೆ ಮಧ್ಯಾಹ್ನ 3 ಗಂಟೆ ಸುಮಾರಿನಲ್ಲಿ ಹೊಟೆಲ್‍ನಲ್ಲಿ ತಿಂಡಿ ಕೊಡಿಸಿಕೊಂಡು ಪೀಣ್ಯಾ 2ನೇ ಹಂತದ ಬಸ್‍ಸ್ಟಾಪ್ ಕಡೆಯಿಂದ ಹೆಗ್ಗಣಹಳ್ಳಿ ಕ್ರಾಸ್ ಕಡೆಗೆ ಬರುವಾಗ ಆಟೋ ರಿಕ್ಷಾವೊಂದು ಅತಿ ವೇಗ ಅಜಾರೂಕರತೆಯಿಂದ ನುಗ್ಗಿ ಬಂದು ಹಿಂದಿನಿಂದ ಇವರಿಗೆ ಡಿಕ್ಕಿ ಹೊಡೆದಿದೆ.

ರಭಸಕ್ಕೆ ರಸ್ತೆಗೆ ಉರುಳಿ ಬಿದ್ದ ಪರಿಣಾಮ ಚಂದ್ರಶೇಖರ್ ಅವರ ತಲೆಗೆ ತೀವ್ರ ಪೆಟ್ಟು ಬಿದ್ದು, ರಕ್ತ ಸ್ರಾವ ಆಗಿದೆ. ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆದಲ್ಲಿ ಚಂದ್ರಶೇಖರ್ ಕೊನೆಯುಸಿರೆಳೆದಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಸುದ್ದಿ ತಿಳಿದ ಪೀಣ್ಯಾ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಅಪಘಾತವೆಸಗಿದ ಆಟೋ ಹಾಗೂ ಚಾಲಕನ ಬಂಧನಕ್ಕೆ ಬಲೆ ಬೀಸಿದ್ದಾರೆ.

RELATED ARTICLES

Latest News