ಶಿರಸಿ,ಜ.16- ಅವರಿವರನ್ನು ಛೂ ಬಿಟ್ಟು ನನ್ನ ವಿರುದ್ಧ ಮಾತನಾಡಿಸುವ ಬದಲು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಧೈರ್ಯವಿದ್ದರೆ ನನ್ನ ಎದುರಿಗೆ ಬಂದು ಚರ್ಚೆ ಮಾಡಲಿ ಎಂದು ಉತ್ತರಕನ್ನಡ ಸಂಸದ ಅನಂತಕುಮಾರ್ ಹೆಗಡೆ ಬಹಿರಂಗ ಸವಾಲು ಹಾಕಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ತಮ್ಮ ಹಿಂಬಾಲಕರನ್ನು ಛೂ ಬಿಟ್ಟು ನನ್ನ ವಿರುದ್ಧ ಮಾತನಾಡಿಸುವುದು ಬೇಡ. ಅವರ ಹಿಂಬಾಲಕರು ಮಾತನಾಡಿದರೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಚರ್ಚೆ ಮಾಡುವ ಧೈರ್ಯ ಇದ್ದರೆ ನನ್ನ ಎದುರಿಗೆ ಬನ್ನಿ ಎಂದು ಸವಾಲು ಎಸೆದರು.
ನೀವು ಯಾರಿಗೆ ಏನು ಬೇಕಾದರೂ ಮಾತನಾಡಬಹುದು. ನಾವು ನಿಮ್ಮ ಬಗ್ಗೆ ಮಾತನಾಡಿದರೆ ಅದಕ್ಕೆ ವಿವಾದ ಬೆಂಕಿ ಹಚ್ಚುತ್ತೀರಿ. ಇವರು ಯಾರ್ಯಾರ ಬಗ್ಗೆ ಕೀಳುಮಟ್ಟದ ಪದಪ್ರಯೋಗ ಮಾಡಿದ್ದಾರೆ ಎಂಬುದು ನನಗೆ ಗೊತ್ತು. ಬನ್ನಿ ಜನರ ಮುಂದೆಯೇ ಚರ್ಚೆ ಮಾಡೋಣ ಎಂದು ಪಂಥ ಆಹ್ವಾನ ನೀಡಿದರು. ತಮ್ಮ ಹೇಳಿಕೆಯನ್ನು ಮತ್ತೆ ಸಮರ್ಥಿಸಿಕೊಂಡ ಹೆಗಡೆ, ನಾನು ಏನು ಹೇಳಿದ್ದೇನೊ ಅದಕ್ಕೆ ಬದ್ದನಾಗಿದ್ದೇನೆ. ಯಾವುದೇ ಕಾರಣಕ್ಕೂ ಹೇಳಿಕೆಯನ್ನು ಹಿಂಪಡೆಯುವ ಪ್ರಶ್ನೆಯೇ ಇಲ್ಲ. ಅಷ್ಟಕ್ಕೂ ನಾನು ಹೇಳುವುದರಲ್ಲಿ ತಪ್ಪೇನಿದೆ ಎಂದು ಅವರು ಮಾಧ್ಯಮದವರಿಗೆ ಮರುಪ್ರಶ್ನೆ ಹಾಕಿದರು.
ಮಗನ ಕೈಯಲ್ಲಿ ಮೂಡಿಬಂದ ರಾಮ ಲಲ್ಲಾ ವಿಗ್ರಹ, ತಾಯಿ ಸಂತಸ
ಮುಖ್ಯಮಂತ್ರಿ ಸಿದ್ದರಾಮಯ್ಯ ಕಳೆದ ಚುನಾವಣೆಯಲ್ಲಿ ಪ್ರಧಾನಿ ಮೋದಿಯವರಿಗೆ ಏಕವಚನದಲ್ಲಿ ಮಾಸ್ ಮರ್ಡರ್ ಎಂದು ಕರೆದರು. ಅವರಿಗೊಂದು ನ್ಯಾಯ ನಮಗೊಂದು ನ್ಯಾಯನಾ..? ಅದೆಲ್ಲ ನಮಗೆ ಗೊತ್ತಿಲ್ಲ ಯಾರಿಗೆ ಹೇಗೆ ಮಾತಾಡಬೇಕು ನಮಗೆ ಗೊತ್ತು. ಇದರ ಎಲ್ಲದರ ಬಗ್ಗೆ ಜನರ ಮುಂದೆ ಚರ್ಚೆ ಮಾಡೋಣ. ಎಲ್ಲೊ ಕೂತುಕೊಂಡು ಸಭೆಯಲ್ಲಿ ಮಾತನಾಡುವುದು ಸರಿ ಅಲ್ಲ ಎಂದರು.
ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ತಾವು ಏಕವಚನ ಪ್ರಯೋಗ ಮಾಡಿದ ವಿಚಾರವಾಗಿ ಮಾತನಾಡಿದ ಅವರು, ನನ್ನ ಹೇಳಿಕೆಯನ್ನು ಖಂಡಿಸುವುದು ಸಹಜ. ಇದು ಪಕ್ಷದ ಹೇಳಿಕೆಯಲ್ಲ. ಇದು ನನ್ನ ವೈಯಕ್ತಿಕ ಹೇಳಿಕೆ. ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿರುವ ಮಾತು ಸರಿ ಇದೆ ಎಂದು ಸ್ಪಷ್ಟಪಡಿಸಿದರು.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಪ್ರಧಾನಿ ಮೋದಿಯವರ ಮತ್ತು ನಮ್ಮ ದೇವಸ್ಥಾನಗಳ ಬಗ್ಗೆ ಸಿಎಂ ಸಿದ್ದರಾಮಯ್ಯ ಅಸಭ್ಯವಾಗಿ ಮೊದಲು ಮಾತನಾಡಿದ್ದಾರೆ. ನಮ್ಮ ದೇವಸ್ಥಾನದ ಬಗ್ಗೆ ಅಷ್ಟು ಕೀಳಾಗಿ ಮಾತನಾಡುವುದು ಯಾಕೆ ಬೇಕಿತ್ತು? ನಮ್ಮ ಪ್ರಧಾನಿ ಮೋದಿ, ಅಮಿತ ಶಾ ಬಗ್ಗೆ ಯಾರೆಲ್ಲ ಏನು ಏನು ಮಾತನಾಡಿದ್ದಾರೆ ಹೇಳಬೇಕಾ? ಎಂದು ಪ್ರಶ್ನಿಸಿದರು.
ಸಲ್ಮಾನ ಖುರ್ಷದ ಕಪ್ಪೆ, ಮಂಗ, ನಪಸುಂಕ ಎಂದು ಕರೆದರು. ಶರದ್ ಪವಾರ ಮೋದಿಯರನ್ನು ಹಿಟ್ಲರ್ ಎಂದರು. ದಿಗ್ವಿಜಯ ಸಿಂಗ್ ಮೋದಿಯವರನ್ನು ರಾವಣ ಎಂದರೆ, ಜಯರಾಂ ರಮೇಶ್ ಭಸ್ಮಾಸೂರ ಎಂದಿದ್ದರು. ಮಣಿ ಅಯ್ಯರ್ ವಿಷಸರ್ಪ ಎಂದು ಕರೆದರು. ಇದಕ್ಕೆಲ್ಲ ಮಾಧ್ಯಮದ ದಾಖಲೆಗಳು ಇವೆ. ನನ್ನ ಪ್ರಧಾನಿ, ನನ್ನ ದೇಶ ಮತ್ತು ನನ್ನ ಧರ್ಮದ ಬಗ್ಗೆ ಹೇಳಿಕೆ ನೀಡುವಾಗ ಇವರಿಗೆ ಸಭ್ಯತೆ ನೆನಪಾಗುವುದಿಲ್ಲ. ಕಾಂಗ್ರೆಸ್‍ನವರಿಗೆ, ಸಿದ್ಧರಾಮಯ್ಯ ಅವರಿಗೆ ಇಲ್ಲದ ಸಭ್ಯತೆ ಬಿಜೆಪಿಯವರಿಗೆ ಏಕೆ? ಎಂದು ಪ್ರಶ್ನಿಸಿದರು.
ಮಂತ್ರಾಕ್ಷತೆಯಿಂದ ಹಸಿದ ಹೊಟ್ಟೆ ತುಂಬುವುದಿಲ್ಲ : ಸಚಿವ ಶಿವರಾಜ ತಂಗಡಗಿ
ರಾಮ ಮಂದಿರ ಬಗ್ಗೆ ಎಷ್ಟ ಅವಹೇಳನಕಾರಿಯಾಗಿ ಮಾತಾಡಿದರು. ಹಿಂದೂ ಸಮಾಜದ ಬಗ್ಗೆ ಎಷ್ಟು ಕೀಳಾಗಿ ಮಾತನಾಡಿದರು. ಹಿಂದೂ ಸಮಾಜ ಅಂದರೇ ಬೇವರ್ಸಿ ಸಮಾಜಾನಾ..? ಶೇ.20ರಷ್ಟು ಇರುವ ಜನರ ಮತಕ್ಕಾಗಿ ಎಷ್ಟೊಂದು ಜ್ವಲ್ಲೂ ಸುರಿಸಿ ಮಾತನಾಡುತ್ತಾರೆ. ಶೇ.80 ರಿಂದ 85ರಷ್ಟು ಇರುವ ಹಿಂದೂ ಸಮಾಜದ ಬಗ್ಗೆ ನಿಮಗೆ ಗೌರವ ಯಾಕಿಲ್ಲ? ಏಕವಚನದಲ್ಲಿ ನೀವೂ ಮಾತನಾಡಿದ್ದೂ ಸರಿ ಅನ್ನುವುದಾರೇ, ನಾನು ಮಾತನಾಡಿದ್ದೂ ಕೂಡ ಸರಿ. ಯಾರು ಒಪ್ಪಿಕೊಳ್ಳುತ್ತಾರೆ, ಬಿಡುತ್ತಾರೆ ಗೊತ್ತಿಲ್ಲ. ಆ ದೇವರು ಒಪ್ಪಿಕೊಳ್ಳುತ್ತಾನೆ. ಹಿಂದೂ ಸಮಾಜದ ಜನರು ಒಪ್ಪಿಕೊಳ್ಳುತ್ತಾರೆ ಎಂದರು.
ಆರೋಗ್ಯ ಸರಿ ನೋಡಿಕೊಳ್ಳಿ ಎಂಬ ಡಿಕೆ ಶಿವಕುಮಾರ ಹೇಳಿಕೆ ವಿಚಾರವಾಗಿ ಮಾತನಾಡಿದ ಅನಂತ್‍ಕುಮಾರ್, ನನ್ನ ಆರೋಗ್ಯ ಅತ್ಯಂತ ಚೆನ್ನಾಗಿದೆ. ಆರೋಗ್ಯದಲ್ಲಿ ಯಾವುದೇಸಂಶಯ ಇಲ್ಲ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುತ್ತದೆ. ಗೆಲ್ಲಿಸುತ್ತೇನೆ. ನನ್ನ ಟಿಕೆಟ್ ಬಗ್ಗೆ ಬೇರೆಯವರಿಗೆ ಯಾಕೆ ಚಿಂತೆ ಎಂದು ತಿರುಗೇಟು ನೀಡಿದರು.