Saturday, April 27, 2024
Homeರಾಜ್ಯಡಿಕೆಶಿಗೆ ಸಿಎಂ ಹುದ್ದೆ ಚರ್ಚೆ ಮತ್ತೆ ಮುನ್ನೆಲೆಗೆ

ಡಿಕೆಶಿಗೆ ಸಿಎಂ ಹುದ್ದೆ ಚರ್ಚೆ ಮತ್ತೆ ಮುನ್ನೆಲೆಗೆ

ಬೆಂಗಳೂರು,ಜ.16- ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡಬೇಕು ಎಂಬ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಇತ್ತೀಚಿನ ದಿನಗಳಲ್ಲಿ ಈ ಕುರಿತು ಒಂದಿಷ್ಟು ಸದ್ದು ತಣ್ಣಗಾಗಿತ್ತು. ಮಾಗಡಿ ಕ್ಷೇತ್ರದ ಶಾಸಕ ಎಚ್.ಸಿ.ಬಾಲಕೃಷ್ಣ ಧ್ವನಿಯೆತ್ತಿದ್ದು, ತಮ್ಮ ಸಮುದಾಯಕ್ಕೆ ನಾಯಕರ ಶ್ರಮ ಗುರುತಿಸಿ ಮುಖ್ಯಮಂತ್ರಿ ಹುದ್ದೆ ನೀಡಬೇಕು ಎಂದು ಪ್ರತಿಪಾದಿಸಿದ್ದಾರೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 136 ಸ್ಥಾನ ಗಳಿಸಿ ಗೆದ್ದಿದೆಯೆಂದರೆ ಅದರ ಹಿಂದೆ ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ. ಶಿವಕುಮಾರ್ ಅವರ ಶ್ರಮ ಇದೆ. ಮುಖ್ಯಮಂತ್ರಿ ಯಾಗುವ ಅರ್ಹತೆ ಮತ್ತು ಯೋಗ್ಯತೆ ಎರಡೂ ಡಿ.ಕೆ.ಶಿವಕುಮಾರ್‍ರಿಗಿದೆ ಎಂದು ಹೇಳಿದ್ದಾರೆ. ಒಕ್ಕಲಿಗ ಸಮುದಾಯಕ್ಕೆ ಮುಖ್ಯಮಂತ್ರಿ ಹುದ್ದೆ ಸಿಗಬೇಕು ಎಂಬುದು ಎಲ್ಲರ ಆಗ್ರಹ. ನಾವೇನು ಈಗಲೇ ಕೊಡಿ ಎಂದು ಕೇಳುತ್ತಿಲ್ಲ, ಅವಕಾಶ ಬಂದಾಗ ಅಧಿಕಾರ ನೀಡಬೇಕು ಎಂದು ಪ್ರತಿಪಾದಿಸಿದರು.

ಈ ಅವಧಿಯಲ್ಲೇ ಕೊಡಿ ಎಂದು ಕೇಳುವ ಅಥವಾ ಮಾತನಾಡುವಷ್ಟು ಪ್ರಭಾವಿ ವ್ಯಕ್ತಿ ನಾನಲ್ಲ. ಆದರೆ ಪಕ್ಷಕ್ಕಾಗಿ ದುಡಿದವರ ಶ್ರಮವನ್ನು ಗುರುತಿಸಬೇಕು. ಹೈಕಮಾಂಡ್ ಈ ನಿಟ್ಟಿನಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ. ನನ್ನ ವೈಯಕ್ತಿಕ ಅಭಿಪ್ರಾಯ ಸಮುದಾಯದವರಿಗೆ ಮುಖ್ಯಮಂತ್ರಿ ಅವಕಾಶ ಸಿಗಬೇಕು ಎಂಬುದಾಗಿದೆ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‍ರವರು ಇಬ್ಬರೂ ಒಟ್ಟಾಗಿ ಶ್ರಮಿಸಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ. ಅದನ್ನು ಪಕ್ಷ ಪರಿಗಣಿಸಲಿದೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.

ಕಳೆದ ಮೂರು ತಿಂಗಳ ಹಿಂದೆ ಮುಖ್ಯಮಂತ್ರಿ ಹುದ್ದೆಯ ಕುರಿತು ವ್ಯಾಪಕ ಚರ್ಚೆಗಳಾಗಿದ್ದವು. ಡಿ.ಕೆ.ಶಿವಕುಮಾರ್‍ರವರ ಬೆಂಬಲಿಗರು ಲೋಕಸಭೆ ಚುನಾವಣೆ ಬಳಿಕ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗುತ್ತಾರೆ ಎಂದು ಪ್ರತಿಪಾದಿಸಿದ್ದರು.

ಮಗನ ಕೈಯಲ್ಲಿ ಮೂಡಿಬಂದ ರಾಮ ಲಲ್ಲಾ ವಿಗ್ರಹ, ತಾಯಿ ಸಂತಸ

ಉಪಮುಖ್ಯಮಂತ್ರಿ ಹುದ್ದೆಗೆ ಕೆಲವರು ಬೇಡಿಕೆ ಸಲ್ಲಿಸುತ್ತಿದ್ದಾರೆ. ಅದಕ್ಕೆ ನಮ್ಮ ಆಕ್ಷೇಪವಿಲ್ಲ. ಆದರೆ ಉಪಮುಖ್ಯಮಂತ್ರಿಗಳಾಗುವವರು 2 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲುವ ಗುರಿಯನ್ನು ತೆಗೆದುಕೊಳ್ಳಬೇಕು. 5 ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಯಾಗಬೇಕು ಎಂದು ಹೇಳುತ್ತಿದ್ದಾರೆ. ಅಷ್ಟೂ ಜನ ತಲಾ 2 ಕ್ಷೇತ್ರಗಳನ್ನು ನಿಗದಿ ಮಾಡಿಕೊಂಡು ಗೆಲ್ಲಿಸಿಕೊಂಡು ಬರಲಿ. ಆನಂತರ ಉಪಮುಖ್ಯಮಂತ್ರಿ ಹುದ್ದೆ ಪಡೆದುಕೊಳ್ಳಲಿ. ಇಲ್ಲವಾದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧರಿದ್ದಾರೆಯೇ ಎಂದು ಸವಾಲು ಹಾಕಿದರು.

ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಯಾಗಬೇಕೆ ಎಂಬುದರ ಬಗ್ಗೆ ಪರಸ್ಪರ ಕಾಲೆಳೆಯುವ ರಾಜಕಾರಣ ಇದೆ ಎಂದು ನಾನು ಭಾವಿಸುವುದಿಲ್ಲ. ರಾಜಕೀಯದಲ್ಲಿ ಅವಕಾಶ ಕೇಳುವುದು ಸಹಜ. ಆದರೆ ಅದಕ್ಕೆ ತಕ್ಕಂತೆ ಪಕ್ಷಕ್ಕೂ ಕೊಡುಗೆ ನೀಡಬೇಕು. ಲೋಕಸಭೆ ಚುನಾವಣೆಯನ್ನು ಸವಾಲಾಗಿ ತೆಗೆದುಕೊಳ್ಳಬೇಕೆಂದು ಹೇಳಿದರು. ಇದರ ಚರ್ಚೆಯ ನಡುವೆಯೇ ಸಿದ್ದರಾಮಯ್ಯ ಬೆಂಬಲಿಗರು ಜಾತಿ ಆಧಾರಿತವಾಗಿ ಮೂರು ಉಪಮುಖ್ಯಮಂತ್ರಿ ಹುದ್ದೆಗಳನ್ನು ಸೃಷ್ಟಿಸಬೇಕು ಎಂದು ಧ್ವನಿಯೆತ್ತಿದರು. ಇದು ವ್ಯಾಪಕ ಚರ್ಚೆಗೊಳಗಾಯಿತು.

ಇತ್ತೀಚಿನ ದಿನದವರೆಗೂ ಈ ರೀತಿಯ ಚರ್ಚೆಗಳು ಚಾಲ್ತಿಯಲ್ಲಿದ್ದವು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಈ ರೀತಿಯ ಚರ್ಚೆಗಳು ಅನಗತ್ಯ. ಉತ್ತಮ ಆಡಳಿತ ನೀಡುವುದು ಮತ್ತು ಲೋಕಸಭೆ ಚುನಾವಣೆಯತ್ತ ಗಮನ ಹರಿಸಬೇಕು ಎಂದು ತಾಕೀತು ಮಾಡಿದರು. ಆ ಬಳಿಕ ಉಪಮುಖ್ಯಮಂತ್ರಿ ಹುದ್ದೆ ಕುರಿತು ಚರ್ಚೆಗಳು ತಣ್ಣಗಾಗಿದ್ದವು. ಅದರ ಬೆನ್ನಲ್ಲೇ ಎಚ್.ಸಿ.ಬಾಲಕೃಷ್ಣ ಮತ್ತೆ ಮುಖ್ಯಮಂತ್ರಿ ಹುದ್ದೆಯ ಚರ್ಚೆಯನ್ನು ಹರಿಯಬಿಟ್ಟಿದ್ದಾರೆ.

RELATED ARTICLES

Latest News