ನ್ಯೂಯಾರ್ಕ್, ಸೆ.24- ಭಾರತ ಮತ್ತು ಕೆನಡಾ ನಡುವೆ ಉಂಟಾಗಿರುವ ರಾಜತಾಂತ್ರಿಕ ಬಿಕ್ಕಟ್ಟಿನಿಂದ ಸುರಕ್ಷಿತ ಅಂತರ ಕಾಪಾಡಿಕೊಳ್ಳಲು ಅಮೆರಿಕ ಮುಂದಾಗಿದೆ.ಕೆನಡಾದ ಪ್ರಜೆ ಎಂದು ಹೇಳಲಾಗುತ್ತಿರುವ ಖಲಿಸ್ತಾನ ಟೈಗರ್ ಫೋರ್ಸ್ ನ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ನಂತರ ಉಭಯ ರಾಷ್ಟ್ರಗಳ ನಡುವೆ ಸಂಬಂಧ ವಿಕೋಪಕ್ಕೆ ತಿರುಗಿದೆ.
ಈ ಸಂದರ್ಭದಲ್ಲಿ ದೊಡ್ಡಣ್ಣನ ಪಾತ್ರ ನಿರ್ವಹಿಸುತ್ತಿರುವ ಅಮೆರಿಕ ಭಾರತದ ಜೊತೆ ನಿಷ್ಠುರವಾಗಿ ನಡೆದುಕೊಳ್ಳಲು ಹಿಂದೇಟು ಹಾಕುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರ ಜೊತೆ ಆತ್ಮೀಯ ಸಂಬಂಧ ಹೊಂದಿರುವ ಅಧ್ಯಕ್ಷ ಜೋಬಿಡನ್ ಸರ್ಕಾರ ವಿವಾದದಿಂದ ಸಾಧ್ಯವಾದಷ್ಟು ಹೊರಗುಳಿಯಲು ಪ್ರಯತ್ನಿಸುತ್ತಿದೆ ಎಂದು ತಿಳಿದುಬಂದಿದೆ.
ಭಾರತ ಮತ್ತು ಅಮೆರಿಕ ನಡುವೆ ಎಲ್ಲಾ ಕ್ಷೇತ್ರಗಳಲ್ಲೂ ಸಾಕಷ್ಟು ವ್ಯಾಪಾರ ವಹಿವಾಟು ನಡೆಯುತ್ತಿದೆ. ಇತ್ತೀಚಿನ ದಶಕಗಳಲ್ಲಿ ಉಭಯ ರಾಷ್ಟ್ರಗಳು ಭಾಯಿ ಭಾಯಿ ಎನ್ನುವಷ್ಟು ಹತ್ತಿರವಾಗಿವೆ. ಇಂತಹ ವೇಳೆ ಕೆನಡಾಕ್ಕಾಗಿ ಭಾರತದ ಸ್ನೇಹವನ್ನು ಕಳೆದುಕೊಳ್ಳಬಾರದೆಂದು ಅಮೆರಿಕಾದ ರಾಜತಾಂತ್ರಕ ಅಧಿಕಾರಿಗಳು ಜೋಬಿಡನ್‍ಗೆ ಸಲಹೆ ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಗ್ಯಾರಂಟಿ ಸರ್ಕಾರದಲ್ಲಿ ಹುದ್ದೆ ಗುದ್ದಾಟ, ರಾಜಣ್ಣ ವಿರುದ್ಧ ಡಿಕೆಶಿ ಬೆಂಬಲಿಗರ ಆಕ್ರೋಶ
ದಕ್ಷಿಣ ಏಷ್ಯಾದಲ್ಲಿ ಚೀನಾದ ಪ್ರಾಬಲ್ಯವನ್ನು ಕುಗ್ಗಿಸಬೇಕಾದರೆ ಭಾರತದ ಜೊತೆ ನಾವು ನಿಲ್ಲಲೇ ಬೇಕು. ಹತ್ಯೆಗೀಡಾದ ಹರ್ದೀಪ್ ಸಿಂಗ್ ನಿಜ್ಜರ್ ಕೆನಡಾದ ಪ್ರಜೆ ಎಂದು ಅಲ್ಲಿನ ಸರ್ಕಾರ ಹೇಳುತ್ತಿದೆ. ಆದರೆ ಆತ ಮೋಸ್ಟ್ ವಾಂಟೆಡ್ ಉಗ್ರ ಎಂದು ಭಾರತ ಹೇಳಿದೆ. ಸಾಲದ್ದಕ್ಕೆ ನಮ್ಮ ಬಳಿ ಆರೋಪವನ್ನು ಪುಷ್ಠೀಕರಿಸುವ ಸಾಕ್ಷ್ಯಾಧಾರಗಳಿವೆ ಎಂದು ಹೇಳುತ್ತಿದೆ.
ಇಂತಹ ಸಂದರ್ಭದಲ್ಲಿ ನಾವು ವಿವಾದದಿಂದ ಸುರಕ್ಷಿತ ಅಂತರವನ್ನು ಕಾಪಾಡಿಕೊಳ್ಳಬೇಕು. ಉಭಯ ರಾಷ್ಟ್ರಗಳ ನಡುವೆ ಪರಿಸ್ಥಿತಿ ಕೈಮೀರದಂತೆ ತಿಳಿ ಹೇಳಬೇಕು. ರಾಜತಾಂತ್ರಿಕ ಮಾರ್ಗದಲ್ಲೇ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಸಲಹೆ ನೀಡಬಹುದೇ ಹೊರತು ವ್ಯಾಪಾರ, ವಾಣಿಜ್ಯವಹಿವಾಟು ಉದ್ದೇಶದಿಂದ ಭಾರತದ ಜೊತೆ ನಿಷ್ಠುರವಾಗಿ ನಡೆದುಕೊಳ್ಳುವುದು ಅಷ್ಟೊಂದು ಸಮಂಜಸವಲ್ಲ ಎಂದು ಸಿಗ್ನಂ ಗ್ಲೋಬಲ್ ಅಡ್ವೈಸರ್ ಸಂಸ್ಥಾಪಕರು ಹೇಳಿದ್ದಾರೆ.
ಉಭಯ ರಾಷ್ಟ್ರಗಳ ನಡುವೆ ಸಾರ್ವಭೌಮತ್ವ ಪ್ರಶ್ನೆ ಎದುರಾಗಿದೆ. ಅಮೆರಿಕ ನೇರವಾಗಿ ಮಧ್ಯಸ್ಥಿಕೆ ವಹಿಸಿಕೊಂಡರೆ ಭಾರತದ ಸಾತ್ವಿಕ ಆಕ್ರೋಶಕ್ಕೆ ತುತ್ತಾಗಬಹುದು. ಇದು ಅತ್ಯಂತ ಸೂಕ್ಷ್ಮವಾದ ವಿಷಯವಾಗಿರುವುದರಿಂದ ಜೋಬಿಡನ್ ಸರ್ಕಾರ ಅತ್ಯಂತ ಎಚ್ಚರಿಕೆ ವಹಿಸುವುದು ಅಗತ್ಯ ಎಂದು ಹೇಳಿದ್ದಾರೆ.