ಬೆಂಗಳೂರು, ಜೂ. 5- ಖಾತೆ ಹಂಚಿಕೆ ವಿಚಾರವಾಗಿ ತಮ್ಮನ್ನು ಪದೇಪದೇ ಕುಗ್ಗಿಸಲಾಗುತ್ತಿದೆ. ಆತ್ಮಸಾಕ್ಷಿಗೆ ಧಕ್ಕೆಯಾಗಿರುವುದರಿಂದ ಅದನ್ನು ಸಹಿಸಿಕೊಂಡು ಕೆಲಸ ಮಾಡಲು ಸಾಧ್ಯವಿಲ್ಲ. ಅದಕ್ಕಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ರಾಮಲಿಂಗಾರೆಡ್ಡಿ ಘೋಷಿಸಿದ್ದಾರೆ.
ಬಿಟಿಎಂಲೇ ಔಟ್ ವಿಧಾನಸಭಾ ಕ್ಷೇತ್ರದ ಕೋರಮಂಗಲದಲ್ಲಿರುವ ಶಾಸಕರ ಕಚೇರಿಯಲ್ಲಿ ತುರ್ತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಸ್ಥಾನಕ್ಕೆ ನಾನು ರಾಜೀನಾಮೆ ನೀಡುತ್ತಿದ್ದೇನೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ನೇರವಾಗಿ ರಾಜೀನಾಮೆ ನೀಡಲು ನನಗೆ ಇಷ್ಟವಿಲ್ಲ. ಅದಕ್ಕಾಗಿ ತಮ ಆಪ್ತಕಾರ್ಯದರ್ಶಿ ಮೂಲಕ ಬೆಂಬಲಿಗರಾದ ಮಂಜುನಾಥರೆಡ್ಡಿ ಅವರೊಂದಿಗೆ ರಾಜೀನಾಮೆ ಪತ್ರವನ್ನು ಮುಖ್ಯಮಂತ್ರಿ ಅವರ ಕಾರ್ಯದರ್ಶಿ ತುಷಾರ್ ಗಿರಿನಾಥ್ ಅವರಿಗೆ ತಲುಪಿಸುತ್ತಿದ್ದೇನೆ ಎಂದು ಹೇಳಿದ್ದಾರೆ.
ತಾವು ಕಾಂಗ್ರೆಸ್ ಪಕ್ಷದಲ್ಲೇ ಇರಲಿದ್ದು, ಶಾಸಕನಾಗಿ ಮುಂದುವರೆಯುತ್ತೇನೆ. ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಹೈಕಮಾಂಡ್ ನಾಯಕರು ಸೇರಿದಂತೆ ಯಾರ ಮೇಲೂ ನನಗೆ ಕೋಪವಿಲ್ಲ. ಯಾರೊಂದಿಗೂ ಮಾತುಕತೆ ಅಥವಾ ಸಂಧಾನ ಪ್ರಕ್ರಿಯೆ ಬಯಸುವುದಿಲ್ಲ ಎಂದು ದೃಢವಾಗಿ ಹೇಳಿದರು.
ರಾಜೀನಾಮೆ ನೀಡುವ ವಿಚಾರವನ್ನು ಪತ್ನಿ, ಪುತ್ರಿ ಹಾಗೂ ಮಗನ ಜೊತೆ ಕೂಡ ಚರ್ಚೆ ಮಾಡಿಲ್ಲ. ನಿನ್ನೆ ದಿನ ಡಿ.ಕೆ.ಶಿವಕುಮಾರ್ ಅವರ ಜೊತೆ ನಡೆದ ಮಾತುಕತೆಗಳ ಬಗ್ಗೆ ವಿವರಣೆ ನೀಡಲು ಇಷ್ಟ ಪಡುವುದಿಲ್ಲ. ಈ ವಿಚಾರವಾಗಿ ತಾವು ಹೆಚ್ಚು ಮಾತನಾಡಲು ಬಯಸುವುದಿಲ್ಲ. ಅನಗತ್ಯ ಪ್ರಶ್ನೆಗಳನ್ನು ಕೇಳಬೇಡಿ ಎಂದು ಖಡಾ ಖಂಡಿತವಾಗಿ ಹೇಳಿದರು.
ಮನವೊಲಿಕೆ ಪ್ರಯತ್ನ ನಡೆದರೆ ಒಪ್ಪಿಕೊಳ್ಳುತ್ತೀರಾ? ಅಥವಾ ಖಾತೆ ಬದಲಾವಣೆಯಾದರೆ ಸಚಿವರಾಗಿ ಮುಂದುವರೆಯುತ್ತೀರಾ? ಎಂಬೆಲ್ಲಾ ಪ್ರಶ್ನೆಗಳಿಗೆ ತಾವು ಉತ್ತರಿಸುವುದಿಲ್ಲ ಎಂದು ತಿಳಿಸಿದರು.
1973ರಲ್ಲಿ ತಾವು ವಿದ್ಯಾರ್ಥಿ ಸಂಘಕ್ಕೆ ಆಯ್ಕೆಯಾಗಿದ್ದೆ. ನಂತರ ಎನ್‌ಎಸ್‌ಯುಐ ಸೇರಿ ಸುದೀರ್ಘವಾಗಿ 53 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದಲ್ಲಿ ವಿದ್ಯಾರ್ಥಿ ಘಟಕ, ಯುವ ಘಟಕ, ಬ್ಲಾಕ್ ಕಾಂಗ್ರೆಸ್, ಜಿಲ್ಲಾ ಕಾಂಗ್ರೆಸ್, ಕೆಪಿಸಿಸಿ ಕಾರ್ಯಾಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ.
1985ರಲ್ಲಿ ತಾವು ಬೆಂಗಳೂರಿನ ಕಾರ್ಪೊರೇಟರ್ ಆಗಿದ್ದೆ. ತಮ ತಂದೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ಆ ವೇಳೆ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಅರ್ಜಿ ಹಾಕಿದ್ದಾಗ ಆಗಿನ ಮುಖ್ಯಮಂತ್ರಿಯಾಗಿದ್ದ ವೀರಪ್ಪಮೊಯ್ಲಿ ಅವರು ತಮ್ಮನ್ನು ಕರೆದು ಕಾಂಗ್ರೆಸ್ ಟಿಕೆಟ್ ಕೊಟ್ಟರು. ಅಂದಿನಿಂದ ಇಂದಿನವರೆಗೂ ತಾವೂ ಯಾರ ಬಳಿಯೂ ಟಿಕೆಟ್ ಕೊಡಿ ಎಂದು ಕೇಳಲಿಲ್ಲ, ಈ ಕಾರಣಕ್ಕೆ ದೆಹಲಿಗೂ ಹೋಗಿಲ್ಲ. ಸಚಿವ ಸ್ಥಾನಕ್ಕಾಗಿ ಲಾಬಿ ಮಾಡಿಲ್ಲ. ಇಂತಹದೇ ಖಾತೆ ಬೇಕೆಂದು ಒತ್ತಡ ಹಾಕಿಲ್ಲ ಎಂದರು.
ಕಾಂಗ್ರೆಸ್ ಪಕ್ಷ ತಮಗೆ ಈವರೆಗೂ ಸಾಕಷ್ಟು ಅವಕಾಶಗಳನ್ನು ಕೊಟ್ಟಿದೆ. ವೀರಪ್ಪಮೊಯ್ಲಿ ಸಂಪುಟದಲ್ಲಿ ಹಣಕಾಸು ರಾಜ್ಯ ಖಾತೆಯೊಂದಿಗೆ ನಾಲ್ಕು ಇಲಾಖೆಗಳ ಜವಾಬ್ದಾರಿ ನಿರ್ವಹಿಸಿದ್ದೆ. ಕೃಷಿ ಮಾರುಕಟ್ಟೆ, ಆಹಾರ ಮತ್ತು ನಾಗರಿಕ ಪೂರೈಕೆ, ಎಸ್.ಎಂ.ಕೃಷ್ಣ ಅವರ ಸರ್ಕಾರದಲ್ಲಿ ಕೊನೆಯ ದಿನಗಳಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವನಾಗಿ ಕೆಲಸ ಮಾಡಿದ್ದೇನೆ. ಶಿಕ್ಷಣ, ಸಾರಿಗೆ, ಗೃಹ ಇಲಾಖೆ, ಮುಜರಾಯಿ ಸೇರಿದಂತೆ ಹಲವಾರು ಜವಾಬ್ದಾರಿಗಳನ್ನು ನಿಭಾಯಿಸಿದ್ದೇನೆ. ಎಲ್ಲಾ ಇಲಾಖೆಗಳಲ್ಲೂ ಉತ್ತಮವಾಗಿ ಕೆಲಸ ಮಾಡಿದ ಆತತೃಪ್ತಿ ಇದೆ ಎಂದು ಹೇಳಿದರು.
ಬೆಂಗಳೂರು ನಗರದಲ್ಲಿ 37 ವರ್ಷ ಶಾಸಕನಾಗಿ ಕೆಲಸ ಮಾಡಿದ್ದೇನೆ. 2023ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಸಿದ್ದರಾಮಯ್ಯ ಅವರು ಎರಡನೇ ಬಾರಿ ಮುಖ್ಯಮಂತ್ರಿಯಾದರು. ಆಗ ಭೈರತಿಸುರೇಶ್ ತಮಗೆ ಕರೆ ಮಾಡಿ, ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ಅಪಾರ್ಟ್ ಮೆಂಟ್‌ಗೆ ಬಂದು ಸಿದ್ದರಾಮಯ್ಯ ಅವರನ್ನ ಭೇಟಿ ಮಾಡುವಂತೆ ಹೇಳಿದರು. ನಾನು ಅಲ್ಲಿಗೆ ಹೋದಾಗ ತಳಮಹಡಿಯಲ್ಲಿದ್ದ ವಾಹನ ನಿಲುಗಡೆ ಸ್ಥಳದಲ್ಲಿ ಭೈರತಿಸುರೇಶ್ ಅವರು ಸಿಕ್ಕಿ ಮಾತನಾಡಿದರು. ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನು ನಿಮಗೆ ಕೊಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಇದನ್ನು ಫೋನ್‌ನಲ್ಲಿಯೇ ಹೇಳಿದ್ದರೆ ಸಾಕಿತ್ತು, ತಮಗೆ ಒಪ್ಪಿಗೆ ಇದೆ ಎಂದು ಹೇಳಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡದೇ ನಾನು ವಾಪಸ್ ಬಂದಿದ್ದೆ ಎಂದರು.ನಂತರ ಖಾತೆ ಹಂಚಿಕೆ ಅಧಿಸೂಚನೆ ಹೊರ ಬಿದ್ದಾಗ ನನಗೆ ಸಾರಿಗೆ ಇಲಾಖೆ ಹಂಚಿಕೆ ಮಾಡಲಾಗಿತ್ತು. ಆಶ್ಚರ್ಯಗೊಂಡು ಭೈರತಿ ಸುರೇಶ್ ಅವರಿಗೆ ಕರೆ ಮಾಡಿದ್ದೆ. ಸಿದ್ದರಾಮಯ್ಯ ಅವರ ಒಟ್ಟಿಗೆ ಭೈರತಿ ಪ್ರಯಾಣ ಮಾಡುತ್ತಿದ್ದರು. ಅವರೊಂದಿಗೆ ನಾನು ದೂರವಾಣಿಯಲ್ಲಿ ಮಾತನಾಡಿದ್ದೆ. ಕೆಲ ರಾಜಕೀಯ ಹೊಂದಾಣಿಕೆಗಳ ಕಾರಣಕ್ಕಾಗಿ ಬೆಂಗಳೂರಿನ ನಗರಾಭಿವೃದ್ಧಿ ಕೊಡಲಾಗಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ಆಗ ರಾಜೀನಾಮೆ ನೀಡಲು ಮುಂದಾಗಿದ್ದೆ. ಈಗಿನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಅವರ ಸಹೋದರ ಡಿ.ಕೆ.ಸುರೇಶ್ ತಮ ಮನೆಗೆ ಬಂದು ಸಂಜೆ 4 ಗಂಟೆಯವರೆಗೂ ಇದ್ದು, ಚರ್ಚೆ ಮಾಡಿದರು. ಎರಡೂವರೆ ವರ್ಷಗಳ ಬಳಿಕ ನಾನೇ ಮುಖ್ಯಮಂತ್ರಿಯಾಗುತ್ತೇನೆ. ಆಗ ಬೆಂಗಳೂರು ನಗರಾಭಿವೃದ್ಧಿ ಖಾತೆ ನೀಡುತ್ತೇನೆ ಎಂದು ಭರವಸೆ ಕೊಟ್ಟರು.
ಇತ್ತೀಚೆಗೆ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾದ ಬಳಿಕ ಕಾಂಗ್ರೆಸ್ ನಾಯಕ ಕೃಷ್ಣಂರಾಜು ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡುವಂತೆ ಕೇಳಲು ಕರೆದುಕೊಂಡು ಹೋಗಿದ್ದೆ. ಕೃಷ್ಣಂರಾಜು ಅವರ ವಿಚಾರ ಮುಗಿದ ಬಳಿಕ ಡಿ.ಕೆ.ಶಿವಕುಮಾರ್ ಜೊತೆ ವೈಯಕ್ತಿಕ ಚರ್ಚೆಗಳಾದವು. ಆಗಲೂ ನಾನು ಕೇಳದೆ ಇದ್ದು, ನಗರಾಭಿವೃದ್ಧಿ ಖಾತೆ ನೀಡುವುದಾಗಿ ಸ್ವಯಂ ಡಿ.ಕೆ.ಶಿವಕುಮಾರ್ ಹೇಳಿದ್ದರು. ಆದರೆ ಈಗ ಜಲ ಸಂಪನೂಲ ಖಾತೆ ನೀಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿದರು.
ನಿರಂತರವಾಗಿ ತಮನ್ನು ಕುಗ್ಗಿಸುವ ಪ್ರಯತ್ನ ಮಾಡಲಾಗುತ್ತಿದೆ. ಆತಸಾಕ್ಷಿಗೆ ವಿರುದ್ಧವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗದ ಕಾರಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆಂದು ರಾಮಲಿಂಗಾರೆಡ್ಡಿ ಘೋಷಿಸಿದರು. ಕಾಂಗ್ರೆಸ್‌ನಲ್ಲಿ ಈ ಬೆಳವಣಿಗೆ ಭಾರೀ ಸಂಚಲನ ಮೂಡಿಸಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಆರಂಭದಲ್ಲೇ ಸವಾಲಿನ ಸನ್ನಿವೇಶ ಸೃಷ್ಟಿಯಾಗಿದೆ.
