Homeರಾಜ್ಯರಾಜ್ಯಕ್ಕೆ ಮುಂಗಾರು ಪ್ರವೇಶ : ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ

ರಾಜ್ಯಕ್ಕೆ ಮುಂಗಾರು ಪ್ರವೇಶ : ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ

Monsoon enters the state: Heavy rain in coastal districts

ಬೆಂಗಳೂರು,ಜೂ.5- ನೈರುತ್ಯ ಮುಂಗಾರು ಆರಂಭಗೊಂಡ ಬೆನ್ನಲ್ಲೇ ರಾಜ್ಯದಲ್ಲಿ ಮಳೆ ಪ್ರಮಾಣ ಹೆಚ್ಚಾಗಿದ್ದು, ಕೊಡಗು-ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದೆ. ಹವಾಮಾನ ಮುನ್ಸೂಚನೆ ಪ್ರಕಾರ ಇನ್ನು ಒಂದು ವಾರದಲ್ಲಿ ರಾಜ್ಯದಲ್ಲಿ ವ್ಯಾಪಕ ಉತ್ತಮ ಪ್ರಮಾಣದ ಮಳೆಯಾಗುವ ಸಾಧ್ಯತೆಗಳಿವೆ.

ನಿನ್ನೆ ಕೇರಳ ಪ್ರವೇಶಿಸಿದ್ದ ಮುಂಗಾರು ಮಳೆ ರಾಜ್ಯದ ಕರಾವಳಿ ಹಾಗೂ ಕರಾವಳಿಗೆ ಹೊಂದಿಕೊಂಡಿರುವ ಜಿಲ್ಲೆಗಳಲ್ಲಿ ಆರ್ಭಟಿಸುತ್ತಿದೆ. ಕೊಡಗು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ನಿನ್ನೆಯಿಂದ ವ್ಯಾಪಕ ಹಾಗೂ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದೆ.

ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲ್ಲೂಕಿನ ಮಾವಿನಕುರುವೆಯಲ್ಲಿ 128 ಮಿ.ಮೀನಷ್ಟು ಅಧಿಕ ಪ್ರಮಾಣದ ಮಳೆಯಾಗಿದೆ. ಕರಾವಳಿ ಜಿಲ್ಲೆಗಳಲ್ಲಿ 6ರಿಂದ 10 ಸೆ.ಮೀ.ವರೆಗೂ ಮಳೆಯಾಗಿದೆ. ಮುಂಗಾರು ಆರಂಭದ ಬೆನ್ನಲ್ಲೇ ಕೊಡುಗು, ಬೀದರ್‌, ಬೆಳಗಾವಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗಿದೆ.

ಇಂದಿನಿಂದ ಜೂ.8ರವರೆಗೆ ಕರಾವಳಿ ಮತ್ತು ಕರಾವಳಿಗೆ ಹೊಂದಿಕೊಂಡಿರುವ ಮಲೆನಾಡು ಭಾಗದ ಜಿಲ್ಲೆಗಳಲ್ಲಿ ಭಾರೀ ಹಾಗೂ ಅತಿ ಭಾರೀ ಮಳೆಯಾಗುವ ಮುನ್ಸೂಚನೆಯ್ನು ಹವಾಮಾನ ಇಲಾಖೆ ನೀಡಿದೆ.

ಇಂದಿನಿಂದ ಜೂ.8ರವರೆಗೆ ಕರಾವಳಿ ಜಿಲ್ಲೆಗಳಿಗೆ ಮತ್ತುಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಆರೆಂಜ್‌ ಅಲರ್ಟ್‌ ನೀಡಲಾಗಿದ್ದು, ದಕ್ಷಿಣ ಕರ್ನಾಟಕ ಜಿಲ್ಲೆಗಳಿಗೆ ಜೂ.11ರವರೆಗೂ ಯಲ್ಲೋ ಅಲರ್ಟ್‌ ನೀಡಲಾಗಿದೆ.

ಕರಾವಳಿ ಭಾಗದಲ್ಲಿ ಜೂ.9 ಹಾಗೂ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಜೂ.6ರಿಂದ ಜೂ.11ರವರೆಗೆ ಭಾರೀ ಮಳೆಯಾಗುವ ಹಿನ್ನೆಲೆಯಲ್ಲಿ ಯಲ್ಲೋ ಅಲರ್ಟ್‌ ಘೋಷಿಸಲಾಗಿದೆ.
ಈಗಾಗಲೇ ಮುಂಗಾರು ರಾಜ್ಯ ಪ್ರವೇಶ ಮಾಡಿದ್ದು, ಇನ್ನು ನಾಲ್ಕೈದು ದಿನಗಳಲ್ಲಿ ರಾಜ್ಯಾದ್ಯಂತ ವ್ಯಾಪಿಸಲಿದೆ. ರಾಜ್ಯದ ದಕ್ಷಿಣ ಹಾಗೂ ಉತ್ತರ ಒಳನಾಡಿನ ಕೆಲವೆಡೆ ಚದುರಿದಂತೆ ಅಲ್ಲಲ್ಲಿ ಮಳೆಯಾಗುತ್ತಿತ್ತು.

ಮುಂಗಾರು ಆಗಮನವಾಗಿರುವುದರಿಂದ ವ್ಯಾಪಕ ಪ್ರಮಾಣದಲ್ಲಿ ರಾಜ್ಯಾದ್ಯಂತ ಮಳೆ ವಿಸ್ತರಣೆಯಾಗುವ ಸಾಧ್ಯತೆಗಳು ಹೆಚ್ಚಾಗಿದೆ. ರಾಜ್ಯದ ಪ್ರಮುಖ ಜಲಾಶಯಗಳ ಜಲಾನಯನ ಭಾಗದಲ್ಲಿ ಮಳೆ ಪ್ರಮಾಣ ಹೆಚ್ಚಾಗುವ ಮುನ್ಸೂಚನೆಗಳು ಇರುವುದರಿಂದ ಜಲಾಶಯಗಳ ಒಳಹರಿವು ಹೆಚ್ಚಾಗುವ ಸಾಧ್ಯತೆಗಳಿವೆ.

RELATED ARTICLES

Latest News