ಬೆಂಗಳೂರು, ಜ.17- ಗಣರಾಜ್ಯೋತ್ಸವ ಅಂಗವಾಗಿ ಸಸ್ಯಕಾಶಿ ಲಾಲ್‍ಬಾಗ್‍ನಲ್ಲಿ ನಾಳೆ ಯಿಂದ ನಡೆಯಲಿರುವ ಫಲಪುಷ್ಪ ಪ್ರದರ್ಶನಕ್ಕೆ ಸಿದ್ಧತಾ ಕಾರ್ಯ ಭರದಿಂದ ಸಾಗಿದೆ. ಹನ್ನೊಂದು ದಿನಗಳು ನಡೆಯುವ ಫಲಪುಷ್ಪ ಪ್ರದರ್ಶನಕ್ಕೆ ನಾಳೆ ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಲಿದ್ದು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸೇರಿದಂತೆ ಸಚಿವರು, ಶಾಸಕರು ಪಾಲ್ಗೊಳ್ಳಲಿದ್ದಾರೆ.
ಈ ಬಾರಿ ವಿಶ್ವಗುರು ಬಸವಣ್ಣ ಅವರ ಪರಿಕಲ್ಪನೆಯೊಂದಿಗೆ ಫಲಪುಷ್ಪ ಪ್ರದರ್ಶನ ಹಮ್ಮಿಕೊಳ್ಳಲಾಗಿದ್ದು, ವಚನಕಾರರು ಸಮಾಜಕ್ಕೆ ನೀಡಿರುವ ಕೊಡುಗೆ ಹಾಗೂ ವಚನ ಸಾಹಿತ್ಯದ ಹಿರಿಮೆಯನ್ನು ನಾಡಿನ ಜನತೆಗೆ ಪರಿಚಯಿಸುವ ನಿಟ್ಟಿನಲ್ಲಿ 215ನೆ ಫಲಪುಷ್ಪ ಪ್ರದರ್ಶನ ಆಯೋಜಿಸಲಾಗಿದೆ. ಅಂದಾಜು 2.85 ಕೋಟಿ ರೂ. ವೆಚ್ಚದಲ್ಲಿ 68 ವಿಧದ 32 ಲಕ್ಷ ಹೂಗಳನ್ನು ಬಳಸಿ ವಚನ ಸಾಹಿತ್ಯಾಧಾರಿತ ಫಲಪುಷ್ಪ ಪ್ರದರ್ಶನ ಹಮ್ಮಿಕೊಂಡಿರುವುದು ವಿಶೇಷವಾಗಿದೆ.
ನಮ್ಮದು ರಾಜನೀತಿ ಅಲ್ಲ ಧರ್ಮನೀತಿ : ಆಚಾರ್ಯ ಸತ್ಯೇಂದ್ರ ದಾಸ್
ಗಾಜಿನ ಮನೆಯ ಕೇಂದ್ರ ಭಾಗದಲ್ಲಿ 34 ಅಡಿ ಅಗಲ, 30 ಅಡಿ ಎತ್ತರದ ಅನುಭವ ಮಂಟಪದ ಪುಷ್ಪಮಾದರಿ ಆಕರ್ಷಣೀಯವಾಗಿದೆ. ಅನುಭವ ಮಂಟಪದ ಹಿಂಬದಿಯಲ್ಲಿ ಬಸವಣ್ಣ, ಅಕ್ಕಮಹಾದೇವಿ, ಅಂಬಿಗರ ಚೌಡಯ್ಯ, ಅರಳಯ್ಯ ಸೇರಿದಂತೆ ಶರಣರ ಪ್ರತಿಮೆಗಳನ್ನು ಪ್ರದರ್ಶನಕ್ಕಿಡಲಾಗಿದೆ.
ನಾಳೆಯಿಂದ ಜ.28ರ ವರೆಗೆ ನಡೆಯಲಿರುವ ಫಲಪುಷ್ಪ ಪ್ರದರ್ಶನಕ್ಕೆ ಸುಮಾರು 10 ರಿಂದ 12 ಲಕ್ಷ ಮಂದಿ ಆಗಮಿಸುವ ನಿರೀಕ್ಷೆ ಇದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.