ಬೆಂಗಳೂರು,ಜ.17- ಪ್ರಧಾನಿ ನರೇಂದ್ರಮೋದಿ ಯವರು ನಿದ್ದೆ ಮಾಡುವ ಒಂದೇ ಒಂದು ಫೋಟೋ ಗಳಿದ್ದರೆ ಸಾರ್ವಜನಿಕವಾಗಿ ಬಿಡುಗಡೆ ಮಾಡಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಬಹಿರಂಗ ಸವಾಲು ಹಾಕಿದ್ದಾರೆ.ಸಿದ್ದರಾಮಯ್ಯನವರ ಯಾವ ಯಾವ ವೇದಿಕೆಗಳಲ್ಲಿ ನಿದ್ದೆಗೆ ಜಾರಿದ್ದಾರೆ ಎಂಬುದನ್ನು ಮಾಧ್ಯಮಗಳೇ ತೋರಿಸಿವೆ. ಕಾರ್ಟೂನ್‍ಗಳ ಮೂಲಕವು ಇದು ಬಹಿರಂಗಗೊಂಡಿದೆ ಎಂದು ಆರ್.ಅಶೋಕ್ ಹೇಳಿದ್ದಾರೆ.
ಏರ್‍ಶೋ ಕಾರ್ಯಕ್ರಮದಲ್ಲಿ ನಿದ್ದೆಗೆ ಜಾರಿದವರು ಯಾರು? ಪಕ್ಕದಲ್ಲಿದ್ದ ಸಚಿವರೇ ಸಿದ್ದರಾಮಯ್ಯನವರನ್ನು ಏಳಿ, ಎದ್ದೇಳಿ ಎಂದು ಎಬ್ಬಿಸಿರುವ ನಿದರ್ಶನಗಳು ಎಷ್ಟು ಬೇಕು ಎಂದು ಪ್ರಶ್ನೆ ಮಾಡಿದರು. ಸಿದ್ದರಾಮಯ್ಯನವರಿಗೆ ಧಮ್ಮು, ತಾಕತ್ತು ಇದ್ದರೆ ಮೋದಿ ನಿದ್ದೆ ಮಾಡುತ್ತಿರುವ ಫೋಟೋಗಳನ್ನು ಬಿಡುಗಡೆ ಮಾಡಲಿ. ನಿದ್ದೆ ಮಾಡುವುರಲ್ಲಿ ಯಾರದರೂ ಬ್ರಾಂಡ್ ಅಂಬಾಸಿಡರ್ ಇದ್ದರೆ ಅದು ಸಿದ್ದರಾಮಯ್ಯ. ಇದನ್ನು ಸ್ವತಃ ಕಾಂಗ್ರೆಸ್ ಪಕ್ಷದವರು ಹೇಳಿದ್ದಾರೆ. ಇಂಥದ್ದು ಸಾವಿರಾರು ಫೋಟೋಗಳು ನಮ್ಮ ಬಳಿ ಇವೆ. ನಾವುಬಿಡುಗಡೆ ಮಾಡಿದರೆ ನಿಮ್ಮ ಸ್ಥಿತಿ ಏನಾಗಬಹುದೆಂದು ತರಾಟೆಗೆ ತೆಗೆದುಕೊಂಡರು.
ಇನ್ನು ಸಚಿವ ರಾಜಣ್ಣ ವಿರುದ್ಧವೂ ವಾಗ್ದಾಳಿ ನಡೆಸಿರುವ ಅಶೋಕ್, ರಾಮ ಸೀತೆ ಆಂಜನೇಯ ಟೂರಿನ್ ಟಾಕೀಸ್ ತರಹ ಕಾಣುತ್ತಿದೆ. ಕಾಂಗ್ರೆಸ್‍ನವರಿಗೆ ಏನೂ ಹೇಳಲು ಆಗುತ್ತದೆ? ಅವರು ಈ ಹಿಂದೆ ರಾಮನ ಹುಟ್ಟಿದ್ದೆಲ್ಲಾ ಕಾಲ್ಪನಿಕ ಎಂದಿದ್ದರು. ರಾಮನ ಹುಟ್ಟಿಗೆ ಸರ್ಟಿಫಿಕೇಟ್ ಇದೆಯೇ? ಎಂದಿದ್ದರು. ಸಿದ್ಧರಾಮಯ್ಯ ಗರ್ಭಗುಡಿಯೊಳಗೆ ಬರುವುದಿಲ್ಲ ಎಂದಿದ್ದಾರೆ. ಇವರು ವಕೀಲರಾಗಿದ್ದವರು. ಸಿದ್ಧರಾಮಯ್ಯರೇ ಹೀಗೆ ಇರುವಾಗ ಸಚಿವ ಕೆ.ಎನ್.ರಾಜಣ್ಣ ಅವರಿಂದ ಇನ್ನೇನೂ ನಿರೀಕ್ಷೆ ಮಾಡಲಾಗುತ್ತದೆ? ಎಂದು ವ್ಯಂಗ್ಯವಾಡಿದರು.
130 ಕೋಟಿ ಜನ ನಿರೀಕ್ಷೆ ಮಾಡುತ್ತಿದ್ದಾರೆ, ಯಾವಾಗ ಮಂದಿರ ಕಟ್ಟುತ್ತಾರೆ? ಅದನ್ನು ಲೋಕಾರ್ಪಣೆ ಯಾವಾಗ ಮಾಡುತ್ತಾರೆ? ಎಂದು ಕಾಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ರಾಜಣ್ಣ, ರಾಮ ಸೀತೆಯನ್ನು ಆಟಿಕೆಗೆ ಹೋಲಿಸುತ್ತಾರೆ. ಮಾತನ್ನಾಡುವಾಗ ಹಿಡಿತ ಇರಬೇಕು. ನಾನು ಕೂಡ ಪೂರಿಜಗನ್ನಾಥಗೆ ಹೋಗಿದ್ದೇ. ಅಲ್ಲಿ ಕಟ್ಟಿಯಿಂದಲೇ ದೇವರ ನಿರ್ಮಾಣ ಆಗುತ್ತದೆ. ಈಗ ಕೇವಲ ಕಲ್ಲು ಎಂದು ಕಲ್ಲು ಹಾಕಿದ್ದಾರೆ. ದೇವರಿಗೆ ಅವಹೇಳನ ಮಾಡಿರುವುದು. ಇದು ಕಾಂಗ್ರೆಸ್‍ನ ಅವನತಿಗೆ ಕಾರಣವಾಗುತ್ತದೆ ಎಂದರು.
ಖರ್ಗೆ ಎಚ್ಚರಿಕೆ ನಡುವೆಯೂ ಮತ್ತೊಂದು ಸುತ್ತಿನ ಚರ್ಚೆಗೆ ಗ್ರಾಸವಾದ ಯತೀಂದ್ರ ಹೇಳಿಕೆ
ತಮ್ಮ ದೆಹಲಿ ಭೇಟಿ ವಿಚಾರದ ಕುರಿತು ಮಾತನಾಡಿದ ಅವರು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಿದ್ದು, ಲೋಕಸಭಾ ಚುನಾವಣೆ, ಅಭ್ಯರ್ಥಿಗಳ ಆಯ್ಕೆ ಕುರಿತು ಮಾತುಕತೆ ನಡೆಸಲಾಗಿದೆ. ಲೋಕಸಭೆ ಗೆಲ್ಲುವ ಕಾರಣ, ಬೇಗನೆ ಅಭ್ಯರ್ಥಿಗಳ ಆಯ್ಕೆ ಮಾಡಬೇಕಿದೆ ಎಂದು ಹೇಳಿರುವುದಾಗಿ ತಿಳಿಸಿದರು.
ಜೆಡಿಎಸ್‍ನ ಜೊತೆಗೆ ಹೊಂದಾಣಿಕೆಯಾಗಗಿದೆ. ಅವರು ಕೂಡ ಬೇಗ ಅಭ್ಯರ್ಥಿ ಆಯ್ಕೆ ಮಾಡುತ್ತಾರೆ. ಲೋಕಸಭಾ ಕ್ಷೇತ್ರವಾರು, ವಿಧಾನಸಭಾ ಕ್ಷೇತ್ರವಾರು ಉಸ್ತುವಾರಿಗಳನ್ನು ನೇಮಕ ಮಾಡುತ್ತಾರೆ. ಪ್ರವಾಸದ ನೀಲಿ ನಕ್ಷೆ ರೆಡಿಯಾಗುತ್ತಿದೆ. ಅದರ ಬಗ್ಗೆಯೂ ವಿಸ್ತೃತ ಚರ್ಚೆಯಾಗಿದೆ. ಲೋಕಸಭೆಯ ಒಟ್ಟು 545 ಕ್ಷೇತ್ರಗಳ ಪೈಕಿ ಬಿಜೆಪಿ 400ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಂಗಳೂರಿನ ಕುಕ್ಕರ್ ಬ್ಲಾಸ್ಟ್ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿ, ಈ ಸರ್ಕಾರ ಆರೋಪಿಗಳಿಗೆ ಪರಿಹಾರ ನೀಡುತ್ತಿದೆ. ಆಟೋ ಡ್ರೈವರ್‍ಗೆ 2 ಲಕ್ಷ ರೂ. ಪರಿಹಾರ ನೀಡಲಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪುತ್ರ ಡಾ.ಯತೀಂದ್ರ ಅವರು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ತಂದೆ ಬಗ್ಗೆ ಕುರುಡು ಪ್ರೇಮ ಅವರಿಗೆ. ಯತೀಂದ್ರ ಸಿದ್ಧರಾಮಯ್ಯ ಇಂದು ಶಾಸಕರಲ್ಲ. ಅವರ ಹೇಳಿಕೆಗೆ ಏನಿದೆ ಮನ್ನಣೆ? ಅವರ ಪಕ್ಷದಲ್ಲಿಯೇ ಈ ಹೇಳಿಕೆಗಡ ತೀವ್ರ ವಿರೋಧ ವ್ಯಕ್ತವಾಗುತ್ತಿದೆ ಎಂದು ವ್ಯಂಗ್ಯವಾಡಿದರು.
ಡಿ.ಕೆ.ಶಿವಕುಮಾರ್ ಅವರು ಈಗಾಗಲೇ ಸದನದಲ್ಲೇ ಹೇಳಿದ್ದಾರೆ. ಮುಂದೆ ಬಜೆಟ್ ಮಂಡನೆ ಸಿದ್ಧರಾಮಯ್ಯರೇ ಮಾಡುತ್ತಾರೆ ಅಂದರೆ ಇದರ ಅರ್ಥ ಏನು? ಸಿದ್ಧರಾಮಯ್ಯರನ್ನು ಇಳಿಸುವುದು ಗ್ಯಾರೆಂಟಿ. ಮುಂದಿನ 6 ತಿಂಗಳಲ್ಲಿ ಸಿದ್ಧರಾಮಯ್ಯ ಕೆಳಗೆ ಇಳಿಯುತ್ತಾರೆ ಎಂದರ್ಥವಲ್ಲವೇ ಎಂದು ಮರುಪ್ರಶ್ನೆ ಹಾಕಿದರು.