Friday, November 22, 2024
Homeರಾಜ್ಯಸೂಕ್ತ ಸರ್ಕಾರಿ ನಿವಾಸಕ್ಕಾಗಿ ಸರ್ಕಾರಕ್ಕೆ ಪತ್ರ ಬರೆದ ಪ್ರತಿಪಕ್ಷ ನಾಯಕ ಆರ್.ಅಶೋಕ್‍

ಸೂಕ್ತ ಸರ್ಕಾರಿ ನಿವಾಸಕ್ಕಾಗಿ ಸರ್ಕಾರಕ್ಕೆ ಪತ್ರ ಬರೆದ ಪ್ರತಿಪಕ್ಷ ನಾಯಕ ಆರ್.ಅಶೋಕ್‍

ಬೆಂಗಳೂರು,ಜ.18- ವಿಧಾನಸಭೆಯ ಪ್ರತಿ ಪಕ್ಷದ ನಾಯಕ ಆರ್.ಅಶೋಕ್‍ರವರು ತಮಗೆ ಸೂಕ್ತವಾದ ಕಡೆ ಸರ್ಕಾರಿ ನಿವಾಸವನ್ನು ಮಂಜೂರು ಮಾಡಬೇಕೆಂದು ಮುಖ್ಯಕಾರ್ಯ ದರ್ಶಿಗೆ ಪತ್ರ ಬರೆದಿದ್ದಾರೆ. ಛಾಯಾ ಮುಖ್ಯಮಂತ್ರಿಯೆಂದೇ ಗುರುತಿಸಿಕೊಂಡಿರುವ ವಿಧಾನಸಭೆಯ ಪ್ರತಿಪಕ್ಷದ ನಾಯಕರಿಗೆ ಬೆಂಗಳೂರಿನಲ್ಲಿ ಸುಸಜ್ಜಿತ ಬಂಗಲೆ, ಸರ್ಕಾರಿ ವಾಹನ, ಅಂಗರಕ್ಷಕರು ಸೇರಿದಂತೆ ಹಲವು ಸವಲತ್ತುಗಳನ್ನು ನೀಡಬೇಕಾಗುತ್ತದೆ.

ಇದೀಗ ವಿಧಾನಸಭೆಯ ಪ್ರತಿಪಕ್ಷದ ನಾಯಕರಾಗಿ ಆಯ್ಕೆಯಾಗಿರುವ ಅಶೋಕ್, ತಮಗೆ ಕಾರ್ಯಕರ್ತರನ್ನು ಭೇಟಿಯಾಗಲು ಅನುಕೂಲವಾಗುವಂತಹ ಸುಸಜ್ಜಿತ ಬಂಗಲೆಯನ್ನು ಮಂಜೂರು ಮಾಡುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ರಜನೀಶ್ ಘೋಯೆಲ್ ಅವರಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.

ಮೂಲಗಳ ಪ್ರಕಾರ, ಆರ್.ಅಶೋಕ್ ತಮಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಇಬ್ಬರು ಸಚಿವರಿಗೆ ಈಗಾಗಲೇ ನಿಗದಿಯಾಗಿರುವ ಬಂಗಲೆಯನ್ನು ನೀಡುವಂತೆ ಬೇಡಿಕೆಯಿಟ್ಟಿದ್ದಾರೆಂಬ ಮಾಹಿತಿ ಲಭ್ಯವಾಗಿದೆ. ನಗರದ ಕುಮಾರಕೃಪಾ ದಕ್ಷಿಣದಲ್ಲಿರುವ ನಂಬರ್ 1 ನಿವಾಸ ಒದಗಿಸುವಂತೆ ಅಶೋಕ್ ಮನವಿ ಮಾಡಿದ್ದಾರೆ. ಆದರೆ, ಸದ್ಯ ಈ ನಿವಾಸ ಡಿಸಿಎಂ ಡಿಕೆ ಶಿವಕುಮಾರ್‍ಗೆ ಹಂಚಿಕೆಯಾಗಿದೆ. ರೇಸ್ ಕೋರ್ಸ್ ರಸ್ತೆಯಲ್ಲಿರುವ ರೇಸ್ ವ್ಯೂ ಕಾಟೇಜ್‍ನಲ್ಲಿ ನಂಬರ್ 1 ಮತ್ತು ನಂಬರ್ 3 ನಿವಾಸಕ್ಕೆ ಕೂಡಾ ಅಶೋಕ್ ಬೇಡಿಕೆ ಇಟ್ಟಿದ್ದಾರೆ. ಸದ್ಯ ರೇಸ್ ವ್ಯೂ ಕಾಟೇಜ್‍ನ ನಂಬರ್ 1 ನಿವಾಸ ಸಚಿವ ಎಂ.ಬಿ.ಪಾಟೀಲ್‍ಗೆ ಹಂಚಿಕೆಯಾಗಿದೆ. ನಂಬರ್ 3 ನಿವಾಸ ಸಚಿವ ಪ್ರಿಯಾಂಕ್ ಖರ್ಗೆಗೆ ಹಂಚಿಕೆಯಾಗಿದೆ.

ಅಪ್ಪ-ಅಮ್ಮನ ಹೆಸರು ಗೊತ್ತಿಲ್ಲದವರು ಜಾತ್ಯಾತೀತ ಹೆಸರು ಹೇಳುತ್ತಾರೆ ; ಹೆಗಡೆ

ಅಶೋಕ್‍ರವರು ಕೇಳಿಕೊಂಡಿರುವ ನಿವಾಸದಲ್ಲಿ ಈ ಹಿಂದೆ ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಾಸ್ತವ್ಯ ಹೂಡಿದ್ದರು. ರಾಜಕಾರಣಿಗಳ ಪಾಲಿಗೆ ಇದನ್ನು ಅದೃಷ್ಟದ ನಿವಾಸವೆಂದೇ ಕರೆಯುತ್ತಾರೆ. ಹೀಗಾಗಿ ಡಿಸಿಎಂ ಡಿ.ಕೆ.ಶಿವಕುಮಾರ್‍ರ ನಿವಾಸವನ್ನು ತಮಗೆ ನೀಡುವಂತೆ ಅಶೋಕ್ ಬೇಡಿಕೆಯಿಟ್ಟಿದ್ದಾರೆ.

ಇದಕ್ಕೆ ಸರ್ಕಾರ ಒಪ್ಪುತ್ತದೆಯೇ ಎಂಬ ಯಕ್ಷಪ್ರಶ್ನೆ ಎದುರಾಗಿದೆ. ಈ ಹಿಂದೆ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಅಂದಿನ ವಿಧಾನಸಭೆ ಪ್ರತಿಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪನವರು ತಮ್ಮ ಪಾಲಿನ ಅದೃಷ್ಟದ ಮನೆಯೆಂದೇ ಹೇಳಲಾಗುವ ರೇಸ್ ವ್ಯೂ ಕಾಟೇಜ್‍ನ ನಂಬರ್ 1 ನಿವಾಸವನ್ನು ನೀಡಬೇಕೆಂದು ಕೇಳಿದ್ದರು. ಆದರೆ ಆ ವೇಳೆಗಾಗಲೇ ಅದು ಸಚಿವ ಸಾ.ರಾ.ಮಹೇಶ್‍ರವರಿಗೆ ನಿಗದಿಯಾಗಿದ್ದರಿಂದ ಬಿ.ಎಸ್.ವೈ ಬೇಡಿಕೆಯನ್ನು ಮನ್ನಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಯಡಿಯೂರಪ್ಪ ತಮ್ಮ ಡಾಲರ್ಸ್ ಕಾಲೋನಿ ನಿವಾಸದಿಂದಲೇ ಕಾರ್ಯ ನಿರ್ವಹಿಸಿದ್ದರು.

RELATED ARTICLES

Latest News