Homeರಾಜ್ಯ100 ಕೋಟಿ ವೌಲ್ಯದ ಪಾಲಿಕೆ ಆಸ್ತಿ ವಶಕ್ಕೆ ಎನ್‌ಆರ್‌ಆರ್‌ ಆಗ್ರಹ

100 ಕೋಟಿ ವೌಲ್ಯದ ಪಾಲಿಕೆ ಆಸ್ತಿ ವಶಕ್ಕೆ ಎನ್‌ಆರ್‌ಆರ್‌ ಆಗ್ರಹ

NRR demands possession of corporation property worth Rs 100 crore

ಬೆಂಗಳೂರು,ಜೂ.6- ಗುತ್ತಿಗೆ ಅವಧಿ ಮುಗಿದು ಹಲವು ವರ್ಷಗಳು ಕಳೆದಿದ್ದರೂ ಪಾಲಿಕೆ ವಶಕ್ಕೆ ಬಾರದಿರುವ ಹಾಗೂ ಪ್ರಭಾವಿ ನೆಲಗಳ್ಳರ ಕಬಳಿಕೆ ಯತ್ನಕ್ಕೆ ಒಳಗಾಗಿರುವ ಸುಮಾರು 100 ಕೋಟಿಗೂ ಅಧಿಕ ಮೌಲ್ಯದ ಎರಡು ಪಾಲಿಕೆ ಆಸ್ತಿಗಳನ್ನು ತಕ್ಷಣವೇ ವಶಕ್ಕೆ ಪಡೆದುಕೊಳ್ಳಬೇಕು ಎಂದು ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಹಾಗೂ ಬಿಜೆಪಿ ಮುಖಂಡ ಎನ್‌.ಆರ್‌.ರಮೇಶ್‌ ಆಗ್ರಹಿಸಿದ್ದಾರೆ.

ನಗರದ ಗಾಂಧಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅಂಚೆಪೇಟೆಯಲ್ಲಿರುವ ರಜತಾ ಕಾಂಪ್ಲೆಕ್‌್ಸ ಪಾಲಿಕೆ ಸ್ವತ್ತಾಗಿದ್ದು, ಸುಮಾರು 20 ಸಾವಿರ ಚದರ ಅಡಿಗೂ ಹೆಚ್ಚು ವಿಸ್ತೀರ್ಣ ಹೊಂದಿದೆ. ಈ ಕಟ್ಟಡದ ನೆಲ ಮಹಡಿಯನ್ನು ಗುತ್ತಿಗೆಗೆ ನೀಡಲಾಗಿದ್ದರೂ ಗುತ್ತಿಗೆ ಅವಧಿ ಹಲವು ವರ್ಷಗಳ ಹಿಂದೆಯೇ ಮುಕ್ತಾಯಗೊಂಡಿದೆ. ಮೊದಲ ಹಾಗೂ ಎರಡನೇ ಮಹಡಿಗಳಲ್ಲಿ ಸರ್ಕಾರಿ ಪ್ರೌಢಶಾಲೆ ಕಾರ್ಯನಿರ್ವಹಿಸುತ್ತಿದ್ದು, ನೆಲ ಮಹಡಿಯಲ್ಲಿರುವ ಅಂಗಡಿಗಳು ಅನಧಿಕೃತವಾಗಿ ಮುಂದುವರಿದಿವೆ ಎಂದು ಅವರು ಆರೋಪಿಸಿದ್ದಾರೆ.

ಈಗಾಗಲೇ ಶಿಥಿಲಾವಸ್ಥೆಗೆ ತಲುಪಿರುವ ಕಟ್ಟಡದಲ್ಲಿನ ಕೆಲವು ವ್ಯಾಪಾರಸ್ಥರು ಮಳಿಗೆಗಳನ್ನು ತಮ್ಮ ಹೆಸರಿಗೆ ಖಾತೆ ಮಾಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ ಎಂದು ರಮೇಶ್‌ ತಿಳಿಸಿದ್ದಾರೆ. ಇದೇ ರೀತಿ, ಚಿಕ್ಕಪೇಟೆ ಸಮೀಪದ ಮಾಮೂಲುಪೇಟೆಯಲ್ಲಿರುವ ಮಹಾರಾಜ ಪ್ಲಾಜಾ ಕೂಡ ಪಾಲಿಕೆಯ ಸ್ವತ್ತಾಗಿದ್ದು, ಸುಮಾರು 25 ಸಾವಿರ ಚದರ ಅಡಿಗೂ ಅಧಿಕ ವಿಸ್ತೀರ್ಣ ಹೊಂದಿದೆ. ಈ ಕಟ್ಟಡದ ಮೊದಲ ಮತ್ತು ಎರಡನೇ ಮಹಡಿಗಳಲ್ಲಿ ಸರ್ಕಾರಿ ಶಾಲೆ ನಡೆಯುತ್ತಿದ್ದು, ನೆಲ ಮಹಡಿಯ ಮಳಿಗೆಗಳನ್ನು ಕೆಲವು ಅತಿಕ್ರಮಣಕಾರರು ಹಲವು ವರ್ಷಗಳಿಂದ ಅಕ್ರಮವಾಗಿ ಬಳಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ಅಲ್ಲದೆ, ಅತಿಕ್ರಮಿಸಿಕೊಂಡಿರುವ ಮಳಿಗೆಗಳನ್ನು ತಮ್ಮ ಹೆಸರಿಗೆ ಮಾಡಿಸಿಕೊಳ್ಳಲು ಕೆಲವರು ಕಾನೂನುಬಾಹಿರ ಪ್ರಯತ್ನ ನಡೆಸುತ್ತಿರುವುದು ಬೆಳಕಿಗೆ ಬಂದಿದೆ ಎಂದು ಅವರು ಹೇಳಿದ್ದಾರೆ.
ಈ ಎರಡೂ ಆಸ್ತಿಗಳ ಒಟ್ಟು ಮಾರುಕಟ್ಟೆ ಮೌಲ್ಯ 100 ಕೋಟಿಗೂ ಅಧಿಕವಾಗಿದ್ದು, ಗುತ್ತಿಗೆ ಅವಧಿ ಮುಗಿದ ನಂತರವೂ ಖಾಲಿ ಮಾಡದಿರುವ ಅತಿಕ್ರಮಣಕಾರರನ್ನು ತೆರವುಗೊಳಿಸಿ, ಆಸ್ತಿಗಳನ್ನು ತಕ್ಷಣ ಪಾಲಿಕೆ ಸುಪರ್ಧಿಗೆ ಪಡೆಯಬೇಕು ಎಂದು ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರಿಗೆ ಮನವಿ ಸಲ್ಲಿಸಲಾಗಿದೆ.

ಇದರ ಜೊತೆಗೆ, ಗಾಂಧಿನಗರ ವಿಭಾಗದ ಕಂದಾಯ ಇಲಾಖೆಯಲ್ಲಿ ಕಳೆದ ಏಳೆಂಟು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಕೆಲವು ಅಧಿಕಾರಿಗಳು ಮತ್ತು ನೌಕರರು ಅತಿಕ್ರಮಣಕಾರರಿಗೆ ಕಾನೂನುಬಾಹಿರ ಸಹಕಾರ ನೀಡಿರುವ ಆರೋಪವೂ ಕೇಳಿಬಂದಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ರಮೇಶ್‌ ಒತ್ತಾಯಿಸಿದ್ದಾರೆ.

RELATED ARTICLES

Latest News