ಬೆಂಗಳೂರು: ಫೆ.12ರಿಂದ ಫೆ.23ರವರೆಗೆ ರಾಜ್ಯ ವಿಧಾನಮಂಡಲದ ಅಧಿವೇಶನ ನಡೆಸುವುದು, ರಾಜ್ಯದ ಸಾಂಸ್ಕೃತಿಕ ನಾಯಕರನ್ನಾಗಿ ಬಸವಣ್ಣ ಅವರ ಹೆಸರನ್ನು ಘೋಷಣೆ ಮಾಡುವ ಮಹತ್ವ ನಿರ್ಧಾರವನ್ನು ಇಂದು ನಡೆದ ಸಚಿವ ಸಂಪುಟ ಸಭೆ ಕೈಗೊಂಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯ ವಿವರಗಳನ್ನು ಕಾನೂನು ಸಚಿವ ಎಚ್.ಕೆ.ಪಾಟೀಲ್ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದರು.
ಫೆಬ್ರವರಿ 12 ರಂದು ವಿಧಾನಮಂಡಲ ಜಂಟಿ ಅಧಿವೇಶನ ನಡೆಯಲಿದ್ದು, ಅಂದು ರಾಜ್ಯಪಾಲರು ಉಭಯ ಸದನಗಳ ಸದಸ್ಯರನ್ನು ಉದ್ದೇಶಿ ಭಾಷಣ ಮಾಡಲಿದ್ದಾರೆ.ಫೆ. 16 ರಂದು ಬಜೆಟ್ ಮಂಡನೆ ಆಗಲಿದೆ ಫೆ. 23ರವರೆಗೆ ಉಭಯ ಸದನಗಳ ಅಧಿವೇಶನ ನಡೆಯಲಿದೆ ಎಂದು ತಿಳಿಸಿದರು.
ಅರಣ್ಯ ಸಚಿವ ಈಶ್ವರ ಖಂಡ್ರೆ ಮಾತನಾಡಿ ಜಾತಿ ರಹಿತ ಸಮಾಜದ ಕನಸು ಕಂಡವರು ಬಸವಣ್ಣ. ಸಮಾಜದಲ್ಲಿ ಸಾಮರಸ್ಯ ತರುವ ನಿಟ್ಟಿನಲ್ಲಿ ಅವರ ತತ್ವಗಳು ಹೆಚ್ಚು ಪ್ರಸಾರ ಆಗಬೇಕು. ಅವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಬೇಕು ಎಂಬ ಬೇಡಿಕೆ ಇತ್ತು. ಈ ನಿಟ್ಟಿನಲ್ಲಿ ಸಂಪುಟದಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಇಂದಿನ ಕಲುಷಿತ ವಾತಾವರಣದಲ್ಲಿ ಬಸವಣ್ಣ ತತ್ವ ಆದರ್ಶ ಎಲ್ಲಡೆ ಪಸರಿಸಬೇಕು. ಇದಕ್ಕೆ ಸರ್ಕಾರ ಎಲ್ಲಾ ರೀತಿಯ ಪ್ರೋತ್ಸಾಹ ನೀಡುತ್ತದೆ ಎಂದರು.
ಅದಕ್ಕಾಗಿ ಮುಖ್ಯಮಂತ್ರಿ ಹಾಗೂ ಸಂಪುಟದ ಸಚಿವರನ್ನು ಅಭಿನಂದಿಸುವುದಾಗಿ ಹೇಳಿದ ಅವರು, 2025 ರಲ್ಲಿ ಅನುಭವ ಮಂಟಪ ಪೂರ್ಣಗೊಳ್ಳಬೇಕು. ಮುಂದಿನ ವರ್ಷ ಅನುಭವ ಮಂಟಪದ ಲೋಕಾರ್ಪಣೆ ಆಗಲಿದೆ ಎಂದು ತಿಳಿಸಿದರು.
ಸಂಪುಟ ಸಭೆಯ ಇತರ ತೀರ್ಮಾನಗಳು :
ಚಿಕ್ಕಮಗಳೂರಿನ ಬಾಬಾ ಬುಡನಗಿರಿಗೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಸಲ್ಲಿಸುವ ಆಕ್ಷೇಪಣಾ ಹೇಳಿಕೆ ತಯಾರಿಸಲು ಗೃಹ, ಕಾನೂನು, ಕಂದಾಯ ಸಚಿವರನ್ನು ಒಳಗೊಂಡ ಸಂಪುಟ ಉಪ ಸಮಿತಿ ರಚನೆ ಮಾಡಲು ಸಂಪುಟ ತೀರ್ಮಾನಿಸಿದೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.
ಶಿವಮೊಗ್ಗದ ಹಳೇ ಜೈಲು ಆವರಣದ ಉದ್ಯಾನವನಕ್ಕೆ ಅಲ್ಲಮಪ್ರಭು ಹೆಸರು ಎಂದು ನಾಮಕರಣಕ್ಕೆ ನಿರ್ಧಾರ ಮಾಡಲಾಗಿದೆ. ಬೆಳಗಾವಿಯ ಕಿತ್ತೂರು ತಾಲೂಕಿನ ಹೆಸರನ್ನು ಚನ್ನಮ್ಮನ ಕಿತ್ತೂರು ಎಂದು ನಾಮಕರಣಕ್ಕೆ ನಿರ್ಣಯಿಸಿದೆ ಎಂದರು.ಕರ್ನಾಟಕ ವಿದ್ಯುತ್ ನಿಗಮದ 4,430 ಕೋಟಿ ರೂ. ಸಾಲಕ್ಕೆ ಸರ್ಕಾರಿ ಖಾತರಿ ನೀಡಲು ಸಂಪುಟ ನಿರ್ಣಯ ಕೈಗೊಂಡಿತು.
ಗೃಹ ಜ್ಯೋತಿ ಯೋಜನೆ ಅನುಷ್ಠಾನ ಆದೇಶ ಮಾರ್ಪಡಿಸಿ ಶೇ.10 ಬದಲು ಹೆಚ್ಚುವರಿ 10 ಯೂನಿಟ್ ಒದಗಿಸಲು ಸಂಪುಟ ಒಪ್ಪಿಗೆ ಸೂಚಿಸಿದೆ. ವಿಶ್ವವಿದ್ಯಾಲಯ ಮತ್ತು ಕಾಲೇಜುಗಳಲ್ಲಿ ಸಮಗ್ರ ವಿವಿ ಮತ್ತು ಕಾಲೇಜು ನಿರ್ವಹಣಾ ತಂತ್ರಾಂಶ 15.13 ಕೋಟಿ ರೂ. ವೆಚ್ಚದಲ್ಲಿ ಸಿದ್ಧಪಡಿಸಿ ಅನುಷ್ಠಾನಕ್ಕೆ ಸಂಪುಟ ಸಮತಿಸಲಾಯಿತು. 30 ಸೀಟರ್ ಕಾಲ್ ಸೆಂಟರ್ ಸ್ಥಾಪನೆಗೆ ನಿರ್ಧಾರ ಮಾಡಲಾಯಿತು ಎಂದು ಹೇಳಿದರು.
ಕರ್ನಾಟಕ ಮೋಟಾರು ಸಾರಿಗೆ ಮತ್ತು ಇತರೆ ಸಂಬಂಧಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮತ್ತು ಕಲ್ಯಾಣ ಸುಂಕ ವಿಧೇಯಕ 2024 ಕ್ಕೆ ಅನುಮೋದನೆ ದೊರೆತಿದೆ. ಮೈಸೂರು ಜಿಲ್ಲೆಯ ಎಚ್‌ಡಿ ಕೋಟೆ ಅಂತರಸಂತೆಯ ಹಾಗೂ ಇತರ ಜನವಸತಿಗಳಿಗೆ ಜಲಜೀವನ ಮಿಷನ್‌ಗೆ 101.73 ಕೋಟಿ ರೂ ಯೋಜನೆಗೆ, ಹಂಪಾಪುರಕ್ಕೆ ಹಾಗೂ 48 ಜನವಸತಿಗಳಿಗೆ 65.07 ಕೋಟಿ ರೂ. ವೆಚ್ಚದ ಕುಡಿಯುವ ನೀರು ಯೋಜನೆ ಅನುಷ್ಠಾನಕ್ಕೆ ಅನುಮೋದನೆ ದೊರೆತಿದೆ.
ಟಿ.ನರಸೀಪುರ ತಾಲೂಕಿನ ದೊಡ್ಡ ಬಾಗಿಲು ಮತ್ತು ಇತರೆ 24 ಜನವಸತಿಗಳಿಗೆ 34 ಕೋಟಿ ರೂ. ವೆಚ್ಚದ ಬಹು ಗ್ರಾಮದ ಕುಡಿಯುವ ನೀರು ಯೋಜನೆಗೆ ಹಾವೇರಿ ತಾಲೂಕಿನ ನೆಗಲೂರು ಮತ್ತು ಇತರೆ ಮೂರು ಗ್ರಾಮಗಳಿಗೆ 18 ಕೋಟಿ ರೂ. ವೆಚ್ಚದ ಜಲಜೀವನ ಮಿಷನ್ ಪುನಶ್ಚೇತನ ಕಾಮಗಾರಿಗೆ ಅನುಮೋದನೆ ನೀಡಲಾಯಿತು ಎಂದರು.
ಹಾನಗಲ್ ತಾಲೂಕಿನ ಕುಡ್ಡ ಮತ್ತು ಇತರೆ ಗ್ರಾಮಗಳಿಗೆ 26 ಕೋಟಿ ರೂ. ವೆಚ್ಚದ ಜಲಜೀವನ ಮಿಷನ್’ ತಾಲೂಕಿನ 24 ಗ್ರಾಮಗಳಿಗೆ 245 ಕೋಟಿ ರೂ. ವೆಚ್ಚದ ಪುನಶ್ಚೇತನ ಕಾಮಗಾರಿಗೆ ಒಪ್ಪಿಗೆ ನೀಡಲಾಯಿತು ಎಂದು ಹೇಳಿದರು.
ಆನೇಕಲ್‌ನ ಅಂಬೇಡ್ಕರ್ ಭವನಕ್ಕೆ ಪರಿಷ್ಕೃತ 17.40 ಕೋಟಿ ರೂ. ವೆಚ್ಚಕ್ಕೆ ಮತ್ತು ಹಲಸೂರು ಕೆರೆಯ ಬಳಿ ಪ್ರವಾಸಿಸೌಧ ನಿರ್ಮಾಣಕ್ಕೆ 18 ಕೋಟಿ ರೂಗೆ ಆಡಳಿತಾತ್ಮಕ ಅನುಮೋದನೆ ನೀಡಲಾಯಿತು.ರಾಜ್ಯದಲ್ಲಿ ನೋಂದಾಯಿತ ವಾಹನಗಳ ಸ್ಕ್ರಾಪಿಂಗ್ ನೀತಿಯ ಕ್ರಮ ಸಂಖ್ಯೆ 9ನ್ನು ಪರಿಷ್ಕರಣೆಗೆ ಅನುಮೋದನೆ ದೊರೆತಿದ್ದು, ಕೊಡಗು ಜಿಲ್ಲೆಯ ಪೊನ್ನಂಪೇಟೆ ಗ್ರಾಪಂನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೇಗೇರಿಸುವುದಕ್ಕೆ ನಿರ್ಧಾರ ಮಾಡಲಾಯಿತು ಎಂದು ಅವರು ಹೇಳಿದರು