ಬೆಂಗಳೂರು, ಜೂ.8- ರಾಜ್ಯದ ವಿವಿಧೆಡೆ ಸುರಿಯುತ್ತಿರುವ ಮಳೆಯಿಂದಾಗಿ ತರಕಾರಿಗಳ ಬೆಲೆ ಗಗನಕ್ಕೇರಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತಿದೆ. ಹೆಚ್ಚಾಗಿ ತರಕಾರಿ ಬೆಳೆಯುವ ಪ್ರದೇಶಗಳಾದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು ಪ್ರದೇಶಗಳಲ್ಲಿ ಕಳೆದ ಕೆಲವು ದಿನಗಳಿಂದ ಮಳೆಯಾಗುತ್ತಿದ್ದು, ತರಕಾರಿ ಬೆಳೆಗಳು ನಾಶವಾಗಿದ್ದು, ಬೆಲೆ ಏರಿಕೆಗೆ ಕಾರಣವಾಗಿದೆ.
ಕಳೆದ ಕೆಲವು ದಿನಗಳಿಂದ 180 ರೂ.ಗಳ ಆಸುಪಾಸಿನಲ್ಲಿದ್ದ ಹುರಳಿಕಾಯಿ ತುಸು ಇಳಿಕೆಯಾಗಿದ್ದು, ಕೆಜಿಗೆ 100-120 ರೂ.ಗೆ ಇಳಿದಿದ್ದು ಗ್ರಾಹಕರು ತುಸು ನಿರಾಳವಾಗಿದ್ದಾರೆ.
ಆದರೆ ಟೊಮ್ಯಾಟೋ ಅರ್ಧಶತಕ ಭಾರಿಸಿ ಮುನ್ನುಗ್ಗುತ್ತಿದೆ. ಕೆಜಿಗೆ 50 ರೂ.ಗಳಿಂದ 60 ರೂ.ಗಳಿಗೆ ಮಾರಾಟವಾಗುತ್ತಿದೆ.
ಮಧ್ಯಪ್ರಾಚ್ಯದಲ್ಲಿನ ಯುದ್ಧದಿಂದಾಗಿ ಪೆಟ್ರೋಲ್, ಡೀಸೆಲ್ ಗಗನಕ್ಕೇರಿದ್ದು, ಸಾಗಾಟ ವೆಚ್ಚ ದುಬಾರಿಯಾಗಿದ್ದರಿಂದ ಇದರ ಹೊರೆ ಗ್ರಾಹಕರ ಮೇಲೆ ಬೀಳುತ್ತಿದ್ದು, ಇಲ್ಲಿ ರೈತರು ಮತ್ತು ಗ್ರಾಹಕರಿಗೆ ನಷ್ಟವಾಗುತ್ತಿದ್ದರೆ, ಮಂಡಿ ಮಾಲೀಕರು, ದಲ್ಲಾಳಿಗಳಿಗೆ ಲಾಭವಾಗುತ್ತಿದೆ.
ಬೀನ್ಸ್ – 80 ರಿಂದ 100 ರೂ., ಟೊಮ್ಯಾಟೊ- 50 ರಿಂದ 60 ರೂ., ಬೀಟರೂಟ್-50 ರೂ., ಎಲೆಕೋಸು-50 ರೂ., ಮೂಲಂಗಿ-ರೂ., ಹೀರೇಕಾಯಿ- 50 ರೂ.,ಕ್ಯಾಪ್ಸಿಕಂ-80 ರೂ., , ಹಸಿಮೆಣಸಿನಕಾಯಿ-80 ರೂ.ಗೆ ಮಾರಾಟವಾಗುತ್ತಿದೆ.
ಸೊಪ್ಪುಗಳ ಬೆಲೆಯಲ್ಲೂ ಸಹ ಏರಿಕೆಯಾಗಿದ್ದು, ಮೆಂತ್ಯೆ ಒಂದು ಕಟ್‌ಗೆ 30 ರೂ., ಕೊತ್ತುಂಬರಿ-50 ರೂ., ಪಾಲಾಕ್-30 ರೂ., ದಂಟು- 30 ರೂ.ಗೆ ಮಾರಾಟವಾಗುತ್ತಿದೆ.
ಈರುಳ್ಳಿ ಕುಸಿತ
ಕಳೆದ ಕೆಲವು ತಿಂಗಳುಗಳಿಂದ ಈರುಳ್ಳಿ ಬೆಲೆ ಕುಸಿತವಾಗಿದ್ದು, ಬೆಳೆಗಾರರು ಕಂಗಾಲಾಗಿದ್ದಾರೆ. ಗುಣಮಟ್ಟದ ಈರುಳ್ಳಿ ಕೆಜಿಗೆ 20 ರಿಂದ 25 ರೂ.ಗೆ ಮಾರಾಟವಾಗುತ್ತಿದೆ. 100 ರೂ.ಗೆ 5 ಕೆಜಿ ಮಾರಾಟವಾಗುತ್ತಿದ್ದು, ಮಾರುಕಟ್ಟೆಯಲ್ಲಿ ಇನ್ನೂ ಕಡಿಮೆ ಬೆಲೆ ಇದೆ.
ದಾವಣಗೆರೆ, ಬಳ್ಳಾರಿ, ರಾಯಚೂರು, ಚಿತ್ರದುರ್ಗ ಸೇರಿದಂತೆ ಮತ್ತಿತರ ಜಿಲ್ಲೆಗಳಿಂದ ಬೆಂಗಳೂರಿನ ಆರ್‌ಎಂಸಿ ಯಾರ್ಡ್‌ಗೆ ಅಪಾರ ಪ್ರಮಾಣದಲ್ಲಿ ಈರುಳ್ಳಿ ಬರುತ್ತಿದ್ದು, ಬೆಲೆ ಕುಸಿತಕ್ಕೆ ಕಾರಣವಾಗಿದೆ.
ಕಳೆದ 2-3 ತಿಂಗಳಿನಿಂದಲೂ ಸಹ ಈರುಳ್ಳಿ ಬೆಲೆ ಮೇಲೇಳದೆ ಸ್ಥಿರತೆಯನ್ನು ಕಾಯ್ದುಕೊಂಡಿದ್ದು, ಬೆಳೆಗಾರರ ಕಣ್ಣಲ್ಲಿ ನೀರು ತರಿಸುತ್ತಿದೆ.ಉ.ಕರ್ನಾಟಕ ಭಾಗದಲ್ಲಿ ಮಳೆಯಾಗುತ್ತಿದ್ದು, ಬಿತ್ತನೆಯಾಗಿರುವ ಬೆಳೆ ನಾಶವಾಗಿದ್ದು, ಮುಂದಿನ ದಿನಗಳಲ್ಲಿ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ.
