ಚಿಕ್ಕಮಗಳೂರು,ಜ.21- ಅಧಿಕಾರಕ್ಕಾಗಿ ನಾನು ವಲಸೆ ಪ್ರಾಣಿ ಅಲ್ಲ. ವಿದ್ಯಾರ್ಥಿ ದೆಸೆಯಿಂದಲೂ ಕಾಂಗ್ರೆಸ್‍ನಲ್ಲೇ ಇದ್ದೇನೆ. ಅಧಿಕಾರಕ್ಕಾಗಿ ಪಕ್ಷ ಬದಲಾವಣೆ ಮಾಡುವವನಲ್ಲ ಎಂದು ಪಕ್ಷದ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮಾಧಾನ-ಅಸಮಾಧಾನದ ಬಗ್ಗೆ ಅರ್ಥ ಮಾಡಿಕೊಂಡವರಿಗೆ ಗೊತ್ತಾಗುತ್ತದೆ. ರಾಜ್ಯದ ಮುಖ್ಯಮಂತ್ರಿ ಅವರ ಮೇಲೆ ನಾನೇಕೆ ಸಿಟ್ಟಾಗಬೇಕು ಎಂದು ಮರುಪ್ರಶ್ನಿಸಿದ್ದಾರೆ.
ನಿಗಮ ಮಂಡಳಿ ನೇಮಕಾತಿ ವಿಚಾರದಲ್ಲಿ ನನಗೆ ಯಾವುದೇ ಮಾಹಿತಿ ಇಲ್ಲ. ಯಾವ ಮಾನದಂಡದ ಆಧಾರದ ಮೇಲೆ ನೇಮಕಾತಿ ಮಾಡುತ್ತಿದ್ದಾರೆ ಎಂದು ಗೊತ್ತಿಲ್ಲ. ನಾನು ಸರ್ಕಾರದಿಂದ ಹೊರಗಡೆ ಇದ್ದೇನೆ. ನಮ್ಮ ಪಕ್ಷದ ಸರ್ಕಾರ ಅಧಿಕಾರದಲ್ಲಿದೆ. ಆದರೆ ನಿಗಮ ಮಂಡಳಿ ನೇಮಕಾತಿಯಲ್ಲಿ ಪಕ್ಷವನ್ನು ಎಷ್ಟು ವಿಶ್ವಾಸಕ್ಕೆ ತೆಗೆದುಕೊಂಡು ಮಾಡುತ್ತಾರೆ ಎಂಬುದು ಗೊತ್ತಿಲ್ಲ ಎಂದರು.
ನನಗೆ ಕಾಂಗ್ರೆಸ್ ಪಕ್ಷದ ಮೇಲೆ ಯಾವುದೇ ಅಸಮಾಧಾನ ಇಲ್ಲ. ಪಕ್ಷ ನಮ್ಮದು. ಅಧಿಕಾರಕ್ಕಾಗಿ ವಲಸೆ ಪ್ರಾಣಿ ನಾನಲ್ಲ. ಇಂತಹ ವಿಚಾರಗಳ ಕುರಿತು ನನ್ನನ್ನು ಪ್ರಶ್ನೆ ಕೇಳುವುದೂ ಸರಿಯಲ್ಲ. ಕೆಲವರು ಕಾಂಗ್ರೆಸ್ ಪಕ್ಷ ತಮ್ಮದೇ ಎಂದು ಹೇಳುತ್ತಿರುವುದರ ಬಗ್ಗೆ ನನಗೆ ಆಕ್ಷೇಪವಿದೆ. ಸಿದ್ದರಾಮಯ್ಯ ಅಧಿಕಾರಕ್ಕಾಗಿ ವಲಸೆ ಬಂದವರು ಎಂಬ ಅಭಿಪ್ರಾಯ ಇರಬಹುದು. ನಾನು ಆ ಬಗ್ಗೆ ವಿಶ್ಲೇಷಿಸುವುದಿಲ್ಲ ಎಂದು ಹೇಳಿದರು.
ತ್ರಿವಿಧ ದಾಸೋಹಿ ಡಾ. ಶಿವಕುಮಾರ ಶ್ರೀಗಳ 5ನೇ ಪುಣ್ಯಸ್ಮರಣೆ
ನಾವು ಚಿಕ್ಕ ವಯಸ್ಸಿನಿಂದಲೂ ಹಿರಿಯರು ಹೇಳಿದ ಪ್ರಕಾರ ಹಿಂದೂ ಧರ್ಮದ ಮುಖ್ಯಸ್ಥರೆಂದರೆ ಅದು ಶಂಕರಾಚಾರ್ಯರು ಎಂಬ ನಂಬಿಕೆ ಇದೆ. ಈಗ ಅಯೋಧ್ಯೆಯಲ್ಲಿನ ಶ್ರೀರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಗೆ ಶಂಕರಾಚಾರ್ಯರು ಹೋಗುತ್ತಿಲ್ಲ, ವಿಶ್ವಗುರು ಹೋಗುತ್ತಿದ್ದಾರೆ. ವಿಶ್ವಗುರು ಜಗದ್ಗುರು ಅಲ್ಲ. ಕರಾಚಾರ್ಯರ 4 ಪೀಠಗಳ ಗುರುಗಳು ಹೇಳಿಕೆ ನೀಡಿದ್ದಾರೆ. ಇಬ್ಬರು ಪ್ರಾಣ ಪ್ರತಿಷ್ಠಾಪನೆಯ ವಿರುದ್ಧವಾಗಿ ಮಾತನಾಡಿದ್ದಾರೆ. ಉಳಿದಿಬ್ಬರು ತಟಸ್ಥವಾಗಿದ್ದಾರೆ ಎಂದರು.
ಅದು ಧಾರ್ಮಿಕ ಕಾರ್ಯಕ್ರಮವಾಗಿದ್ದರೆ ಯಾರೂ ನಮಗೆ ಆಹ್ವಾನ ನೀಡಬೇಕಿರಲಿಲ್ಲ. ನಾವಾಗಿಯೇ ಭಾಗವಹಿಸುತ್ತಿದ್ದೆವು. ಧಾರ್ಮಿಕತೆಯನ್ನು ಒಳಗೊಂಡ ಜಾತ್ರೆಗಳಿಗೆ ನಮ್ಮನ್ನು ಯಾರೂ ಕರೆಯುವುದಿಲ್ಲ. ನಾವೇ ಹೋಗುತ್ತೇವೆ. ಆದರೆ ಅಯೋಧ್ಯೆಯಲ್ಲಿ ನಡೆಯುತ್ತಿರುವುದು ರಾಜಕೀಯ ಕಾರ್ಯಕ್ರಮ ಎಂದು ಹೇಳಿದರು. ಅಯೋಧ್ಯೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಲು ಬಿಜೆಪಿಯವರು ಯಾರು? ರಾಮ ಏನು ಅವರಿಗೆ ಫೋನ್ ಮಾಡಿ ಎಲ್ಲರಿಗೂ ಆಹ್ವಾನಪತ್ರಿಕೆ ಕೊಡಿ ಎಂದು ಹೇಳಿದ್ದಾರಾ? ಎಂದು ಪ್ರಶ್ನಿಸಿದರು.
ದೇಶದಲ್ಲಿ 33 ಕೋಟಿ ದೇವರುಗಳಿವೆ. ಯಾವ ದೇವಸ್ಥಾನಕ್ಕೆ ಬೇಕಾದರೂ ಹೋಗುತ್ತೇವೆ. ಇಂತಹ ದೇವರ ಬಳಿಗೇ ಹೋಗಬೇಕು ಎಂದೇನು ಇಲ್ಲವಲ್ಲ. ನಾವು ಮಾರಮ್ಮ, ಅಣ್ಣಮ್ಮ, ಭೂತ ಪೂಜೆ ಮಾಡುವವರು. ದೆವ್ವ ಪೂಜೆ ಮಾಡುವವರು. ಭೂತದ ಬಳಿಗೆ ಹೋಗುತ್ತೇವೆ. ಬಿಜೆಪಿಯವರು ಅಯೋಧ್ಯೆಯ ವಿಚಾರದಲ್ಲಿ ರಾಜಕೀಯ ಗಿಮಿಕ್ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.