Sunday, April 28, 2024
Homeರಾಜ್ಯತ್ರಿವಿಧ ದಾಸೋಹಿ ಡಾ. ಶಿವಕುಮಾರ ಶ್ರೀಗಳ 5ನೇ ಪುಣ್ಯಸ್ಮರಣೆ

ತ್ರಿವಿಧ ದಾಸೋಹಿ ಡಾ. ಶಿವಕುಮಾರ ಶ್ರೀಗಳ 5ನೇ ಪುಣ್ಯಸ್ಮರಣೆ

ತುಮಕೂರು,ಜ.21- ನಡೆದಾಡುವ ದೇವರು, ಕರ್ನಾಟಕ ರತ್ನ, ತ್ರಿವಿಧ ದಾಸೋಹಿ ಶ್ರೀಕ್ಷೇತ್ರ ಸಿದ್ದಗಂಗೆಯ ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿಯವರ 5ನೇ ವರ್ಷದ ಪುಣ್ಯಸಂಸ್ಮರಣೋತ್ಸವ ಅಂಗವಾಗಿ ಪೀಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ, ಕಿರಿಯ ಶ್ರೀಗಳಾದ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿಯವರ ನೇತೃತ್ವದಲ್ಲಿ ಶ್ರೀಗಳ ಗದ್ದುಗೆಗೆ ಹರಗುರು ಚರಮೂರ್ತಿಗಳು ಪೂಜೆ ಸಲ್ಲಿಸುವ ಮೂಲಕ ಧಾರ್ಮಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಇಂದು ಮುಂಜಾನೆ 5.30 ರಿಂದಲೇ ಲಿಂಗೈಕ್ಯ ಶ್ರೀಗಳ ಗದ್ದುಗೆಗೆ ವಿಶೇಷ ಪೂಜೆ, ರುದ್ರಾಭಿಷೇಕ, ಬಿಲ್ವಾರ್ಚನೆ, ನೀಲಾಂಜನ ಸಮರ್ಪಣೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ಶ್ರೀಗಳ ಗದ್ದುಗೆಗೆ ವಿವಿಧ ಬಗೆಯ ಫಲಪುಷ್ಪಗಳಿಂದ ಅಲಂಕಾರ ಮಾಡಲಾಗಿತ್ತು. ಶ್ರೀಗಳ ಕಂಚಿನ ಪುತ್ಥಳಿಯನ್ನು ರಥದಲ್ಲಿ ಇರಿಸಿ ಗದ್ದುಗೆಯ ಮಂದಿರದ ಮುಂಭಾಗದಿಂದ ವೀರಗಾಸೆ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳೊಂದಿಗೆ ಮಠದ ಆವರಣದಲ್ಲಿ ಮೆರವಣಿಗೆ ನಡೆಸಲಾಯಿತು. ಈ ವೇಳೆ ಅಪಾರ ಭಕ್ತರು ಹಾಗೂ ಶ್ರೀಮಠದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಮಸೀದಿ, ದರ್ಗಾಗಳಲ್ಲಿ ರಾಮನಾಮ ಜಪಿಸಿ ದೀಪ ಬೆಳಗಿಸಿ ಎಂದ ಮೌಲ್ವಿ ವಿಡಿಯೋ ವೈರಲ್

ಸಂಸ್ಮರಣಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು. ಶ್ರೀಮಠದಲ್ಲಿ ಆಕರ್ಷಣೀಯವಾಗಿ ನಿರ್ಮಾಣ ಮಾಡಲಾಗಿರುವ ಸ್ಮೃತಿವನವನ್ನು ಸಚಿವ ಈಶ್ವರ್ ಖಂಡ್ರೆಯವರು ಉದ್ಘಾಟಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಅವರು ಡಾ.ಶಿವಕುಮಾರ್ ಮಹಾಸ್ವಾಮೀಜಿ ಆಸ್ಪತ್ರೆಯ ಎಸ್‍ಎಂಸಿಆರ್‍ಐ ಘಟಕವನ್ನು ಉದ್ಘಾಟಿಸಿದರು.

ಶ್ರೀಗಳ ಆಶಯದಂತೆ ದಾಸೋಹಕ್ಕೆ ಹೆಚ್ಚಿನ ವ್ಯವಸ್ಥೆ ಮಾಡಲಾಗಿದ್ದು, ಮಠಕ್ಕೆ ಆಗಮಿಸುವ ಭಕ್ತಾದಿಗಳಿಗೆ ಬೆಳಿಗ್ಗೆಯಿಂದಲೇ ಉಪ್ಪಿಟ್ಟು, ಕೇಸರಿಬಾತ್, ಕಾಫಿ, ಟೀಯನ್ನು ವಿತರಿಸಲಾಯಿತು. ಮಧ್ಯಾಹ್ನ 11 ಗಂಟೆಯಿಂದ ರಾತ್ರಿ 11 ಗಂಟೆಯವರೆಗೂ ನಿರಂತರವಾಗಿ ಚಿತ್ರಾನ್ನ, ಪಾಯಸ, ಬೂಂದಿ, ಅನ್ನ, ಸಾಂಬಾರ್, ಮಜ್ಜಿಗೆ ಸೇರಿದಂತೆ ವಿವಿಧ ಬಗೆಯ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ.

ಮಠದ ಆವರಣದ ವಿವಿಧ ಕಡೆ ದಾಸೋಹ ಕೇಂದ್ರಗಳನ್ನು ತೆರೆದಿದ್ದು, ಬರುವ ಭಕ್ತರಿಗೆ ಪ್ರಸಾದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಸ್ಥಳೀಯ ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಜನಪ್ರತಿನಿಗಳು, ಗಣ್ಯರು, ಸ್ಥಳೀಯ ಮುಖಂಡರು, ಭಕ್ತಾದಿಗಳು ಅಪಾರ ಸಂಖ್ಯೆಯಲ್ಲಿ ಭೇಟಿ ನೀಡಿ ಶಿವಕುಮಾರ ಸ್ವಾಮೀಜಿ ಗದ್ದುಗೆ ದರ್ಶನ ಪಡೆದು ಶ್ರೀಗಳ ಪುಣ್ಯ ಸಂಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

RELATED ARTICLES

Latest News