Homeರಾಜ್ಯವಿಧಾನಪರಿಷತ್‌ ಚುನಾವಣೆ : ಪಕ್ಷೇತರ ಶಾಸಕರಿಗೆ ಭಾರೀ ಡಿಮ್ಯಾಂಡ್‌

ವಿಧಾನಪರಿಷತ್‌ ಚುನಾವಣೆ : ಪಕ್ಷೇತರ ಶಾಸಕರಿಗೆ ಭಾರೀ ಡಿಮ್ಯಾಂಡ್‌

Legislative Council Elections: High Demand for Independent MLAs

ಬೆಂಗಳೂರು, ಜೂ.11- ಇದೇ ತಿಂಗಳ 18 ರಂದು ವಿಧಾನಸಭೆಯಿಂದ ವಿಧಾನ ಪರಿಷತ್‌ ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಪಕ್ಷೇತರ ಶಾಸಕರಿಗೆ ಭಾರೀ ಡಿಮ್ಯಾಂಡ್‌ ಬಂದಿದೆ. ವಿಧಾನ ಪರಿಷತ್ತಿನ 7 ಸ್ಥಾನಗಳ ಚುನಾವಣೆಯು ರಾಜಕೀಯ ವಲಯದಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ.

ಈ ಚುನಾವಣೆಯಲ್ಲಿ ಪಕ್ಷೇತರ ಶಾಸಕರು ಮತ್ತು ಅತೃಪ್ತ ಶಾಸಕರ ಪಾತ್ರ ನಿರ್ಣಾಯಕವಾಗಿದೆ.ಯಾವುದೇ ಒಂದು ರಾಜಕೀಯ ಪಕ್ಷದ ಅಧಿಕೃತ ಅಭ್ಯರ್ಥಿಗಳ ಸೋಲು ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಲಿರುವ ಪಕ್ಷೇತರ ಶಾಸಕರನ್ನು ಸೆಳೆಯಲು ಆಡಳಿತರೂಢ ಕಾಂಗ್ರೆಸ್‌‍ ಮತ್ತು ಪ್ರತಿಪಕ್ಷ ಜೆಡಿಎಸ್‌‍ ನಡುವೆ ಭಾರೀ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿದೆ.

ಕಾಂಗ್ರೆಸ್‌‍ ಮತ್ತು ಜೆಡಿಎಸ್‌‍ ಎರಡೂ ಪಕ್ಷಗಳು ತಮ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಶಾಸಕರನ್ನು ಒಗ್ಗೂಡಿಸುವ ಕಸರತ್ತು ನಡೆಸುತ್ತಿವೆ. ಬಿಜೆಪಿ ಬಂಡಾಯ ಶಾಸಕರು ಯಾರತ್ತ ವಾಲುತ್ತಾರೆ ಎಂಬುದು ಮತ್ತು ಜೆಡಿಎಸ್‌‍ನ ಹಿರಿಯ ನಾಯಕ ಜಿ.ಟಿ.ದೇವೇಗೌಡ ಅವರ ನಿಲುವು ಏನು ಎಂಬುದು ಈ ಚುನಾವಣೆಯ ಅತ್ಯಂತ ಕುತೂಹಲಕಾರಿ ಅಂಶಗಳಾಗಿವೆ.

ಬಿಜೆಪಿ 2 ಸ್ಥಾನಗಳನ್ನು ಸುಲಭವಾಗಿ ಗೆಲ್ಲುವ ಸ್ಥಿತಿಯಲ್ಲಿದೆ. ಆದರೆ, ಜೆಡಿಎಸ್‌‍ನೊಂದಿಗೆ ಮೈತ್ರಿ ಮಾಡಿಕೊಂಡಿದ್ದರೂ, ಹೆಚ್ಚುವರಿ ಮತಗಳಿಗಾಗಿ ಬಿಜೆಪಿ ಬಂಡಾಯ ನಾಯಕರು ಮತ್ತು ಸ್ವತಂತ್ರರ ಮೊರೆ ಹೋಗುವ ಅನಿವಾರ್ಯತೆ ಇದೆ. ಬಿಜೆಪಿ ಮತ್ತು ಕಾಂಗ್ರೆಸ್‌‍ನಿಂದ ಹೊರಬಂದಿರುವ ಅಥವಾ ಬಂಡಾಯವೆದ್ದಿರುವ ಶಾಸಕರು (ಉದಾಹರಣೆಗೆ ಎಸ್‌‍.ಟಿ. ಸೋಮಶೇಖರ್‌, ಶಿವರಾಮ್‌ ಹೆಬ್ಬಾರ್‌, ಬಸನಗೌಡ ಪಾಟೀಲ್‌ ಯತ್ನಾಳ್‌) ಯಾರಿಗೆ ಬೆಂಬಲ ನೀಡುತ್ತಾರೆ ಎಂಬುದು ಈ ಚುನಾವಣೆಯ ಫಲಿತಾಂಶವನ್ನು ನಿರ್ಧರಿಸಲಿದೆ.

ಸಂಖ್ಯೆಗಳ ಲೆಕ್ಕಾಚಾರದಲ್ಲಿ ಯಾರೂ ಸಂಪೂರ್ಣ ಸುರಕ್ಷಿತವಾಗಿಲ್ಲದ ಕಾರಣ, ಶಾಸಕರನ್ನು ತಮತ್ತ ಸೆಳೆಯಲು ಪಕ್ಷಗಳು ಹರಸಾಹಸ ಪಡುತ್ತಿವೆ. ಇದೇ ಕಾರಣಕ್ಕೆ ಪಕ್ಷೇತರರು ಮತ್ತು ಅತೃಪ್ತ ಶಾಸಕರಿಗೆ ಈ ಚುನಾವಣೆಯಲ್ಲಿ ಹೆಚ್ಚಿನ ಡಿಮ್ಯಾಂಡ್‌‍ ಸೃಷ್ಟಿಯಾಗಿದೆ. ಮೇಲ್ನೋಟಕ್ಕೆ ಇದೊಂದು ಮಾಮೂಲಿನ ಚುನಾವಣೆಯಂತೆ ಕಂಡುಬಂದರೂ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹಾಗೂ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ನಡುವಿನ ಹೋರಾಟ ಎಂದೇ ರಾಜಕೀಯ ವಲಯದಲ್ಲಿ ಬಿಂಬಿತವಾಗಿದೆ.

ಶತಾಯಗತಾಯ ತಮ ತಮ ಅಭ್ಯರ್ಥಿಗಳನ್ನು ಗೆಲ್ಲಿಸಲು ತಮದೇ ಆದ ಕಾರ್ಯತಂತ್ರ ರೂಪಿಸುತ್ತಿರುವ ಡಿಕೆಶಿ ಮತ್ತು ಎಚ್‌ಡಿಕೆ ವಿಶೇಷವಾಗಿ ಪಕ್ಷೇತರ ಶಾಸಕರನ್ನು ಸೆಳೆಯಲು ಕಸರತ್ತು ಆರಂಭಿಸಿದ್ದಾರೆ.

ಹೀಗಾಗಿ ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ಶಾಸಕರಾದ ಬಸನಗೌಡ ಪಾಟೀಲ್‌ ಯತ್ನಾಳ್‌ ಬಿಜಾಪುರ, ಎಸ್‌‍.ಟಿ.ಸೋಮಶೇಖರ್‌, ಯಶವಂತಪುರ ಶಿವರಾಮ್‌ ಹೆಬ್ಬಾರ್‌ ಯಲ್ಲಾಪುರ ಹಾಗೂ ಪಕ್ಷೇತರ ಶಾಸಕರಾದ ಲತಾ ಮಲ್ಲಿಕಾರ್ಜುನ್‌ ಹರಪನಹಳ್ಳಿ ಪುಟ್ಟಸ್ವಾಮಿಗೌಡ ಗೌರಿಬಿದನೂರು ಮತ್ತು ದರ್ಶನ್‌ ಪುಟ್ಟಣ್ಣಯ್ಯ ಮೇಲುಕೋಟೆ ಅವರುಗಳಿಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ. ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ನಡೆಯಲಿರುವ ಈ ದ್ವೈವಾರ್ಷಿಕ ಚುನಾವಣೆಯು ಸಂಖ್ಯಾಬಲದ ಆಟವಾಗಿದೆ.

ಅಗತ್ಯವಿರುವ ಮತಗಳು :
ಒಬ್ಬ ಅಭ್ಯರ್ಥಿಯ ಗೆಲುವಿಗೆ ಪ್ರಥಮ ಪ್ರಾಶಸ್ತ್ಯದ 28 ಮತಗಳ ಅಗತ್ಯವಿದೆ. 224 ಸದಸ್ಯ ಬಲದ ವಿಧಾನಸಭೆಯಲ್ಲಿ, ಪ್ರಸ್ತುತ 222 ಶಾಸಕರು ಮತ ಚಲಾಯಿಸಲಿದ್ದಾರೆ. (ಮಾಜಿ ಸಚಿವ ಡಿ ಸುಧಾಕರ್‌ ನಿಧನರಾಗಿರುವುದು ಹಾಗೂ ಮಾಜಿ ಸಚಿವ ವಿನಯ್‌ ಕುಲಕರ್ಣಿ ಅವರ ಶಾಸಕ ಸ್ಥಾನ ರದ್ದುಗೊಂಡಿರುವುದರಿಂದ ಎರಡು ಸ್ಥಾನಗಳು ಖಾಲಿ ಉಳಿದಿದೆ) ಕಾಂಗ್ರೆಸ್‌‍ ತನ್ನ 4 ಅಭ್ಯರ್ಥಿಗಳನ್ನು ಸುಲಭವಾಗಿ ಗೆಲ್ಲಿಸಬಲ್ಲದು. ಐದನೇ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಕಾಂಗ್ರೆಸ್‌‍ಗೆ ಹೆಚ್ಚುವರಿ ಮತಗಳ ಅಗತ್ಯವಿದೆ.

ಇತ್ತ ಬಿಜೆಪಿ-ಜೆಡಿಎಸ್‌‍ ಮೈತ್ರಿ ಕೂಟವು ತಮ ಸಂಖ್ಯಾಬಲದೊಂದಿಗೆ 2 ಸ್ಥಾನಗಳನ್ನು ಗೆಲ್ಲಬಹುದಾದರೂ, ಮೂರನೇ ಅಭ್ಯರ್ಥಿಯ ಗೆಲುವಿಗೆ ಕೆಲವು ಮತಗಳ ಕೊರತೆ ಎದುರಿಸುತ್ತಿದೆ. ಈ ಚುನಾವಣೆಯಲ್ಲಿ ಪಕ್ಷೇತರ ಶಾಸಕರ ಮತಗಳು ನಿರ್ಣಾಯಕ ಪಾತ್ರ ವಹಿಸುತ್ತಿವೆ.

ವಿಧಾನಸಭೆಯಲ್ಲಿನ ಗಣಿತದ ಪ್ರಕಾರ, ಕಾಂಗ್ರೆಸ್‌‍ ತನ್ನ ಐದನೇ ಅಭ್ಯರ್ಥಿಯನ್ನು (ವಿನಯ್‌ ಕಾರ್ತಿಕ್‌) ಗೆಲ್ಲಿಸಿಕೊಳ್ಳಲು ಪಕ್ಷೇತರ ಶಾಸಕರ ಬೆಂಬಲ ಹಾಗೂ ಬಿಜೆಪಿ ಪಕ್ಷದಿಂದ ಉಚ್ಚಾಟಿತರಾದ ಶಾಸಕರ ನೆರವನ್ನು ಅವಲಂಬಿಸಿದೆ. ಇದೇ ಕಾರಣಕ್ಕೆ ಆಡಳಿತಾರೂಢ ಕಾಂಗ್ರೆಸ್‌‍ ಹಾಗೂ ಬಿಜೆಪಿ-ಜೆಡಿಎಸ್‌‍ ಮೈತ್ರಿಕೂಟಗಳೆರಡೂ ಪಕ್ಷೇತರರನ್ನು ತಮತ್ತ ಸೆಳೆಯಲು ತೀವ್ರ ಪ್ರಯತ್ನ ನಡೆಸುತ್ತಿವೆ. ಬಿಜೆಪಿ ಉಚ್ಚಾಟಿತ ಶಾಸಕರು ಮತ್ತು ಸಣ್ಣಪುಟ್ಟ ಪ್ರಾದೇಶಿಕ ಪಕ್ಷಗಳ ಶಾಸಕರು ಈ ಚುನಾವಣೆಯಲ್ಲಿ ಕಿಂಗ್‌ ಮೇಕರ್‌ಗಳಾಗುವ ಸಾಧ್ಯತೆಯಿದೆ.

ಅಡ್ಡ ಮತದಾನದ ಭೀತಿ :
ಚುನಾವಣೆ ರಹಸ್ಯ ಮತದಾನ ಪದ್ಧತಿಯಲ್ಲಿ ನಡೆಯುವುದರಿಂದ, ಪಕ್ಷದ ಆಂತರಿಕ ಭಿನ್ನಮತ ಅಥವಾ ಅಡ್ಡ ಮತದಾನದ ಭಯ ಎಲ್ಲಾ ಪಕ್ಷಗಳನ್ನೂ ಕಾಡುತ್ತಿದೆ. ಇದೇ ಕಾರಣಕ್ಕೆ ಶಾಸಕರನ್ನು ಒಗ್ಗೂಡಿಸಿ ಇರಿಸುವ (ರೆಸಾರ್ಟ್‌ ಅಥವಾ ಕ್ಯಾಂಪ್‌ ರಾಜಕೀಯದ ಮಾದರಿಯಲ್ಲಿ) ತಂತ್ರಗಳಿಗೆ ಪಕ್ಷಗಳು ಮುಂದಾಗಿವೆ.

ವಿಧಾನಸಭೆಯ ಒಟ್ಟು ಶಾಸಕರು- 224

  • ಖಾಲಿ ಸ್ಥಾನಗಳು -2
  • ಕಾಂಗ್ರೆಸ್‌‍ -137
  • ಬಿಜೆಪಿ- 64
  • ಜೆಡಿಎಸ್‌‍ -18
  • ಪಕ್ಷೇತರರು -3
RELATED ARTICLES

Latest News