ಬೆಂಗಳೂರು, ಜೂ.12 ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯಲ್ಲಿ ಮನೆ ಮನೆಗಳಿಂದ ಕಸ ಸಂಗ್ರಹಣೆ ಮತ್ತು ಸಾಗಾಣಿಕೆ ಕಾರ್ಯವನ್ನು ಗುತ್ತಿಗೆದಾರರ ಅವಲಂಬನೆಯಿಂದ ಹೊರತಂದು, ಬಿಎಸ್‌ಡಬ್ಲ್ಯೂಎಂಎಲ್ ಹಾಗೂ ನಗರ ಪಾಲಿಕೆಗಳ ಸ್ವಂತ ವಾಹನಗಳ ಮೂಲಕ ನಿರ್ವಹಿಸುವ ಮಹತ್ವದ ಪ್ರಸ್ತಾವನೆ ಸರ್ಕಾರದ ಮುಂದಿಡಲಾಗಿದೆ.
ಪ್ರಸ್ತುತ ಸುಮಾರು 1.20 ಕೋಟಿ ಜನಸಂಖ್ಯೆ ಹೊಂದಿರುವ ಬೆಂಗಳೂರು ಮಹಾನಗರದಲ್ಲಿ 30 ಲಕ್ಷಕ್ಕೂ ಹೆಚ್ಚು ಮನೆಗಳಿದ್ದು, 750 ಮನೆಗಳಿಗೆ ಒಂದು ಬ್ಲಾಕ್ ಎಂಬ ಮಾನದಂಡದಂತೆ ಸುಮಾರು 4,000 ವಾಹನಗಳ ಅಗತ್ಯವಿದೆ. ಆದರೆ ಈಗಾಗಲೇ 4,900 ಆಟೋ ಟಿಪ್ಪರ್‌ಗಳು ಕಾರ್ಯನಿರ್ವಹಿಸುತ್ತಿದ್ದರೂ ಅವುಗಳಲ್ಲಿ ಶೇ.50ಕ್ಕೂ ಹೆಚ್ಚು ವಾಹನಗಳು 15 ವರ್ಷಗಳಿಗಿಂತ ಹಳೆಯದಾಗಿವೆ.
ಹಳೆಯ ವಾಹನಗಳಿಂದ ನಿಯಮ ಪಾಲನೆ ಅಸಾಧ್ಯವಾಗಿರುವುದರಿಂದ ಪ್ರಸ್ತುತ ಬಳಕೆಯಲ್ಲಿರುವ ಮೂರು ಚಕ್ರದ ಆಟೋ ಟಿಪ್ಪರ್‌ಗಳಲ್ಲಿ ಗರಿಷ್ಠ 500 ಕೆಜಿ ತ್ಯಾಜ್ಯ ಸಾಗಿಸುವ ಸಾಮರ್ಥ್ಯ ಮಾತ್ರವಿದ್ದು, ಘನತ್ಯಾಜ್ಯ ನಿಯಮಾವಳಿ-2026ರ ಪ್ರಕಾರ ಒಣಕಸ, ಹಸಿಕಸ, ಸ್ಯಾನಿಟರಿ ಕಸ ಮತ್ತು ವಿಶೇಷ ಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸುವುದು ಕಷ್ಟವಾಗಿದೆ.ಇದಲ್ಲದೆ ಬಹುತೇಕ ವಾಹನಗಳಲ್ಲಿ ಜಿಪಿಎಸ್ ವ್ಯವಸ್ಥೆಯೇ ಇಲ್ಲದ ಕಾರಣ ಅವುಗಳ ಚಲನ-ವಲನದ ಮೇಲ್ವಿಚಾರಣೆ ಸಾಧ್ಯವಾಗುತ್ತಿಲ್ಲ.
ಕಳೆದ 2006ರಿಂದ ಇಲ್ಲಿಯವರೆಗೆ ಕಸ ಸಂಗ್ರಹಣೆ ಮತ್ತು ಸಾಗಾಣಿಕೆ ಟೆಂಡರ್‌ಗಳು ಹಲವು ಬಾರಿ ನ್ಯಾಯಾಲಯಗಳಲ್ಲಿ ಪ್ರಶ್ನೆಗೆ ಒಳಗಾಗಿ, ಬಹುತೇಕ ಸಂದರ್ಭಗಳಲ್ಲಿ ಪ್ರಕ್ರಿಯೆಗಳು ವಿಳಂಬಗೊಂಡಿವೆ.2012ರಲ್ಲಿ 91 ಪ್ಯಾಕೇಜ್‌ಗಳಿಗೆ ಟೆಂಡರ್ ಕರೆಯಲಾಗಿದ್ದಾಗ ಬಿವಿಜಿ ಕಂಪನಿ 50 ಪ್ಯಾಕೇಜ್‌ಗಳಿಗೆ ಅರ್ಹತೆ ಪಡೆದಿತ್ತು. ಆದರೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಹಿನ್ನೆಲೆಯಲ್ಲಿ ಉಚ್ಚ ನ್ಯಾಯಾಲಯ ಕಂಪನಿಯನ್ನು 30 ಪ್ಯಾಕೇಜ್‌ಗಳಿಗೆ ಸೀಮಿತಗೊಳಿಸಿತ್ತು. ಬಳಿಕ ಕಂಪನಿ ಕೇವಲ ನಾಲ್ಕು ಪ್ಯಾಕೇಜ್‌ಗಳಲ್ಲಿ ಮಾತ್ರ ಕೆಲಸ ಆರಂಭಿಸಿದ್ದರಿಂದ ಕಪ್ಪುಪಟ್ಟಿಗೆ ಸೇರಿಸಲಾಗಿತ್ತು.
ಲೋಕಾಯುಕ್ತರ ತೀವ್ರ ಅಸಮಾಧಾನ:
ಜೂನ್ 8ರಂದು ಲೋಕಾಯುಕ್ತರು ಕೆಲವು ವಾರ್ಡ್‌ಗಳಿಗೆ ಭೇಟಿ ನೀಡಿ ಕಸ ನಿರ್ವಹಣೆ ಸಮರ್ಪಕವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಬಳಿಕ ಜೂನ್ 10ರಂದು ನಡೆದ ಸಭೆಯಲ್ಲಿ ಎಲ್ಲಾ ಐದು ನಗರ ಪಾಲಿಕೆಗಳ ಅಧಿಕಾರಿಗಳನ್ನು ವಿಚಾರಣೆ ನಡೆಸಿದ ಲೋಕಾಯುಕ್ತರು, ಗುತ್ತಿಗೆದಾರರ ಮೇಲಿನ ಸಂಪೂರ್ಣ ಅವಲಂಬನೆ ಕಡಿಮೆ ಮಾಡಿ ಕನಿಷ್ಠ ಶೇ.50ರಷ್ಟು ಸ್ವಂತ ವಾಹನಗಳನ್ನು ನಿಯೋಜಿಸುವಂತೆ ಸೂಚನೆ ನೀಡಿದ್ದರು.
ಈ ಕುರಿತು ಅನುಪಾಲನಾ ವರದಿ ಸಲ್ಲಿಸಲು ಜುಲೈ 28ರವರೆಗೆ ಗಡುವು ನೀಡಲಾಗಿದೆ. ಮೊದಲ ಹಂತದಲ್ಲಿ 40 ಇ-ವಾಹನ ಖರೀದಿ: ಈ ಹಿನ್ನೆಲೆಯಲ್ಲಿ ಮೊದಲ ಹಂತವಾಗಿ 40 ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಲು ಸುಮಾರು 4.97 ಕೋಟಿ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಜೆಮ್ ಪೋರ್ಟಲ್ ಮೂಲಕ ನೇರ ಖರೀದಿ ನಡೆಸಲು ಸಹ ಅನುಮತಿ ದೊರೆತಿದೆ.ಪ್ರತಿ ಇ-ವಾಹನದ ಬೆಲೆ 9.46 ಲಕ್ಷದಿಂದ 11.16 ಲಕ್ಷದವರೆಗೆ ಇರಲಿದ್ದು, ವಾಹನಗಳಲ್ಲಿ ಜಿಪಿಎಸ್, ಡ್ಯಾಶ್ ಕ್ಯಾಮ್ ಸೇರಿದಂತೆ ಆಧುನಿಕ ತಂತ್ರಜ್ಞಾನ ಅಳವಡಿಸಲಾಗುತ್ತದೆ.
4,781 ಸ್ವಯಂ ಉದ್ಯೋಗಿಗಳಿಗೆ ಅವಕಾಶ;
ವಿಶೇಷವಾಗಿ ಗುತ್ತಿಗೆದಾರರ ಬದಲಿಗೆ ವಾಹನ ಚಾಲಕರು ಮತ್ತು ಸಹಾಯಕರಿಗೆ ನೇರ ಜವಾಬ್ದಾರಿ ನೀಡುವ ಹೊಸ ಮಾದರಿಯನ್ನು ಪ್ರಸ್ತಾಪಿಸಲಾಗಿದೆ.ಪ್ರತಿ ವಾಹನಕ್ಕೆ ಕನಿಷ್ಠ 2 ಲಕ್ಷ ಮುಂಗಡ ಠೇವಣಿ ಪಡೆದು ವಾಹನ ಹಂಚಿಕೆ ಮಾಡುವುದು, ಉಳಿದ ಮೊತ್ತವನ್ನು ಬ್ಯಾಂಕ್ ಸಾಲದ ಮೂಲಕ ಪಾವತಿಸಿ ಮಾಸಿಕ ಬಿಲ್ಲಿನಿಂದ ಇಎಂಐ ಕಡಿತಗೊಳಿಸುವ ಯೋಜನೆ ರೂಪಿಸಲಾಗಿದೆ.
ಏಳು ವರ್ಷಗಳ ಬಳಿಕ ವಾಹನದ ಮಾಲೀಕತ್ವವನ್ನು ಚಾಲಕರಿಗೆ ವರ್ಗಾಯಿಸುವ ವ್ಯವಸ್ಥೆಯೂ ಪ್ರಸ್ತಾಪದಲ್ಲಿದೆ.ಈ ಯೋಜನೆ ಜಾರಿಯಾದರೆ ಸುಮಾರು 4,781 ಸ್ವಯಂ ಉದ್ಯೋಗಿಗಳು ಸೃಷ್ಟಿಯಾಗಲಿದ್ದು, ಸಮಾಜದ ಕೆಳವರ್ಗದ ಚಾಲಕರು ಮತ್ತು ಸಹಾಯಕರ ಆರ್ಥಿಕ ಸಬಲೀಕರಣಕ್ಕೆ ನೆರವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಗುತ್ತಿಗೆದಾರರ ಏಕಸ್ವಾಮ್ಯಕ್ಕೆ ಅಂತ್ಯ?
ಪ್ರಸ್ತುತ ಬೆಂಗಳೂರಿನಲ್ಲಿ ಕಸ ಸಂಗ್ರಹಣೆ ಮತ್ತು ಸಾಗಾಣಿಕೆ ಕಾರ್ಯ ಕೆಲವೇ ಗುತ್ತಿಗೆದಾರರ ನಿಯಂತ್ರಣದಲ್ಲಿ ಇರುವುದರಿಂದ ಪದೇ ಪದೇ ಸೇವೆಯಲ್ಲಿ ವ್ಯತ್ಯಯ ಉಂಟಾಗುತ್ತಿದೆ. ಪ್ರತಿದಿನ ಶೇ.5ರಿಂದ 10ರಷ್ಟು ವಾಹನಗಳು ಗೈರಾಗುತ್ತಿರುವ ಪರಿಣಾಮ ಹಲವಾರು ವಾರ್ಡ್‌ಗಳಲ್ಲಿ ಕಪ್ಪುಚುಕ್ಕೆಗಳು ನಿರ್ಮಾಣವಾಗುತ್ತಿವೆ.
ಹೀಗಾಗಿ ಮೈಸೂರು ಹಾಗೂ ಇಂಡೋರ್ ನಗರಗಳ ಮಾದರಿಯಲ್ಲಿ ಸ್ವಂತ ವಾಹನ ವ್ಯವಸ್ಥೆ ಜಾರಿಗೊಳಿಸುವ ಮೂಲಕ ಘನತ್ಯಾಜ್ಯ ನಿರ್ವಹಣೆಯಲ್ಲಿ ಮಹತ್ವದ ಬದಲಾವಣೆ ತರಲು ಬಿಎಸ್‌ಡಬ್ಲ್ಯೂಎಂಎಲ್ ಮುಂದಾಗಿದೆ. ಸ್ವಂತ ವಾಹನ ಮಾದರಿಗೆ ಸರ್ಕಾರ ಅಂತಿಮ ಒಪ್ಪಿಗೆ ನೀಡಿದರೆ, ಬೆಂಗಳೂರಿನ ಘನತ್ಯಾಜ್ಯ ನಿರ್ವಹಣೆಯಲ್ಲಿ ಇದು ಅತಿದೊಡ್ಡ ನೀತಿ ಬದಲಾವಣೆಯಾಗುವ ಸಾಧ್ಯತೆ ಇದೆ.
