Homeರಾಜ್ಯಕಾವೇರಿದ ಪರಿಷತ್‌ ಚುನಾವಣೆ : 3 ಪಕ್ಷಗಳಿಗೂ ಸವಾಲು

ಕಾವೇರಿದ ಪರಿಷತ್‌ ಚುನಾವಣೆ : 3 ಪಕ್ಷಗಳಿಗೂ ಸವಾಲು

Council elections: Challenges for all 3 parties

ಬೆಂಗಳೂರು, ಜೂ. 12- ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರಿಗೆ ಅಗ್ನಿ ಪರೀಕ್ಷೆ ಎಂದೇ ಭಾವಿಸಲಾದ ವಿಧಾನ ಪರಿಷತ್ತಿನ ಸದಸ್ಯರ ಆಯ್ಕೆಯ ಚುನಾವಣೆ ಸಮೀಪಿಸುತ್ತಿದ್ದಂತೆ ಲೆಕ್ಕಾಚಾರಗಳು ಕಾವೇರುತ್ತಿವೆ.

ಕೆಪಿಸಿಸಿ ಖಜಾಂಚಿ ವಿನಯ್‌ ಕಾರ್ತಿಕ್‌ ಅವರನ್ನು ಕಣಕ್ಕಿಳಿಸುವ ಮೂಲಕ ಅವಿರೋಧ ಅಯ್ಕೆಯ ಅವಕಾಶವನ್ನು ತಪ್ಪಿಸಿದೆ. ಜಿದ್ದಾಜಿದ್ದಿನ ಚುನಾವಣೆಯ ಕಣ ರಂಗೇರಿದೆ. ಖುದ್ದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್‌, ಹಾಲಿ ಸದಸ್ಯ ತಿಪ್ಪಣ್ಣಪ್ಪ ಕಮಕನೂರ್‌, ಎಐಸಿಸಿ ಕಾರ್ಯದರ್ಶಿ ಪಿ.ವಿ.ಮೋಹನ್‌, ಕಾಂಗ್ರೆಸ್‌‍ ಮುಖಂಡ ಶಿವಣ್ಣ ಮಳವಳ್ಳಿ ಅವರನ್ನು ಅಭ್ಯರ್ಥಿಗಳನ್ನಾಗಿ ಕಣಕ್ಕಿಳಿಸಲಾಗಿದೆ.

ಅತ್ತ ಬಿಜೆಪಿ ಲಿಂಗಾರಾಜ ಪಾಟೀಲ್‌ ಮತ್ತು ರಘು ಕೌಟಿಲ್ಯ ಅವರನ್ನು ಅಭ್ಯರ್ಥಿಗಳನ್ನಾಗಿ ಮಾಡಿದೆ. ಜೆಡಿಎಸ್‌‍ ಗೋವಿಂದರಾಜ್‌ ಅವರಿಂದ ನಾಮಪತ್ರ ಸಲ್ಲಿಸಿದೆ. ಜನ ಪ್ರಾತಿನಿಧ್ಯ ಕಾಯ್ದೆ ಪ್ರಕಾರ ಪ್ರತಿಯೊಂದು ಸ್ಥಾನ ಗೆಲ್ಲಲು 28 ಮತಗಳ ಅಗತ್ಯ ಇದೆ. ರಾಜ್ಯ ಸಭೆಗೆ ತೆರೆದ ಮತದಾನವಾದರೆ ವಿಧಾನಪರಿಷತ್ತಿನ ಚುನಾವಣೆಯಲ್ಲಿ ಗೌಪ್ಯ ಮತದಾನವಾಗಲಿದೆ. ಹೀಗಾಗಿ ಸೋಲು-ಗೆಲುವು ಲೆಕ್ಕಾಚಾರ ತೀವ್ರ ಕುತೂಹಲ ಕೆರಳಿಸಿದೆ.

ವಿಧಾನಸಭೆಯಲ್ಲಿ ಪ್ರಸ್ತುತ ಧಾರವಾಡ ಕ್ಷೇತ್ರದ ಶಾಸಕ ವಿನಯ್‌ ಕುಲಕರ್ಣಿ ಬಿಜೆಪಿ ಮುಖಂಡ ಯೋಗೇಶ್‌ ಗೌಡ ಅವರ ಕೊಲೆ ಪ್ರಕರಣದಲ್ಲಿ ಘೋಷಿತ ಅಪರಾಧಿಯಾಗಿ ಜೈಲು ಸೇರಿದ್ದಾರೆ. ಇದರಿಂದಾಗಿ ಒಂದು ಸ್ಥಾನ ತೆರವಾಗಿದೆ.

ಯೋಜನಾ ಸಚಿವರಾಗಿದ್ದ ಡಿ.ಸುಧಾಕರ್‌ ಅನಾರೋಗ್ಯದಿಂದ ಮೃತಪಟ್ಟಿದ್ದು, ಅವರು ಪ್ರತಿನಿಧಿಸುತ್ತಿದ್ದ ಹಿರಿಯೂರು ಕ್ಷೇತ್ರ ಖಾಲಿಯಿದೆ. ಎರಡೂ ಕ್ಷೇತ್ರಗಳು ತೆರವಾದ ಬಳಿಕ 224ರಲ್ಲಿ 222 ಸ್ಥಾನಗಳು ಉಳಿದುಕೊಂಡಿವೆ.

ಒಟ್ಟು 7 ಸ್ಥಾನಗಳಿಗೆ ಸದಸ್ಯರ ಆಯ್ಕೆಯಾಗಬೇಕಿದ್ದು, ಜನ ಪ್ರಾತಿನಿಧ್ಯ ಕಾಯ್ದೆ ಸೂತ್ರದ ಅನುಸಾರ 7 ಸದಸ್ಯರ ಜೊತೆಗೆ ಒಂದು ಪಾಯಿಂಟ್‌ ಸೇರ್ಪಡೆಗೊಳಿಸಿ, ಒಟ್ಟು 8 ಸ್ಥಾನಗಳೆಂದು ಲೆಕ್ಕ ಹಾಕಲಾಗುತ್ತದೆ. ಸದಸ್ಯರ ಸಂಖ್ಯಾಬಲವನ್ನು ಇದರಿಂದ ಭಾಗಿಸುವುದರಿಂದ ಪ್ರತಿ ಅಭ್ಯರ್ಥಿಗೆ 27.75 ಮತಗಳು ಬೇಕು. ಇದನ್ನು ರೌಂಡಾಫ್‌ ಮಾಡುವುದರಿಂದ 28 ಮತಗಳನ್ನು ಲೆಕ್ಕ ಹಾಕಲಾಗುತ್ತದೆ.

ಮೊದಲ ಪ್ರಾಶಸ್ತ್ಯದಲ್ಲಿ 28 ಮತ ಪಡೆದವರು ನೇರವಾಗಿ ಗೆಲುವು ಸಾಧಿಸುತ್ತಾರೆ. ಒಂದು ವೇಳೆ ಕಡಿಮೆ ಮತ ಬಂದರೆ, ದ್ವಿತೀಯ ಪ್ರಾಶಸ್ತ್ಯದ ಮತಗಳನ್ನು ಪಾಯಿಂಟ್‌ 25 ಅಂಶದ ಆಧಾರದ ಮೇಲೆ ಲೆಕ್ಕ ಹಾಕಲಾಗುತ್ತದೆ. ದ್ವಿತೀಯ ಪ್ರಾಶಸ್ತ್ಯದ ಮತಗಳಿಂದ ಗೆಲುವು ನಿರ್ಧರಿಸಲಾಗದಿದ್ದರೆ, ಹೊರ ಹಾಕುವ (ಎಲಿಮಿನೇಷನ್‌) ಪ್ರಕ್ರಿಯೆ ಆರಂಭಿಸಲಾಗುತ್ತದೆ. ಅತೀ ಕಡಿಮೆ ಮತ ಪಡೆದವರನ್ನು ಹೊರಹಾಕುವ ಮೂಲಕ ಉಳಿದವರನ್ನು ಗೆದ್ದಿದ್ದಾರೆ ಎಂದು ಘೋಷಿಸಲು ಅವಕಾಶಗಳಿವೆ.

ಸಂಖ್ಯಾಬಲದ ಲೆಕ್ಕಾಚಾರ:
5 ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವ ಕಾಂಗ್ರೆಸ್‌‍ ವಿಧಾನಸಭೆಯಲ್ಲಿ 134 ಸದಸ್ಯರನ್ನು ಹೊಂದಿದೆ. ಸ್ಪೀಕರ್‌ ಅವರನ್ನೊಳಗೊಂಡರೆ, 135 ಶಾಸಕರ ಸಂಖ್ಯಾಬಲವಾಗಲಿದೆ. ಪಕ್ಷೇತರರಾದ ಹರಪ್ಪನಹಳ್ಳಿ ಕ್ಷೇತ್ರದ ಲತಾ ಮಲ್ಲಿಕಾರ್ಜುನ್‌, ಗೌರಿಬಿದನೂರು ಕ್ಷೇತ್ರದ ಕೆ.ಎಚ್‌.ಪುಟ್ಟಸ್ವಾಮಿ ಪಕ್ಷೇತರರಾಗಿದ್ದು, ಕಾಂಗ್ರೆಸ್‌‍ಗೆ ಬೆಂಬಲ ನೀಡುವುದಾಗಿ ಮೊದಲೇ ಘೋಷಿಸಿದ್ದಾರೆ.
ಬಿಜೆಪಿಯಿಂದ ಉಚ್ಛಾಟಿತರಾಗಿರುವ ಮೂವರು ಶಾಸಕರ ಪೈಕಿ 2 ಮತಗಳು ಕಾಂಗ್ರೆಸ್‌‍ಗೆ ಬರುವ ಅಂದಾಜುಗಳಿವೆ. ಮೇಲುಕೋಟೆ ಕ್ಷೇತ್ರದ ದರ್ಶನ ಪುಟ್ಟಣ್ಣಯ್ಯ ಕೂಡ ಕಾಂಗ್ರೆಸ್‌‍ ಅಭ್ಯರ್ಥಿಯನ್ನು ಬೆಂಬಲಿಸಬಹುದು ಎಂಬ ಲೆಕ್ಕಾಚಾರಗಳಿವೆ.

ಜೆಡಿಎಸ್‌‍ನಿಂದ ಒಂದು ಮತವನ್ನು ಪಡೆಯುವ ವಿಶ್ವಾಸದಲ್ಲಿ ಕಾಂಗ್ರೆಸ್‌‍ ನಾಯಕರಿದ್ದಾರೆ. ಮುಂದುವರೆದ ಕಾರ್ಯಾಚರಣೆಯಲ್ಲಿ ಬಿಜೆಪಿಯ ಉಚ್ಛಾಟಿತ ಮತ್ತೊಬ್ಬ ಶಾಸಕರನ್ನು ಹಾಗೂ ಜೆಡಿಎಸ್‌‍ನ ಇನ್ನೂ ಇಬ್ಬರೂ ಶಾಸಕರಿಗೆ ಕಾಂಗ್ರೆಸ್‌‍ ನಾಯಕರು ಗಾಳ ಹಾಕಿದ್ದಾರೆ.
ಮೂಲಗಳ ಪ್ರಕಾರ ಕಾಂಗ್ರೆಸ್‌‍ನ 5ನೇ ಅಭ್ಯರ್ಥಿ 30ಕ್ಕೂ ಹೆಚ್ಚು ಮತಗಳನ್ನು ಪಡೆದು ಗೆಲ್ಲಬಹುದು ಎಂದು ಹೇಳಲಾಗುತ್ತಿದೆ.

ಬಿಜೆಪಿ 62 ಶಾಸಕರನ್ನು ಹೊಂದಿದ್ದು 56 ಮತಗಳಿಂದ ತನ್ನಿಬ್ಬರು ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಬಹುದು. ಜೆಡಿಎಸ್‌‍ 18 ಶಾಸಕರನ್ನು ಒಳಗೊಂಡಿದೆ. ಬಿಜೆಪಿಯಿಂದ ಹೆಚ್ಚುವರಿಯಾಗಿ ಉಳಿಯುವ 6 ಶಾಸಕರನ್ನು ಒಳಗೊಂಡರೆ, ಜೆಡಿಎಸ್‌‍ 24 ಮತಗಳನ್ನು ಪಡೆದಂತಾಗುತ್ತದೆ.

ಕೆಆರ್‌ಆರ್‌ಪಿ ಪಕ್ಷದಿಂದ ಆಯ್ಕೆಯಾಗಿ ನಂತರ ಬಿಜೆಪಿಗೆ ಸೇರಿರುವ ಜನಾರ್ಧನ್‌ ರೆಡ್ಡಿ ಅವರು ಎನ್‌ಡಿಎ ಅಭ್ಯರ್ಥಿಯನ್ನು ಬೆಂಬಲಿಸುವ ಸಾಧ್ಯತೆ ಇರುವುದರಿಂದ ಜೆಡಿಎಸ್‌‍ನ ಅಭ್ಯರ್ಥಿ 25 ಮತಗಳನ್ನು ಪಡೆಯಬಹುದು ಎನ್ನಲಾಗುತ್ತದೆ.

ಜೆಡಿಎಸ್‌‍ನಿಂದ ಕಾಂಗ್ರೆಸ್ಸಿಗರು ನಿರೀಕ್ಷಿಸಿರುವ ಒಂದು ಮತ ಹಾಗೂ ಉಚ್ಛಾಟಿ ಬಿಜೆಪಿಯ ಮೂವರ ಶಾಸಕರುಗಳು ಗಟ್ಟಿಯಾಗಿ ಎನ್‌ಡಿಎ ಬೆಂಬಲಕ್ಕೆ ನಿಂತಿದ್ದೆ ಆದರೆ ಸುಲಭವಾಗಿ ಜೆಡಿಎಸ್‌‍ ಮತ್ತು ಬಿಜೆಪಿ ಮೂವರು ಅಭ್ಯರ್ಥಿಗಳು ಗೆಲ್ಲಿಸಿಕೊಳ್ಳಬಹುದು.

ರಹಸ್ಯ ಮತದಾನವಾಗಿರುವುದರಿಂದ ಇಲ್ಲಿ ಯಾರು ಯಾರಿಗೆ ಮತ ಹಾಕಲಿದ್ದಾರೆ ಎಂಬುದೇ ಗೊಂದಲದ ಗೂಡಾಗಿದೆ. ಡಿ.ಕೆ.ಶಿವಕುಮಾರ್‌ ಅವರು ತಮದೇ ಆದ ಆಪ್ತ ತಂಡದ ಮೂಲಕ ರಹಸ್ಯ ಕಾರ್ಯಾಚರಣೆ ನಡೆಸುತ್ತಿದ್ದು, ಜೆಡಿಎಸ್‌‍-ಬಿಜೆಪಿಯ ಬುಟ್ಟಿಗೆ ಕನ್ನ ಹಾಕುವ ಪ್ರಯತ್ನ ಮಾಡುತ್ತಿದ್ದಾರೆ.

ಇತ್ತ ಕಾಂಗ್ರೆಸ್‌‍ನಲ್ಲೇ ಇರುವ ಆಂತರಿಕ ಬೇಗುದಿಯ ಒಳ ಏಟಿನ ಆತಂಕವೂ ನಾಯಕರನ್ನು ಚಿಂತೆಗೀಡು ಮಾಡಿದೆ. ಈ ಹಿಂದೆ ಮಲ್ಲಿಕಾರ್ಜುನ ಖರ್ಗೆ ಅವರು ತಮ ಆಪ್ತರನ್ನು ಕಣಕ್ಕಿಳಿಸಿದಾಗ ರಹಸ್ಯ ಮತದಾನದ ಪ್ರಭಾವದಿಂದ ಭೈರತಿಸುರೇಶ್‌ ಸುಲಭವಾಗಿ ಗೆಲುವು ಕಂಡಿದ್ದರು.
ಇತಿಹಾಸ ಮರುಕಳಿಸುತ್ತದೆಯೇ ಅಥವಾ ಕಾಂಗ್ರೆಸ್‌‍ ನಾಯಕತ್ವವು ಅಗ್ನಿ ಪರೀಕ್ಷೆಯನ್ನು ನಿರ್ವಿಘ್ನವಾಗಿ ಗೆಲ್ಲುತ್ತದೆಯೇ ಎಂಬ ಪ್ರಶ್ನೆಗಳು ಕಾಡಲಾರಂಭಿಸಿವೆ.

RELATED ARTICLES

Latest News