ನವದೆಹಲಿ, ಜೂ.14- ಭಾರತದ ತೈಲ ಶುದ್ಧೀಕರಣ ಸಂಸ್ಥೆಗಳು ರಷ್ಯಾದಿಂದ ಕಚ್ಚಾ ತೈಲ ಖರೀದಿಯನ್ನು ಹೆಚ್ಚಿಸಿದೆ. ಕಳೆದ ಮೇ ತಿಂಗಳಲ್ಲಿ ಭಾರತವು ರಷ್ಯಾದ ಇಂಧನಗಳ ಖರೀದಿ ಪ್ರಮಾಣ ನೋಡಿದರೆ ವಿಶ್ವದ ಎರಡನೇ ಅತಿದೊಡ್ಡ ಖರೀದಿದಾರ ರಾಷ್ಟ್ರವಾಗಿ ಮುಂದುವರಿದಿದೆ ಎಂದು ಯುರೋಪಿನ ಸಂಶೋಧನಾ ಸಂಸ್ಥೆ ಸೆಂಟರ್ ಫಾರ್ ರಿಸರ್ಚ್ ಆನ್ ಎನರ್ಜಿ ಅಂಡ್ ಕ್ಲೀನ್ ಏರ್ ತನ್ನ ವರದಿಯಲ್ಲಿ ತಿಳಿಸಿದೆ.
ವರದಿ ಪ್ರಕಾರ, ಮೇ ತಿಂಗಳಲ್ಲಿ ಭಾರತವು ರಷ್ಯಾದಿಂದ ಸುಮಾರು 5.8 ಬಿಲಿಯನ್ ಯುರೋ (ಅಂದಾಜು 6.7 ಬಿಲಿಯನ್ ಅಮೆರಿಕನ್ ಡಾಲರ್)ಮೌಲ್ಯದ ಇಂಧನಗಳನ್ನು ಆಮದು ಮಾಡಿಕೊಂಡಿದೆ.
ಇದರಲ್ಲಿ ಕಚ್ಚಾ ತೈಲದ ಪಾಲು ಶೇ.83ರಷ್ಟಿದ್ದು, ಇದರ ಮೌಲ್ಯ 4.8 ಬಿಲಿಯನ್ ಯುರೋಆಗಿದೆ. ಉಳಿದಂತೆ ತೈಲ ಉತ್ಪನ್ನಗಳ ಆಮದು 550 ಮಿಲಿಯನ್ ಯುರೋ ಹಾಗೂ ಕಲ್ಲಿದ್ದಲು ಆಮದು 429 ಮಿಲಿಯನ್ ಯುರೋ ಮೌಲ್ಯದ್ದಾಗಿದೆ.
ಮೇ ತಿಂಗಳಲ್ಲಿ ಭಾರತದ ಒಟ್ಟು ಕಚ್ಚಾ ತೈಲ ಆಮದು ಪ್ರಮಾಣವು ಏಪ್ರಿಲ್ಗೆ ಹೋಲಿಸಿದರೆ ಶೇ.8ರಷ್ಟು ಹೆಚ್ಚಳ ಕಂಡಿದೆ. ಇದಕ್ಕೆ ಪ್ರಮುಖ ಕಾರಣ ರಷ್ಯಾದಿಂದ ಆಮದು ಪ್ರಮಾಣದಲ್ಲಿ ಶೇ.21ರಷ್ಟು ತಿಂಗಳಾವಾರು ಏರಿಕೆ ಆಗಿರುವುದು.
ಪ್ರಮುಖವಾಗಿ ಗುಜರಾತಿನ ಪ್ರಮುಖ ತೈಲ ಶುದ್ಧೀಕರಣ ಕೇಂದ್ರಗಳಾದ ವಾಡಿನಾರ್ ರಿಫೈನರಿ ಮತ್ತು ಜಾಮ್ನಗರ ಶುದ್ಧೀಕರಣ ಸಂಕೀರ್ಣ ಗಳಿಗೆ ರಷ್ಯಾದ ಕಚ್ಚಾ ತೈಲ ಪೂರೈಕೆ ಗಮನಾರ್ಹವಾಗಿ ಹೆಚ್ಚಾಗಿದೆ.
ವಾಡಿನಾರ್ ರಿಫೈನರಿಯಲ್ಲಿ ಏಪ್ರಿಲ್ಗೆ ಹೋಲಿಸಿದರೆ ಮೇ ತಿಂಗಳಲ್ಲಿ ರಷ್ಯಾದ ಕಚ್ಚಾ ತೈಲದ ಆಗಮನ ಶೇ.36ರಷ್ಟು ಹೆಚ್ಚಳ ಕಂಡಿದೆ. ಜಾಮ್ನಗರ ಶುದ್ಧೀಕರಣ ಸಂಕೀರ್ಣದಲ್ಲಿ ಪೂರೈಕೆ ಪ್ರಮಾಣ ಶೇ.14ರಷ್ಟು ಹೆಚ್ಚಾಗಿದೆ.
ಸರ್ಕಾರಿ ರಿಫೈನರಿಗಳೂ ಖರೀದಿ ಹೆಚ್ಚಳ :
ಸರ್ಕಾರಿ ಸ್ವಾಮ್ಯದ ರಿಫೈನರಿಗಳೂ ರಷ್ಯಾದ ತೈಲ ಖರೀದಿಯನ್ನು ವಿಸ್ತರಿಸಿವೆ ಎಂದು ತಿಳಿಸಿದೆ.
2025ರ ನವೆಂಬರ್ ಅಂತ್ಯದಲ್ಲಿ ರಷ್ಯಾದ ಕಚ್ಚಾ ತೈಲ ಆಮದು ಸ್ಥಗಿತಗೊಳಿಸಿದ್ದ ನವ ಮಂಗಳೂರು ಮತ್ತು ವಿಶಾಖಪಟ್ಟಣಂ ರಿಫೈನರಿಗಳು, ಈ ವರ್ಷದ ಮಾರ್ಚ್ನಲ್ಲಿ ಮರು ಖರೀದಿ ಆರಂಭಿಸಿದ ಬಳಿಕ ಮೇ ತಿಂಗಳಲ್ಲಿಯೂ ಖರೀದಿಯನ್ನು ಮುಂದುವರಿಸಿವೆ.
ನವ ಮಂಗಳೂರು ರಿಫೈನರಿಗೆ ರಷ್ಯಾದ ತೈಲ ಪೂರೈಕೆ ಶೇ.13ರಷ್ಟು ಹೆಚ್ಚಾಗಿದೆ.ವಿಶಾಖಪಟ್ಟಣಂ ರಿಫೈನರಿಯಲ್ಲಿ ಆಮದು ಪ್ರಮಾಣ ಶೇ.42ರಷ್ಟು ಏರಿಕೆಯಾಗಿದೆ.
ಇದಲ್ಲದೆ, ಒಡಿಶಾದ ಪೂರ್ವ ಕರಾವಳಿಯಲ್ಲಿರುವ ಪಾರದೀಪ್ ರಿಫೈನರಿ**, ಕಳೆದ ಎರಡು ವರ್ಷಗಳಲ್ಲೇ ಅತಿ ಹೆಚ್ಚು ಪ್ರಮಾಣದ ರಷ್ಯಾದ ಕಚ್ಚಾ ತೈಲವನ್ನು ಮೇ ತಿಂಗಳಲ್ಲಿ ಸ್ವೀಕರಿಸಿದೆ.
ರಷ್ಯಾದ ರಿಯಾಯಿತಿ ತೈಲಕ್ಕೆ ಭಾರತದ ಒಲವು
ಉಕ್ರೇನ್ ಮೇಲಿನ ರಷ್ಯಾದ ದಾಳಿಯ ಬಳಿಕ ಪಾಶ್ಚಾತ್ಯ ರಾಷ್ಟ್ರಗಳು ವಿಧಿಸಿದ ನಿರ್ಬಂಧಗಳಿಂದ ಜಾಗತಿಕ ಇಂಧನ ವ್ಯಾಪಾರದಲ್ಲಿ ಬದಲಾವಣೆಗಳಾಗಿದ್ದವು. ಈ ಹಿನ್ನೆಲೆಯಲ್ಲಿ ಭಾರತವು ಕಡಿಮೆ ಬೆಲೆಯ ರಷ್ಯಾದ ಕಚ್ಚಾ ತೈಲವನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಿ ತನ್ನ ಇಂಧನ ವೆಚ್ಚವನ್ನು ತಗ್ಗಿಸಿಕೊಳ್ಳುವುದರ ಜೊತೆಗೆ ತೈಲ ಶುದ್ಧೀಕರಣ ಲಾಭಾಂಶ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ರಫ್ತನ್ನೂ ಹೆಚ್ಚಿಸಿದೆ.
ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಮಧ್ಯಪ್ರಾಚ್ಯ, ಆಫ್ರಿಕಾ ಮತ್ತು ಅಮೆರಿಕದಿಂದಲೂ ಭಾರತ ತೈಲ ಆಮದು ಮೂಲಗಳನ್ನು ವಿಸ್ತರಿಸುತ್ತಿದ್ದರೂ, ಭಾರತದ ಒಟ್ಟು ಕಚ್ಚಾ ತೈಲ ಆಮದುಗಳಲ್ಲಿ ರಷ್ಯಾದ ಪಾಲು ಇನ್ನೂ ಗಣನೀಯವಾಗಿದೆ.
ರಷ್ಯಾದ ತೈಲ ಖರೀದಿಯಲ್ಲಿ ಯಾರು ಮುಂಚೂಣಿ?
ಚೀನಾ ಶೇ.50,ಭಾರತ ಶೇ.36,ಟರ್ಕಿಯೆ ಶೇ.6,ಯುರೋಪಿಯನ್ ಒಕ್ಕೂಟ ಶೇ.5 ಪಾಲು ಹೊಂದಿವೆ.2026ರ ಜನವರಿ 21ರಿಂದ ರಷ್ಯಾದ ಕಚ್ಚಾ ತೈಲದಿಂದ ತಯಾರಿಸಲಾದ ತೈಲ ಉತ್ಪನ್ನಗಳ ಆಮದನ್ನು ಯುರೋಪಿಯನ್ ಒಕ್ಕೂಟ ನಿಷೇಧಿಸಿದ್ದರೂ, ಮೇ ತಿಂಗಳಲ್ಲಿ ಅಂತಹ ಉತ್ಪನ್ನಗಳ ಶೇ.10 ಸಾಗಣೆಗಳು ಯುರೋಪಿನ ಬಂದರುಗಳಿಗೆ ತಲುಪಿವೆಎಂದು ತಿಳಿಸಿದೆ.
ಭಾರತ, ಟರ್ಕಿಯೆ, ಬ್ರೂನೈ ಮತ್ತು ಜಾರ್ಜಿಯಾದ ರಿಫೈನರಿಗಳು ಮೇ ತಿಂಗಳಲ್ಲಿ ಒಟ್ಟು 641 ಮಿಲಿಯನ್ ಯುರೋ ಮೌಲ್ಯದ ತೈಲ ಉತ್ಪನ್ನಗಳನ್ನು ನಿರ್ಬಂಧ ಹೇರಿದ ರಾಷ್ಟ್ರಗಳಿಗೆ ರಫ್ತು ಮಾಡಿವೆ.
