ತ್ರಿಶೂರ್ (ಕೇರಳ), ಜೂ.14- ಕಚ್ಚಾ ತೈಲದ ಲಭ್ಯತೆ ಮತ್ತು ಪೂರೈಕೆಯ ಸ್ಥಿತಿಗತಿಗಳನ್ನು ಆಧರಿಸಿ ಇಂಧನ ದರಗಳನ್ನು ಮರುಪರಿಶೀಲಿಸಲಾಗುವುದು ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆಯ ರಾಜ್ಯ ಸಚಿವ ಸುರೇಶ್ ಗೋಪಿ ತಿಳಿಸಿದ್ದಾರೆ.
ಇಂಧನ ದರಗಳಲ್ಲಿ ಮತ್ತೊಮೆ ಪರಿಷ್ಕರಣೆ ಸಾಧ್ಯತೆಯ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕಚ್ಚಾ ತೈಲದ ಪೂರೈಕೆಯನ್ನು ಗಮನಿಸಿ ಪರಿಸ್ಥಿತಿಯನ್ನು ಮೌಲ್ಯಮಾಪನ ಮಾಡಲಾಗುವುದು ಎಂದು ಹೇಳಿದರು.
ಮೊದಲು ಕಚ್ಚಾ ತೈಲದ ಪೂರೈಕೆ ಹೇಗಿರುತ್ತದೆ ಎಂಬುದನ್ನು ನೋಡೋಣ.
ಈ ವಿಷಯಕ್ಕೆ ಸಂಬಂಧಿಸಿದಂತೆ ನಮಲ್ಲಿ ಸಚಿವರಾದ ಹರ್ದೀಪ್ ಸಿಂಗ್ ಪುರಿ ಇದ್ದಾರೆ. ಅವರು ಏನು ಹೇಳುತ್ತಾರೆ ನೋಡೋಣ, ಎಂದು ಸುರೇಶ್ ಗೋಪಿ ಪ್ರತಿಕ್ರಿಯಿಸಿದರು.
ಪಶ್ಚಿಮ ಏಷ್ಯಾದಲ್ಲಿ ಮುಂದುವರಿದಿರುವ ಸಂಘರ್ಷದ ಪರಿಣಾಮವಾಗಿ ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲದ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಇದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ಇಂಧನ ಬೆಲೆಗಳ ಮೇಲೆ ಒತ್ತಡ ಹೆಚ್ಚಿದ್ದು, ಅದರ ಪರಿಣಾಮ ಭಾರತದಲ್ಲಿಯೂ ದರ ಏರಿಕೆಯಆತಂಕ ವ್ಯಕ್ತವಾಗಿದೆ.
ಕಚ್ಚಾ ತೈಲದ ಅಂತರರಾಷ್ಟ್ರೀಯ ಪೂರೈಕೆ ಪರಿಸ್ಥಿತಿ ಹೇಗೆ ರೂಪುಗೊಳ್ಳುತ್ತದೆ ಎಂಬುದರ ಮೇಲೆ ಮುಂದಿನ ದಿನಗಳಲ್ಲಿ ದೇಶೀಯ ಇಂಧನ ದರಗಳ ಪರಿಷ್ಕರಣೆ ಅವಲಂಬಿತವಾಗಿರಲಿದೆ ಎಂದು ಸಚಿವರ ಹೇಳಿಕೆಯಿಂದ ತಿಳಿದುಬಂದಿದೆ.
