ಬೆಂಗಳೂರು,ಜ.25- ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿರುವ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮುಂಬರುವ ಲೋಕಸಭೆ ಚುನಾವಣೆಗೆ ಬೆಳಗಾವಿಯಿಂದ ಸ್ರ್ಪಧಿಸುವ ಸಾಧ್ಯತೆ ಇದೆ. ಬೆಳಗಾವಿಯ ಹಾಲಿ ಲೋಕಸಭಾ ಸದಸ್ಯೆ ಹಾಗೂ ಜಗದೀಶ್ ಶೆಟ್ಟರ್ ಅವರ ಸಂಬಂಧಿಕರು ಆಗಿರುವ ಮಂಗಳ ಸುರೇಶ್ ಅಂಗಡಿ ಬರುವ ಚುನಾವಣೆಯಲ್ಲಿ ಸ್ರ್ಪಧಿಸಲು ಹಿಂದೇಟು ಹಾಕಿದ್ದಾರೆ.
ಹೀಗಾಗಿ ಬಿಜೆಪಿಗೆ ಪ್ರಬಲ ಅಭ್ಯರ್ಥಿ ಅಗತ್ಯ ಇರುವುದರಿಂದ ಲೋಕಸಭೆ ಚುನಾವಣೆಯಲ್ಲಿ ಶೆಟ್ಟರ್ ಅವರನ್ನೇ ಬೆಳಗಾವಿಯಿಂದ ಕಣಕ್ಕಿಳಿಸಲು ಬಿಜೆಪಿ ಮುಂದಾಗಿದೆ ಎಂದು ತಿಳಿದುಬಂದಿದೆ. ಶೆಟ್ಟರ್ ಸ್ರ್ಪಧಿಸಿದರೆ ಮಂಗಳ ಸುರೇಶ್ ಅಂಗಡಿಯವರ ವಿರೋಧವು ಇರುವುದಿಲ್ಲ. ಅಲ್ಲದೆ ತನ್ನ ಭದ್ರ ಕೋಟೆಯಾಗಿರುವ ಬೆಳಗಾವಿ ಕ್ಷೇತ್ರವನ್ನು ಉಳಿಸಿಕೊಳ್ಳಲು ಶೆಟ್ಟರ್ ಅವರೇ ಸೂಕ್ತ ಅಭ್ಯರ್ಥಿ ಎಂಬುದು ಬಿಜೆಪಿ ಲೆಕ್ಕಾಚಾರವಾಗಿದೆ.
ಕೇಂದ್ರ ಸಚಿವರಾಗಿದ್ದ ಸುರೇಶ್ ಅಂಗಡಿ ಅವರ ಹಠಾತ್ ನಿಧನದಿಂದ ತೆರವಾಗಿದ್ದ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಮಂಗಳ ಸುರೇಶ್ ಅಂಗಡಿ ಕೆಲವೇ ಸಾವಿರ ಮತಗಳ ಅಂತರದಿಂದ ಗೆದ್ದಿದ್ದರು. ಅಲ್ಲದೆ ಕ್ಷೇತ್ರದಲ್ಲಿ ಅವರು ಸಕ್ರಿಯರಾಗಿಲ್ಲ ಎಂಬ ಆರೋಪವೂ ಇದೆ. ಇದೀಗ ಶೆಟ್ಟರ್ ಬಿಜೆಪಿ ಅಭ್ಯರ್ಥಿಯಾದರೆ ಜಿಲ್ಲೆಯಲ್ಲಿ ಯಾರ ವಿರೋಧವೂ ವ್ಯಕ್ತವಾಗುವುದಿಲ್ಲ. ಕಾಂಗ್ರೆಸ್‍ಗೆ ಪ್ರಬಲ ಪೈಪೋಟಿ ನೀಡಲು ಅವರೇ ಸೂಕ್ತವಾದ ಅಭ್ಯರ್ಥಿ ಎಂಬ ಕಾರಣಕ್ಕಾಗಿ ಶೆಟ್ಟರ್‍ಗೆ ಮಣೆ ಹಾಕಲು ಮುಂದಾಗಿದೆ. ಕೆಲ ದಿನಗಳ ಹಿಂದೆ ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದ ಶೆಟ್ಟರ್, ನನಗೆ ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ನೀಡುವುದಾದರೆ ಪಕ್ಷ ಸೇರ್ಪಡೆ ಬಗ್ಗೆ ಮರುಚಿಂತನೆ ಮಾಡುತ್ತೇನೆ ಎಂದು ಹೇಳಿದ್ದರು.
ಶೆಟ್ಟರ್‌ಗೆ ಕಾಂಗ್ರೆಸ್‍ನಲ್ಲಿ ಅನ್ಯಾಯವಾಗಿಲ್ಲ : ಸಿದ್ದರಾಮಯ್ಯ
ಅದರಂತೆ ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ , ಕೇಂದ್ರ ಗೃಹಸಚಿವ ಅವರ ಜೊತೆ ಮಾತುಕತೆ ನಡೆಸಿ ಶೆಟ್ಟರ್ ಅವರನ್ನು ಕರೆತರುವುದಕ್ಕೆ ಮನವೊಲಿಸಿದ್ದರು. ಶೆಟ್ಟರ್ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಮುನ್ನ ಬೆಳಗಾವಿ ಅಭ್ಯರ್ಥಿಯನ್ನಾಗಿ ಮಾಡಬೇಕು. ಇದು ಅವರ ಬೇಡಿಕೆಯೂ ಹೌದು ಎಂದು ಹೇಳಿದ್ದರು. ಇದಕ್ಕೆ ವರಿಷ್ಠರು ಒಪ್ಪಿಗೆಯನ್ನು ಕೊಟ್ಟಿದ್ದರು.