Monday, May 13, 2024
Homeರಾಜ್ಯಜೆಡಿಎಸ್‍ಗೆ 3 ಲೋಕಸಭೆ ಕ್ಷೇತ್ರ ಫಿಕ್ಸ್

ಜೆಡಿಎಸ್‍ಗೆ 3 ಲೋಕಸಭೆ ಕ್ಷೇತ್ರ ಫಿಕ್ಸ್

ಬೆಂಗಳೂರು,ಜ.25- ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿರುವ ಹಿನ್ನಲೆ 28 ಲೋಕಸಭಾ ಕ್ಷೇತ್ರಗಳ ಪೈಕಿ ಮೂರು ಕ್ಷೇತ್ರಗಳನ್ನು ಮಾತ್ರ ದಳಪತಿಗಳಿಗೆ ಬಿಟ್ಟು ಕೊಡಲು ಬಿಜೆಪಿ ತೀರ್ಮಾನಿಸಿದೆ. ಹಾಸನ, ಮಂಡ್ಯ ಮತ್ತು ಬೆಂಗಳೂರು ಗ್ರಾಮಾಂತರ ಇಲ್ಲವೇ ಚಿಕ್ಕಬಳ್ಳಾಪುರ ಕ್ಷೇತ್ರಗಳು ಜೆಡಿಎಸ್ ಪಾಲಾಗಲಿದ್ದು, ಉಳಿದ 25 ಕ್ಷೇತ್ರಗಳಲ್ಲಿ ಬಿಜೆಪಿ ಸ್ಪರ್ಧೆ ಮಾಡಲಿದೆ.

ಮೂರು ಕ್ಷೇತ್ರಗಳನ್ನು ಬಿಟ್ಟು ಕೊಡುವ ವರಿಷ್ಠರ ನಿರ್ಧಾರವನ್ನು ಈಗಾಗಲೇ ಜೆಡಿಎಸ್‍ಗೂ ಮಾಹಿತಿ ನೀಡಲಾಗಿದೆ. ಆದರೆ ಹೆಚ್ಚುವರಿಯಾಗಿ ಒಂದು ಕ್ಷೇತ್ರವನ್ನು ಬಿಟ್ಟುಕೊಡುವಂತೆ ಜೆಡಿಎಸ್ ಬೇಡಿಕೆ ಇಟ್ಟಿದೆ ಎಂದು ತಿಳಿದುಬಂದಿದೆ.

ಕಳೆದ ಭಾನುವಾರ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿವಾಸದಲ್ಲಿ ನಡೆದ ಮಾತುಕತೆ ಸಂದರ್ಭದಲ್ಲಿ ಹಾಸನ, ಮಂಡ್ಯ, ಕೋಲಾರ ಇಲ್ಲವೇ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಗಳಲ್ಲಿ ಜೆಡಿಎಸ್‍ಗೆ ಬಿಟ್ಟು ಕೊಡಲು ಒಮ್ಮತದ ತೀರ್ಮಾನಕ್ಕೆ ಬರಲಾಗಿದೆ.

ಕೋಲಾರದಲ್ಲಿ ಹಾಲಿ ಬಿಜೆಪಿ ಅಭ್ಯರ್ಥಿ ಮುನಿಸ್ವಾಮಿ ಇರುವುದರಿಂದ ಬೆಂಗಳೂರು ಗ್ರಾಮಾಂತರ ಕ್ಷೇತ್ರವನ್ನು ಜೆಡಿಎಸ್‍ಗೆ ಬಿಟ್ಟುಕೊಟ್ಟು ಕೋಲಾರವನ್ನು ತನ್ನ ತೆಕ್ಕೆಯಲ್ಲಿ ಉಳಿಸಿಕೊಳ್ಳಲು ಬಿಜೆಪಿ ಲೆಕ್ಕಾಚಾರ ಹಾಕಿದೆ. ಯಡಿಯೂರಪ್ಪ ನಿವಾಸದಲ್ಲಿ ನಡೆದ ಮಾತುಕತೆ ಸಂದರ್ಭದಲ್ಲಿ ಕುಮಾರಸ್ವಾಮಿ ಅವರು ನಮ್ಮ ಪಕ್ಷಕ್ಕೆ ಕನಿಷ್ಠ ಪಕ್ಷ ಐದು ಲೋಕಸಭಾ ಕ್ಷೇತ್ರಗಳನ್ನು ನೀಡಬೇಕೆಂಬ ಪ್ರಸ್ತಾವನೆಯನ್ನು ಮುಂದಿಟ್ಟಿದ್ದರು.

ಶೆಟ್ಟರ್‌ಗೆ ಕಾಂಗ್ರೆಸ್‍ನಲ್ಲಿ ಅನ್ಯಾಯವಾಗಿಲ್ಲ : ಸಿದ್ದರಾಮಯ್ಯ

ವರಿಷ್ಠರು ಈಗಾಗಲೇ ಮೂರು ಕ್ಷೇತ್ರಗಳನ್ನು ಜೆಡಿಎಸ್‍ಗೆ ಸೂಚನೆ ನೀಡಬೇಕೆಂದು ಸೂಚನೆ ಕೊಟ್ಟಿದ್ದಾರೆ. ಹೆಚ್ಚುವರಿ ಕ್ಷೇತ್ರಗಳು ಬೇಕೆಂದರೆ ದೆಹಲಿ ಮಟ್ಟದಲ್ಲೆ ತೀರ್ಮಾನವಾಗಬೇಕು. ಸದ್ಯಕ್ಕೆ ಮೂರು ಕಡೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಸಿದ್ದತೆ ಮಾಡಿಕೊಳ್ಳುವಂತೆ ಸಭೆಯಲ್ಲಿ ತೀರ್ಮಾನವಾಗಿದೆ ಎಂದು ತಿಳಿದುಬಂದಿದೆ.

ತೀವ್ರ ಕುತೂಹಲ ಕೆರಳಿಸಿರುವ ಮಂಡ್ಯ ಲೋಕಸಭಾ ಕ್ಷೇತ್ರದ ಹಾಲಿ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರ ನಡೆ ನಿಗೂಢವಾಗಿದ್ದು, ಅವರ ಮುಂದಿನ ತೀರ್ಮಾನದ ನಂತರವೇ ಮಾತುಕತೆ ನಡೆಸಲು ಬಿಜೆಪಿ ತೀರ್ಮಾನಿಸಿದೆ.

ಇತ್ತೀಚೆಗೆ ಸುಮಲತಾ ನಡೆ ಸಾಕಷ್ಟು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ. ಬಿಜೆಪಿ ಮಂಡ್ಯ ಕ್ಷೇತ್ರವನ್ನು ಜೆಡಿಎಸ್‍ಗೆ ಬಿಟ್ಟು ಕೊಟ್ಟರೆ ಅವರು ಕಾಂಗ್ರೆಸ್ ಸೇರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಹೀಗಾಗಿಯೇ ಕಾದು ನೋಡುವ ತಂತ್ರವನ್ನು ಕಮಲ ನಾಯಕರು ಅನುಸರಿಸುತ್ತಿದ್ದಾರೆ.

ಒಂದು ವೇಳೆ ಡಿ.ವಿ.ಸದಾನಂದಗೌಡ ಅವರು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಪುನಃ ಸ್ಪರ್ಧೆ ಮಾಡುವುದಿಲ್ಲ ಎಂದು ಘೋಷಣೆ ಮಾಡಿದರೆ ಸುಮಲತಾ ಅಂಬರೀಶ್ ಅವರನ್ನು ಇದೇ ಕ್ಷೇತ್ರಕ್ಕೆ ಕಣಕ್ಕಿಳಿಸುವ ಚಿಂತನೆ ಬಿಜೆಪಿಯಲ್ಲಿತ್ತು. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಪುನಃ ಇದೇ ಕ್ಷೇತ್ರದಿಂದ ಸದಾನಂದ ಗೌಡ ಪುನಃ ಕಣಕ್ಕಿಳಿಯುವ ಲೆಕ್ಕಾಚಾರದಲ್ಲಿದ್ದಾರೆ. ಹೀಗಾಗಿ ಸುಮಲತಾ ಅಂಬರೀಶ್‍ಗೆ ಎಲ್ಲಿ ಸ್ಥಾನ ಕಲ್ಪಿಸಬೇಕು ಎಂಬ ಚಿಂತೆ ಬಿಜೆಪಿಗೆ ಎದುರಾಗಿದೆ.

RELATED ARTICLES

Latest News