Friday, May 3, 2024
Homeರಾಜ್ಯಶೆಟ್ಟರ್ ನಿರ್ಧಾರ ವಿಶ್ವಾಸಕ್ಕೆ ಧಕ್ಕೆಯುಂಟುಮಾಡಿದೆ : ಡಿಕೆಶಿ

ಶೆಟ್ಟರ್ ನಿರ್ಧಾರ ವಿಶ್ವಾಸಕ್ಕೆ ಧಕ್ಕೆಯುಂಟುಮಾಡಿದೆ : ಡಿಕೆಶಿ

ಬೆಂಗಳೂರು,ಜ.25- ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಬಿಜೆಪಿಗೆ ಸೇರುವ ದಿಢೀರ್ ನಿರ್ಧಾರ ಕಾಂಗ್ರೆಸ್‍ಗೆ ಆಘಾತವಾಗಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿಶ್ವಾಸ ಹಾಗೂ ಆತ್ಮಸಾಕ್ಷಿಗೆ ಧಕ್ಕೆಯಾಗಿದೆ ಎಂದು ದೂರಿದ್ದಾರೆ.

ನವದೆಹಲಿಯ ಬಿಜೆಪಿ ಕಚೇರಿಯಲ್ಲಿ ಜಗದೀಶ್ ಶೆಟ್ಟರ್ ಮಾತೃಪಕ್ಷಕ್ಕೆ ಮರಳುತ್ತಿದ್ದಂತೆ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಇತ್ತೀಚೆಗೆ ಜಗದೀಶ್ ಶೆಟ್ಟರ್‍ರವರು ತಮ್ಮ ಬೆಂಬಲಿಗರನ್ನು ಬಿಜೆಪಿಗೆ ಕಳುಹಿಸುತ್ತಿದ್ದಾರೆಂಬ ಮಾಹಿತಿ ನನಗೆ ತಲುಪಿತ್ತು. ಈ ಬಗ್ಗೆ ನಿನ್ನೆ ಬೆಳಿಗ್ಗೆ ಕೂಡ ಅವರ ಜೊತೆ ದೂರವಾಣಿಯಲ್ಲಿ ಮಾತನಾಡಿದ್ದೆ. ನನಗೆ ಕಾಂಗ್ರೆಸ್ ಪಕ್ಷ ರಾಜಕೀಯವಾಗಿ ಮರುಜೀವ ನೀಡಿದೆ. ಹೀಗಾಗಿ ಪಕ್ಷ ಬಿಡುವ ಮಾತೇ ಇಲ್ಲ ಎಂದಿದ್ದರು. ಅದರ ಆಧಾರದ ಮೇಲೆ ನಾನು ಮೈಸೂರಿನಲ್ಲಿ ಹೇಳಿಕೆ ನೀಡಿದ್ದೆ. ಈಗ ಅವರ ನಿರ್ಧಾರ ವಿಶ್ವಾಸಕ್ಕೆ ಧಕ್ಕೆಯುಂಟು ಮಾಡಿದೆ ಎಂದರು.

ಕ್ಷಿಪ್ರ ಬೆಳವಣಿಗೆಯಲ್ಲಿ ಮತ್ತೆ ಬಿಜೆಪಿಗೆ ವಾಪಸ್ಸಾದ ಜಗದೀಶ್ ಶೆಟ್ಟರ್

ದೇಶದ ಹಿತದೃಷ್ಟಿಯಿಂದ ಮತ್ತೆ ಬಿಜೆಪಿ ಸೇರುತ್ತಿದ್ದೇನೆ ಎಂದು ಜಗದೀಶ್ ಶೆಟ್ಟರ್ ಹೇಳುವುದಕ್ಕೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ಈ ಹಿಂದೆ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ನೀಡದೆ ಬಿಜೆಪಿಯವರು ಅಪಮಾನ ಮಾಡಿದಾಗ ದೇಶದ ಹಿತ ಗಮನದಲ್ಲಿರಲಿಲ್ಲವೇ ಎಂದು ಹೇಳಿದರು. ಇತ್ತೀಚಿನವರೆಗೂ ಜಗದೀಶ್ ಶೆಟ್ಟರ್‍ರವರು ಬಿಜೆಪಿಯವರ ನಿಲುವುಗಳನ್ನು ಟೀಕಿಸುತ್ತಿದ್ದರು. ರಾಮ ಮಂದಿರ ಹಾಗೂ ಇತರ ವಿಚಾರಗಳಲ್ಲಿ ಬಿಜೆಪಿಯವರು ಮಾಡುವ ರಾಜಕಾರಣದ ಬಗ್ಗೆ ತೀಕ್ಷ್ಣ ಮಾತುಗಳಲ್ಲೇ ಆರೋಪ ಮಾಡಿದ್ದರು. ಈಗ ಅವರ ಬಿಜೆಪಿ ಸೇರ್ಪಡೆಯಲ್ಲಿ ಸಂಘಪರಿವಾರದ ಹಸ್ತಕ್ಷೇಪವಿದೆ ಎಂದು ನಾನು ಹೇಳಲು ಬಯಸುವುದಿಲ್ಲ. ಸಂಘ ಪರಿವಾರದವರು ಅವರ ಕೆಲಸ ಮಾಡುತ್ತಾರೆ. ನಾವು ರಾಜಕೀಯದವರು, ರಾಜಕೀಯ ಮಾಡುತ್ತೇವೆ. ಜಗದೀಶ್ ಶೆಟ್ಟರ್ ರಾಜಕಾರಣಿ ಎಂದರು.

ರಾಜೀನಾಮೆ ನೀಡುವಾಗ ಎಲ್ಲರೂ ಸ್ವ ಇಚ್ಛೆ ಎಂದೇ ಹೇಳುತ್ತಾರೆ. ಬಲವಂತವಾಗಿ ಅಥವಾ ಚಾಕಲೇಟ್‍ನ ಆಸೆಗಾಗಿ ಯಾರೂ ರಾಜೀನಾಮೆ ನೀಡುವುದಿಲ್ಲ. ಬಿಜೆಪಿಯವರು ಯಾವ ಒತ್ತಡ ಹಾಗೂ ಆಮಿಷ ಹೇರಿ ಅವರನ್ನು ಕರೆದುಕೊಂಡು ಹೋಗಿದ್ದಾರೋ ಗೊತ್ತಿಲ್ಲ. ಈವರೆಗೂ ನನಗೆ ಜಗದೀಶ್ ಶೆಟ್ಟರ್‍ರವರ ರಾಜೀನಾಮೆ ಪತ್ರ ತಲುಪಿಲ್ಲ. ಅದು ತಲುಪಿದ ಬಳಿಕ ಮತ್ತು ಜಗದೀಶ್ ಶೆಟ್ಟರ್‍ರ ಹೇಳಿಕೆಯನ್ನು ಗಮನಿಸಿ ನಂತರ ನಾನು ಪ್ರತಿಕ್ರಿಯಿಸುತ್ತೇನೆ ಎಂದು ಹೇಳಿದರು.

ಕಾರ್ಯಕರ್ತರ ಅಪೇಕ್ಷೆಯಂತೆ ಶೆಟ್ಟರ್ ಬಿಜೆಪಿ ಸೇರ್ಪಡೆ : ಯಡಿಯೂರಪ್ಪ

ವಿಧಾನಸಭೆ ಚುನಾವಣೆಯಲ್ಲಿ ಜಗದೀಶ್ ಶೆಟ್ಟರ್‍ರನ್ನು ಜನ 35 ಸಾವಿರ ಮತಗಳ ಅಂತರದಿಂದ ತಿರಸ್ಕರಿಸಿದ್ದರು. ಆದರೂ ನಾವು ಅವರನ್ನು ಗೌರವಿಸಿ 5 ವರ್ಷಗಳ ಅವಗೆ ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಿದ್ದೆವು. ವಿಶ್ವಾಸ ಮತ್ತು ಆತ್ಮಸಾಕ್ಷಿ ಎಲ್ಲರಲ್ಲೂ ಇರುತ್ತದೆ. ಅದು ಜಗದೀಶ್ ಶೆಟ್ಟರ್‍ರಲ್ಲೂ ಇದೆ ಎಂದುಕೊಂಡಿದ್ದೇನೆ ಎಂದರು. ವಿಧಾನಪರಿಷತ್ ಸಭಾಪತಿಯವರಿಗೆ ಕರೆ ಮಾಡಿ ಇ-ಮೇಲ್‍ನಲ್ಲಿ ರಾಜೀನಾಮೆ ಪತ್ರ ಕಳುಹಿಸಿದ್ದಾರೆ ಎಂಬ ಮಾಹಿತಿ ಇದೆ. ಆದರೆ ಕಾಂಗ್ರೆಸ್ ಪಕ್ಷಕ್ಕೆ ಆ ಪತ್ರ ಇನ್ನೂ ತಲುಪಿಲ್ಲ ಎಂದು ಹೇಳಿದರು.

RELATED ARTICLES

Latest News