Saturday, July 27, 2024
Homeರಾಜ್ಯರಾಜ್ಯದಲ್ಲಿ ಮತ್ತೊಂದು ಮಿನಿ ಅಗ್ನಿಪರೀಕ್ಷೆಗೆ ರಾಜಕೀಯ ಪಕ್ಷಗಳು ಸಿದ್ಧತೆ

ರಾಜ್ಯದಲ್ಲಿ ಮತ್ತೊಂದು ಮಿನಿ ಅಗ್ನಿಪರೀಕ್ಷೆಗೆ ರಾಜಕೀಯ ಪಕ್ಷಗಳು ಸಿದ್ಧತೆ

ಬೆಂಗಳೂರು,ಮೇ12- ಲೋಕಸಭೆ ಚುನಾವಣೆಯ ಕಾವು ತಣ್ಣಗಾಗುವ ಮುನ್ನವೇ ರಾಜ್ಯದಲ್ಲಿ ರಾಜಕೀಯ ಪಕ್ಷಗಳಿಗೆ ಮತ್ತೊಂದು ಮಿನಿ ಅಗ್ನಿಪರೀಕ್ಷೆ ಎದುರಾಗಿದೆ. ರಾಜ್ಯ ಸರ್ಕಾರಕ್ಕೆ ವಿಧಾನಪರಿಷತ್‍ನಲ್ಲಿ ಸಂಖ್ಯಾಬಲ ಹೆಚ್ಚಿಸಿಕೊಂಡು ವಿಧೇಯಕಗಳನ್ನು ಪಾಸು ಮಾಡಿಕೊಳ್ಳಲು ಪೂರಕವಾಗಿ ಜೂನ್ 3ರಂದು ನಡೆಯುವ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

ವಿಧಾನಪರಿಷತ್‍ನ ಶಿಕ್ಷಕರ ಹಾಗೂ ಪದವೀಧರರ ಆರು ಕ್ಷೇತ್ರಗಳಿಗೆ ದ್ವೈವಾರ್ಷಿಕ ಚುನಾವಣೆ ನಡೆಯುತ್ತಿದ್ದು, ಅvಸೂಚನೆ ಜಾರಿಯಲ್ಲಿದೆ. ಮೇ 16ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಈ ಚುನಾವಣೆಯಲ್ಲೂ ಬಿಜೆಪಿ-ಜೆಡಿಎಸ್‍ನ ಮೈತ್ರಿ ಮುಂದುವರೆದಿದೆ. ಬಿಜೆಪಿ ಐದು ಕ್ಷೇತ್ರಗಳಿಗೆ ನಿನ್ನೆ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಒಂದು ಕ್ಷೇತ್ರವನ್ನು ಮಾತ್ರ ಜೆಡಿಎಸ್‍ಗೆ ಬಿಟ್ಟು ಕೊಡಲಾಗಿದ್ದು, ಅದಕ್ಕೆ ಅಭ್ಯರ್ಥಿಯ ಆಯ್ಕೆ ಪ್ರಕ್ರಿಯೆ ಚಾಲನೆಯಲ್ಲಿದೆ.

ಕರ್ನಾಟಕ ಈಶಾನ್ಯ ಪದವೀಧರ ಕ್ಷೇತ್ರದಿಂದ ಡಾ.ಚಂದ್ರಶೇಖರ ಪಾಟೀಲ(ಕಾಂಗ್ರೆಸ್), ಕರ್ನಾಟಕ ನೈರುತ್ಯ ಪದವೀಧರ ಕ್ಷೇತ್ರದಿಂದ ಅಯನೂರು ಮಂಜುನಾಥ್(ಬಿಜೆಪಿ), ಬೆಂಗಳೂರು ಪದವೀಧರ ಕ್ಷೇತ್ರದಿಂದ ಅ.ದೇವೇಗೌಡ(ಬಿಜೆಪಿ), ಕರ್ನಾಟಕ ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ವೈ.ಎ.ನಾರಾಯಣಸ್ವಾಮಿ (ಬಿಜೆಪಿ), ಕರ್ನಾಟಕ ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಎಸ್.ಎಲ್.ಬೋಜೇಗೌಡ (ಜೆಡಿಎಸ್), ಕರ್ನಾಟಕ ದಕ್ಷಿಣ ಕ್ಷೇತ್ರದಿಂದ ಮರಿತಿಬ್ಬೇಗೌಡ (ಜೆಡಿಎಸ್) 2018ರ ಚುನಾವಣೆಯಲ್ಲಿ ಆಯ್ಕೆಯಾಗಿದ್ದರು. ಇದೇ ಜೂನ್ 21ಕ್ಕೆ ಅವಧಿ ಪೂರ್ಣಗೊಳ್ಳುತ್ತಿದೆ.

ಇವರ ಪೈಕಿ ಮರಿತಿಬ್ಬೇಗೌಡ, ಅಯನೂರು ಮಂಜುನಾಥ್ ತಮ್ಮ ಪಕ್ಷಗಳಿಗೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿದ್ದಾರೆ. ಬಿಜೆಪಿ ನಿನ್ನೆ ಐದು ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಈಶಾನ್ಯ ಪದವೀಧರ ಕ್ಷೇತ್ರಕ್ಕೆ ಅಮರನಾಥ್ ಪಾಟೀಲ್, ನೈರುತ್ಯ ಪದವೀಧರ ಕ್ಷೇತ್ರಕ್ಕೆ ಡಾ.ಧನಂಜಯ ಸರ್ಜಿ, ಬೆಂಗಳೂರು ಪದವೀಧರ ಕ್ಷೇತ್ರಕ್ಕೆ ಅ.ದೇವೇಗೌಡ, ಅಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ವೈ.ಎ.ನಾರಾಯಣಸ್ವಾಮಿ, ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ವಿ.ಸಿ.ನಿಂಗರಾಜು ಅಭ್ಯರ್ಥಿಗಳಾಗಿದ್ದಾರೆ.

ನೈರುತ್ಯ ಶಿಕ್ಷಕರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಉಡುಪಿ ಕ್ಷೇತ್ರದ ಮಾಜಿ ಶಾಸಕ ರಘುಪತಿ ಭಟ್ ನಿನ್ನೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಅಸಮಾಧಾನ ಹೊರಹಾಕಿದ್ದು, ಬಿಜೆಪಿ ತಮಗೆ ವಿಧಾನಪರಿಷತ್‍ನ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡುವ ಭರವಸೆ ನೀಡಿತ್ತು. ಆದರೆ ಈಗ ಆ ಕ್ಷೇತ್ರವನ್ನು ಜೆಡಿಎಸ್‍ಗೆ ಬಿಟ್ಟು ಕೊಡಲು ಮುಂದಾಗಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಜೆಡಿಎಸ್‍ನ ಶ್ರೀಕಂಠೇಗೌಡ ಆಕಾಂಕ್ಷಿಯಾಗಿದ್ದರು. ಆದರೆ ಆ ಸ್ಥಾನಕ್ಕೆ ಬಿಜೆಪಿ ತನ್ನ ಅಭ್ಯರ್ಥಿಯನ್ನು ಘೋಷಿಸಿದೆ. ಹೀಗಾಗಿ ಮೈತ್ರಿ ಪಕ್ಷದಲ್ಲಿ ಒಂದಿಷ್ಟು ಗೊಂದಲಗಳು ಕಂಡುಬಂದಿವೆ.
ಇತ್ತ ಕಾಂಗ್ರೆಸ್ ಬೆಂಗಳೂರು ಪದವೀಧರ ಕ್ಷೇತ್ರಕ್ಕೆ ರಾಮೋಜಿ ಗೌಡ, ನೈರುತ್ಯ ಶಿಕ್ಷಕರ ಕ್ಷೇತ್ರಕ್ಕೆ ಕೆ.ಕೆ.ಮಂಜುನಾಥ್, ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ಪಿ.ಡಿ.ಶ್ರೀನಿವಾಸ್, ಈಶಾನ್ಯ ಪದವೀಧರ ಕ್ಷೇತ್ರಕ್ಕೆ ಡಾ.ಚಂದ್ರಶೇಖರ್ ಬಿ.ಪಾಟೀಲ್, ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಮರಿತಿಬ್ಬೇಗೌಡ ಅವರಿಗೆ ಟಿಕೆಟ್ ಘೋಷಣೆ ಮಾಡಿದೆ.
ನೈರುತ್ಯ ಪದವೀಧರ ಕ್ಷೇತ್ರಕ್ಕೆ ಅಯನೂರು ಮಂಜುನಾಥ್ ಅಭ್ಯರ್ಥಿಯಾಗುವ ಸಾಧ್ಯತೆ ಇದೆ. ಈ ಚುನಾವಣೆಗೆ ವಿದ್ಯಾವಂತರು ಹಾಗೂ ಪ್ರಜ್ಞಾವಂತರು ಮತದಾರರಾಗಿರುವುದರಿಂದ ಎಲ್ಲ ಪಕ್ಷಗಳಿಗೂ ಅಗ್ನಿಪರೀಕ್ಷೆ ಎದುರಾಗಿದೆ.

ಆಡಳಿತಾರೂಢ ಕಾಂಗ್ರೆಸ್‍ಗೆ ವಿಧಾನಪರಿಷತ್‍ನಲ್ಲಿ ತನ್ನ ಸಂಖ್ಯಾಬಲವನ್ನು ಹೆಚ್ಚಿಸಿಕೊಳ್ಳಲು ಇದು ಸುವರ್ಣಾವಕಾಶವಾಗಿದೆ. ದ್ವೈವಾರ್ಷಿಕ ಚುನಾವಣೆ ನಡೆಯುತ್ತಿರುವ ಕ್ಷೇತ್ರಗಳ ಪೈಕಿ ಈಶಾನ್ಯ ಪದವೀಧರ ಕ್ಷೇತ್ರ ಹೊರತುಪಡಿಸಿ ಉಳಿದ ಮೂರು ಕಡೆ ಬಿಜೆಪಿ, ಎರಡು ಕಡೆ ಜೆಡಿಎಸ್ 2018ರಲ್ಲಿ ಗೆದ್ದಿದ್ದವು.
ಪ್ರಸ್ತುತ ವಿಧಾನಪರಿಷತ್‍ನಲ್ಲಿ ಬಿಜೆಪಿ 32, ಜೆಡಿಎಸ್ 7 ಸ್ಥಾನ ಹೊಂದಿದ್ದು, ಎನ್‍ಡಿಎ ಮಿತ್ರಕೂಟ 39 ಸಂಖ್ಯಾಬಲ ಹೊಂದಿದೆ. ಕಾಂಗ್ರೆಸ್ 29 ಸದಸ್ಯರನ್ನು ಹೊಂದಿದ್ದು, ಒಬ್ಬರು ಪಕ್ಷೇತರರು ಮತ್ತು ಒಬ್ಬ ಸಭಾಪತಿ ಇದ್ದಾರೆ.

ತೇಜಸ್ವಿನಿಗೌಡ, ಕೆ.ಪಿ.ನಂಜುಂಡಿ ಅವರು ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ವಿಧಾನಸಭೆಯಿಂದ ವಿಧಾನಪರಿಷತ್‍ಗೆ ಆಯ್ಕೆಯಾಗಿರುವ 9 ಮಂದಿ ಸದಸ್ಯರ ಅವಧಿ ಜೂ.17ಕ್ಕೆ ಮುಕ್ತಾಯಗೊಳ್ಳುತ್ತಿದೆ. ಇಲ್ಲಿ ಕಾಂಗ್ರೆಸ್ 5ಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುವ ಅವಕಾಶ ಹೊಂದಿದೆ.

ದ್ವೈವಾರ್ಷಿಕ ಚುನಾವಣೆಯಲ್ಲಿ ಉತ್ತಮ ಸಾಧನೆ ಮಾಡಿದರೆ ಜೆಡಿಎಸ್ ಮತ್ತು ಬಿಜೆಪಿಗಿಂತಲೂ ಹೆಚ್ಚು ಸಂಖ್ಯಾಬಲವನ್ನು ಪಡೆದುಕೊಂಡು ಮೇಲ್ಮನೆಯಲ್ಲು ವಿಧೇಯಕಗಳನ್ನು ಅಂಗೀಕರಿಸಿಕೊಳ್ಳಲು ಅವಕಾಶ ಮಾಡಿಕೊಂಡಂತಾಗುತ್ತದೆ.

RELATED ARTICLES

Latest News