ಬೆಂಗಳೂರು,ಜ.25- ಬಿಟ್‍ಕಾಯಿನ್ ಹಗರಣದ ಪ್ರಕರಣದಲ್ಲಿ ಮಹತ್ತರ ಬೆಳವಣಿಗೆ ನಡೆದಿದ್ದು, ತನಿಖೆ ನಡೆಸುತ್ತಿರುವ ಎಸ್‍ಐಟಿ ಇದೀಗ ಪೊಲೀಸ್ ಇನ್ಸ್‍ಪೆಕ್ಟರ್ ಸೇರಿದಂತೆ ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‍ಐಟಿ ಕಳೆದ ಮೂರು ದಿನಗಳಿಂದ ಹಲವಾರು ಮಂದಿಯನ್ನು ವಿಚಾರಣೆಗೆ ಕರೆದಿತ್ತು. ಆ ಪೈಕಿ ಪೊಲೀಸ್ ಇನ್ಸ್‍ಪೆಕ್ಟರ್ ಹಾಗೂ ಸೈಬರ್ ಎಕ್ಸ್‍ಪರ್ಟ್ ಒಬ್ಬರನ್ನು ಬಂಧಿಸಿದೆ.
ಬಿಟ್‍ಕಾಯಿನ್ ತನಿಖೆಗೆ ಎಸ್‍ಐಟಿ ರಚನೆಯಾದ ನಂತರ ಪ್ರಮುಖ ಆರೋಪಿ ಶ್ರೀಕಿಯನ್ನು ವಶಕ್ಕೆ ಪಡೆದು ಬಿಟ್‍ಕಾಯಿನ್‍ಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದಾಗ ಸರಿಯಾಗಿ ಆತ ಸ್ಪಂದಿಸಿರಲಿಲ್ಲ. ಹೀಗಾಗಿ ಎಸ್‍ಐಟಿ ತನಿಖೆಯನ್ನು ತೀವ್ರಗೊಳಿಸಿ ಈ ಹಿಂದೆ ಈ ಪ್ರಕರಣದ ತನಿಖೆ ನಡೆಸಿದ್ದ ಸಿಸಿಬಿಯ ಇನ್ಸ್‍ಪೆಕ್ಟರ್‍ಗಳು ಮತ್ತು ಸಿಬ್ಬಂದಿಗಳನ್ನು ಕರೆದು ವಿಚಾರಣೆಗೊಳಪಡಿಸಿ ಕೆಲವು ಮಾಹಿತಿ ಪಡೆದುಕೊಂಡಿತ್ತು.
ಸಿಸಿಬಿ ತನಿಖೆಯಲ್ಲಿ ಲೋಪ ಹಾಗೂ ಸಾವಿರಾರು ಕೋಟಿ ರೂ. ಹಗರಣ ನಡೆದಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು. ತದನಂತರ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಎಸ್‍ಐಟಿ ರಚನೆ ಮಾಡಿತ್ತು. ಎಸ್‍ಐಟಿ ತನಿಖೆ ವೇಳೆ ಸದ್ಯಕ್ಕೆ ಈ ಹಗರಣದಲ್ಲಿ 3.50 ಲಕ್ಷ ರೂ. ಮೌಲ್ಯದ ಬಿಟ್‍ಕಾಯಿನ್ ವರ್ಗಾವಣೆಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಸಮಗ್ರ ವಾಗಿ ತನಿಖೆ ನಡೆಯುತ್ತಿದೆ.
ಲೋಕಸಭೆ ಚುನಾವಣೆ : ಬೆಳಗಾವಿ ಕ್ಷೇತ್ರದಿಂದ ಜಗದೀಶ್ ಶೆಟ್ಟರ್ ಸ್ಪರ್ಧೆ..?
ಈ ಪ್ರಕರಣದಲ್ಲಿ ಕೆಲ ಬಿಜೆಪಿ ನಾಯಕರ ಹೆಸರುಗಳು ಕೇಳಿಬಂದಿದ್ದವು. ಇದರಿಂದ ಬಿಟ್ ಕಾಯಿನ್ ಪ್ರಕರಣ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿತ್ತು. ಈಗ ಎಸ್‍ಐಟಿ ಅಧಿಕಾರಿಗಳು ಈ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿದ್ದಾರೆ.