ರೋಟರ್‌ಡ್ಯಾಮ್, ಜೂನ್ 18: ಅನುಭವಿ ಮಧ್ಯಮ ಆಟಗಾರ ಮನ್‌ಪ್ರೀತ್ ಸಿಂಗ್ ತಮ 413ನೇ ಅಂತರರಾಷ್ಟ್ರೀಯ ಪಂದ್ಯವನ್ನಾಡುವ ಮೂಲಕ ಭಾರತೀಯ ಹಾಕಿ ಇತಿಹಾಸದಲ್ಲಿ ಅತಿಹೆಚ್ಚು ಪಂದ್ಯಗಳನ್ನು ಆಡಿದ ಆಟಗಾರ ಎಂಬ ದಾಖಲೆಯನ್ನು ನಿರ್ಮಿಸಿದರು. ಈ ವಿಶೇಷ ಸಂದರ್ಭದಲ್ಲಿ ಭಾರತ ತಂಡ ಎಫ್‌ಐಎಚ್ ಹಾಕಿ ಪ್ರೊ ಲೀಗ್‌ನ ಎರಡನೇ ಪಂದ್ಯದಲ್ಲಿ ಜರ್ಮನಿಯನ್ನು 3-1 ಗೋಲುಗಳಿಂದ ಮಣಿಸಿ ಭರ್ಜರಿ ಗೆಲುವು ಸಾಧಿಸಿತು.
ಭಾರತದ ಪರ ಮನ್‌ದೀಪ್ ಸಿಂಗ್ (7ನೇ ನಿಮಿಷ), ಶಿಲಾನಂದ್ ಲಕ್ರಾ (13ನೇ ನಿಮಿಷ) ಮತ್ತು ನೀಲಕಂಠ ಶರ್ಮಾ (35ನೇ ನಿಮಿಷ) ತಲಾ ಒಂದು ಗೋಲು ಗಳಿಸಿದರು. ಜರ್ಮನಿಯ ಪರ ರಫಾಯೆಲ್ ಹಾರ್ಟ್‌ಕೋಪ್ (45ನೇ ನಿಮಿಷ) ಏಕೈಕ ಗೋಲು ದಾಖಲಿಸಿದರು. ಭಾರತದ ಮಧ್ಯಮ ಆಟಗಾರ ಹಾರ್ದಿಕ್ ಸಿಂಗ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಪಂದ್ಯದ ಆರಂಭದಿಂದಲೇ ಚೆಂಡಿನ ಮೇಲೆ ನಿಯಂತ್ರಣ ಸಾಧಿಸಿದ ಭಾರತ 7ನೇ ನಿಮಿಷದಲ್ಲಿ ಮೊದಲ ಗೋಲು ಗಳಿಸಿತು. ಗೋಲುಮುಂಭಾಗದಲ್ಲಿ ಮನ್‌ದೀಪ್ ಸಿಂಗ್ ತೋರಿದ ಚಾಣಾಕ್ಷ ಆಟ ತಂಡಕ್ಕೆ 1-0 ಮುನ್ನಡೆ ತಂದುಕೊಟ್ಟಿತು.
ಮೊದಲ ಕ್ವಾರ್ಟರ್ ಅಂತ್ಯಗೊಳ್ಳುವ ಮುನ್ನವೇ ಶಿಲಾನಂದ್ ಲಕ್ರಾ ಜರ್ಮನಿಯ ಗೋಲ್‌ಕೀರ್ಪ ಅಲೆಕ್ಸಾಂಡರ್ ಸ್ಟಾಡ್ಲರ್ ಅವರನ್ನು ಮಣಿಸಿ ಭಾರತವನ್ನು 2-0 ಅಂತರದಲ್ಲಿ ಮುನ್ನಡೆಸಿದರು.
ಎರಡನೇ ಕ್ವಾರ್ಟರ್‌ನಲ್ಲಿ ಜರ್ಮನಿ ಆಕ್ರಮಣಕಾರಿ ಆಟ ಪ್ರದರ್ಶಿಸಿ ಭಾರತದ ಅರ್ಧಭಾಗದಲ್ಲಿ ಒತ್ತಡ ಹೇರಲು ಪ್ರಯತ್ನಿಸಿತು. ಈ ವೇಳೆ ಎರಡು ಪೆನಾಲ್ಟಿ ಕಾರ್ನರ್ ಅವಕಾಶಗಳು ಲಭಿಸಿದರೂ, ಮೊದಲ ಪ್ರಯತ್ನವನ್ನು ಅಮಿತ್ ರೋಹಿದಾಸ್ ತಡೆದರೆ, ಎರಡನೇ ಪ್ರಯತ್ನವನ್ನು ಗೋಲ್‌ಕೀರ್ಪ ಮೋಹಿತ್ ಅದ್ಭುತವಾಗಿ ವಿಫಲಗೊಳಿಸಿದರು.
ಮೂರನೇ ಕ್ವಾರ್ಟರ್‌ನಲ್ಲಿ ನೀಲಕಂಠ ಶರ್ಮಾ ಏಕಾಂಗಿಯಾಗಿ ಜರ್ಮನಿಯ ರಕ್ಷಣಾ ಆಟಗಾರರನ್ನು ಮೀರಿಸಿ ಚೆಂಡನ್ನು ಗೋಲುಪೆಟ್ಟಿಗೆಯೊಳಗೆ ಸೇರಿಸುವ ಮೂಲಕ ಭಾರತದ ಮುನ್ನಡೆಯನ್ನು 3-0ಕ್ಕೆ ಹೆಚ್ಚಿಸಿದರು.
ಮೂರನೇ ಕ್ವಾರ್ಟರ್ ಮುಗಿಯಲು ಕೇವಲ 20 ಸೆಕೆಂಡುಗಳು ಬಾಕಿ ಇರುವಾಗ ರಫಾಯೆಲ್ ಹಾರ್ಟ್‌ಕೋಪ್ ಜರ್ಮನಿಯ ಮೊದಲ ಗೋಲು ದಾಖಲಿಸಿ ಅಂತರವನ್ನು 3-1ಕ್ಕೆ ಇಳಿಸಿದರು.
ಕೊನೆಯ ಕ್ವಾರ್ಟರ್‌ನಲ್ಲಿ ಜರ್ಮನಿ ತೀವ್ರ ಹೋರಾಟ ನಡೆಸಿದರೂ ಭಾರತದ ರಕ್ಷಣಾ ಪಡೆ ಅತ್ಯಂತ ಶಿಸ್ತಿನ ಆಟ ಪ್ರದರ್ಶಿಸಿ ಮತ್ತೊಂದು ಗೋಲು ಅವಕಾಶ ನೀಡಲಿಲ್ಲ. ಪಂದ್ಯ ಮುಗಿಯಲು 90 ಸೆಕೆಂಡುಗಳು ಬಾಕಿ ಇರುವಾಗ ಜರ್ಮನಿ ಅಂತಿಮ ದಾಳಿ ನಡೆಸಿದರೂ ಭಾರತೀಯ ರಕ್ಷಣಾ ಆಟಗಾರರು ದೃಢವಾಗಿ ಎದುರಿಸಿ ಜಯವನ್ನು ಖಚಿತಪಡಿಸಿದರು.
