ಬೆಂಗಳೂರು,ಜ.27- ನಗರದಲ್ಲಿರುವ ಪಿಜಿಗಳ ಮಾಲೀಕರು ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸುವ ಜೊತೆಗೆ ಅಗತ್ಯವಿರುವ ಪರವಾನಗಿಯನ್ನು ಬಿಬಿಎಂಪಿಯಿಂದ ಕಡ್ಡಾಯವಾಗಿ ಪಡೆಯಬೇಕು ಎಂದು ಪೂರ್ವವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತರಾದ ರಮಣಗುಪ್ತ ತಿಳಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‍ನಲ್ಲಿ ಪೋಸ್ಟ್ ಮಾಡಿದ್ದು, ಪಿಜಿಗಳ ಸುರಕ್ಷತಾ ಮಾರ್ಗಸೂಚಿ ಪಾಲನೆಗೆ ಅವರು ತಾಕೀತು ಮಾಡಿದ್ದಾರೆ.
ರಾಜಧಾನಿಯಲ್ಲಿ ಪಿಜಿಗಳ (ಪೇ ಅಂಡ್ ಗೆಸ್ಟ್) ಪ್ರಮಾಣ ಹೆಚ್ಚುತ್ತಲೇ ಇದ್ದರೂ ಸೂಕ್ತ ರೀತಿಯಲ್ಲಿ ನಿಯಮ ಪಾಲಿಸುತ್ತಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ ವಾಸಕ್ಕೆ ಬರುವ ಎಲ್ಲಾ ವ್ಯಕ್ತಿಗಳ ಗುರುತಿನ ಚೀಟಿ ಮತ್ತು ಇತ್ತೀಚಿನ ಭಾವಚಿತ್ರಗಳಿಗೂ ರಕ್ತ ಸಂಬಂಧಿಕರ ವಿವರಗಳನ್ನು ಹಾಗೂ ಮೊಬೈಲ್ ಸಂಖ್ಯೆಗಳೊಂದಿಗೆ ತಂತ್ರಜ್ಞಾನದ ಮೂಲಕ (ಗಣಕೀಕರಣ) ದಾಖಲಿಸಬೇಕು ಎಂದು ಅವರು ತಿಳಿಸಿದ್ದಾರೆ.
ಕರ್ನಾಟಕ ಸಾರ್ವಜನಿಕರ ಸುರಕ್ಷತಾ ಅನಿಯಮದ ಅನ್ವಯ ಕಡ್ಡಾಯವಾಗಿ ಪಿಜಿಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸುವುದು ಹಾಗೂ ಅಗ್ನಿ ಅನಾಹುತದ ಕುರಿತಂತೆ ಅಗತ್ಯ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು. ಮಾದಕವಸ್ತುಗಳ ಸೇವನೆ ಹಾಗೂ ಸಂಗ್ರಹಣೆಯಿಂದ ಕಾನೂನು ಬಾಹಿರ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಡಬಾರದು ಎಂದು ಅವರು ಹೇಳಿದ್ದಾರೆ.
ನಿಗಮ – ಮಂಡಳಿ ನೇಮಕಾತಿ ಬೆನ್ನಲ್ಲೇ `ಕೈ’ನಲ್ಲಿ ಭುಗಿಲೆದ್ದ ಭಿನ್ನಮತ
ಪಿಜಿಗಳಲ್ಲಿ ಕರ್ತವ್ಯಕ್ಕೆ ನೇಮಿಸಿಕೊಳ್ಳುವ ಎಲ್ಲಾ ವ್ಯಕ್ತಿಗಳ (ಅಡುಗೆ ಕೆಲಸ, ಸೆಕ್ಯೂರಿಟಿ ಗಾರ್ಡ್ ಹಾಗೂ ಇನ್ನಿತರ ವ್ಯಕ್ತಿಗಳು) ಪೂರ್ವಾಪರಗಳನ್ನು ಪೊಲೀಸ್ ಪರಿಶೀಲನೆಗೆ ಒಳಪಡಿಸಿದ ನಂತರ ಕರ್ತವ್ಯಕ್ಕೆ ನೇಮಿಸಿಕೊಳ್ಳಬೇಕು. ಇತರೆ ವಿಳಾಸದ ಮಾಹಿತಿ ಹಾಗೂ ರಕ್ತ ಸಂಬಂಧಿಕರ ಸೂಕ್ತ ದಾಖಲೆಗಳನ್ನು ಪಡೆಯಬೇಕು. ವಿದೇಶಿ ಪ್ರಜೆಗಳು ಪಿಜಿಯಲ್ಲಿ ನೆಲೆಸಿದ್ದರೆ ಮಾಹಿತಿಯನ್ನು ದಿ ರಿಜಿಸ್ಟರ್ ಆಫ್ ಫಾರಿನ್ ರೂಲ್ಸ್‍ನ ಫಾರಂ ಸಿ ಅನ್ವಯ ಸ್ಥಳೀಯ ಪೊಲೀಸ್ ಠಾಣೆಗೆ ನೇರವಾಗಿ ಅಥವಾ ತಂತ್ರಜ್ಞಾನದ ಮೂಲಕ ನೀಡಬೇಕು.
ಸ್ಥಳೀಯ ಪೊಲೀಸ್ ಠಾಣೆ, ತುರ್ತು ಸ್ಪಂದನೆಯ 112, ವೈದ್ಯಕೀಯ ಸೇವೆಯ 103, ಸೈಬರ್ ಅಪರಾಧಕ್ಕೆ ಸಂಬಂಧಪಟ್ಟ 1930 ಮುಂತಾದ ಅಗತ್ಯ ಸೇವೆಗಳ ದೂರವಾಣಿ ಸಂಖ್ಯೆಗಳನ್ನು ಎಲ್ಲರಿಗೂ ಗೋಚರಿಸುವಂತೆ ಪ್ರದರ್ಶಿಸಬೇಕು ಹಾಗೂ ಪ್ರಥಮ ಚಿಕಿತ್ಸೆಯ ಸಲಕರಣೆಗಳನ್ನು ಇಟ್ಟುಕೊಳ್ಳಬೇಕು ಎಂದು ಸುರಕ್ಷತಾ ಕ್ರಮಗಳ ನಿಯಮಗಳಲ್ಲಿ ಉಲ್ಲೇಖಿಸಲಾಗಿದೆ.
ವಾಸಕ್ಕೆ ಪ್ರವೇಶ ಪಡೆದಿರುವವರನ್ನು ಹೊರತುಪಡಿಸಿ ಇತರೆ ಯಾರಿಗೂ ವಾಸ್ತವಕ್ಕೆ ಅವಕಾಶ ಮಾಡಿಕೊಡಬಾರದು. ಸರ್ವೋಚ್ಛ ನ್ಯಾಯಾಲಯದ ಆದೇಶದ ಅನುಸಾರ ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 11 ಗಂಟೆವರೆಗೆ ಯಾವುದೇ ಧ್ವನಿವರ್ಧಕಗಳನ್ನು ಉಪಯೋಗಿಸತಕ್ಕದ್ದಲ್ಲ.
ಒಂದು ವೇಳೆ ಈ ಎಲ್ಲಾ ಸುರಕ್ಷತಾ ಕ್ರಮ, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೆ ಯಾವುದಾದರೂ ಅಹಿತಕರ ಘಟನೆ ಸಂಭವಿಸಿದ್ದಲ್ಲಿ ಸಂಬಂಧಪಟ್ಟ ಪಿಜಿ ಮಾಲೀಕರು ಅಥವಾ ಅದರ ವ್ಯವಸ್ಥಾಪಕರೇ ನೇರ ಹೊಣೆಗಾರರಾಗಿರುತ್ತಾರೆ ಎಂದು ರಮಣ ಗುಪ್ತ ಅವರು ಎಚ್ಚರಿಕೆ ನೀಡಿದ್ದಾರೆ.