Friday, May 3, 2024
Homeರಾಜ್ಯನಿಗಮ - ಮಂಡಳಿ ನೇಮಕಾತಿ ಬೆನ್ನಲ್ಲೇ `ಕೈ'ನಲ್ಲಿ ಭುಗಿಲೆದ್ದ ಭಿನ್ನಮತ

ನಿಗಮ – ಮಂಡಳಿ ನೇಮಕಾತಿ ಬೆನ್ನಲ್ಲೇ `ಕೈ’ನಲ್ಲಿ ಭುಗಿಲೆದ್ದ ಭಿನ್ನಮತ

ಬೆಂಗಳೂರು,ಜ.27- ಅಳೆದು ತೂಗಿ 34 ಮಂದಿ ಶಾಸಕರನ್ನು ನಿಗಮಮಂಡಳಿಗಳಿಗೆ ನೇಮಕಾತಿ ಮಾಡಿದ ಬೆನ್ನಲ್ಲೇ, ಅವಕಾಶ ಸಿಗದೇ ಇದ್ದವರ ಅಸಮಾಧಾನ ಒಂದೆಡೆಯಾದರೆ, ಅವಕಾಶ ಸಿಕ್ಕವರಲ್ಲಿ ಬಹಳಷ್ಟು ಮಂದಿ ತಮಗೆ ಸಚಿವ ಸ್ಥಾನ ಬೇಕು, ನಿಗಮಮಂಡಳಿ ಬೇಡ ಎಂದು ತಿರಸ್ಕರಿಸಿದ್ದಾರೆ.

ಹಿರಿಯ ಶಾಸಕ ಹಂಪನಗೌಡ ಬಾದರ್ಲಿ, ಎಸ್.ಎನ್.ಸುಬ್ಬಾರೆಡ್ಡಿ, ವಿನಯ್ ಕುಲಕರ್ಣಿ, ಪುಟ್ಟರಂಗಶೆಟ್ಟಿ, ಎಚ್.ವೈ.ಮೇಟಿ, ಸಿ.ಎ.ಅಪ್ಪಾಜಿ ನಾಡಗೌಡ, ಬಿ.ಜಿ.ಗೋವಿಂದಪ್ಪ, ಬಿ.ಕೆ.ಸಂಗಮೇಶ್ವರ, ಬಸವನಗೌಡ ಗದ್ದಲ್, ವಿಜಯಾನಂದ ಕಾಶ್ಯಪ್‍ನವರು ಸೇರಿದಂತೆ ಅನೇಕ ಶಾಸಕರು ನಿಗಮ ಮಂಡಳಿಯ ಸ್ಥಾನಕ್ಕಾಗಿ ಅಸಮಾಧಾನ ಹೊಂದಿದ್ದಾರೆ ಎಂದು ಹೇಳಲಾಗಿದೆ.

ಇವರ ಪೈಕಿ ಹಂಪನಗೌಡ ಬಾದರ್ಲಿ, ಎಸ್.ಎನ್. ಸುಬ್ಬಾರೆಡ್ಡಿಯವರು ನೇರವಾಗಿ ನೇಮಕಾತಿ ಆದೇಶ ವನ್ನು ತಿರಸ್ಕರಿಸಿದ್ದಾರೆ. ಬಾಗೇಪಲ್ಲಿ ಕ್ಷೇತ್ರದ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿ ಬೆಂಬಲಿಗರ ಸಭೆ ಕರೆದಿದ್ದು, ರಾಜಕೀಯ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ಎಸ್.ಎನ್. ಸುಬ್ಬಾರೆಡ್ಡಿಯವರಿಗೆ ಸಚಿವ ಸ್ಥಾನ ನೀಡದೇ ಕರ್ನಾಟಕ ರಾಜ್ಯ ಬೀಜ ನಿಗಮದ ಅಧ್ಯಕ್ಷ ಸ್ಥಾನ ನೀಡಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯ ಬಿಜೆಪಿ ಪಾಳಯದಲ್ಲಿ ಈಗಲೂ ಬಿಎಸ್‍ವೈ ಕಿಂಗ್

ನಗರಸಭೆ, ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿಯ ಸದಸ್ಯರು, ಅಧ್ಯಕ್ಷರು ಹಾಗೂ ಪಕ್ಷದ ಪದಾಧಿಕಾರಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎಂದು ಹೇಳಲಾಗಿದೆ. ಬೆಂಬಲಿಗರ ಒತ್ತಡಕ್ಕೆ ಅನುಗುಣವಾಗಿ ಎಸ್.ಎನ್.ಸುಬ್ಬಾರೆಡ್ಡಿ ನೇಮಕಾತಿಯ ಆದೇಶವನ್ನು ಸ್ಪೀಡ್ ಪೋಸ್ಟ್‍ನಲ್ಲಿ ಮುಖ್ಯಮಂತ್ರಿಗೆ ವಾಪಸ್ ಕಳುಹಿಸಿದ್ದಾರೆ.

ಮುಂದಿನ ದಿನಗಳಲ್ಲಿ ಲೋಕಸಭೆ ಚುನಾವಣೆ ಬಳಿಕ ಸಚಿವ ಸಂಪುಟ ವಿಸ್ತರಣೆಯಾಗುವ ನಿರೀಕ್ಷೆಗಳಿವೆ. ಆಗ ಈಗಿರುವ ಸಚಿವರನ್ನು ಬದಲಾವಣೆ ಮಾಡಿ ಹೊಸಬರಿಗೆ ಅವಕಾಶ ನೀಡುವ ಭರವಸೆ ನೀಡಲಾಗಿತ್ತು. ಆದರೆ ನಿಗಮ ಮಂಡಳಿಗಳಲ್ಲಿ ನೇಮಕಾತಿಯಾದವರನ್ನು ಸಚಿವ ಸ್ಥಾನಕ್ಕೆ ಪರಿಗಣಿಸುವುದಿಲ್ಲ ಎಂಬ ಷರತ್ತು ವಿಸಲಾಗಿದೆ.

ಹೀಗಾಗಿ 5 ಬಾರಿ ಗೆದ್ದಿರುವ ಹಂಪನಗೌಡ ಬಾದರ್ಲಿ, ತಾವು ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದು, ರಾಜ್ಯ ಕೈಗಾರಿಕಾ ಮೂಲ ಸೌಲಭ್ಯ ಅಭಿವೃದ್ಧಿ ನಿಗಮ ಅಧ್ಯಕ್ಷ ಸ್ಥಾನ ಬೇಡ ಎಂದು ತಿಳಿಸಿದ್ದಾರೆ ಎಂದು ಹೇಳಲಾಗಿದೆ. ಅವಕಾಶ ಸಿಕ್ಕವರು ಸಚಿವ ಸ್ಥಾನ ಬೇಕು ಎಂಬ ನಿರೀಕ್ಷೆಯಲ್ಲಿ ನಿಗಮ ಮಂಡಳಿಯನ್ನು ತಿರಸ್ಕರಿಸುತ್ತಿದ್ದರೆ ಮತ್ತೊಂದು ಕಡೆ ಅವಕಾಶ ಸಿಗದೇ ಇರುವ ಬಹಳಷ್ಟು ಶಾಸಕರು ತಮ್ಮನ್ನು ಕಡೆಗಣಿಸಲಾಗಿದೆ ಎಂಬ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ನೇಮಕವಾಗಿರುವ 34 ನಿಗಮಗಳ ಅಧ್ಯಕ್ಷರ ಪಟ್ಟಿಯಲ್ಲಿ ವಿಧಾನಪರಿಷತ್‍ನ ಒಬ್ಬರನ್ನೂ ಪರಿಗಣಿಸದೇ ಇರುವುದು ಅಸಮಾಧಾನಕ್ಕೆ ಕಾರಣವಾಗಿದೆ. ಜನರಿಂದ ಆಯ್ಕೆಯಾಗಿರುವ ಶಾಸಕರನ್ನು ಕಡೆಗಣಿಸುತ್ತಿರುವುದು ಒಂದೆಡೆಯಾದರೆ ವಿಧಾನಪರಿಷತ್‍ನಲ್ಲಿರುವ ಹಿರಿಯ ಸದಸ್ಯರನ್ನು ನಿರ್ಲಕ್ಷಿಸಲಾಗಿದೆ ಎಂಬ ಆರೋಪಗಳಿವೆ. ನೇಮಕಾತಿಯಾಗಿರುವ ಪಟ್ಟಿಯಲ್ಲಿ ಉತ್ತಮವಾದ ನಿಗಮಗಳನ್ನು ಕೊಟ್ಟಿಲ್ಲ. ಇದರಲ್ಲಿ ಹೆಚ್ಚು ಕೆಲಸ ಮಾಡಲು ಅವಕಾಶ ಇಲ್ಲ ಎಂಬ ಗೊಣಗಾಟಗಳು ಬಹಳಷ್ಟು ಶಾಸಕರಲ್ಲಿ ಕಂಡುಬಂದಿದೆ.

RELATED ARTICLES

Latest News