Saturday, May 4, 2024
Homeರಾಜ್ಯ33ನೇ ವಾರ್ಷಿಕೋತ್ಸವ ಸಂಭ್ರಮದಲ್ಲಿ ಈ ಸಂಜೆ ಪತ್ರಿಕೆ

33ನೇ ವಾರ್ಷಿಕೋತ್ಸವ ಸಂಭ್ರಮದಲ್ಲಿ ಈ ಸಂಜೆ ಪತ್ರಿಕೆ

ಬೆಂಗಳೂರು,ಜ.27- ಈ ಸಂಜೆ ಪತ್ರಿಕೆ ಇಲ್ಲಿ ಸಂಜೆ ಪತ್ರಿಕೆಯಾಗಿರಬಹುದು. ಆದರೆ ಅಮೆರಿಕದಲ್ಲಿರುವ ನಮಗೆ ಮತ್ತು ನಮ್ಮೆಲ್ಲಾ ಕನ್ನಡಿಗರಿಗೆ ಅದು ಬೆಳಗಿನ ಪತ್ರಿಕೆಯಾಗಿದೆ. ಕನ್ನಡ ನಾಡಲ್ಲಿ ಮತ್ತು ದೇಶದಲ್ಲಿ ಏನು ಮುಖ್ಯವಾಗಿ ನಡೆದಿದೆ ಎಂಬುದು ಈ ಸಂಜೆಯಿಂದ ಗೊತ್ತಾಗುತ್ತದೆ ಎಂದು ಅಮೆರಿಕದಲ್ಲಿ ಕನ್ನಡಿಗರಿಗಾಗಿ, ಕನ್ನಡಕ್ಕಾಗಿ ಅಕ್ಕ ಸಂಘಟನೆಯನ್ನು ಹುಟ್ಟುಹಾಕಿ ಕನ್ನಡಪರ ಕೆಲಸ ಮಾಡುತ್ತಿರುವ ಅಕ್ಕ ಸಂಸ್ಥಾಪನಾ ಅಧ್ಯಕ್ಷರಾದ ಅಮರನಾಥ ಗೌಡರು ಹೇಳಿದರು.

ಈ ಸಂಜೆ ಪತ್ರಿಕೆಯ 33 ನೇ ವಾರ್ಷಿಕೋತ್ಸವ ಸರಳ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ನಾನು ಅಮೆರಿಕದಿಂದ ಬೆಂಗಳೂರಿಗೆ ಬಂದರೆ ನನ್ನ ವಿಳಾಸ ಈ ಸಂಜೆ ಕಚೇರಿಯೇ ಆಗಿರುತ್ತದೆ. ನಾವು ಅಮೆರಿಕದಲ್ಲಿದ್ದಾಗ ನಮಗೆ ಬೆಳಗಿನ ಪತ್ರಿಕೆಯಾಗಿ ಈ ಸಂಜೆಯನ್ನು ನಾವು ಡಿಜಿಟಲ್ ಮಾಧ್ಯಮದಲ್ಲಿ ನೋಡುತ್ತೇವೆ. ಈ ಸಂಜೆಯಿಂದ ನಮಗೆ ಎಲ್ಲಾ ವಿದ್ಯಮಾನಗಳು ತಿಳಿಯುತ್ತವೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಮುದ್ರಣ ಮಾಧ್ಯಮದ ಪರಿಸ್ಥಿತಿ ಕಠಿಣವಾಗಿರುವ ಸಂದರ್ಭದಲ್ಲೂ ಡಿಜಿಟಲ್ ಆವೃತ್ತಿ ಜಗತ್ತಿನಾದ್ಯಂತ ವಾಸವಿರುವ ಕನ್ನಡಿಗರು ಓದುವಂತೆ ಸಂಸ್ಥೆ ಪರಿಶ್ರಮ ವಹಿಸಿದೆ. ಈ ಪರಿಶ್ರಮ ಹೀಗೇ ಸಾಗಲಿ ಎಂದು ಅಭಿಮಾನಿ ಸಂಸ್ಥೆಯ ಅವಿನಾಭಾವ ಒಡನಾಟವನ್ನು ಸ್ಮರಿಸಿಕೊಂಡರು.

ಈ ಸಂಜೆ ಪತ್ರಿಕೆಯ ಸಂಪಾದಕರು, ಅಭಿಮಾನಿ ಸಮೂಹ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರೂ ಆದ ಟಿ.ವೆಂಕಟೇಶ್‍ರವರು ಮಾತನಾಡಿ, ನಾನು ಮಾಧ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಂಡು 38 ವರ್ಷಗಳು ಆಗಿವೆ. ಅದರಲ್ಲಿ ನಮ್ಮ ಈ ಸಂಜೆ ಪತ್ರಿಕೆ 33 ನೇ ವರ್ಷಕ್ಕೆ ದಾಪುಗಾಲಿಟ್ಟಿದೆ. ಈ ಪತ್ರಿಕೆಯು ಈ ನಾಡಿಗೆ ಸುಮಾರು 2 ರಿಂದ 3 ಸಾವಿರ ಪತ್ರಕರ್ತರನ್ನು ಮಾಧ್ಯಮ ಕ್ಷೇತ್ರಕ್ಕೆ ಕೊಡುಗೆಯಾಗಿ ನೀಡಿದೆ. ಇಂದು ಕೈಯಲ್ಲಿ ಮೊಬೈಲ್ ಇರುವವರು ಯಾರೇ ಇದ್ದರೂ ಅವರು ಪತ್ರಿಕೋದ್ಯಮ ಮಾಡಬಹುದಾದ ಕಾಲ ಇದು. ಇಂತಹ ಸ್ಥಿತಿಯಲ್ಲಿ ಪತ್ರಕರ್ತರು ಹಾಗೂ ಪತ್ರಿಕೆಗಳು ಇದನ್ನು ಮೀರಿ ಏನನ್ನು ಮಾಡಲು ಸಾಧ್ಯ ಎಂದು ಅಗತ್ಯವಾಗಿ ಯೋಚಿಸಬೇಕಾಗಿದೆ.

ಡಿಜಿಟಲ್ ಮತ್ತು ವಿದ್ಯುನ್ಮಾನ ಮಾಧ್ಯಮಗಳ ಹಾವಳಿ ಎಷ್ಟೇ ಆದರೂ ಮಾಧ್ಯಮದ ಸುದ್ದಿಗಳು ದಾಖಲೆಯಾಗಿ ಉಳಿಯುತ್ತವೆ. ಪಾಶ್ಚಿಮಾತ್ಯ ದೇಶಗಳಲ್ಲಿ ಮತ್ತೆ ಮುದ್ರಣ ಮಾಧ್ಯಮಕ್ಕೆ ಆದ್ಯತೆ ಸಿಗಲಾರಂಭಿಸಿದೆ ಎಂದು ಹೇಳಿದರು.

ಈ ಹಿಂದೆ ಪತ್ರಿಕಾ ವಿತರಣೆ ಕೆಲಸ ಪತ್ರಿಕೋದ್ಯಮದಲ್ಲಿ ಸುಲಭವಾಗಿ ಸಿಗುವ ಕೆಲಸ. ಬಹಳಷ್ಟು ಐಎಎಸ್, ಐಪಿಎಸ್ ಮಟ್ಟದ ಅಕಾರಿಗಳು ಪತ್ರಿಕಾ ವಿತರಣೆ ಮಾಡಿ ಓದಿ ಸಾಧನೆ ಮಾಡಿರುವ ಉದಾಹರಣೆಗಳಿವೆ. ಯಾಕೆಂದರೆ ಶಾಲಾ-ಕಾಲೇಜುಗಳ ಸಮಯಕ್ಕಿಂತ ಮುಂಚೆ ಪತ್ರಿಕೆಗಳನ್ನು ಓದುಗರಿಗೆ ತಲುಪಿಸಿ ಶಾಲೆಗೆ ಹಾಜರಾಗಿದ್ದಾರೆ ಮತ್ತು ಅದರಿಂದ ಬಂದ ಹಣದಿಂದ ಶಾಲಾ-ಕಾಲೇಜುಗಳ ವೆಚ್ಚ ಭರಿಸಿ ಓದು ಸಾಗಿಸಿಕೊಂಡು ಬಂದ ಉದಾಹರಣೆಗಳನ್ನು ಸಂಪಾಕದರು ಸ್ಮರಿಸಿದರು.

ಪತ್ರಿಕೆ ಎನ್ನುವುದು ಒಬ್ಬರಿಂದಾಗುವ ಕೆಲಸವಲ್ಲ. ಅದರಲ್ಲಿ ಕೆಲಸ ಮಾಡುವವರು, ವಿತರಕರು ಈ ಇಬ್ಬರೂ ತುಂಬಾ ಮುಖ್ಯ. ಗ್ರಾಹಕರ ನಾಡಿಮಿಡಿತ ವಿತರಕನಿಗೆ ತಿಳಿದಿರುತ್ತದೆ. ಹಾಗಾಗಿ ಅವರೊಂದಿಗೆ ನಾವು ಸದಾ ಸಂಪರ್ಕದಲ್ಲಿದ್ದು, ಜನರಿಗೆ ಅಗತ್ಯವಾದ ವರದಿಗಳನ್ನು ಹಾಗೂ ತನಿಖಾ ವರದಿಗಳನ್ನು ನೀಡಬೇಕು ಎಂದು ಹೇಳಿದರು.

ಸಂಸ್ಥೆಯ ಆಡಳಿತಾಕಾರಿಗಳಾದ ಅನಿಲ್ ಹೊಸಕೊಪ್ಪ ಮಾತನಾಡಿ, ಕೃಷ್ಣ, ಕನಕನ ಬಾಂಧವ್ಯ ಸಮಾಜಕ್ಕೆ ಸಾರಿದ ಸಂದೇಶ, ಅವರ ಸೇವಾ ತತ್ಪರತೆಯನ್ನು ಕಾವ್ಯಾತ್ಮಕವಾಗಿ, ವಿಮರ್ಶಾತ್ಮಕವಾಗಿ ವಿವರಿಸಿದ ಅವರು, ಸಂಪಾದಕರ ಸೇವಾ ಕೈಂಕರ್ಯ, ಸಂಸ್ಥೆಯ ಬೆಳವಣಿಗೆ ತಮ್ಮ ಸಿಬ್ಬಂದಿಗಳೊಂದಿಗಿನ ಅವರ ಒಡನಾಟವನ್ನು ವಿವರಿಸಿದರು. ಆರ್ಥಿಕ ಸಲಹೆಗಾರರಾದ ಸುರೇಶ್‍ರವರು ಮಾತನಾಡಿ, ಈ ಸಂಜೆ ಪತ್ರಿಕೆಯ ಬೆಳವಣಿಗೆ, ಮುಂದೆ ಮಾಡಬೇಕಾದ ಕರ್ತವ್ಯಗಳ ಬಗ್ಗೆ ಸಿಬ್ಬಂದಿಗೆ ಸಲಹೆ ನೀಡಿದರು.

ಪ್ರಧಾನ ವರದಿಗಾರರಾದ ರಾಮಸ್ವಾಮಿ ಕಣ್ವ ಅವರು ಮಾತನಾಡಿ, ಮುದ್ರಣ ಮಾಧ್ಯಮದಲ್ಲಿ ಸುದ್ದಿಯನ್ನು ವಿಶ್ಲೇಷಣೆ ಮಾಡಿ ಆಗಿನ ಕಾಲಘಟ್ಟದಲ್ಲಿ ಪ್ರಕಟಿಸಲು ಕಾಲಾವಕಾಶವಿರುತ್ತಿತ್ತು. ಹಾಗಾಗಿ ಸುದ್ದಿಗಳು ಆಳವಾದ ಪರಿಣಾಮ ಬೀರುತ್ತಿದ್ದವು. ಆದರೆ ಇಂದು ಎಲ್ಲವೂ ತುರ್ತು ಪ್ರಕಟಣೆ (ಬ್ರೇಕಿಂಗ್ ನ್ಯೂಸ್) ಅಬ್ಬರದ ಪ್ರಸಾರ, ಪ್ರಚಾರ ನಡೆಯುತ್ತಿದೆ. ವಿಶ್ಲೇಷಣೆ ಮಾಡಲು ಸಮಯವೇ ಸಿಗುತ್ತಿಲ್ಲ ಎಂದು ಪ್ರಸ್ತುತ ಮುದ್ರಣ ಮಾಧ್ಯಮ ಸ್ಥಿತಿಯ ಕುರಿತು ಕಳವಳ ವ್ಯಕ್ತಪಡಿಸಿದರು.

ಪತ್ರಿಕೆಯ ಇಂದಿನ ಯಶಸ್ಸಿಗೆ ಸಂಪಾದಕರಾದ ವೆಂಕಟೇಶ್ ಅವರು ಕಾರಣ. ಅವರ ಬೆಂಬಲ ಮತ್ತು ಮಾರ್ಗದರ್ಶನ ನಮಗೆ ಇದೆ. ನಾವು ಇನ್ನಷ್ಟು ಹುರುಪಿನಿಂದ ಕೆಲಸ ಮಾಡುವುದಾಗಿ ಹೇಳಿದರು. ಪತ್ರಿಕಾ ವಿತರಕರಾದ ಸಂಗಮ್ ಸುರೇಶ್ ಮಾತನಾಡಿ, ಈ ಸಂಜೆ ಪತ್ರಿಕೆಯ ಪ್ರತಿಯೊಂದು ಕ್ಷಣವೂ ಕೂಡ ಕನ್ನಡ, ಕನ್ನಡಿಗರ ಪರವಾಗಿ ಕೆಲಸ ಮಾಡುತ್ತಾ ಬಂದಿದೆ. ಕಾವೇರಿ ವಿವಾದ ಮತ್ತು ರೈತರ ಹೋರಾಟ ಸಂದರ್ಭದಲ್ಲಿ ಅವರ ಪರವಾಗಿ ನಿಂತು ಹೆಚ್ಚು ಸುದ್ದಿಗಳನ್ನು ಪ್ರಕಟಿಸಿದೆ. ಡಾ.ರಾಜ್‍ಕುಮಾರ್ ರಸ್ತೆ ಎಂದು ಈ ರಸ್ತೆಗೆ ನಾಮಕರಣ ಮಾಡಿದಾಗ ಈ ಸಂಜೆ ಪತ್ರಿಕೆ 48 ಸಾವಿರ ಪ್ರತಿಗಳು ಮಾರಾಟವಾಗಿತ್ತು. ಅದು ಕನ್ನಡಿಗರು ಈ ಸಂಜೆಗೆ ನೀಡಿದ ಮಹತ್ವವಾಗಿತ್ತು.

ಕನ್ನಡಿಗರ ಮುಖವಾಣಿಯಂತೆ ಈ ಸಂಜೆ ಎಲ್ಲಾ ಸಂದರ್ಭದಲ್ಲಿಯೂ ಕೆಲಸ ಮಾಡಿದೆ. ಕಬ್ಬನ್ ಪಾರ್ಕ್‍ನಲ್ಲಿ ರೈತ ನಾಯಕ ಪೆÇ್ರ.ನಂಜುಂಡಸ್ವಾಮಿ ಸಮಾವೇಶ ಮಾಡಿದ ಸಂದರ್ಭದಲ್ಲಿ 35 ಸಾವಿರ ಪ್ರತಿಗಳನ್ನು ಸ್ವತಃ ನಾವೇ ಮಾರಾಟ ಮಾಡಿದ್ದೆವು. ಅದು ಈ ನಾಡಿನ ರೈತರು ಪತ್ರಿಕೆಗೆ ಕೊಟ್ಟ ಸ್ಥಾನಮಾನ.

ಆದರೆ ಇಂದು ವಿತರಕರು ಹಲವು ಸಮಸ್ಯೆಯಲ್ಲಿದ್ದಾರೆ. ಸೂಕ್ತ ರೀತಿಯಲ್ಲಿ ಪತ್ರಿಕೆಗಳು ಕಾರ್ಯ ನಿರ್ವಹಿಸಿದರೆ ನಾವು ನೆಮ್ಮದಿಯಿಂದ ಬದುಕಬಹುದು. ಕೊರೊನ ಕಾಲದ ಸಂದರ್ಭದಲ್ಲಿ ಪತ್ರಿಕಾ ವಿತರಕರು ಮತ್ತು ಮಾರಾಟಗಾರರು ಸೇರಿ ಸುಮಾರು 100 ಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಳ್ಳಬೇಕಾಯಿತು ಎಂದು ಅವರು ಬೇಸರ ವ್ಯಕ್ತಪಡಿಸಿದರು. ಅಭಿಮಾನಿ ಸಮೂಹ ಸಂಸ್ಥೆಯ ನಿರ್ದೇಶಕರಾದ ದಿವಾಕರ್ ಮತ್ತಿತರರು ಉಪಸ್ಥಿತರಿದ್ದರು.

RELATED ARTICLES

Latest News