Thursday, December 12, 2024
Homeರಾಜಕೀಯ | Politicsರಾಜ್ಯ ಬಿಜೆಪಿ ಪಾಳಯದಲ್ಲಿ ಈಗಲೂ ಬಿಎಸ್‍ವೈ ಕಿಂಗ್

ರಾಜ್ಯ ಬಿಜೆಪಿ ಪಾಳಯದಲ್ಲಿ ಈಗಲೂ ಬಿಎಸ್‍ವೈ ಕಿಂಗ್

ಬೆಂಗಳೂರು,ಜ.27- ಜಗದೀಶ್ ಶೆಟ್ಟರ್ ಅವರನ್ನು ಪುನಃ ಮಾತೃ ಪಕ್ಷಕ್ಕೆ ಕರೆತರುವ ಮೂಲಕ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬಿಜೆಪಿಯೊಳಗೆ ಮತ್ತಷ್ಟು ಹಿಡಿತ ಸಾಧಿಸಿದ್ದಾರೆ. ಪಕ್ಷ ಸೇರ್ಪಡೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಸೇರಿದಂತೆ ಕೆಲವರ ವಿರೋಧ ವಿದ್ದರೂ ಯಾವುದನ್ನು ಲೆಕ್ಕಿಸದೆ ಪಕ್ಷಕ್ಕೆ ಕರೆತಂದು ತಮ್ಮ ವಿರೋಧಿಗಳ ಬಾಯಿ ಮುಚ್ಚಿಸಿದ್ದಾರೆ.

ಈ ಮೂಲಕ ಬಿಜೆಪಿಯಲ್ಲಿ ಯಡಿಯೂರಪ್ಪ ವಿರೋಧಿ ಬಣ ಸಂಪೂರ್ಣವಾಗಿ ನಿಷ್ಕ್ರಿಯಗೊಂಡಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಅವರು ಮೇಲೇಳುವ ಲಕ್ಷಣಗಳು ಕಾಣಿಸುತ್ತಿಲ್ಲ. ಬಿಎಸ್‍ವೈ ಕುಟುಂಬದ ವಿರುದ್ಧ ಆಗಾಗ್ಗೆ ಗುಟುರು ಹಾಕುತ್ತಿದ್ದ ಶಾಸಕ ಬಸನಗೌಡ ಯತ್ನಾಳ್ ಬಾಯಿಗೆ ಬೀಗ ಹಾಕಿಸುವಲ್ಲಿ ಕೇಂದ್ರ ಬಿಜೆಪಿ ವರಿಷ್ಠರು ಯಶಸ್ವಿಯಾಗಿದ್ದರೆ ಮಾಜಿ ಸಚಿವ ವಿ.ಸೋಮಣ್ಣ ಅವರಿಗೂ ಸೂಕ್ತ ಸ್ಥಾನಮಾನ ನೀಡುವ ಭರವಸೆ ಸಿಕ್ಕಿರುವುದರಿಂದ ಅವರ ಬಂಡಾಯವು ಕೂಡ ತಣ್ಣಗಾಗಿದೆ.

ಆನೆ ನಡೆದಿದ್ದೇ ದಾರಿ ಎಂಬಂತೆ ಸದ್ಯಕ್ಕೆ ಬಿಜೆಪಿಯಲ್ಲಿ ಯಡಿಯೂರಪ್ಪ ಮತ್ತು ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಮಾತೇ ಅಂತಿಮ ಎನ್ನುವಂತಾಗಿದ್ದು, ವಿರೋಧಿ ಬಣ ಏನೂ ಮಾಡಲಾಗದೆ ಕೈ ಕೈ ಹಿಸುಕಿಕೊಳ್ಳುವಂತಾಗಿದೆ. ಲೋಕಸಭೆ ಚುನಾವಣೆಯಲ್ಲಿ ನಮಗೆ 20ಕ್ಕೂ ಹೆಚ್ಚು ಸ್ಥಾನಗಳು ಗೆಲ್ಲಲೇಬೇಕೆಂದು ವರಿಷ್ಠರು ಕಟ್ಟುನಿಟ್ಟಿನ ಸೂಚನೆ ನೀಡಿರುವ ಹಿನ್ನಲೆಯಲ್ಲಿ ಬಿಎಸ್‍ವೈ ಅವರ ಮಾತನ್ನು ಮೀರಿ ಪಕ್ಷದೊಳಗೆ ಒಂದು ಹುಲ್ಲು ಕಡ್ಡಿಯೂ ಕೂಡ ಅಲುಗಾಡದಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲೂ ಯಡಿಯೂರಪ್ಪನವರ ಮಾತೇ ಅಂತಿಮ ಎನ್ನುವಂತಾಗಿರುವುದರಿಂದ ಕೆಲವು ಹಾಲಿ ಸಂಸದರಿಗೂ ಟಿಕೆಟ್ ಕೈ ತಪ್ಪಲಿದೆಯೇ ಎಂಬ ಭೀತಿ ಕಾಡುತ್ತಿದೆ. ಯಡಿಯೂರಪ್ಪ ತಮ್ಮ ನಿಷ್ಠರಿಗೆ ಟಿಕೆಟ್ ಕೊಡಿಸಲು ಈಗಾಗಲೇ ಸಕ್ರಿಯರಾಗಿರುವುದರಿಂದ ವಿರೋಧಿ ಬಣ ಶಸ್ತ್ರ ತ್ಯಾಗ ಮಾಡಿದ್ದಾರೆ ಎಂಬ ಮಾತುಗಳು ಪಕ್ಷದ ವಲಯದಲ್ಲಿ ಕೇಳಿಬರುತ್ತಿದೆ.

ಕಾಂಗ್ರೆಸ್ ಕೂಡ ಊಹೆ ಮಾಡದ ರೀತಿಯಲ್ಲಿ ಜಗದೀಶ್ ಶೆಟ್ಟರ್ ಅವರನ್ನು ಕೇವಲ 9 ತಿಂಗಳೊಳಗೆ ಪಕ್ಷಕ್ಕೆ ಸೆಳೆಯುವಲ್ಲಿ ಯಡಿಯೂರಪ್ಪ ನಡೆಸಿದ ಆಪರೇಷನ್‍ಗೆ ಸ್ವತಃ ಕೇಂದ್ರ ನಾಯಕರೇ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಒಂದು ಹಂತದಲ್ಲಿ ಶೆಟ್ಟರ್ ಸೇರ್ಪಡೆಗೆ ಪ್ರಹ್ಲಾದ್ ಜೋಷಿ ಮತ್ತು ಸಂತೋಷ್ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದರು. ಹೀಗಾಗಿ ಅವರು ಪಕ್ಷದ ಕೇಂದ್ರ ಕಚೇರಿಯಲ್ಲಿ ಶೆಟ್ಟರ್ ಸೇರ್ಪಡೆಯಾಗುವಾಗ ದೆಹಲಿಯಲ್ಲೇ ಇದ್ದರೂ ಪಕ್ಷದ ಕಚೇರಿಯತ್ತ ಮುಖ ಮಾಡಿರಲಿಲ್ಲ.

ಬಿಜೆಪಿ ಮೂಲಗಳೇ ಹೇಳುವ ಪ್ರಕಾರ, ಶೆಟ್ಟರ್ ಮರಳಿರುವ ವಿಚಾರ ರಾಷ್ಟ್ರೀಯ ನಾಯಕತ್ವಕ್ಕೆ ಹತ್ತಿರವಾದ ಇಬ್ಬರಿಗೂ ತಿಳಿಯದೇ ಇರಲು ಸಾಧ್ಯವೇ ಇಲ್ಲ. ಹಾಗಿದ್ದೂ ಸೇರ್ಪಡೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿಲ್ಲವೇಕೆ ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕಿದರೆ ಶೆಟ್ಟರ್ ಸೇರ್ಪಡೆಗೆ ಅವರ ಸಮ್ಮತಿ ಇರಲಿಲ್ಲ ಎಂಬ ಅಂಶ ಬೆಳಕಿಗೆ ಬರುತ್ತದೆ.

ನಮಗೆ ಒಂದೊಂದು ಸ್ಥಾನವು ಮುಖ್ಯವಾಗಿರುವುದರಿಂದ ಯಾರ ವಿರೋಧವೂ ನಮಗೆ ಲೆಕ್ಕಕ್ಕಿಲ್ಲ ಎಂಬ ಸಂದೇಶವನ್ನು ಬಿಎಸ್‍ವೈ ಹಾಗೂ ವಿಜಯೇಂದ್ರ ರವಾನಿಸಿದ್ದಾರೆ. ಚುನಾವಣೆಯಲ್ಲಿ ಶೆಟ್ಟರ್‍ಗೆ ಯಡಿಯೂರಪ್ಪ ಟಿಕೆಟ್ ಕೊಡಿಸುವ ಭರವಸೆ ನೀಡಿದ್ದರಷ್ಟೇ ಅಲ್ಲ. ವರಿಷ್ಠರನ್ನು ನೇರವಾಗಿ ಸಂಪರ್ಕಿಸಿ ಒತ್ತಡ ಹೇರಿದ್ದರು. ಆದರೆ ನಿರೀಕ್ಷೆ ಸುಳ್ಳಾಗಿತ್ತು. ಇದರಿಂದ ಅವರು ಅಸಮಾಧಾನಗೊಂಡಿದ್ದರೂ ಅದನ್ನು ತೋರ್ಪಡಿಸಿಕೊಂಡಿರಲಿಲ್ಲ. ಅದಕ್ಕೆ ಎರಡು ಕಾರಣಗಳಿತ್ತು. ಶಿಕಾರಿಪುರದಲ್ಲಿ ವಿಜಯೇಂದ್ರ ಗೆದ್ದು, ನಂತರ ರಾಜ್ಯಾಧ್ಯಕ್ಷರಾಗಬೇಕಿತ್ತು. ಈ ಎರಡೂ ಕೆಲಸಗಳನ್ನು ಅತ್ಯಂತ ಜಾಣ್ಮೆ ಮತ್ತು ಅಪರೂಪದ ತಾಳ್ಮೆ ಪ್ರದರ್ಶಿಸಿ ಸಾಧಿಸಿಕೊಂಡ ಅವರು, ಬದಲಾದ ರಾಜಕೀಯ ಸನ್ನಿವೇಶದಲ್ಲಿ ಪಕ್ಷದ ಮೇಲೆ ತಮ್ಮ ಹಿಡಿತವನ್ನು ಮರು ಸಾಧಿಸುವ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ.

ಬಿಜೆಪಿ ಸೇರಿರುವ ಶೆಟ್ಟರ್ ಹಾವೇರಿ ಅಥವಾ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯುತ್ತಾರೆ, ಇಲ್ಲವೇ ರಾಜ್ಯಪಾಲರಾಗುತ್ತಾರೆ ಅಥವಾ ರಾಜ್ಯ ಸಭೆಗೆ ಅವರನ್ನು ಆಯ್ಕೆ ಮಾಡಲಾಗುತ್ತದೆ ಎಂಬ ವದಂತಿಗಳು ಇವೆ. ಹಾವೇರಿಯಿಂದ ಬಿಜೆಪಿ ಅಭ್ಯರ್ಥಿಗಳಾಗಿ ಕಣಕ್ಕಿಳಿಯಲು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಪುತ್ರ ಕೆ.ಇ.ಕಾಂತೇಶ್ ಹಾಗೂ ಯಡಿಯೂರಪ್ಪ ಕುಟುಂಬಕ್ಕೆ ಆಪ್ತರಾದ ನಿವೃತ್ತ ಅಧಿಕಾರಿ ಪಾಟೀಲ್ ಆಸಕ್ತರಾಗಿದ್ದಾರೆ. ಈ ಪಟ್ಟಿಗೆ ಶೆಟ್ಟರ್ ಇನ್ನೊಂದು ಸೇರ್ಪಡೆ.

ಬೆಳಗಾವಿ ಕ್ಷೇತ್ರವನ್ನು ದಿವಂಗತ ಲೋಕಸಭಾ ಸದಸ್ಯ ಸುರೇಶ ಅಂಗಡಿಯವರ ಪತ್ನಿ ಮಂಗಳಾ ಅಂಗಡಿ ಪ್ರತಿನಿಧಿಸುತ್ತಿದ್ದಾರೆ. ಅವರು ಶೆಟ್ಟರ್ ಅವರ ಬೀಗರೂ ಹೌದು. ನೆಂಟಸ್ತಿಕೆ ಮತ್ತು ರಾಜಕಾರಣ ಎರಡನ್ನೂ ಸರಿದೂಗಿಸಿಕೊಂಡು ಹೋಗಲು ಶೆಟ್ಟರ್ ಬಯಸಿದ್ದಾರೆ. ಮುಂದಿನದು ಕಾದು ನೋಡಬೇಕು. ಈ ಬೆಳವಣಿಗೆ ಯಡಿಯೂರಪ್ಪ ರಾಜ್ಯದಲ್ಲಿ ಬಿಜೆಪಿಯಿಂದ ದೂರ ಹೋಗಿದ್ದ ಲಿಂಗಾಯಿತ ಸಮುದಾಯವನ್ನು ಮತ್ತೆ ಹತ್ತಿರ ತಂದು ಪಕ್ಷದಲ್ಲಿ ತಮ್ಮ ಸಂಪೂರ್ಣ ಸಾರ್ವಭೌಮತ್ವವನ್ನು ಸ್ಥಾಪಿಸಲು ನಡೆಸಿರುವ ಪ್ರಯತ್ನದ ಮುಂದುವರಿದ ಭಾಗವೂ ಇದಾಗಿದೆ.

ಶೆಟ್ಟರ್ ಮತ್ತು ಜೋಶಿ ಸಂಬಂಧ ಇತ್ತೀಚಿನ ದಿನಗಳಲ್ಲಿ ಚೆನ್ನಾಗಿಲ್ಲ. ಮುಂಬರುವ ಲೋಕಸಭಾ ಚುನಾವಣೆಯ ನಂತರ ಅಥವಾ ಅದಕ್ಕೂ ಮುನ್ನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಬದಲಾವಣೆ ಆಗುತ್ತದೆ ಎಂದೂ ಹೇಳಲಾಗುತ್ತಿದ್ದು ಪ್ರಹ್ಲಾದ್ ಜೋಶಿಯವರನ್ನು ಆ ಹುದ್ದೆಗೆ ಆಯ್ಕೆ ಮಾಡುವ ಪ್ರಕ್ರಿಯೆಗಳು ನಡೆದಿವೆ. ಒಂದು ವೇಳೆ ಇದೇ ನಿಜವಾದರೆ ರಾಜ್ಯದಲ್ಲಿ ತಮ್ಮನ್ನು ಮತ್ತೆ ಮೂಲೆ ಗುಂಪು ಮಾಡುವ ಪ್ರಯತ್ನಗಳು ನಡೆಯುತ್ತವೆ ಎಂಬ ದೂರಾಲೋಚನೆ ಹೊಂದಿರುವ ಯಡಿಯೂರಪ್ಪ, ಶೆಟ್ಟರ್ ಸೇರ್ಪಡೆ ಮೂಲಕ ಅದಕ್ಕೊಂದು ತಡೆಗೋಡೆ ನಿರ್ಮಿಸಿದ್ದಾರೆ. ರಾಜ್ಯದಲ್ಲಿ ಈಗಾಗಲೇ ಜಾತಿ ಗಣತಿ ವರದಿಯೂ ಸೇರಿದಂತೆ ವಿವಿಧ ಕಾರಣಗಳಿಗೆ ಲಿಂಗಾಯಿತ ಸಮುದಾಯ ಕಾಂಗ್ರೆಸ್ ವಿರುದ್ಧ ಮುನಿಸಿಕೊಂಡಿದೆ.

ರಾಹುಲ್ ನಡೆಸುತ್ತಿರುವುದು ಭಾರತ್ ತೋಡೋ ಯಾತ್ರೆ : ಅಠಾವಳೆ

ಮುಖ್ಯಮಂತ್ರಿ ಸಿದ್ದರಾಮಯ್ಯ, ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಾಯಕತ್ವವನ್ನು ಸಂಪೂರ್ಣವಾಗಿ ಸಮುದಾಯ ಒಪ್ಪಿಕೊಂಡಿಲ್ಲ. ಇದಕ್ಕೆ ಆಗಾಗ ಸರ್ಕಾರದ ವಿರುದ್ಧ ಆ ಸಮಾಜದ ನಾಯಕರು ನಡೆಸುತ್ತಿರುವ ವಾಗ್ದಾಳಿಯೇ ನಿದರ್ಶನ. ತಮ್ಮ ಸಮುದಾಯದ ಒಬ್ಬ ನಾಯಕ ಮತ್ತೆ ಮುಖ್ಯಮಂತ್ರಿ ಆಗಬೇಕೆಂಬ ಪ್ರಯತ್ನಗಳೂ ನಡೆದಿವೆ. ಆದರೆ ಕಾಂಗ್ರೆಸ್‍ನಲ್ಲಿ ಸದ್ಯಕ್ಕೆ ಅಂತಹ ಅವಕಾಶಗಳಿಲ್ಲ. ಪ್ರಭಾವಿ ಮಂತ್ರಿ ಆಗಬಹುದಾಗಿದ್ದ ಎಂ.ಬಿ.ಪಾಟೀಲ್ ಇನ್ನೂ ಭದ್ರನೆಲೆ ಕಂಡುಕೊಂಡಿಲ್ಲ.

ಮುಖ್ಯವಾಗಿ ಜೆಡಿಎಸ್ ಜತೆ ಹೊಂದಾಣಿಕೆ ವಿಚಾರದಲ್ಲಿ ಪಕ್ಷದ ಹೈಕಮಾಂಡ್ ತೀರಾ ಉತ್ಸುಕವಾಗಿರುವುದು ಯಡಿಯೂರಪ್ಪನವರನ್ನು ಅಸಮಾಧಾನಕ್ಕೀಡು ಮಾಡಿದೆ. ಸಂಘಟನಾತ್ಮಕವಾಗಿ ತನ್ನ ನೆಲೆಗಳಲ್ಲೇ ಕುಸಿದಿರುವ ಜೆಡಿಎಸ್‍ಗೆ ನೀರೆರೆದು ಮತ್ತೆ ಅದು ಸಂಘಟನಾತ್ಮಕವಾಗಿ ಬೆಳೆದರೆ, ಮುಂದೆ ಅದರಿಂದ ಸಮಸ್ಯೆಗಳೇ ಜಾಸ್ತಿ ಎಂದು ಅರಿತಿರುವ ಯಡಿಯೂರಪ್ಪ ಈ ಸಂಗತಿಯನ್ನು ವರಿಷ್ಠರಿಗೂ ಮುಟ್ಟಿಸಿದ್ದಾರೆ. ಈ ವಿಚಾರದಲ್ಲಿ ಮತ್ತೆ ಹೈಕಮಾಂಡ್ ಅಳೆದೂ ಸುರಿದೂ ನೋಡುವ ತಂತ್ರ ಅನುಸರಿಸುತ್ತಿದೆ.

ಭವಿಷ್ಯದಲ್ಲಿ ರಾಜಕೀಯವಾಗಿ ತಮ್ಮ ಪುತ್ರ ವಿಜಯೇಂದ್ರನ ನ್ನು ಮುಖ್ಯಮಂತ್ರಿ ಪಟ್ಟಕ್ಕೆ ತರುವ ಪ್ರಯತ್ನದಲ್ಲಿರುವ ಯಡಿಯೂರಪ್ಪ ಅದಕ್ಕಾಗಿ ಪಕ್ಷ ತೊರೆದ ಪ್ರಮುಖ ಲಿಂಗಾಯಿತ ಮುಖಂಡರನ್ನು ಮರಳಿ ಕರೆತರುವ ಮೂಲಕ ತಮ್ಮ ಶಕ್ತಿಯನ್ನು ಇನ್ನಷ್ಟು ಬಲ ಪಡಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ.

ಜಗದೀಶ ಶೆಟ್ಟರ್ ಯಡಿಯೂರಪ್ಪನವರಿಗೆ ಹೋಲಿಸಿದರೆ ಪ್ರಬಲ ನಾಯಕ ಅಲ್ಲದಿದ್ದರೂ ಅವರ ವಿಚಾರದಲ್ಲಿ ನಿಷ್ಠೆ ಹೊಂದಿದ್ದಾರೆ. ಇದೇ ಅನುಕೂಲಕರ ಅಂಶ. ಯಡಿಯೂರಪ್ಪ ಕುಟುಂಬದ ವಿರುದ್ಧ ನಿರಂತರ ವಾಗ್ದಾಳಿ ನಡೆಸುತ್ತಿದ್ದ ಬಿಜೆಪಿಯ ಇನ್ನೊಬ್ಬ ನಾಯಕ ಬಸವನಗೌಡ ಪಾಟೀಲ ಯತ್ನಾಳ ತಣ್ಣಗಾಗಿದ್ದಾರೆ. ಬಂಡಾಯಕ್ಕೆ ಸಜ್ಜಾಗುತ್ತಿದ್ದ ಮಾಜಿ ಸಚಿವ ವಿ. ಸೋಮಣ್ಣ ಕೂಡ ಈಗ ರಾಜಿ ಆಗಿದ್ದಾರೆ.

ಕಲ್ಕತ್ತಾ ಹೈಕೋರ್ಟ್ ಏಕಪೀಠ ಸದಸ್ಯ ಪೀಠದ ತೀರ್ಪಿಗೆ ಸುಪ್ರೀಂ ತಡೆ

ಅಲ್ಲಿಗೆ ಪಕ್ಷದೊಳಗಿನ ಅಸಮಾಧಾನಿತ ಲಿಂಗಾಯಿತ ನಾಯಕರನ್ನು ತಣ್ಣಾಗಿಸುವುದು ಒಂದು ಕಡೆಯಾದರೆ ಮತ್ತೊಂದು ಕಡೆ ಪಕ್ಷ ತೊರೆದಿರುವ ಮುಖಂಡರನ್ನು ವಾಪಸು ಕರೆತರುವ ಮೂಲಕ ಮುಂಬರುವ ಲೋಕಸಭಾ ಚುನಾವಣೆಯಲ್ಲಿ 28 ಸ್ಥಾನಗಳನ್ನೂ ಗೆಲ್ಲುವ ಗುರಿ ಯಡಿಯೂರಪ್ಪ ಅವರದ್ದು.

RELATED ARTICLES

Latest News