ಚಿತ್ರದುರ್ಗ,ಜ.28- ಮಂಡ್ಯದ ಕೆರಗೋಡಿನಲ್ಲಿ ರಾಷ್ಟ್ರಧ್ವಜ ಹಾರಿಸಲು ಅನುಮತಿ ಪಡೆದು ಭಗ್ವದ್‍ಧ್ವಜ ಹಾರಿಸಿದ್ದು ತಪ್ಪು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತ್ತೆ ಅದೇ ಧ್ವಜಸ್ತಂಭದಲ್ಲಿ ರಾಷ್ಟ್ರಧ್ವಜ ಹಾರಿಸುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಿದರು. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 15 ರಿಂದ 20 ಸ್ಥಾನಗಳನ್ನು ಗೆಲ್ಲಲಿದೆ. ಬಿಜೆಪಿಯವರಂತೆ ನಾವು 28 ಕ್ಕೆ 28 ಕ್ಷೇತ್ರಗಳನ್ನು ಗೆಲ್ಲುತ್ತೇವೆ ಎಂದು ಸುಳ್ಳು ಹೇಳುವುದಿಲ್ಲ ಎಂದರು.
ಲೋಕಸಭೆ ಚುನಾವಣೆಗೆ ಸಂಬಂಧಪಟ್ಟಂತೆ ಈಗಾಗಲೇ ಅನೇಕ ಸಮೀಕ್ಷೆಗಳೂ ಸೇರಿದಂತೆ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ ಎಂದು ಹೇಳಿದರು. ರಾಷ್ಟ್ರಮಟ್ಟದಲ್ಲಿ ಇಂಡಿಯಾ ರಾಜಕೀಯ ಕೂಟದಲ್ಲಿನ ವಿವಿಧ ಪಕ್ಷಗಳ ಹೊಂದಾಣಿಕೆ ಕುರಿತಂತೆ ಪಕ್ಷದ ವರಿಷ್ಠ ನಾಯಕರು ಚರ್ಚೆ ಮಾಡುತ್ತಾರೆ. ನಾವು ಅದರ ಬಗ್ಗೆ ಹೇಳಿಕೆ ನೀಡುವುದಿಲ್ಲ ಎಂದರು.
ಧಾರ್ಮಿಕ ಧ್ವಜ ಹಾರಿಸಲು ಅವಕಾಶವಿಲ್ಲ : ಸಚಿವ ಚಲುವರಾಯಸ್ವಾಮಿ
ಸರ್ಕಾರಿ ನೌಕರರಿಗೆ ಹೊಸ ಪಿಂಚಣಿ ಜಾರಿಗೆ ಸಂಬಂಧಪಟ್ಟಂತೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸುವುದಾಗಿ ಹೇಳಿದರು. ಚಿತ್ರದುರ್ಗದಲ್ಲಿಂದು ಶೋಷಿತ ಮಹಾ ಒಕ್ಕೂಟ ಎಂಬ ಪ್ರಗತಿಪರರು, ಹಿಂದುಳಿದವರ ಸಮಾವೇಶ ನಡೆಸಲಾಗುತ್ತಿದೆ. ಹಿಂದುಳಿದ ವರ್ಗಗಳ ಆಯೋಗದ ವರದಿಯನ್ನು ಅನುಷ್ಠಾನಕ್ಕೆ ತರಬೇಕು ಎಂದು ಒತ್ತಾಯ ಮಾಡಲಾಗಿದೆ. ಸರ್ಕಾರ ಆಯೋಗದ ವರದಿಯನ್ನು ಸ್ವೀಕರಿಸಲು ಸಿದ್ಧವಿದೆ. ವರದಿ ಸಲ್ಲಿಕೆಯಾದ ಬಳಿಕ ಅದರ ಬಗ್ಗೆ ಚರ್ಚೆಗೆ ಅವಕಾಶ ಮಾಡಿಕೊಡಲಾಗುವುದು ಎಂದರು.