ಬೆಂಗಳೂರು,ಜ.29- ಒಂದೆಡೆ ಹನುಮ ಧ್ವಜ ಹಾಗೂ ಕೋಮು ರಾಜಕಾರಣ ಕಾಂಗ್ರೆಸ್ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದ್ದರೆ, ಮತ್ತೊಂದೆಡೆ ನಾಳೆ ಅಥವಾ ನಾಡಿದ್ದು ಸಲ್ಲಿಕೆಯಾಗಬಹುದು ಎಂದು ಹೇಳಲಾದ ಹಿಂದುಳಿದ ವರ್ಗಗಳ ಸಮೀಕ್ಷಾ ವರದಿ ಮತ್ತೊಂದು ಸಂಕಷ್ಟ ಸೃಷ್ಟಿಸುವ ಸಾಧ್ಯತೆಯಿದೆ. ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿರುವ ಜಯಪ್ರಕಾಶ್ ಹೆಗಡೆ ಅವರ ಅಧಿಕಾರವಧಿ ಜ.31 ಕ್ಕೆ ಮುಕ್ತಾಯಗೊಳ್ಳಲಿದೆ. ಅದಕ್ಕೂ ಮೊದಲೇ ಸರ್ಕಾರಕ್ಕೆ ವರದಿಯನ್ನು ಸಲ್ಲಿಸುವುದಾಗಿ ಜಯಪ್ರಕಾಶ್ ಹೆಗಡೆ ಪದೇಪದೇ ಸ್ಪಷ್ಟಪಡಿಸಿದ್ದಾರೆ.
ಮತ್ತೆ ಅಧ್ಯಕ್ಷ ಅಧಿಕಾರವಧಿಯನ್ನು ಮುಂದೂಡುವುದಿಲ್ಲ ಎಂದು ಸರ್ಕಾರದ ಮೂಲಗಳು ಹೇಳುತ್ತಿವೆ. ಹೀಗಾಗಿ ಇಂದು ಅಥವಾ ನಾಳೆಯೊಳಗಾಗಿ ವರದಿ ಸಲ್ಲಿಕೆಯಾಗುವ ನಿರೀಕ್ಷೆಗಳಿವೆ. ಕಳೆದ 6 ವರ್ಷಗಳ ಹಿಂದೆ ಹಿಂದುಳಿದ ವರ್ಗಗಳ ಆಯೋಗದಿಂದ ನಡೆಸಲಾಗಿದ್ದ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷಾ ವರದಿ ಸುದೀರ್ಘ ಕಾಲ ಹಗ್ಗಜಗ್ಗಾಟಕ್ಕೆ ಕಾರಣವಾಗಿದೆ. ವರದಿಯ ಅಂಶಗಳು ಸೋರಿಕೆಯಾಗಿದೆ ಎಂಬ ಹಿನ್ನೆಲೆಯಲ್ಲಿ ಸಾಕಷ್ಟು ಗೊಂದಲಗಳು ಮೂಡಿವೆ.
ಸಮೀಕ್ಷಾ ವರದಿಯಲ್ಲಿ ಕೆಲವು ಸಮುದಾಯಗಳ ಜನಸಂಖ್ಯೆಯನ್ನು ಕಡಿಮೆ ತೋರಿಸಲಾಗಿದೆ. ಇನ್ನೂ ಕೆಲವು ಸಮುದಾಯಗಳ ಜನಸಂಖ್ಯೆಯನ್ನು ಹೆಚ್ಚು ತೋರಿಸಿ ರಾಜಕೀಯ ಲಾಭ ಪಡೆದುಕೊಳ್ಳುವ ಪ್ರಯತ್ನಗಳಾಗಿವೆ ಎಂಬ ಆರೋಪಗಳಿವೆ. ಜೊತೆಗೆ ಮನೆಮನೆಗೂ ತೆರಳಿ ನಡೆಸಬೇಕಾದ ಸಮೀಕ್ಷೆ ಅಪೂರ್ಣವಾಗಿದೆ. ಮಾಹಿತಿ ಸಂಗ್ರಹದಲ್ಲೂ ವೈಜ್ಞಾನಿಕ ಕ್ರಮಗಳನ್ನು ಅನುಸರಿಸಿಲ್ಲ ಎಂಬ ಆರೋಪಗಳು ಪದೇಪದೇ ಕೇಳಿಬರುತ್ತಿವೆ.
ಆದರೆ ಸರ್ಕಾರ ಈ ಎಲ್ಲಾ ಆರೋಪಗಳನ್ನು ತಳ್ಳಿ ಹಾಕಿದ್ದು, ಸಮೀಕ್ಷೆ ವೈಜ್ಞಾನಿಕವಾಗಿ ನಡೆದಿದೆ. ಕರಾರುವಕ್ಕಾದ ಮತ್ತು ಸಮಗ್ರ ಮಾಹಿತಿ ಕಲೆ ಹಾಕಲಾಗಿದೆ. ವರದಿಯ ಅಂಶಗಳು ಸೋರಿಕೆಯಾಗಿಲ್ಲ ಎಂದು ಸ್ಪಷ್ಟಪಡಿಸುತ್ತಲೇ ಬಂದಿದೆ.
ಈ ಹಿಂದೆ ಸಿದ್ದರಾಮಯ್ಯನವರ ಸರ್ಕಾರದಲ್ಲಿ ನೇಮಕವಾಗಿದ್ದ ಕಾಂತರಾಜು ಅವರ ಆಯೋಗ ಸಮೀಕ್ಷೆ ನಡೆಸಿತ್ತಾದರೂ ನಿಗದಿತ ಅವಧಿಯಲ್ಲಿ ವರದಿ ಸಲ್ಲಿಕೆಯಾಗಿರಲಿಲ್ಲ. ಸಿದ್ದರಾಮಯ್ಯನವರ ಸರ್ಕಾರದ ಮುಕ್ತಾಯದ ಅವಧಿಯಲ್ಲಿ ವರದಿ ಸಿದ್ಧವಾಗಿದೆ ಎಂದು ಹೇಳಲಾಗಿತ್ತಾದರೂ ವರದಿ ಸ್ವೀಕಾರವಾಗಿರಲಿಲ್ಲ. ನಂತರ ಅಧಿಕಾರಕ್ಕೆ ಬಂದ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅನಂತರ ಆಡಳಿತ ನಡೆಸಿದ ಯಡಿಯೂರಪ್ಪ, ಬಸವರಾಜು ಬೊಮ್ಮಾಯಿ ಸೇರಿದಂತೆ ಯಾರೂ ವರದಿಯ ತಂಟೆಗೆ ಹೋಗಿರಲಿಲ್ಲ. ಕಾಂಗ್ರೆಸ್ ವಿಧಾನಸಭೆ ಚುನಾವಣೆ ಪ್ರಣಾಳಿಕೆಯಲ್ಲಿ ಹಿಂದುಳಿದ ವರ್ಗಗಳ ಆಯೋಗದ ಸಮೀಕ್ಷಾ ವರದಿಯನ್ನು ಸ್ವೀಕರಿಸುವುದಾಗಿ ಭರವಸೆ ನೀಡಿತ್ತು. ಚುನಾವಣೆಯಲ್ಲಿ ಗೆದ್ದು ಸರ್ಕಾರ ರಚನೆಯಾದ ನಂತರ ವರದಿಯ ಕುರಿತು ಮತ್ತೆ ವಿವಾದಗಳು ತಲೆ ಎತ್ತಲಾರಂಭಿಸಿದವು.
ದರ್ಶನ್ ಮತ್ತು ನನ್ನ ನಡುವೆ ಸಮಸ್ಯೆ ಏನೆಂದು ಇಬ್ಬರೂ ಹುಡುಕುತ್ತಿದ್ದೇವೆ : ಸುದೀಪ್
ಒಕ್ಕಲಿಗ ಸಮುದಾಯದ ಪ್ರಮುಖರು ವರದಿಯನ್ನು ವಿರೋಸಿ ಮುಖ್ಯಮಂತ್ರಿಯವರಿಗೆ ನೀಡಿದ್ದ ಮನವಿಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವ ಚೆಲುವರಾಯಸ್ವಾಮಿ ಸೇರಿದಂತೆ ಆಡಳಿತ ಪಕ್ಷದ ಅನೇಕ ಶಾಸಕರು ಸಹಿ ಹಾಕಿದ್ದರು. ಅದರ ನಂತರ ಲಿಂಗಾಯತ ವೀರಶೈವ ಸಮುದಾಯ ಮುಖ್ಯಮಂತ್ರಿಯವರಿಗೆ ಮನವಿ ನೀಡುವಾಗ ಕಾಂಗ್ರೆಸ್ ಶಾಸಕರಾದ ಶ್ಯಾಮನೂರು ಶಿವಶಂಕರಪ್ಪನವರು ಮುಖಂಡತ್ವ ವಹಿಸಿದ್ದರು. ಸಚಿವರಾದ ಎಂ.ಬಿ.ಪಾಟೀಲ್ ಸೇರಿದಂತೆ ಅನೇಕರು ಸಹಿ ಹಾಕಿದ್ದರು.
ಇದು ಸರ್ಕಾರವನ್ನು ಮುಜುಗರಕ್ಕೀಡು ಮಾಡಿತ್ತು. ವಿರೋಧಗಳ ನಡುವೆಯೂ ಕೂಡ ಆಯೋಗದ ವರದಿಯನ್ನು ಸ್ವೀಕರಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುತ್ತಲೇ ಬಂದಿದ್ದಾರೆ. ನಿನ್ನೆ ಚಿತ್ರದುರ್ಗದಲ್ಲಿ ನಡೆದ ಶೋಷಿತ ಸಮುದಾಯಗಳ ಸಮಾವೇಶದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ರಾಷ್ಟ್ರಮಟ್ಟದಲ್ಲಿ ಜಾತಿ ಜನಗಣತಿ ನಡೆಸಲು ಬದ್ಧವಾಗಿದೆ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯನವರು ಹಿಂದುಳಿದ ವರ್ಗಗಳ ಆಯೋಗ ವರದಿ ನೀಡಿದ್ದರೆ ಅದನ್ನು ಸ್ವೀಕರಿಸಲು ಸರ್ಕಾರ ಸಿದ್ಧವಿದೆ ಎಂದು ಸಮಾವೇಶ ನಡೆಸಿದವರಿಗೆ ಭರವಸೆ ನೀಡಿದ್ದಾರೆ. ನಿಗದಿತ ಅವಧಿಯೊಳಗೆ ವರದಿ ಸಲ್ಲಿಕೆಯಾಗಬೇಕು ಎಂದರೆ ಇನ್ನು ಮೂರು ದಿನಗಳು ಮಾತ್ರ ಬಾಕಿ ಉಳಿದಿವೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿಯವರು ಇಂದು ತುಮಕೂರಿನ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಮಧ್ಯಾಹ್ನದ ವೇಳೆಗೆ ಅವರು ಮರಳುವ ಸಾಧ್ಯತೆಯಿದೆ. ಹೀಗಾಗಿ ವರದಿ ಸಲ್ಲಿಕೆಗೆ ಯಾವಾಗ ಸಮಯ ಸಿಗಲಿದೆ ಎಂಬ ಕುತೂಹಲ ಹೆಚ್ಚಾಗಿದೆ.