Homeರಾಜ್ಯತುಮಕೂರು ಪೊಲೀಸರಿಂದ ಶಂಕಿತ ಉಗ್ರ ಸುಹೇಲ್‌ ವಿಚಾರಣೆ

ತುಮಕೂರು ಪೊಲೀಸರಿಂದ ಶಂಕಿತ ಉಗ್ರ ಸುಹೇಲ್‌ ವಿಚಾರಣೆ

Suspected terrorist Suhel questioned by Tumkur police

ತುಮಕೂರು,ಜೂ.25- ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ 20 ವರ್ಷದ ಶಂಕಿತ ಉಗ್ರನನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ವೇಳೆ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಹಲವು ಆತಂಕಕಾರಿ ಮಾಹಿತಿಗಳು ಬೆಳಕಿಗೆ ಬಂದಿವೆ ಎಂದು ಪೊಲೀಸ್‌‍ ಮೂಲಗಳು ತಿಳಿಸಿವೆ.

ಉತ್ತರ ಪ್ರದೇಶ ಮೂಲದ ಸುಹೇಲ್‌ ಎಂಬಾತನನ್ನು ಹರಿಹರ ಗ್ರಾಮಾಂತರ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ತನಿಖೆಯ ವೇಳೆ ಇತ್ತೀಚೆಗೆ ತುಮಕೂರಿನಲ್ಲಿ ಬಂಧಿತನಾಗಿದ್ದ ಶಂಕಿತ ಉಗ್ರ ಅಲ್ಲಾಭಕ್ಷ್‌ನೊಂದಿಗೆ ಸುಹೇಲ್‌ ಸಂಪರ್ಕ ಹೊಂದಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದ್ದು, ಈ ಹಿನ್ನೆಲೆಯಲ್ಲಿ ದಾವಣಗೆರೆ ಪೊಲೀಸರು ಆರೋಪಿಯನ್ನು ತುಮಕೂರಿಗೆ ಕರೆತಂದು ಸ್ಥಳ ಮಹಜರು ನಡೆಸಿದ್ದಾರೆ ಎನ್ನಲಾಗಿದೆ.

ಬಂಧಿತ ಸುಹೇಲ್‌ ಹರಿಹರ ಸಮೀಪದ ಕೈಗಾರಿಕಾ ಪ್ರದೇಶದಲ್ಲಿರುವ ಖಾಸಗಿ ಕಾರ್ಖಾನೆಯೊಂದರಲ್ಲಿ ಪೈಂಟರ್‌ ಆಗಿ ಕೆಲಸ ಮಾಡುತ್ತಿದ್ದನು. ಸಾಮಾನ್ಯ ಕಾರ್ಮಿಕನಂತೆ ವರ್ತಿಸುತ್ತಿದ್ದ ಆತನ ಚಟುವಟಿಕೆಗಳ ಬಗ್ಗೆ ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಈ ಸಂಬಂಧ ಹರಿಹರ ಗ್ರಾಮಾಂತರ ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿಯ ಮೊಬೈಲ್‌ ಫೋನ್‌ ಪರಿಶೀಲನೆ ವೇಳೆ ಅಂತಾರಾಷ್ಟ್ರೀಯ ಉಗ್ರ ಜಾಲಗಳೊಂದಿಗೆ ಸಂಪರ್ಕ ಹೊಂದಿರುವ ಸಾಧ್ಯತೆಯ ಸುಳಿವುಗಳು ಪತ್ತೆಯಾಗಿವೆ ಎಂದು ತನಿಖಾ ಮೂಲಗಳು ತಿಳಿಸಿವೆ. ಪಾಕಿಸ್ತಾನದ ಕೋಡ್‌ ಹೊಂದಿರುವ ಮೊಬೈಲ್‌ ಸಂಖ್ಯೆ ರಾಣಾ ಬಾಯ್‌‍ ಹೆಸರಿನಲ್ಲಿ ಸೇವ್‌ ಆಗಿರುವುದು ಪತ್ತೆಯಾಗಿದ್ದು, ವಿದೇಶಿ ಸಂಪರ್ಕದ ಕುರಿತು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

ಇದೇ ವೇಳೆ, ದೇಶವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವ ಶಂಕೆಯಿರುವ ಕೆಲವು ರಹಸ್ಯ ಸಾಮಾಜಿಕ ಜಾಲತಾಣ ಗುಂಪುಗಳಲ್ಲಿ ಸುಹೇಲ್‌ ಸಕ್ರಿಯನಾಗಿದ್ದಾನೆ ಎಂಬ ಅನುಮಾನವೂ ವ್ಯಕ್ತವಾಗಿದೆ.ಆರೋಪಿಯ ಮೊಬೈಲ್‌ ಗ್ಯಾಲರಿಯಲ್ಲಿ ಮಾರಕಾಸ್ತ್ರಗಳೊಂದಿಗೆ ತೆಗೆಸಿಕೊಂಡಿರುವ ಹಲವು ಫೋಟೋಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ, ಅಯೋಧ್ಯೆಯಲ್ಲಿರುವ ರಾಮ ಮಂದಿರ ಸೇರಿದಂತೆ ದೇಶದ ಪ್ರಮುಖ ಧಾರ್ಮಿಕ ಹಾಗೂ ಸಾರ್ವಜನಿಕ ಸ್ಥಳಗಳನ್ನು ಗುರಿಯಾಗಿಸಿಕೊಂಡು ಯಾವುದೇ ವಿಧ್ವಂಸಕ ಸಂಚು ರೂಪಿಸಲಾಗಿತ್ತೇ ಎಂಬ ಆಯಾಮದಲ್ಲಿಯೂ ತನಿಖೆ ನಡೆಯುತ್ತಿದೆ. ಪ್ರಸ್ತುತ ಆರೋಪಿಯನ್ನು ಹೆಚ್ಚಿನ ವಿಚಾರಣೆಗಾಗಿ ತುಮಕೂರು ಪೊಲೀಸರ ವಶಕ್ಕೆ ನೀಡಲಾಗಿದ್ದು, ಪ್ರಕರಣದ ಎಲ್ಲಾ ಆಯಾಮಗಳ ಕುರಿತು ತನಿಖೆ ಮುಂದುವರಿದಿದೆ. ತನಿಖೆ ಪೂರ್ಣಗೊಂಡ ಬಳಿಕವೇ ಪ್ರಕರಣದ ನಿಜಸ್ವರೂಪ ಹಾಗೂ ಆರೋಪಿಗಳ ಜಾಲದ ಬಗ್ಗೆ ಸ್ಪಷ್ಟ ಚಿತ್ರಣ ಲಭ್ಯವಾಗುವ ಸಾಧ್ಯತೆಯಿದೆ.

RELATED ARTICLES

Latest News