Homeರಾಜ್ಯಹಾಸನ ಡಿಸಿ ಕಚೇರಿಯಲ್ಲಿ ಭ್ರಷ್ಟಾಚಾರ : ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿಗೆ ಜೆಡಿಎಸ್‌‍ ದೂರು

ಹಾಸನ ಡಿಸಿ ಕಚೇರಿಯಲ್ಲಿ ಭ್ರಷ್ಟಾಚಾರ : ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿಗೆ ಜೆಡಿಎಸ್‌‍ ದೂರು

ಬೆಂಗಳೂರು, ನ.11- ಹಾಸನ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದಿದೆ ಎನ್ನಲಾದ ಕೋಟ್ಯಂತರ ರೂಪಾಯಿಗಳ ಹಣಕಾಸಿನ ವ್ಯವಹಾರ ಹಾಗೂ ಭ್ರಷ್ಟಾಚಾರದ ಗಂಭೀರ ಆರೋಪಗಳ ಕುರಿತು ಉನ್ನತ ಮಟ್ಟದ ತನಿಖೆ ನಡೆಸುವಂತೆ ಆಗ್ರಹಿಸಿ ಜೆಡಿಎಸ್‌‍ ಇಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ದೂರು ಸಲ್ಲಿಸಿದೆ.

ಜೆಡಿಎಸ್‌‍ ಶಾಸಕಾಂಗ ಪಕ್ಷದ ನಾಯಕ ಸಿ.ಬಿ.ಸುರೇಶ್‌ ಬಾಬು, ವಿಧಾನ ಪರಿಷತ್ತಿನ ಜೆಡಿಎಸ್‌‍ ಉಪ ನಾಯಕ ಟಿ.ಎ.ಶರವಣ ಮತ್ತು ಶಾಸಕ ಭೀಮನಗೌಡ ಬಸನಗೌಡ ಪಾಟೀಲ್‌ ಅವರನ್ನೊಳಗೊಂಡ ಜೆಡಿಎಸ್‌‍ ನಿಯೋಗ ವಿಧಾನಸೌಧದಲ್ಲಿ ಇಂದು ಮಧ್ಯಾಹ್ನ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಸ್‌‍ ಅವರನ್ನು ಭೇಟಿ ಮಾಡಿ ದೂರು ಸಲ್ಲಿಸಿದೆ.

ಆರೋಪದ ಗಂಭೀರತೆ, ಸಾರ್ವಜನಿಕವಾಗಿ ಬಿಡುಗಡೆಯಾಗಿರುವ ಸಂಭಾಷಣೆಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಪಾತ್ರದ ಕುರಿತು ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಒತ್ತಾಯಿಸಲಾಗಿದೆ.

ಸಾರ್ವಜನಿಕವಾಗಿ ಬಿಡುಗಡೆಯಾಗಿರುವ ವಾಟ್ಸಾಪ್‌ ಸಂಭಾಷಣೆಗಳ ಸ್ಕ್ರೀನ್‌ಶಾಟ್‌ಗಳಲ್ಲಿ ಹಾಸನ ಜಿಲ್ಲಾಧಿಕಾರಿ ಉಪವಿಭಾಗಾಧಿಕಾರಿ , ಅಪರ ಜಿಲ್ಲಾಧಿಕಾರಿ, ತಹಶೀಲ್ದಾರ್‌ ಹಾಗೂ ಜಿಲ್ಲಾಧಿಕಾರಿಗಳ ಆಪ್ತ ಸಹಾಯಕ ಸೇರಿದಂತೆ ವಿವಿಧ ಅಧಿಕಾರಿಗಳ ಹುದ್ದೆಗಳನ್ನು ಉಲ್ಲೇಖಿಸಿ ಕೋಟ್ಯಂತರ ರೂಪಾಯಿಗಳ ಹಣಕಾಸಿನ ವ್ಯವಹಾರ, ಹಣದ ಹಂಚಿಕೆ ಮತ್ತು ಹೊಂದಾಣಿಕೆ ಕುರಿತು ಗಂಭೀರ ಆರೋಪಗಳು ಕೇಳಿಬಂದಿವೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ವಿಶೇಷವಾಗಿ, ಜಿಲ್ಲಾಧಿಕಾರಿಗಳಿಗೆ ಸಂಬಂಧಿಸಿದಂತೆ ಲಕ್ಷಾಂತರ ರೂ.ಗಳು ಹಾಗೂ ಉಪವಿಭಾಗಾಧಿಕಾರಿಗಳಿಗೆ ಸಂಬಂಧಿಸಿದಂತೆ ಲಕ್ಷಾಂತರ ಮೊತ್ತದ ಪ್ರಸ್ತಾಪಗಳು ಸಂಭಾಷಣೆಗಳಲ್ಲಿ ಕಂಡುಬಂದಿವೆ. ಅಲ್ಲದೆ ಸಕಲೇಶಪುರದ ಮೂರು ಕ್ರಷರ್‌ಗಳ ಕಡತಗಳ ಅನುಮೋದನೆ ಮತ್ತು ವಿಲೇವಾರಿಗೆ ಸಂಬಂಧಿಸಿದಂತೆ ಹಣದ ವ್ಯವಹಾರ ನಡೆದಿರುವ ಆರೋಪಗಳ ಬಗ್ಗೆಯೂ ಸಮಗ್ರ ತನಿಖೆಯಾಗಬೇಕೆಂದು ನಿಯೋಗ ಮುಖ್ಯ ಕಾರ್ಯದರ್ಶಿ ಅವರನ್ನು ಒತ್ತಾಯಿಸಿದೆ.

ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಮಧ್ಯವರ್ತಿಗಳ ಪಾತ್ರ, ಹಣಕಾಸಿನ ವಹಿವಾಟುಗಳ ಮೂಲ, ಬ್ಯಾಂಕ್‌ ಖಾತೆಗಳು, ಯುಪಿಐ ವ್ಯವಹಾರಗಳು ಹಾಗೂ ಇತರ ಹಣಕಾಸಿನ ದಾಖಲೆಗಳನ್ನು ಪರಿಶೀಲಿಸಬೇಕು. ಸಾರ್ವಜನಿಕವಾಗಿ ಬಿಡುಗಡೆಯಾಗಿರುವ ವಾಟ್ಸಾಪ್‌ ಸಂಭಾಷಣೆಗಳ ಸತ್ಯಾಸತ್ಯತೆಯನ್ನು ಮೂಲ ಮೊಬೈಲ್‌ ಸಾಧನಗಳು, ಡಿಜಿಟಲ್‌ ದಾಖಲೆಗಳು ಮತ್ತು ವಿಧಿವಿಜ್ಞಾನ ಪರೀಕ್ಷೆಯ ಮೂಲಕ ದೃಢಪಡಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಪ್ರಕರಣವನ್ನು ಜಿಲ್ಲಾಡಳಿತದ ಆಂತರಿಕ ತನಿಖೆಗೆ ಸೀಮಿತಗೊಳಿಸದೆ, ಲೋಕಾಯುಕ್ತ ಅಥವಾ ಸಮರ್ಥ ಸ್ವತಂತ್ರ ತನಿಖಾ ಸಂಸ್ಥೆಯ ಮೂಲಕ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಆಗ್ರಹಿಸಲಾಗಿದೆ.

RELATED ARTICLES

Latest News