Homeರಾಜ್ಯರೈತರಿಗೆ ಇನ್‌ಪುಟ್‌ ಸಬ್ಸಿಡಿ ಗೊಂದಲ : ವಿಪತ್ತು ಪರಿಹಾರ ಇಲಾಖೆಯ ಆಯುಕ್ತರ ಸ್ಪಷ್ಟನೆ

ರೈತರಿಗೆ ಇನ್‌ಪುಟ್‌ ಸಬ್ಸಿಡಿ ಗೊಂದಲ : ವಿಪತ್ತು ಪರಿಹಾರ ಇಲಾಖೆಯ ಆಯುಕ್ತರ ಸ್ಪಷ್ಟನೆ

ಬೆಂಗಳೂರು, ನ.11- ಮುಂಗಾರು ಹಂಗಾಮಿನ ಬರ ಪರಿಹಾರದ ಮೊದಲ ಕಂತಿನಲ್ಲಿ 2,000 ರೂ. ಪಡೆದಿರುವ ರೈತರು ಎರಡನೇ ಕಂತಿನಲ್ಲಿ ಬಾಕಿ 3,000 ರೂ. ಪಡೆಯಲಿದ್ದಾರೆ. ಹಾಗೆಯೇ ಮೊದಲ ಕಂತಿನಲ್ಲಿ 2,500 ರೂ. ಪಡೆದ ರೈತರಿಗೆ ಬಾಕಿ 2,500 ರೂ. ತಲುಪಲಿದ್ದು, ಪ್ರತಿಯೊಬ್ಬ ಅರ್ಹ ರೈತರಿಗೂ ಒಟ್ಟಾರೆಯಾಗಿ ಕನಿಷ್ಠ 5,000 ರೂ. ನೆರವು ಸಿಗುವುದು ಖಚಿತವಾಗಲಿದೆ ಎಂದು ವಿಪತ್ತು ಪರಿಹಾರ ಇಲಾಖೆಯ ಆಯುಕ್ತರಾದ ಹೊನ್ನಾಂಬ ಅವರು ಸ್ಪಷ್ಟಪಡಿಸಿದ್ದಾರೆ.

ಬರಗಾಲದಿಂದಾದ ಉಂಟಾಗಿರುವ ಬೆಳೆ ನಷ್ಟಕ್ಕೆ ಸಂಬಂಧಿಸಿದಂತೆ ರೈತರಿಗೆ ವಿತರಿಸಲಾಗುತ್ತಿರುವ ಮೊದಲ ಕಂತಿನ ಇನ್‌ಪುಟ್‌ ಸಬ್ಸಿಡಿ ಮೊತ್ತದ ಕುರಿತ ಗೊಂದಲಗಳಿಗೆ ಸ್ಪಷ್ಟನೆ ನೀಡಿರುವ ಅವರು, ಪ್ರಸ್ತುತ ಜಾರಿಯಲ್ಲಿರುವ ನಿಯಮಗಳ ಪ್ರಕಾರ ಕನಿಷ್ಠ ಇನ್‌ಪುಟ್‌ ಸಬ್ಸಿಡಿ ನೆರವು ಮಳೆಯಾಶ್ರಿತ ಬೆಳೆಗಳಿಗೆ 1,500 ರೂ., ನೀರಾವರಿ ಬೆಳೆಗಳಿಗೆ 2,600 ರೂ.ಹಾಗೂ ಬಹುವಾರ್ಷಿಕ ಬೆಳೆಗಳಿಗೆ 3,200 ರೂ.ಆಗಿದೆ. ಆದರೆ ರಾಜ್ಯ ಸರ್ಕಾರವು ರೈತರ ಹಿತದೃಷ್ಟಿಯಿಂದ ಈ ಮೂರೂ ವರ್ಗದ ಬೆಳೆಗಳಿಗೆ ನೀಡುವ ಕನಿಷ್ಠ ನೆರವನ್ನು ರೂ. 5,000 ಕ್ಕೆ ಹೆಚ್ಚಿಸಿದ್ದು, ನಿಯಮಾವಳಿಗಿಂತ ಹೆಚ್ಚುವರಿಯಾಗುವ ಈ ವ್ಯತ್ಯಾಸದ ಮೊತ್ತವನ್ನು ರಾಜ್ಯ ಸರ್ಕಾರದ ಸ್ವಂತ ನಿಧಿಯಿಂದಲೇ ಭರಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಸರ್ಕಾರ ನೀಡಿರುವ 5,000 ರೂ. ಭರವಸೆಯು ಕೇವಲ ಕನಿಷ್ಠ ನೆರವು ಮಾತ್ರವಾಗಿದ್ದು, ಇದು ಗರಿಷ್ಠ ಮಿತಿಯಲ್ಲ. ಬೆಳೆ ನಷ್ಟದ ಪ್ರಮಾಣ ಮತ್ತು ವರ್ಗಕ್ಕೆ ಅನುಗುಣವಾಗಿ ಪರಿಷ್ಕೃತ ನಿಯಮಗಳ ಅಡಿಯಲ್ಲಿ ಅರ್ಹ ರೈತರು 5,000 ರೂ.ದಿಂದ ಹಿಡಿದು 60,000 ರೂ.ವರೆಗೆ ಇನ್‌ಪುಟ್‌ ಸಬ್ಸಿಡಿ ನೆರವನ್ನು ಮುಂದಿನ ಹಂತಗಳಲ್ಲಿ ಪಡೆಯಲಿದ್ದಾರೆ.

ಈಗಾಗಲೇ ವಿತರಿಸಲಾಗಿರುವ ಮೊತ್ತವು ಕೇವಲ ಮೊದಲ ಕಂತು ಮಾತ್ರವಾಗಿದ್ದು, ಇದು ಅಂತಿಮ ಪರಿಹಾರವಲ್ಲ. ಬರದಿಂದ ಸಂಕಷ್ಟಕ್ಕೊಳಗಾದ ಎಲ್ಲಾ ಅರ್ಹ ರೈತರಿಗೆ ಸಂಪೂರ್ಣ ನೆರವನ್ನು ಸಕಾಲದಲ್ಲಿ ತಲುಪಿಸಲು ಸರ್ಕಾರ ಸಂಪೂರ್ಣ ಬದ್ಧವಾಗಿದೆ ಎಂದು ಅವರು ತಿಳಿಸಿದ್ದಾರೆ.

ರಾಜ್ಯ ಸರ್ಕಾರವು ಅಕ್ಟೋಬರ್‌ 23ರ ಆದೇಶದಂತೆ ಪ್ರತಿ ರೈತರ ಅರ್ಹತೆಗೆ ಅನುಗುಣವಾಗಿ ಮೊದಲ ಕಂತಿನಲ್ಲಿ 2,500 ರೂ.ಗಳವರೆಗೆ ಇನ್‌ಪುಟ್‌ ಸಬ್ಸಿಡಿ ಬಿಡುಗಡೆ ಮಾಡಲು ಅನುಮೋದನೆ ನೀಡಿತ್ತು. ಇದರ ಭಾಗವಾಗಿ ನವೆಂಬರ್‌ 5ರಂದು ಮುಖ್ಯಮಂತ್ರಿಗಳು ಹಾಗೂ ಉಪ ಮುಖ್ಯಮಂತ್ರಿಗಳು ಯಾದಗಿರಿ ಜಿಲ್ಲೆಯ 1,06,462 ರೈತರಿಗೆ 1,743.53 ಲಕ್ಷ ರೂ. ಬಿಡುಗಡೆಗೆ ಚಾಲನೆ ನೀಡಿದ್ದರು.

ಇದರ ಬೆನ್ನಲ್ಲೇ ಬೆಳೆ ನಷ್ಟಕ್ಕೊಳಗಾದ ರೈತರಿಗೆ (ಮಳೆಯಾಶ್ರಿತ, ನೀರಾವರಿ ಮತ್ತು ಬಹುವಾರ್ಷಿಕ ಬೆಳೆಗಳು ಸೇರಿ) ನೀಡಲಾಗುವ ಕನಿಷ್ಠ ಇನ್‌ಪುಟ್‌ ಸಬ್ಸಿಡಿ ನೆರವನ್ನು 5,000 ರೂ.ಗಳಿಗೆ ಹೆಚ್ಚಿಸಿ, ಅದನ್ನು ಎರಡು ಕಂತುಗಳಲ್ಲಿ ವಿತರಿಸುವುದಾಗಿ ಮುಖ್ಯಮಂತ್ರಿಗಳು ಮತ್ತು ಉಪ ಮುಖ್ಯಮಂತ್ರಿಗಳು ಘೋಷಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

RELATED ARTICLES

Latest News